Site icon Vistara News

Male Mahadeshwara Statue: 108 ಅಡಿ ಎತ್ತರದ ಮಲೆ ಮಹದೇಶ್ವರಸ್ವಾಮಿ ಭವ್ಯ ಪ್ರತಿಮೆ ಲೋಕಾರ್ಪಣೆ ಮಾಡಿದ ಸಿಎಂ

CM Basavaraj bommai unveils 108-feet tall statue of Male Mahadeshwara hill

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ 108 ಅಡಿ ಎತ್ತರದ ಮಲೆ ಮಹದೇಶ್ವರಸ್ವಾಮಿ ಭವ್ಯ ಪ್ರತಿಮೆಯನ್ನು (Male Mahadeshwara Statue) ಸಿಎಂ ಬಸವರಾಜ ಬೊಮ್ಮಾಯಿ ಅವರು ಶನಿವಾರ ಅನಾವರಣಗೊಳಿಸಿದರು. ಪುಷ್ಪಾರ್ಚನೆ ಮಾಡುವ ಮೂಲಕ ಮಾದಪ್ಪನ ಪ್ರತಿಮೆಯನ್ನು ಸಿಎಂ ಲೋಕಾರ್ಪಣೆ ಮಾಡಿದರು.

ಮಲೆ ಮಹದೇಶ್ವರ ಪ್ರತಿಮೆ ಅನಾವರಣಗೊಳಿಸಿ, ಬೆಳ್ಳಿ ರಥ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಮಹದೇಶ್ವರನ ಪವಾಡಗಳು ಜನರ ಮನದಾಳದಲ್ಲಿವೆ. ದಕ್ಷಿಣ ಕರ್ನಾಟಕದಲ್ಲಿ ಜಾತಿ, ಮತ, ಪಂಥಗಳ ಭೇದವಿಲ್ಲದೇ ಮಲೆ ಮಹದೇಶ್ವರನಿಗೆ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಈಗ ಮಲೆ ಮಹದೇಶ್ವರ ಸನ್ನಿಧಿಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದು ಹೇಳಿದರು.

ಪ್ರತಿ ವರ್ಷ ಸಾವಿರಾರು ಜನ ಕಾಲ್ನಡಿಗೆಯಲ್ಲಿ ಬಂದು ವಿಶೇಷ ಪೂಜೆ ಮಾಡಿ ದರ್ಶನ ಪಡೆಯುತ್ತಾರೆ. ಮಹದೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಪ್ರಾಧಿಕಾರ ರಚನೆಯಾಗಿದೆ. ನೂರಾರು ಕೋಟಿ ರೂ.ಗಳ ಅಭಿವೃದ್ದಿ ಕೆಲಸ ಮಾಡಲಾಗುತ್ತಿದೆ. ಇಲ್ಲಿ ಬರುವ ಜನರಿಗೆ ಊಟ, ವಸತಿ, ದರ್ಶನದ ವ್ಯವಸ್ಥೆ ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ನನೆಗುದಿಗೆ ಬಿದ್ದಿದ್ದ ಹಲವಾರು ಕೆಲಸ ಕಾರ್ಯಗಳನ್ನು ಸಚಿವ ಸೋಮಣ್ಣ ಅಚ್ಚುಕಟ್ಟಾಗಿ ನೆರವೇರಿಸಿದ್ದಾರೆ. ಶಾಸಕ ಮಹೇಶ್ ಅವರೂ ಕೂಡ ಪೂರಕವಾಗಿ ಕೆಲಸ ಮಾಡಿದ್ದಾರೆ ಎಂದರು.

ಕ್ಷೇತ್ರದ ಮಹತ್ವವನ್ನು ಎತ್ತಿ ಹಿಡಿಯುವ ಕೆಲಸ ಪ್ರತಿಮೆ ಮಾಡಿದೆ

ಇಷ್ಟು ದೊಡ್ಡ ಪ್ರತಿಮೆ ಮನುಷ್ಯನ ಭಾವನೆಗಳು ಸ್ಥಳದ ಮೇಲೆ ಅವಲಂಬಿತವಾಗಿರುತ್ತದೆ. ದೇವಸ್ಥಾನಕ್ಕೆ ಹೋದಾಗ ಶಾಂತಿ ಸಮಾಧಾನ ನೆಲೆಸುತ್ತದೆ. ಈ ಪ್ರದೇಶದಲ್ಲಿ ಈ ಕ್ಷೇತ್ರದ ಮಹತ್ವವನ್ನು ಎತ್ತಿ ಹಿಡಿಯುವ ಕೆಲಸ ಈ ಪ್ರತಿಮೆ ಮಾಡಿದೆ. ಜೀವಕಳೆ ಇರುವ ಪ್ರತಿಮೆ ನಿರ್ಮಾಣವಾಗಿದೆ. ಕ್ಷೇತ್ರಕ್ಕೆ ಬರುವವರನ್ನು ಈ ಪ್ರತಿಮೆ ಆಕರ್ಷಿಸುತ್ತದೆ. ಸಮಸ್ತ ಕನ್ನಡಿಗರ ಬದುಕು ಬಂಗಾರವಾಗಬೇಕೆಂಬ ಇಚ್ಛೆ ನನ್ನದು ಎಂದರು.

ಶಿಕಾರಿಪುರದಲ್ಲಿ 68 ಅಡಿ ಎತ್ತರದ ಅಕ್ಕಮಹಾದೇವಿ ಪ್ರತಿಮೆ ಉದ್ಘಾಟಿಸುವ ಭಾಗ್ಯ ನನ್ನದಾಯಿತು. ಥೀಮ್ ಪಾರ್ಕ್ ಕೂಡ ಆಗಿದೆ. ಇಲ್ಲಿ ಮಾದಪ್ಪನ ದರ್ಶನ ಹಾಗೂ ಪ್ರತಿಮೆ ಅನಾವರಣದ ಭಾಗ್ಯ ದೊರೆತಿದೆ. ಇಡೀ ನಾಡಿನ ದಾರ್ಶನಿಕರಿಂದ ನಾವು ಪ್ರೇರಣೆ ಪಡೆಯಬೇಕು. ಅದರಂತೆ ನಡೆಯಬೇಕು. ಮಲೆ ಮಹದೇಶ್ವರಕ್ಕೆ ತನ್ನದೇ ಆದ ಇತಿಹಾಸ ಇದೆ. ಚಾಮರಾಜನಗರಕ್ಕೆ ಸೋಮಣ್ಣನವರ ಸಮರ್ಥ ಉಸ್ತುವಾರಿ ಇದೆ. ಅವರು ಮಹದೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಸಮಸ್ಯೆಗಳಿಗೆ ಪರಿಹಾರ

ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣ ಮಾಡಲಾಗುವುದು. ಈ ಭಾಗದ ಸಮಸ್ಯೆಗಳ ಬಗ್ಗೆ ವರದಿ ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ವರದಿ ಬಂದಿದೆ. ಎರಡು ದಿನಗಳಲ್ಲಿ ಈ ಬಗ್ಗೆ ಆದೇಶ ಹೊರಡಿಸಲಾಗುವುದು. ಪಿ.ಎಚ್.ಸಿ.ಕೇಂದ್ರ ಕಾಮಗಾರಿ ಪ್ರಾರಂಭವಾಗುತ್ತಿದೆ. ಇಲ್ಲಿನ ರೈತರ ಭೂಮಿಯ ಸಮಸ್ಯೆ ಕೂಡ ಬಗೆಹರಿಸಲಾಗುತ್ತಿದೆ ಎಂದರು.

ಇದನ್ನೂ ಓದಿ | Karnataka Elections : ಕೋಲಾರ ಬೇಡ, ವರುಣಾದಲ್ಲೇ ನಿಲ್ಲಿ: ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಸ್ಪಷ್ಟ ಸಲಹೆ

ವಸತಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿ, ನನ್ನ ಜೀವನದಲ್ಲಿ ಇಂದು ಅವಿಸ್ಮರಣೀಯವಾದ ದಿನವಾಗಿದೆ. ಮಲೆ ಮಹದೇಶ್ವರ ನಮ್ಮ ಆರಾಧ್ಯ ದೈವವಾಗಿದ್ದು, ಇದು ಮನಸ್ಸಿಗೆ ನೆಮ್ಮದಿ ಕೊಡುವ ಕಾರ್ಯಕ್ರಮ. ಪ್ರತಿಮೆ ಉದ್ಘಾಟಿಸಿದ ಸಿಎಂಗೆ ಭಕ್ತರ ಪರವಾಗಿ ಧನ್ಯವಾದ ಹೇಳುತ್ತೇನೆ. ಸರ್ಕಾರ, ಪ್ರಾಧಿಕಾರ ಒಟ್ಟಿಗೆ ಸೇರಿ ಕೆಲಸ ಮಾಡಿವೆ. ಇನ್ನು ಮುಂದೆ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ನೂರು ಪಟ್ಟು ಹೆಚ್ಚಾಗಲಿ ಎಂದು ಹೇಳಿದರು.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಮಾತನಾಡಿ, ಮಾದಪ್ಪನ ಬೆಟ್ಟದಲ್ಲಿ ಪ್ರತಿಮೆ ಆಗಬೇಕೆಂಬ ಕನಸು ನನಸಾಗಿದೆ. ಬೆಟ್ಟ ಹತ್ತಿ ಬಂದರೆ ಮಾದಪ್ಪನನ್ನು ದೇವಸ್ಥಾನದಲ್ಲಿ ನೋಡಬೇಕಿತ್ತು. ಆದರೆ, ಇದೀಗ ದೂರದಿಂದಲೇ ನೋಡುವ ಅವಕಾಶ ಲಭ್ಯವಾಗಿದೆ ಎಂದರು.

ಇದನ್ನೂ ಓದಿ | Vijay Sankalp Yatre: ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಸಂಪೂರ್ಣ ನೆಲಸಮ ಮಾಡುವುದೇ ನನ್ನ ಗುರಿ: ಯಡಿಯೂರಪ್ಪ

ಈಗಿನ ಕಾಲದಲ್ಲಿ ಬಹುತೇಕ ಜನರು ಮನೆಯೊಳಗೇ ಚಪ್ಪಲಿ ಹಾಕಿಕೊಂಡು‌ ಓಡಾಡುತ್ತಾರೆ. ಅಂತಹುದರಲ್ಲಿ ಮಾದಪ್ಪನ ದರ್ಶನಕ್ಕೆ ಸಾವಿರಾರು ಭಕ್ತರು ಬರಿಗಾಲಿನಲ್ಲಿ ಕಾಲ್ನಡಿಗೆ ಮೂಲಕ ಬರುತ್ತಾರೆ ಎಂದ ಅವರು, ಮೂರ್ತಿ ನಿರ್ಮಾಣದ ಶ್ರೇಯಸ್ಸು ಮಹದೇವ ಪ್ರಸಾದ್, ಸೋಮಣ್ಣ, ನರೇಂದ್ರ ಎಲ್ಲರಿಗೂ ಕೂಡ ಸಲ್ಲಬೇಕು. ಮಹದೇಶ್ವರ ಕೃಪೆ ಎಲ್ಲರ ಮೇಲಿರಲಿ ಆಶೀರ್ವದಿಸಿದರು.

ಸಾಲೂರು ಬೃಹನ್ಮಠಾಧೀಶ್ವರ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಸಚಿವ ಎಸ್.ಟಿ. ಸೋಮಶೇಖರ್ , ಶಾಸಕ ಎನ್ ಮಹೇಶ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Exit mobile version