Site icon Vistara News

ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಸಂತಾಪ

subbanna2

ಬೆಂಗಳೂರು: ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಂಗೀತ ಪರಂಪರೆಯ ಮನೆತನದಿಂದ ಬಂದ ಸುಬ್ಬಣ್ಣ ಅವರು ಸುಗಮ ಸಂಗೀತ ಹಾಗೂ ಚಲನ ಚಿತ್ರ ಹಿನ್ನಲೆ ಗಾಯಕರಾಗಿ ತಮ್ಮದೇ ಛಾಪು ಮೂಡಿಸಿದ್ದರು. ಅವರ ʻಕಾಡು ಕುದುರೆ ಓಡಿ ಬಂದಿತ್ತಾ’ ಗೀತೆಯು ಇಂದಿಗೂ ಅಭಿಮಾನಿಗಳು ಗುನುಗುನಿಸುವ ಹಾಡು. ಇದಕ್ಕಾಗಿ ಭಾರತ ಸರ್ಕಾರದ ರಜತ ಕಮಲ ಪ್ರಶಸ್ತಿಗೂ ಭಾಜನರಾದರು. ಸಂತ ಶಿಶುನಾಳ ಶರೀಫರ ಗೀತೆಗಳಿಗೆ ದನಿಯಾಗಿ ಅವುಗಳನ್ನು ಇನ್ನಷ್ಟು ಎತ್ತರಕ್ಕೆ ಒಯ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ.

ಅವರ ನಿಧನದಿಂದ ಸುಗಮ ಸಂಗೀತ ಕ್ಷೇತ್ರದ ಒಬ್ಬ ಶ್ರೇಷ್ಠ ಗಾಯಕನನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಮಲೆನಾಡಿನ ಪ್ರತಿಭೆ : ಸುಬ್ಬಣ್ಣ ಅವರು ನಮ್ಮೂರಿನ ಹಿರಿಯ ಕಲಾವಿದರು. ಮಲೆನಾಡಿನ ಪ್ರತಿಭೆ ಬಗ್ಗೆ ನಮಗೆ ತುಂಬ ಹೆಮ್ಮೆಯಿದೆ ಎಂದು ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಸುಬ್ಬಣ್ಣ ಅವರ ನಿಧನ ನಾಡಿಗೆ ತುಂಬಲಾರದ ನಷ್ಟ. ಹೊಸನಗರ ತಾಲೂಕಿನ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ, ಮನ್ನಣೆ ಸಿಕ್ಕಿದೆ. ಸಂಗೀತ ಲೋಕದಲ್ಲಿ ಕನ್ನಡಿಗರಿಗೆ ಇಂಥ ಪ್ರಶಸ್ತಿ ಸಿಕ್ಕಿರುವುದು ಕಡಿಮೆ. ಅಂಥ ಪ್ರತಿಭಾವಂತ ಕಲಾವಿದರ ನಿಧನ ಸಾಂಸ್ಕೃತಿಕ, ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ಅವರ ಅಗಲಿಕೆ ಭರಿಸುವ ಶಕ್ತಿ ದೇವರು ಕುಟುಂಬ ಸದಸ್ಯರಿಗೆ ನೀಡಲಿ ಎಂದು ಜ್ಞಾನೇಂದ್ರ ಹೇಳಿದ್ದಾರೆ.

ಶ್ರೇಷ್ಠ ಸುಗಮ ಸಂಗೀತಗಾರ: ಕನ್ನಡದ ಶ್ರೇಷ್ಠ ಸುಗಮ ಸಂಗೀತ ಲೋಕದ ದಿಗ್ಗಜ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಸುಗಮ ಸಂಗೀತವನ್ನು ಜನಮನ ಮುಟ್ಟಿಸುವಲ್ಲಿ ಅಪಾರ ಶ್ರಮಿಸಿದ್ದ ಶಿವಮೊಗ್ಗ ಸುಬ್ಬಣ್ಣ ಅವರು ನಿಧನದ ಸುದ್ದಿ ತಿಳಿದು ದುಃಖವಾಯಿತು. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಸುಬ್ಬಣ್ಣ | ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ ವ್ಯವಸ್ಥೆ

Exit mobile version