Site icon Vistara News

Karnataka Election 2023: ಕಾಂಗ್ರೆಸ್‌ನಲ್ಲಿ ಎಷ್ಟೇ ವಯಸ್ಸಾದರೂ ಟಿಕೆಟ್‌ ಬೇಡ ಎನ್ನಲ್ಲ; ಮುಂದಿನ ಪೀಳಿಗೆಗಾಗಿ ಬಿಜೆಪಿಯಲ್ಲಿ ಈ ನಿರ್ಧಾರ: ಸಿಎಂ ಬೊಮ್ಮಾಯಿ

development works and achievements will lead to win again Says CM Basavaraj Bommai

ರಾಯಚೂರು: ಕಾರ್ಯಕರ್ತರು ಹಾಗೂ ಜನ ಬೆಂಬಲದಿಂದ ಬಿಜೆಪಿ ಪಕ್ಷವನ್ನು ಕಟ್ಟಿದ್ದೇವೆ. ಮುಂದಿನ ಪೀಳಿಗೆಗೆ ಅನುಕೂಲವಾಗಲು ಪಕ್ಷದಲ್ಲಿ (Karnataka Election 2023) ಕೆಲ ಬದಲಾವಣೆ ಮಾಡಿದ್ದೇವೆ. ಆದರೆ, ಕಾಂಗ್ರೆಸ್‌ನಲ್ಲಿ ಇಂತಹ ಯಾವುದೇ ಬದಲಾವಣೆ ಆಗಿಲ್ಲ. ಅಲ್ಲಿ ಜಡತ್ವ ಇದೆ. ಅಲ್ಲಿ ಎಷ್ಟೇ ವಯಸ್ಸಾದರೂ ಬೇಡ ಎನ್ನಲ್ಲ. ಖುದ್ದು ಆಕಾಂಕ್ಷಿ ಹೇಳುವವರೆಗೂ ಮುಂದುವರಿಯುತ್ತದೆ ಎಂದು ಬಿಜೆಪಿಯಲ್ಲಿ ಹಿರಿಯರಿಗೆ ಟಿಕೆಟ್‌ ಕೈ ತಪ್ಪಿರುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡರು.

ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಎಸ್‌ಸಿ ಸಮುದಾಯದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಹಿರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಚಿವ ಆನಂದ್ ಸಿಂಗ್ ಸೇರಿ ಹಲವರು ಸ್ಥಾನ ಬಿಟ್ಟು ಕೊಟ್ಟಿದ್ದಾರೆ. ಪಕ್ಷ ಬಲಿಷ್ಠ ಆಗಿರುವುದರಿಂದ ಅವರ ಸ್ಥಾನ ತುಂಬಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಬಿ.ಎಸ್‌. ಯಡಿಯೂರಪ್ಪ ನಮ್ಮ ನಾಯಕ ಸರ್ವೋಚ್ಚ ನಾಯಕರು. ನಮ್ಮಲ್ಲಿ ನಿರಾಣಿ, ಸಿ.ಸಿ. ಪಾಟೀಲ್, ಸೋಮಣ್ಣ ಅವರಂತಹ ಎರಡನೇ ಹಂತದ ನಾಯಕರಿದ್ದಾರೆ. ಪಕ್ಷದಲ್ಲಿ ಕೆಲ ಬದಲಾವಣೆ ಸಂದರ್ಭದಲ್ಲಿ ಅಸಮಾಧಾನ ಸಹಜ. ಕಾಂಗ್ರೆಸ್‌ ಮನೆ ಖಾಲಿ ಇತ್ತು, ಹೀಗಾಗಿ ಬೇರೆ ಪಕ್ಷದಿಂದ ಬರುವವರನ್ನು ತುಂಬಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಯಂತಹ ಹಿರಿಯ ರಾಜಕಾರಣಿಗಳು ಪಕ್ಷಕ್ಕೆ ರಾಜೀನಾಮೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಲವೆಡೆ ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಇದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಆದರೂ ಬಿಜೆಪಿ ಬಹುಮತದೊಂದಿಗೆ ಅಧಿಕಾರ ರಚಿಸಲಿದೆ ಎಂದು ಹೇಳಿದರು.

ನಮ್ಮ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ

ದೇಶಕ್ಕೆ ಸ್ವಾತಂತ್ರ್ಯ ಬಂದಾಗ 6 ಜಾತಿಗಳು ಎಸ್‌ಸಿಗೆ ಸೇರಿದ್ದವು. 103 ಜಾತಿಗಳು ಈಗ ಎಸ್‌ಸಿ ಪಟ್ಟಿಯಲ್ಲಿವೆ. ಒಂದೆಡೆ ಜನಸಂಖ್ಯೆ ಹೆಚ್ಚಾಗಿದೆ, ಜಾತಿಗಳ ಸಂಖ್ಯೆಯೂ ಹೆಚ್ಚಾಗಿವೆ. ಆದರೆ ಮೀಸಲಾತಿ ಪ್ರಮಾಣ ಜಾಸ್ತಿಯಾಗಿಲ್ಲ. ಹಿಂದಿನ ಸರ್ಕಾರಗಳು ಎಸ್‌ಸಿ, ಎಸ್‌ಟಿಗೆ ಹಲವು ಜಾತಿಗಳನ್ನು ಸೇರಿಸುತ್ತಾ ಹೋದವು. ಆದರೆ, ಮೀಸಲಾತಿ ಹೆಚ್ಚಳ ಮಾಡಲಿಲ್ಲ. ಸಂವಿಧಾನದ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಬೇಕು. ಆದರೆ, ಆ ಕೆಲಸ ಆಗಲಿಲ್ಲ. ಹೀಗಾಗಿ ನಮ್ಮ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ ಎಂದು ಹೇಳಿದರು.

ಕೆಲವರು ಬರೀ ಮಾತಲ್ಲಿ ಸಾಮಾಜಿಕ ನ್ಯಾಯ ಎನ್ನುತ್ತಾರೆ. ಆದರೆ, ಎಸ್‌ಸಿ, ಎಸ್‌ಟಿ ಜನಾಂಗಕ್ಕಾಗಿ ಏನೂ ಮಾಡಿಲ್ಲ. ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ರದ್ದು ಮಾಡುತ್ತೇವೆ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಆದರೆ, ಅವರಿಗೆ ಜನ ಅವಕಾಶ ಕೊಡಲ್ಲ. ಒಂದು ವೇಳೆ ಒಳ ಮೀಸಲಾತಿ ರದ್ದು ಮಾಡಲು ಬಂದರೆ ಹಳ್ಳಿ ಹಳ್ಳಿಯಲ್ಲೂ ಕ್ರಾಂತಿಯಾಗುತ್ತದೆ. ನೀವೆಲ್ಲ ಕ್ಷೇತ್ರದಿಂದಲೇ ಮಾಯ ಆಗುತ್ತೀರಿ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ | Karnataka Election 2023: ಪಕ್ಷ ಸ್ಥಾನಮಾನ ಕೊಟ್ಟಿದ್ದರೂ ಯಡಿಯೂರಪ್ಪ ಏಕೆ ಕೆಜೆಪಿ ಕಟ್ಟಿದ್ದರು: ಬಿಎಸ್‌ವೈಗೆ ಶೆಟ್ಟರ್‌ ತಿರುಗೇಟು

ಸಚಿವ ಗೋವಿಂದ ಕಾರಜೋಳ ಮಾತನಾಡಿ, 40 ವರ್ಷಗಳಿಂದ ಮೀಸಲಾತಿಗಾಗಿ ನಿರಂತರ ಹೋರಾಟ ನಡೆದಿದೆ. ಆದರೆ, ಮೀಸಲಾತಿ ಹೆಚ್ಚಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿಗೆ ಸಲ್ಲುತ್ತದೆ. ಸಿದ್ದರಾಮಯ್ಯ ಈ ಜನಾಂಗದ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ಮೀಸಲಾತಿ ಹೆಚ್ಚಳ ಮಾಡಿದ್ದಕ್ಕೆ ಕಾಂಗ್ರೆಸ್‌ನವರು ಬೊಬ್ಬೆ ಹಾಕುತ್ತಿದ್ದಾರೆ. ಕಾಂಗ್ರೆಸ್ ಬಂದರೆ ಒಳ‌ ಮೀಸಲಾತಿ ಹಿಂಪಡೆಯುತ್ತದೆ ಎಂದು ಆರೋಪಿಸಿದರು.

ಒಳ ಮೀಸಲಾತಿ ಬಗ್ಗೆ ಬಂಜಾರ ಸಮುದಾಯಕ್ಕೆ ಕಾಂಗ್ರೆಸ್ ಸುಳ್ಳು ಹೇಳಿದೆ. ನಮ್ಮ ಸರ್ಕಾರ ಯಾವುದೇ ಸಮುದಾಯಕ್ಕೂ ಅನ್ಯಾಯ ‌ಮಾಡಿಲ್ಲ. ಕಾಂಗ್ರೆಸ್ ವೋಟ್ ಬ್ಯಾಂಕ್ ಹೋಗಿದೆ ಎಂದು ಬೊಬ್ಬೆ ಹಾಕುತ್ತಿದೆ. ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಭದ್ರವಾಗಿ ಇರಬೇಕು. ರಾಜ್ಯದಲ್ಲಿ ಬೊಮ್ಮಾಯಿ ಅವರ ಕೈಯನ್ನು ನೀವು ಬಲಪಡಿಸಬೇಕು ಎಂದು ಎಸ್‌ಸಿ ಸಮುದಾಯಕ್ಕೆ ಮನವಿ ಮಾಡಿದರು.

ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ಎಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಮತ್ತಿತರರು ಇದ್ದರು.

ಇದನ್ನೂ ಓದಿ | Karnataka Election 2023: ರಾಜ್ಯದ ಮಾನ, ಮರ್ಯಾದೆ, ಗೌರವವನ್ನು ಕಾಂಗ್ರೆಸ್‌ನವರು ಹಾಳು ಮಾಡಿದರು ಎಂದ ಸಿದ್ದರಾಮಯ್ಯ

ಊಟವಿದೆ ಎಂದು ಹೊರಟ ಜನ; ಮುಜುಗರಕ್ಕೆ ಒಳಗಾದ ಸಿಎಂ

ಕಾರ್ಯಕ್ರಮದಿಂದ ಜನರು ಎದ್ದು ಹೊರಡಲು ಮುಂದಾಗಿದ್ದರಿಂದ ಸಿಎಂ ಬೊಮ್ಮಾಯಿ ಮುಜುಗರಕ್ಕೆ ಒಳಗಾದ ಪ್ರಸಂಗ ನಡೆದಿದೆ. ಊಟದ ವ್ಯವಸ್ಥೆಯಿದೆ ಎಂದು ಸಿಎಂ ಭಾಷಣಕ್ಕೂ ಮೊದಲು ಜನರು ಎದ್ದು ಹೊರಡಲು ಮುಂದಾದರು. ಈ ವೇಳೆ ಎಲ್ಲೂ ಊಟದ ವ್ಯವಸ್ಥೆ ಇಲ್ಲ, ನೀವು ಯಾರೂ ಹೊರಗಡೆ ಹೋಗಬೇಡಿ ಬನ್ನಿ. ಎಲೆಕ್ಷನ್ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಇದೆ. ಊಟದ ವ್ಯವಸ್ಥೆ ‌ಮಾಡಲು ಆಗಲ್ಲ. ಸುಳ್ಳು ಸುದ್ದಿಗೆ ಯಾರೂ ಕಿವಿಗೊಡಬೇಡಿ ಎಂದು ಮೈಕ್‌ನಲ್ಲಿ ಶಾಸಕ ಶಿವರಾಜ್ ‌ಪಾಟೀಲ್ ಜನರನ್ನು ಕರೆದರು. ನಂತರ ಜನರನ್ನು ಮತ್ತೆ ಕೂರಿಸಲು ಆಯೋಜಕರು ಹರಸಾಹಸಪಟ್ಟರು. ಬಳಿಕ ಆಯೋಜಕರ‌ ಮೇಲೆ ಸಿಎಂ ಬೊಮ್ಮಾಯಿ ಗರಂ ಆಗಿ ಕ್ಲಾಸ್‌ ತೆಗೆದುಕೊಂಡರು.

Exit mobile version