ಚಿತ್ರದುರ್ಗ: ಜನರ ದುಃಖ ದುಮ್ಮಾನ ಪರಿಹಾರಕ್ಕೆ ಹೆಚ್ಚು ಮಹತ್ವ ನೀಡಿ, ಸಮಾಜ ಉದ್ಧಾರ ಮಾಡಿದ ಶ್ರೇಷ್ಠ ಗುರುಗಳಾದ ತರಳಬಾಳು ಶಿವಕುಮಾರ ಶ್ರೀಗಳ ಬದುಕೇ ನಮಗೆಲ್ಲ ಮಾರ್ಗದರ್ಶಿ. ಎಂತಹ ಸಮಯದಲ್ಲೂ ಧೃತಿಗೆಡದೆ ದೃಢ ಹೆಜ್ಜೆಯಿಟ್ಟ ಅವರು, ವೈಚಾರಿಕತೆ ಮೂಲಕ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ತಾಲೂಕಿನ ಸಿರಿಗೆರೆ ಗ್ರಾಮದ ತರಳಬಾಳು ಮಠದಲ್ಲಿ ಶನಿವಾರ ಆಯೋಜಿಸಿದ್ದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಶ್ರೀಗಳ 30ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿ, ಬದುಕು ವ್ಯವಹಾರ ಆದಾಗ ಸಂಬಂಧಗಳು ಉಳಿಯಲ್ಲ. ತತ್ವಜ್ಞಾನದಲ್ಲಿ ಪಾಪ ಪುಣ್ಯ ಇದೆ, ವ್ಯವಹಾರದಲ್ಲಿ ಲಾಭ ನಷ್ಟವಿದೆ. ಶ್ರೀಗಳು ರಚಿಸಿದ ಕೃತಿಯಲ್ಲಿ ಹಲವು ವಿಚಾರಗಳಿವೆ. ದುಡ್ಡೇ ದೊಡ್ಡಪ್ಪ ಅಲ್ಲ, ದುಡಿಮೆಯೇ ದೊಡ್ಡಪ್ಪ ಎಂಬುದು ಗುರುಗಳ ತತ್ವವಾಗಿದೆ. ಸ್ವಾರ್ಥಕ್ಕಾಗಿ ಹೊಗಳಿಕೆ, ದ್ವೇಷಕ್ಕಾಗಿ ತೆಗಳಿಕೆ ಸರಿಯಲ್ಲ. ಸ್ಥಿತಪ್ರಜ್ಞರಾಗಿ ಬದುಕುವುದೇ ತರಳಬಾಳು ಮಠದ ಉದ್ದೇಶ. ಸರ್ಕಾರ ಮಠದ ತತ್ವಗಳಿಗೆ ಗೌರವ ತರುವ ರೀತಿ ಆಡಳಿತ ನಡೆಸುತ್ತಿದೆ ಎಂದರು.
ಇದನ್ನೂ ಓದಿ | ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಬಿಜೆಪಿ ತಯಾರಿ, ಸೆ. 27ರಿಂದಲೇ ಒಬಿಸಿ ನಾಯಕರ ರಾಜ್ಯ ಪ್ರವಾಸ
ಮಠದ ಈಗಿನ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ ರೈತರಿಗೆ ಬೆಲೆ ನೀಡಿದ್ದಾರೆ. ರೈತರ ಬೆವರಿಗೆ ಬೆಲೆ ಬರಬೇಕೆಂಬುವುದನ್ನು ಅರಿತಿರುವ ಅವರು ಕೃಷಿಗೆ ನೀರಾವರಿ ವ್ಯವಸ್ಥೆ ಮಾಡಿದ್ದು, 25 ವರ್ಷಗಳಿಂದ ವಿವಿಧ ನೀರಾವರಿ ಯೋಜನೆ, ಕೆರೆ ತುಂಬಿಸುವ ಯೋಜನೆಗಳಿಗೆ ಶ್ರೀಗಳು ಆದ್ಯತೆ ನೀಡಿದ್ದಾರೆ. ಶ್ರೀಗಳ ಆಶಯಕ್ಕೆ ಕೆಲವರು ಸ್ಪಂದಿಸಿದರು, ಕೆಲವರು ಸ್ಪಂದಿಸಲಿಲ್ಲ ಎಂದರು.
ಅರಮನೆ, ಗುರುಮನೆಗೂ ಸಂಬಂಧ ಇದೆ. ಗುರುಗಳ ಮಾರ್ಗದರ್ಶನ ಭಕ್ತರು ಹಾಗೂ ಸರ್ಕಾರಕ್ಕೆ ಬೇಕು. ಗುರುಗಳ ಪ್ರತಿ ಮಾತು ಸಮಾಜದ ಮೇಲೆ ಪ್ರಭಾವ ಬೀರುತ್ತಿದೆ. ಸಮಾಜದ ದನಿ ಸರ್ಕಾರ ಕೇಳಿಸಿ ಕೊಳ್ಳಬೇಕಾಗುತ್ತದೆ. ಈಗಿನ ಜಗದ್ಗುರುಗಳು ಗುರುತರವಾದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಭಕ್ತರು ರೈತಾಪಿ ವರ್ಗ ಎಂಬುವುದನ್ನು ಗುರುಗಳು ಮನಗಂಡಿದ್ದಾರೆ ಎಂದು ಸಿಎಂ ಹೇಳಿದರು.
ನೀರಾವರಿ ಯೋಜನೆಗಳಿಗೆ ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ವೇಗ ನೀಡಿದರು. ಮಾಜಿ ಸಚಿವ ಎಂ.ಬಿ.ಪಾಟೀಲ್ ಕೂಡ ನಾವು ಚಾಲನೆ ನೀಡಿದ ಯೋಜನೆ ಮುಂದುವರಿಸುವ ಪ್ರಯತ್ನ ಮಾಡಿದ್ದಾರೆ. ರಾಜ್ಯದ ನಾಲ್ಕು ದಿಕ್ಕಿನಲ್ಲಿ ಬಿಎಎಸ್‌ವೈ ಪಾದಯಾತ್ರೆ ಮಾಡಿದ್ದಾರೆ. ಅವರು ಹೋದ ಕಡೆಯೆಲ್ಲಾ ನೀರಾವರಿ ಯೋಜನೆ ಆಗಬೇಕು ಎನ್ನುತ್ತಾರೆ. ನಾನೊಮ್ಮೆ ಸರ್ ನೀವು ಎಲ್ಲೆಲ್ಲಿ ಪಾದಯಾತ್ರೆ ಮಾಡಿದ್ದೀರಿ ಲಿಸ್ಟ್ ಕೊಡಿ ಎಂದು ಕೇಳಿದ್ದೆ ಎಂದು ಸಿಎಂ ಚಟಾಕಿ ಹಾರಿಸಿದರು.
ರೈತರ ಆಸ್ತಿ ಜಪ್ತಿ ನಿಷೇಧಕ್ಕೆ ಕ್ರಮ
ನಾನು ಬಿಎಸ್‌ವೈ ಹಾಕಿಕೊಟ್ಟ ಹಾದಿಯಲ್ಲಿ ಸಾಗಿದ್ದೇನೆ. ದೂರದೃಷ್ಟಿಯಿಂದ ವಿದ್ಯಾನಿಧಿ ಯೋಜನೆ ಜಾರಿ ಮಾಡಲಾಗಿದೆ. ರೈತರು ಸ್ವಾಭಿಮಾನಿ, ಸ್ವಾವಲಂಬಿ ಬದುಕು ನಡೆಸಲು ಯೋಜನೆ ರೂಪಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ವ್ಯಾಪ್ತಿಗೊಳಪಡಲಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ರೈತರು ಸಂಕಷ್ಟದಲ್ಲಿರುವಾಗ ಬ್ಯಾಂಕ್‌ಗಳು ಸಾಲ ಮರುಪಾವತಿಗೆ ನೋಟಿಸ್ ನೀಡುತ್ತಿವೆ. ಹೀಗಾಗಿ ರೈತರ ಆಸ್ತಿ ಜಪ್ತಿ ಮಾಡದಂತೆ ನಿಷೇಧ ಹೇರುವ ಕೆಲಸ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಹಲವೆಡೆ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ರೈತರಿಗೆ ಸದನದಲ್ಲಿ ಸಿಎಂ ಬೊಮ್ಮಾಯಿ ಪರಿಹಾರದ ಭರವಸೆ ನೀಡಿದ್ದಾರೆ. ಸಾಲಗಾರರ ಕಪಿಮುಷ್ಠಿಯಲ್ಲಿ ರೈತರು ನರಳದಂತೆ ಕ್ರಮ ಕೈಗೊಳ್ಳಲು ಸಿಎಂ ತೀರ್ಮಾನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದರು.
ಸಿಎಂ ಆಗಿದ್ದಾಗ ಲಿಂ. ಶಿವಕುಮಾರ ಶ್ರೀಗಳ ಸೂಚನೆ ಮೇರೆಗೆ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ್ದೆ. ಅವರ ಬಗ್ಗೆ ಧರ್ಮ ನುಡಿ ಮೆಲುಕು ಹಾಕುವ ಅದೃಷ್ಟ ನಮ್ಮದಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಭಾಗ್ಯಲಕ್ಷ್ಮೀ ಯೋಜನೆ, ಹಾಲು ಉತ್ಪಾದಕ ರೈತನಿಗೆ ನೆರವು ಯೋಜನೆ ಜಾರಿ ಮಾಡಿದ್ದೆ. ರೈತನ ಜ್ವಲಂತ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇದರಿಂದ ರಾಜ್ಯದಲ್ಲಿ ರೈತರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಹ ಪ್ರಾಮಾಣಿಕ ಹೆಜ್ಜೆಯಿಡುತ್ತಿದ್ದಾರೆ ಎಂದರು.
ಸಾಲ ಮಾಡಿದ ರೈತರ ಆಸ್ತಿ ಮುಟ್ಟುಗೋಲು ಹಾಕಲು ಬಿಡಲ್ಲ, ಸಿಎಂ ಬೊಮ್ಮಾಯಿ ಈಗಾಗಲೇ ಈ ಬಗ್ಗೆ ಕ್ರಮಕ್ಕೆ ಚಿಂತನೆ ನಡೆಸಿದ್ದಾರೆ. ರೈತರು ನೆಮ್ಮದಿಯಿಂದ ಇದ್ದಾಗ ನಾವು ಬದುಕಲು ಸಾಧ್ಯ. ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕಿದೆ. ನಮ್ಮ ಸರ್ಕಾರದಿಂದ ರೈತರ ಸರ್ವತೋಮುಖ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಸಚಿವ ಜೆ.ಸಿ ಮಾಧುಸ್ವಾಮಿ ಮಾತನಾಡಿ, ಈ ಹಿಂದೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿರಿಗೆರೆ ಶ್ರೀಗಳು,
ನಾನು ರಾಜಕಾರಣಿಗಳನ್ನು ಭ್ರಷ್ಟರು ಎನ್ನಲ್ಲ, ಜನರು ಅವರನ್ನು ಭ್ರಷ್ಟರನ್ನಾಗಿ ಮಾಡಿದ್ದಾರೆ. ಎಲ್ಲಾ ವಿಷಯಕ್ಕೆ ಅವರನ್ನು ಪೀಡಿಸಿದರೆ ಇನ್ನೇನು ಮಾಡುತ್ತಾರೆ ಎಂದಿದ್ದರು. ನಾನು ಅಂದು ಶ್ರೀಗಳನ್ನು ಮೆಚ್ಚಿ ಸತ್ಯ ಹೇಳಿದ್ದೀರಿ ಎಂದಿದ್ದೆ. ವ್ಯವಸ್ಥೆ ನಮ್ಮನ್ನು ಕೆಡಿಸುತ್ತಿದೆ, ನಾವಲ್ಲ ಎಂದ ಅವರು, ನಾವು ಕೆಡಬಾರದು ಎಂದು ಜನರು ಮನಸ್ಸು ಮಾಡಿದರೆ ನಾವೇನೂ ಕೆಡುವ ಅಗತ್ಯವಿಲ್ಲ ಎಂದರು.
ಸಿಎಂ ಬೊಮ್ಮಾಯಿ ಗರ್ಭಗುಡಿಯ ದೇವರು, ಮಾಜಿ ಸಿಎಂ ಬಿಎಸ್‌ವೈ ಉತ್ಸವ ಮೂರ್ತಿ
ಸಿಎಂ ಬಸವರಾಜ ಬೊಮ್ಮಾಯಿ ಗರ್ಭಗುಡಿಯಲ್ಲಿನ ದೇವರಿದ್ದಂತೆ, ಮಾಜಿ ಸಿಎಂ ಬಿ.ಎಎಸ್.ಯಡಿಯೂರಪ್ಪ ಉತ್ಸವ ಮೂರ್ತಿ ಇದ್ದಂತೆ. ದೇವರಾಜ್ ಅರಸು ಅವರ ಮಂತ್ರಿ ಮಂಡಲ ಸಿರಿಗೆರೆ ಮಠದಲ್ಲಿ ರಚನೆ ಆಗುತ್ತಿತ್ತು. ಲಿಂ. ಶಿವಕುಮಾರಶ್ರೀ ಸೀನಿದರೆ ವಿಧಾನಸೌಧ ನಡುಗುವ ಪ್ರತೀತಿಯಿತ್ತು ಎಂದು ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ರೈತರ ಸಾಲಕ್ಕಾಗಿ ಅವರ ಆಸ್ತಿ ಹರಾಜು ಆಗಬಾರದು. ರೈತರ ಸಾವಿನ ನಂತರ ಪರಿಹಾರ ಕೊಡುವುದಕ್ಕಿಂತ ಬದುಕಿದ್ದಾಗ ನೆರವು ನೀಡಬೇಕು. ಸಮಸ್ಯೆ ಬಗೆಹರಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಹಾಗೆಯೇ ತರಳಬಾಳು ಹುಣ್ಣಿಮೆ ಎಂದರೆ ಪರ್ಯಾಯವಾಗಿ ಏತ ನೀರಾವರಿ ಯೋಜನೆ ಎಂಬಂತಾಗಿದೆ. 2023ರಲ್ಲಿ ಕೊಟ್ಟೂರಿನಲ್ಲಿ ತರಳಬಾಳು ಹುಣ್ಣಿಮೆಯಿದೆ. ಆ ಕಾರ್ಯಕ್ರಮದ ವೇಳೆಗೆ ಯೋಜನೆಯ ಆದೇಶ ಸಿದ್ಧವಾಗಲಿ ಎಂದು ಸಿಎಂ ಬೊಮ್ಮಾಯಿಗೆ ಮನವಿ ಮಾಡಿದರು.
ಮಾಜಿ ಸಚಿವ ಶಾಸಕ ಎಂ.ಬಿ.ಪಾಟೀಲ್, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ ಮತ್ತಿತರರು ಇದ್ದರು.
ಇದನ್ನೂ ಓದಿ | ಸಿದ್ದರಾಮಯ್ಯ ಹಿಟ್ ಲಿಸ್ಟ್‌ನಲ್ಲಿದ್ರು, ನನಗೂ ಜೀವ ಬೆದರಿಕೆ ಬಂದಿತ್ತು: ನಿಡುಮಾಮಿಡಿ ಶ್ರೀ