ಮೈಸೂರು: ಚುನಾವಣೆಗೋಸ್ಕರ ಕೆಲವರು ಬೇಕಾಬಿಟ್ಟಿ ಯೋಜನೆ ಘೋಷಿಸಿದ್ದಾರೆ. ಬಡವರು ಬಳಸುವುದೇ 80 ಯೂನಿಟ್ ವಿದ್ಯುತ್. ಆದರೆ, 200 ಯೂನಿಟ್ ಪುಕ್ಕಟೆಯಾಗಿ ಕೊಡುವುದಾಗಿ ಹೇಳುತ್ತಿದ್ದಾರೆ. ಮಾತಿನಲ್ಲಿ ಗ್ಯಾರಂಟಿ ಇಲ್ಲ, ಆದ್ದರಿಂದ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಬ್ಯಾಂಕ್‌ನಲ್ಲಿ ಹಣ ಇಟ್ಟು ಕಾರ್ಡ್ ಕೊಟ್ಟಿದ್ದರೆ ಒಪ್ಪುತ್ತಿದ್ದೆ, ಒಂದು ನಯಾಪೈಸೆ ಇಲ್ಲ, ಆದರೂ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಟೀಕೆ ಮಾಡಿದ್ದಾರೆ.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜನರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಆಗಬೇಕು. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಹಕ್ಕುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸರ್ಕಾರಕ್ಕೆ ಆಶೀರ್ವಾದ ಮಾಡಬೇಕು. ನಮ್ಮ ಸರ್ಕಾರ ವಿಧಾನಸೌಧ, ಡಿಸಿ ಆಫೀಸ್‌ನಲ್ಲಿ ಇಲ್ಲ. ಜನರು ನೆಲೆಸಿರುವ ಕಡೆಗೆ ಬಂದು ಕೆಲಸ ಮಾಡುತ್ತಿದೆ ಹೇಳಿದರು.
ಇದನ್ನೂ ಓದಿ | Veerashaiva Lingayath: ಕಾಂಗ್ರೆಸ್‌ನಲ್ಲಿ 50-55 ವೀರಶೈವ ಲಿಂಗಾಯತರಿಗೆ ಟಿಕೆಟ್: ಶ್ಯಾಮನೂರು ಶಿವಶಂಕರಪ್ಪ
ಸರ್ಕಾರ ಸೂಕ್ಷ್ಮ ವಿಚಾರಗಳನ್ನು ತಿಳಿದುಕೊಂಡು ಯೋಜನೆ ರೂಪಿಸಬೇಕು. ಆ್ಯಸಿಡ್ ದಾಳಿಗೊಳಗಾದವರನ್ನು ಮನೆಯವರೂ ಕೈಬಿಡುತ್ತಾರೆ. ಅವರಿಗೆ ಮಾಸಿಕ 10 ಸಾವಿರ ರೂ. ನೀಡುತ್ತೇವೆ. ಕಿವುಡ ಮಕ್ಕಳಿಗೆ ಉಪಕರಣ ಖರೀದಿಗೆ 500 ಕೋಟಿ ರೂ. ಮೀಸಲು ಇಟ್ಟಿದ್ದೇವೆ. ಅಂಧರಿಗೆ ತಪಾಸಣೆ ನಡೆಸಿ ಕನ್ನಡಕ ನೀಡುವ ಯೋಜನೆ ನಾಲ್ಕು ಜಿಲ್ಲೆಗಳಲ್ಲಿ ಪ್ರಾರಂಭವಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದರು.
ಬಡವರಿಗೆ ನಮ್ಮ ಮನ ಮಿಡಿಯುತ್ತಿದೆ ಎಂದ ಅವರು, ಕ್ಯಾನ್ಸರ್, ಡಯಾಲಿಸಿಸ್ ರೋಗಿಗಳಿಗೆ ಅನುಕೂಲ ಮಾಡಿದ್ದೇವೆ. ಎಸ್‌ಸಿ ಎಸ್‌ಟಿ ಮೀಸಲಾತಿ ಪ್ರಮಾಣ ಜಾಸ್ತಿ ಮಾಡಿದ್ದೇವೆ. ಅಹಿಂದ ಎಂದು ಬಾಯಲ್ಲಿ ಹೇಳಿದರೆ ಆಗುವುದಿಲ್ಲ. ಬಡವರು, ದೀನ ದಲಿತರ ಪರವಾಗಿ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ | Lokayukta Raid: ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ನಾಯಕರ ಕೈಗಳೇ ಕಪ್ಪಾಗಿವೆ; 100 ಪರ್ಸೆಂಟ್‌ಗಾಗಿ ಪ್ರಜಾಧ್ವನಿ ಯಾತ್ರೆ: ಸಿಎಂ ಬೊಮ್ಮಾಯಿ
ಸಚಿವ ಎಸ್.ಟಿ. ಸೋಮಶೇಖರ್, ಶಾಸಕರಾದ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಹರ್ಷವರ್ಧನ್, ಮೇಯರ್ ಶಿವಕುಮಾರ್, ಮೈಲ್ಯಾಕ್ ಅಧ್ಯಕ್ಷ ಆರ್.ರಘು, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ, ಮುಡಾದ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.