ಹುಬ್ಬಳ್ಳಿ: ಮೀಸಲಾತಿಯ ವಿಚಾರಕ್ಕೆ ಕೈ ಹಾಕಿದರೆ ಸುಟ್ಟು ಭಸ್ಮ ಆಗುತ್ತಾರೆ ಎಂದು ಹೆದರಿಸಿದ್ದರು. ತುಳಿತಕ್ಕೊಳಗಾದ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡದಿದ್ದರೆ ಸರಿಯಲ್ಲ ಎಂಬ ಕಾರಣಕ್ಕೆ ಮೀಸಲಾತಿ ನೀಡಲು ನಿರ್ಧಾರ ಮಾಡಿದೆ. ಸ್ಥಾನಮಾನ ಮುಖ್ಯವಲ್ಲ. ನಿಮ್ಮ ಹೃದಯದಲ್ಲಿ ಪಡೆದಿರುವ ಸ್ಥಾನ ಶಾಶ್ವತ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯ ಪರಿಶಿಷ್ಟ ಸಮುದಾಯಗಳ ಮೀಸಲಾತಿ ಜಾರಿಗೊಳಿಸಿದ್ದಕ್ಕಾಗಿ ಹುಬ್ಬಳ್ಳಿಯಲ್ಲಿ ಆಯೋಜನೆಯಾಗಿದ್ದ ಅಭಿನಂದನಾ ಸಮಾರಂಬದಲ್ಲಿ ಮಾತನಾಡಿದರು.
ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಭಾಷಣ ಮಾಡಿಕೊಂಡುಬರಲಾಯಿತೇ ವಿನಃ, ಯಾರಿಗೂ ನ್ಯಾಯ ಸಿಗಲಿಲ್ಲ. ಕಾಂಗ್ರೆಸ್‌ನವರು ಈಗಲೂ ವಂಚನೆ ಮಾಡುವ ಆಟ ಆಡುತ್ತಿದ್ದಾರೆ. ಸಮಾಜವನ್ನು ಒಡೆದು ಆಳುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಜಾತಿಯನ್ನ, ಧರ್ಮವನ್ನು ಒಡೆಯುವ ಪ್ರಯತ್ನ ಮಾಡಿದ್ದರು.
ಜಾತಿ, ಸಮುದಾಯಗಳಿಗೆ ಮೀಸಲಾತಿ ಏಕೆ ನೀಡಬೇಕು, ಸ್ವಾತಂತ್ರ್ಯದ ಪೂರ್ವದಲ್ಲಿ ಯಾವ ಸ್ಥಿತಿಯಿತ್ತು ಎನ್ನುವ ಸುದೀರ್ಘ ಸ್ಪಷ್ಟನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದೆ. ಇದರಿಂದಲೇ ಇಂದು ಮೀಸಲಾತಿ ಅನುಷ್ಠಾನವಾಗುತ್ತಿದೆ. ನಾನು ಬೇರೆ ರೀತಿ ಮುಖ್ಯಮಂತ್ರಿ ಅಲ್ಲ. ಕೆಲಸ ಮಾಡಿ ನಿಮ್ಮ ಮುಂದೆ ಬರುವ ಮುಖ್ಯಮಂತ್ರಿ. ಒಳ ಮೀಸಲಾತಿಯನ್ನು ನೀಡುವಾಗಲೂ, ಬಂಜಾರ ಸೇರಿ ಯಾವ ಜಾತಿಗಳನ್ನೂ ತೆಗೆಯಬಾರದು ಎಂದು ಆದೇಶ ಮಾಡಿದೆವು. ಯಾವ ಸಮುದಾಯಗಳಿಗೂ ಅನ್ಯಾಯ ಮಾಡಿಲ್ಲ.
ಸಿದ್ದರಾಮಯ್ಯ ಅವರು, ಎಸ್‌ಸಿಎಸ್‌ಟಿ ಸಮುದಾಯಕ್ಕೆ ಶೇ.23 ಹಣ ನೀಡಬೇಕು ಎಂದರು. ಅದರೊಳಗೆ 7ಡಿ ಎಂಬ ಅಂಶ ಸೇರಿಸಿದರು. ಸಮುದಾಯಕ್ಕೆ ನೀಡಿರುವ ಅನುದಾನದಲ್ಲಿ ಬೇರೆ ಕೆಲಸ ಮಾಡಲು ಅವಕಾಶ ನೀಡಿದರು. ಆ ಅಂಶ ತೆಗೆದುಹಾಕಬೇಕು ಎಂದು ಅವರೇ ಹೇಳಿದರು, ನೀವೇ ಮಾಡಿದ್ದಲ್ಲವೇ? ಎಂದೆ. 7ಡಿ ಕಿತ್ತು ಹಾಕುತ್ತೇನೆ. ಎಸ್‌ಸಿಎಸ್‌ಟಿ ಕಾಂಟ್ರ್ಯಾಕಟರ್‌ಗಳಿಗೆ 1 ಕೋಟಿ ರೂ.ವರೆಗೂ ವಿಶೇಷ ಕಾಂಟ್ರಾಕ್ಟ್ ನೀಡಬೇಕು ಎಂದು ತೀರ್ಮಾನ ಮಾಡಿದ್ದೇನೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್. ಬಾಬು ಜಗಜೀವನ್‌ರಾಮ್ ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್‌ನಲ್ಲಿ ಮುನಿಯಪ್ಪ ಅವರನ್ನು ಸೋಲಿಸಿದ್ದು, ಡಾ. ಜಿ. ಪರಮೇಶ್ವರ್ ಸೋಲಿಸಿದ್ದು, ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ದಾಳಿಯಾದಾಗ ಬಾಯಿ ಮುಚ್ಚಿ ಕುಳಿತಿದ್ದು ಇದೇ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷ ಬಂದರೆ ಮೀಸಲಾತಿಯನ್ನು ತೆಗೆಯುವುದಾಗಿ ಕಾಂಗ್ರೆಸ್ ಹೇಳಿದೆ. ನಿಮಗೆ ಮೀಸಲಾತಿ ನೀಡುವವರು ಬೇಕೊ, ಮೀಸಲಾತಿ ತೆಗೆಯುವವರು ಬೇಕೊ ನಿರ್ಧಾರ ಮಾಡಿ ಎಂದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಕ್ಕೆ ನೀಡಿರುವ ಮೀಸಲಾತಿಯನ್ನು ಮನೆಮನೆಗೆ ತಿಳಿಸಬೇಕು. ಬೋವಿ, ಬಂಜಾರ್, ಕೊರಮ ಸಮುದಾಯವನ್ನು ಮೀಸಲಾತಿಯಿಂದ ಹೊರಗೆ ತೆಗೆಯಲಾಗುತ್ತದೆ ಎಂದು ಕೆಲವು ಕಾಂಗ್ರೆಸಿಗರು ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಕೊನೆಯ ಉಸಿರು ಇರುವವರೆಗೂ ಮೀಸಲಾತಿ ತೆಗೆಯಲು ಬಿಡುವುದಿಲ್ಲ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಕರ್ನಾಟಕದಲ್ಲಿ ಯಾವುದೇ ಶಕ್ತಿಗೆ ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: Basavaraj Bommai: ಒಳಮೀಸಲಾತಿಯನ್ನು ಕಾಂಗ್ರೆಸ್ ಹಿಂಪಡೆಯಲು ಸಾಧ್ಯವಿಲ್ಲ ಎಂದ ಸಿಎಂ ಬೊಮ್ಮಾಯಿ