ಬೆಂಗಳೂರು: ಪದೇಪದೆ ನಡೆಯುತ್ತಿರುವ ಹತ್ಯೆಗಳ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ ಮಾತಿಗೆ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶಭರಿತರಾಗಿದ್ದು, ಅವನು ಹೇಳಿದ್ದೇ ವೇದವಾಕ್ಯ ಅಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಬಸವರಾಜ ಬೊಮ್ಮಾಯಿ ಅತ್ಯಂತ ದುರ್ಬಲ ಮುಖ್ಯಮಂತ್ರಿ, ರಾಜೀನಾಮೆ ಕೊಟ್ಟು ಹೊರಹೋಗಲಿ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಆರ್.ಟಿ.ನಗರದ ನಿವಾಸದ ಬಳಿ ಬೊಮ್ಮಾಯಿ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಅವರ ಕಾಲದಲ್ಲಿ 32 ಸರಣಿ ಕೊಲೆಗಳಾಗಿದ್ದವು. ಆಗ ಅವರು ಏನು ಮಾಡುತ್ತಿದ್ದರು? ಶಾಸಕ ತನ್ವೀರ್ ಸೇಠ್ ಮೇಲೆ ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಯ 200 ಮಂದಿ ದಾಳಿ ಮಾಡಿದ್ದರು. ಆದರೆ ಪ್ರಕರಣದಿಂದ ಆರೋಪಿಗಳನ್ನು ಮುಕ್ತಗೊಳಿಸಲಾಗಿತ್ತು. ಇಗೀಗ ಅವರೇ ಪುನಃ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದ್ದಾರೆ. ಸಿದ್ದರಾಮಯ್ಯ ಕೇವಲ ಹೇಳಿಕೆಗಳನ್ನು ನೀಡುತ್ತಾರೆ ಎಂದು ಹರಿಹಾಯ್ದರು.
ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸರ್ಕಾರ ಕ್ಷಿಪ್ರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳಿಗೆ ಫಂಡಿಂಗ್ ಮಾಡುತ್ತಿರುವುದೇ ಬಿಜೆಪಿ ಪಕ್ಷ ಎಂಬುದು ಅತ್ಯಂತ ಹಾಸ್ಯಾಸ್ಪದವಾದ ಹೇಳಿಕೆ, ಇದು ಕಾಂಗ್ರೆಸ್ಸಿನ ರಾಜಕೀಯ ದಿವಾಳಿತನವನ್ನು ಬಿಂಬಿಸುತ್ತದೆ. ಸರ್ಕಾರದಲ್ಲಿ ಯಾರೂ ರಾಜೀನಾಮೆ ಕೊಡುವ ಅಗತ್ಯವಿಲ್ಲ. ವೇದವಾಕ್ಯ ಅಲ್ಲ ಅವನು ಹೇಳಿದ್ದು. ಇಂತಹ ಸಂದರ್ಭದಲ್ಲಿ ಕರ್ತವ್ಯದಿಂದ ವಿಮುಖರಾಗುವುದಿಲ್ಲ. ಗಟ್ಟಿಯಾಗಿ ನಿಂತು ಕಠಿಣ ನಿಲುವುಗಳನ್ನು ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದರು.
ಇದನ್ನೂ ಓದಿ | ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು NIAಗೆ ವಹಿಸಿದ ರಾಜ್ಯ ಸರ್ಕಾರ: ಸಿಎಂ ಬೊಮ್ಮಾಯಿ ಘೋಷಣೆ