Site icon Vistara News

ದಲಿತ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನ ಹಂಚಿಕೆ ಕೊರತೆ ಭರ್ತಿಗೆ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ

cm bommai

ಬೆಂಗಳೂರು: ದಲಿತ ಉದ್ದಿಮೆದಾರರಿಗೆ 2009ರಲ್ಲಿ ನಿಗದಿ ಪಡಿಸಿದ ಮೀಸಲಾತಿಯಂತೆ ಕೈಗಾರಿಕಾ ನಿವೇಶನ ಹಂಚಿಕೆಯಲ್ಲಿನ ಕೊರತೆಯನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ನಿಯೋಗದ ಜತೆ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿದ ಬಳಿಕ ಮಾತನಾಡಿದ ಅವರು, ನಿವೇಶನ ಹಂಚಿಕೆ ಬಗ್ಗೆ ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಹಾಗೂ ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಜತೆಯಾಗಿ ಲ್ಯಾಂಡ್ ಆಡಿಟ್ ಮಾಡಿ ವರದಿ ಸಲ್ಲಿಸಿ, ಕೊರತೆಯಾಗಿರುವ ಭೂಮಿ ಹಂಚಿಕೆಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಇದನ್ನೂ ಓದಿ | ಇನ್ಸ್‌ಪೆಕ್ಟರ್‌ ನಂದೀಶ್‌ ಸಾವು | ಸಚಿವ ಎಂಟಿಬಿ ಸ್ಪಷ್ಟೀಕರಣ ಕೊಡಬೇಕಾಗುತ್ತದೆ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನವನ್ನು ಶೇ. 60ರಷ್ಟು ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿಯಲ್ಲಿ ಹಾಗೂ ಶೇ. 40 ರಷ್ಟು ರಾಜ್ಯಮಟ್ಟದ ಸಮಿತಿಯಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಆದರೆ, ದಲಿತ ಉದ್ದಿಮೆದಾರರಲ್ಲಿ ಬಹುತೇಕ ಮಂದಿಯ ಯೋಜನಾ ವೆಚ್ಚ 15 ಕೋಟಿ ರೂ.ಗಳಿಗಿಂತ ಕಡಿಮೆ ಇರುವುದರಿಂದ ಜಿಲ್ಲಾ ಮಟ್ಟದಲ್ಲಿನ ಹಂಚಿಕೆಯ ಪ್ರಮಾಣವನ್ನು ಹೆಚ್ಚಿಸುವಂತೆ ಸಂಘದವರು ಮಾಡಿದ ಮನವಿಗೆ ಸ್ಪಂದಿಸಿದ ಸಿಎಂ, ಜಿಲ್ಲಾಮಟ್ಟದಲ್ಲಿ ಶೇ. 70 ರಷ್ಟು ಹಾಗೂ ರಾಜ್ಯ ಮಟ್ಟದಲ್ಲಿ ಶೇ. 30 ರಷ್ಟು ಹಂಚಿಕೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಕೆ.ಎಸ್.ಎಫ್.ಸಿ.ಯಲ್ಲಿ ಸಾಲ ಸೌಲಭ್ಯ ಪಡೆಯುವಾಗ ಸಮಾನಾಂತರ ಭದ್ರತೆಗೆ ಕೈಗಾರಿಕಾ ಭೂಮಿಯ ವಾಸ್ತವ ಬೆಲೆಯನ್ನು ಪರಿಗಣಿಸುವ ಮನವಿಗೆ ಪ್ರತಿಕ್ರಿಯಿಸಿ, ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ದಲಿತ ಉದ್ದಿಮೆದಾರರ ಕೈಗಾರಿಕೆಯಲ್ಲಿ ಕನಿಷ್ಠ 10 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದರೆ ವೇತನ ಪ್ರೋತ್ಸಾಹಕವನ್ನು ನೀಡುವ ಮನವಿಗೆ ಸ್ಪಂದಿಸಿ, ಮುಂದಿನ ಆಯವ್ಯಯದಲ್ಲಿ ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಅಧ್ಯಕ್ಷ ಎಲ್. ಹನುಮಂತಯ್ಯ, ಕಾರ್ಯಾಧ್ಯಕ್ಷ ಸಿ.ಜಿ. ಶ್ರೀನಿವಾಸನ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಹಣಕಾಸು ಇಲಾಖೆ ಕಾರ್ಯದರ್ಶಿ ಏಕ್ರೂಪ್ ಕೌರ್, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್ ಇದ್ದರು.

ಇದನ್ನೂ ಓದಿ | Pramod Muthalik | ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುತಾಲಿಕ್‌ ನಿರ್ಧಾರ, ಪಕ್ಷ ಯಾವುದು?

Exit mobile version