ಬೆಂಗಳೂರು: ʻʻಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5000 ಕೋಟಿ ಅನುದಾನ ನೀಡುವ ಕುರಿತು ಬದ್ಧತೆ ಇದೆ. ಕಳೆದ ಬಾರಿ ಮೂರು ಸಾವಿರ ಕೋಟಿ ಇಟ್ಟಿದ್ದೇನೆ, ಕ್ರಿಯಾ ಯೋಜನೆ ಕೂಡ ಮಾಡಿದ್ದೇನೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಆಗುವುದರ ಬಗ್ಗೆ ಪ್ರಿಯಾಂಕ್ ಖರ್ಗೆ ಅವರ ಬದ್ಧತೆ ಏನಿದೆಯೋ ಗೊತ್ತಿಲ್ಲ. ಅವರೊಬ್ಬ ಮಹಾನಟʼʼ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ಕೊಟ್ಟಿದ್ದಾರೆ.
ʻʻಕಲಬುರಗಿಯಲ್ಲಿ ಸಿಎಂ ಉದ್ರಿ ಭಾಷಣ ಮಾಡಿ ಹೋಗಿದ್ದಾರೆʼʼ ಎಂಬ ಶಾಸಕ ಪ್ರಿಯಾಂಕ್ ಹೇಳಿಕೆ ಬಗ್ಗೆ ನಗರದ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಲ್ಯಾಣ ಕರ್ನಾಟಕ ಕಾಯಂ ಆಗಿ ಹಿಂದುಳಿಯುವುದು ಅವರ ಇಚ್ಛೆಯೇ? ಸರ್ಕಾರ ಅಭಿವೃದ್ಧಿಗೆ ಮುಂದಾದಾಗ, ಸರಿಪಡಿಸಬಹುದು. ಇದರಲ್ಲಿ ರಾಜಕಾರಣ ಸರಿಯಲ್ಲ. ಅವರಿಗೆ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬೇಕಾಗಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 5,000 ಕೋಟಿ ರೂ. ಅನುದಾನ ಘೋಷಣೆ ಮಾಡಿರುವುದನ್ನು ಸ್ವಾಗತಿಸುವುದು ಬಿಟ್ಟು ವಿರೋಧಿಸುತ್ತಿರುವುದು ಏಕೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ದೇಶ ಉಳಿಯಲಿ ಎಂದು ಸೋನಿಯಾ, ರಾಹುಲ್ ಪ್ರಧಾನಿ ಹುದ್ದೆ ತ್ಯಜಿಸಿದರು: ಮೈಸೂರಿನಲ್ಲಿ ಡಿಕೆಶಿ ಮಾತು
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5,000 ಕೋಟಿ ರೂ. ಅನುದಾನವನ್ನು ಮುಂದಿನ ಆಯವ್ಯಯದಲ್ಲಿ ಒದಗಿಸುವುದಾಗಿ ಅತ್ಯಂತ ಬದ್ಧತೆಯಿಂದಲೇ ಘೋಷಿಸಿದ್ದೇನೆ. ಕಳೆದ ವರ್ಷ 3,000 ಕೋಟಿ ರೂ. ಅನುದಾನ ಘೋಷಿಸಿದ್ದೆನು. ಅದನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ. ಪ್ರಿಯಾಂಕ್ ಖರ್ಗೆ ಅವರು ಇದನ್ನು ಸ್ವಾಗತಿಸಬೇಕಾಗಿತ್ತು. ಆದರೆ ಅವರು ವಿರೋಧಿಸಿರುವುದನ್ನು ನೋಡಿದರೆ, ಈ ಪ್ರದೇಶ ಸದಾ ಹಿಂದುಳಿದಿರಲಿ ಎಂಬುದೇ ಅವರ ಇಚ್ಛೆಯಾ ಎಂದು ಪ್ರಶ್ನಿಸಿದರು.
ಬಳ್ಳಾರಿಯ ವಿಮ್ಸ್ ಘಟನೆಗೆ ಸಚಿವ ಡಾ. ಸುಧಾಕರ್ ಹೊಣೆ ಹೊರಬೇಕು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ, ಈ ಹಿಂದೆ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಕರ್ನಾಟಕ ಖಾಸಗಿ ವೈದ್ಯರ ಮಸೂದೆಯನ್ನು ಮಂಡಿಸಲಾಗಿತ್ತು. ಇದನ್ನು ವಿರೋಧಿಸಿ, ರಾಜ್ಯದಾದ್ಯಂತ ಖಾಸಗಿ ವೈದ್ಯರು 5 ದಿನಗಳ ಕಾಲ ಮುಷ್ಕರ ನಡೆಸಿದ್ದರಿಂದ ಸುಮಾರು 80 ಜನರು ಮೃತಪಟ್ಟರು. ಆಗ ಅಂದಿನ ಆರೋಗ್ಯ ಸಚಿವರು ರಾಜೀನಾಮೆ ನೀಡಿದ್ದರಾ? ಎಂದು ತಿರುಗೇಟು ನೀಡಿದರು.
ವ್ಯವಸ್ಥಿತ ಷಡ್ಯಂತ್ರ
ತೆಲಂಗಾಣದಲ್ಲಿಯೂ 40 ಪರ್ಸೆಂಟ್ ಸರ್ಕಾರ ಎಂಬ ಫ್ಲೆಕ್ಸ್‌ಗಳನ್ನು ಅಳವಡಿಸಿರುವ ಕುರಿತು ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಬಗ್ಗೆ ನನಗೆ ಗೊತ್ತಿಲ್ಲ. ಇದೊಂದು ವ್ಯವಸ್ಥಿತ ಷಡ್ಯಂತ್ರ. ನಮ್ಮ ರಾಜ್ಯದ ಬಗ್ಗೆ ತೆಲಂಗಾಣದಲ್ಲಿ ಹಾಕುವುದು ಎಷ್ಟು ಸಮಂಜಸ? ಇದನ್ನು ಖಾಸಗಿಯವರು ಮಾಡಿದ್ದಾರೋ ಅಥವಾ ಅಲ್ಲಿನ ಸರ್ಕಾರ ಹಾಕಿರುವುದೋ ನನಗೆ ಗೊತ್ತಿಲ್ಲ. ಇಂತಹ ಬೆಳವಣಿಗೆಗಳು ಉಭಯರಾಜ್ಯಗಳ ಸೌಹಾರ್ದತೆಗೆ ಧಕ್ಕೆ ತರುತ್ತವೆ ಎಂದು ತಿಳಿಸಿದರು.
ಇದನ್ನೂ ಓದಿ | ಕೇರಳ ಸಿಎಂ ವಿಜಯನ್ ತಂದಿದ್ದ ಮೂರಕ್ಕೆ ಮೂರೂ ಪ್ರಸ್ತಾವನೆಯನ್ನು ರಿಜೆಕ್ಟ್ ಮಾಡಿದ ಸಿಎಂ ಬೊಮ್ಮಾಯಿ