ಹುಬ್ಬಳ್ಳಿ: ಮುಂದಿನ ಒಂದು ವರ್ಷದ ಅವಧಿಯೊಳಗೆ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು, ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಇಲ್ಲಿನ ಘಂಟಿಕೇರಿಯ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದಡಿ, ಸುಮಾರು 34 ಕೋಟಿ ರೂ. ವೆಚ್ಚದ ವಿವಿಧ ಮೂಲ ಸೌಕರ್ಯ ಯೋಜನೆ ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನಮ್ಮ ದೇಶದ ಜನಸಂಖ್ಯೆ 30 ಕೋಟಿ ಇತ್ತು, ಸ್ವಾತಂತ್ರ್ಯಾನಂತರ ಈಗ ಈ ಪ್ರಮಾಣ 130 ಕೋಟಿಗೆ ಏರಿದೆ. ಶೇ.14 ಇದ್ದ ನಗರ ಪ್ರದೇಶದ ಜನಸಂಖ್ಯೆಯ ಪ್ರಮಾಣ ಶೇ.37ಕ್ಕೆ ಏರಿಕೆಯಾಗಿದೆ. ಸ್ಮಾರ್ಟ್ ಸಿಟಿ ಯೋಜನೆ 2014-15 ರಿಂದ ಪ್ರಾರಂಭವಾಗಿ 2020ರ ಹೊತ್ತಿಗೆ ಪೂರ್ಣಗೊಳ್ಳಬೇಕಾಗಿತ್ತು. ಮೊದಲ ಎರಡು ವರ್ಷಗಳ ಕಾಲ ಯೋಜನೆ ಒಪ್ಪಿ ಅನುಷ್ಠಾನ ಮಾಡುವಲ್ಲಿ ಎಲ್ಲ ಪಾಲಿಕೆಗಳು ಹಿಂದೇಟು ಹಾಕಿದವು. ಇದರಿಂದಾಗಿ ಯೋಜನೆ ವಿಳಂಬವಾಗಿದೆ ಎಂದರು.
ಇದನ್ನೂ ಓದಿ | ಸರ್ಕಾರಕ್ಕೆ ಮತ್ತೊಂದು ಪತ್ರ ಕಂಟಕ: ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ 75 ಗಣ್ಯರ ಮನವಿ
ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ 555 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿವೆ. ಮುಂದಿನ ಒಂದು ವರ್ಷದೊಳಗೆ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಸಮಯ ಹಾಗೂ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು, ಗುಣಮಟ್ಟ ಕಾಪಾಡಿಕೊಳ್ಳದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದಿರುವ ತಮಗೆ ಇಲ್ಲಿನ ಎಲ್ಲ ಪ್ರದೇಶಗಳ ಬಹುತೇಕ ಸಮಸ್ಯೆಗಳು ತಿಳಿದಿವೆ. ಮುಖ್ಯ ಕಾಲುವೆಯ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು. ಅಭಿವೃದ್ಧಿಯಲ್ಲಿ ಯಾವುದೇ ತಾರತಮ್ಯಕ್ಕೆ ಆಸ್ಪದ ನೀಡುವುದಿಲ್ಲ ಎಂದರು.
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣ ಮತ್ತು ಆ ಮೂಲಕ ಕಾರವಾರ ಬಂದರಿಗೆ ಸಂಪರ್ಕ ಕಲ್ಪಿಸುವ ಯೋಜನೆಯು ಅರಣ್ಯ ಹಾಗೂ ಪರಿಸರ ಮಂತ್ರಾಲಯದ ಕ್ಲಿಯರೆನ್ಸ್ ಪಡೆಯುವ ಹಂತದಲ್ಲಿದ್ದು, ಶೀಘ್ರ ಯೋಜನೆ ಕೈಗೆತ್ತಿಕೊಳ್ಳುವ ಭರವಸೆ ಇದೆ ಎಂದರು.
300 ಕೋಟಿ ರೂಪಾಯಿ ವೆಚ್ಚದಲ್ಲಿ ಜಯದೇವ ಹೃದ್ರೋಗ ಕೇಂದ್ರ ಸ್ಥಾಪನೆಗೆ ಅಗಸ್ಟ್ ತಿಂಗಳಲ್ಲಿ ಅಡಿಗಲ್ಲು ಸಮಾರಂಭ ಹಮ್ಮಿಕೊಳ್ಳಲಾಗುವುದು. ಎಫ್ಎಂಸಿಜಿ ಕ್ಲಸ್ಟರ್ ಸ್ಥಾಪಿಸಿ ಒಂದು ಲಕ್ಷ ಉದ್ಯೋಗ ಸೃಜನೆಯ ಬಜೆಟ್ ಘೋಷಣೆಯ ಅನುಷ್ಠಾನಕ್ಕೆ ಆದೇಶ ಹೊರಡಿಸಲಾಗಿದೆ. ತುಮಕೂರು- ದಾವಣಗೆರೆ ಹಾಗೂ ಧಾರವಾಡ- ಬೆಳಗಾವಿ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆಗೆ ಅನುಮೋದನೆ ದೊರೆತಿದೆ. ಹಳೇ ಹುಬ್ಬಳ್ಳಿ ಭಾಗದ ರೈತರ ಬೇಡಿಕೆಯಂತೆ ಇಲ್ಲಿ ಪಶು ವೈದ್ಯಕೀಯ ಪಾಲಿಕ್ಲಿನಿಕ್ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು .
ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ದೇಶದಲ್ಲಿ ನಗರ ಮತ್ತು ಗ್ರಾಮೀಣ ಜನಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದೆ. ಅದರ ವೇಗಕ್ಕೆ ಅನುಗುಣವಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ದೇಶದಾದ್ಯಂತ ಎಲ್ಲ ಮನೆಗಳಿಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಪೂರೈಸುವ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 3.6 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಹುಬ್ಬಳ್ಳಿ- ಧಾರವಾಡದಿಂದ ಬೆಂಗಳೂರುವರೆಗಿನ ಜೋಡಿ ರೈಲು ಮಾರ್ಗ ನಿರ್ಮಾಣ ಕಾರ್ಯವನ್ನು ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುತ್ತಿದೆ. ಬಡವರಿಗಾಗಿ ಕೇಂದ್ರ ಸರ್ಕಾರ ಪ್ರತಿ ಹದಿನೈದು ದಿನಗಳಿಗೊಂದು ಯೋಜನೆ ಜಾರಿಗೊಳಿಸಿದೆ ಎಂದರು.
ಇದನ್ನೂ ಓದಿ | ತಿಂಗಳಲ್ಲಿ 15 ದಿನ ಕಾಡಿಗೆ ಹೋಗಿ: ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ