ಹುಬ್ಬಳ್ಳಿ: ಈಗಾಗಲೇ ಪ್ರವಾಹ ಪೀಡಿತ ಜಿಲ್ಲೆಗಳ ಪ್ರವಾಸ ಮಾಡಿ ಜಿಲ್ಲಾಧಿಕಾರಿಗಳ ಜತೆ ಮಳೆ ಹಾನಿ ಕುರಿತು ಸಭೆ ನಡೆಸಿದ್ದೇನೆ. ನದಿಗಳ ಪ್ರವಾಹ ತಡೆಗೆ ಶಾಶ್ವತ ಪರಿಹಾರ ನೀಡಲು ಚಿಂತನೆ ನಡೆದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಮಳೆಹಾನಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಜಲಾಶಯಗಳಿಂದ ಯಾವಾಗ ನೀರು ಬಿಡುಗಡೆ ಮಾಡುತ್ತಾರೆ ಎಂಬುದನ್ನು ತಿಳಿಯಲು ಮಹಾರಾಷ್ಟ್ರ ಹಾಗೂ ರಾಜ್ಯದ ಜಿಲ್ಲಾಧಿಕಾರಿಗಳ ನಡುವೆ ನಿರಂತರ ಸಂಪರ್ಕ ಇರಬೇಕು. ಇದರಿಂದ ಪ್ರವಾಹ ಭೀತಿ ಇದ್ದಾಗ ಜನರ ಸ್ಥಳಾಂತರಕ್ಕೆ ನೆರವಾಗುತ್ತದೆ ಎಂದರು.
ಮನೆಯಿಂದ ಪೂರ್ಣ ಪ್ರಮಾಣದಲ್ಲಿ ಹಾನಿಯಾದರೆ 5 ಲಕ್ಷ ರೂಪಾಯಿ ಹಾಗೂ ಮನೆಗಳಿಗೆ ನೀರು ನುಗ್ಗಿದರೆ 10 ಸಾವಿರ ರೂಪಾಯಿ ನೀಡಲಾಗುತ್ತದೆ. ನೀರಿನ ಪ್ರಮಾಣಕ್ಕೆ ತಕ್ಕಂತೆ ಬಳಕೆಗೆ ಕುರಿತು ಯೋಜನೆ ರೂಪಿಸಲಾಗುತ್ತಿದೆ. ತಾಂತ್ರಿಕ ದೋಷದಿಂದ ಎರಡೂವರೆ ಲಕ್ಷ ಮನೆಗಳ ಮಂಜೂರಾತಿ ವಿಳಂಬವಾಗಿತ್ತು. ಈಗ ಅದನ್ನು ಸರಿಪಡಿಸಲಾಗಿದೆ. ಕಚ್ಚಾ ಮನೆಗಳನ್ನು ಪಕ್ಕಾ ಮಾಡಲು ಚಿಂತನೆ ನಡೆದಿದೆ. ರಾಜ್ಯದ ನೆರೆ ನಷ್ಟದ ಬಗ್ಗೆ ವರದಿ ತಯಾರಿಸಿ ಶೀಘ್ರವಾಗಿ ಕೇಂದ್ರಕ್ಕೆ ಸಲ್ಲಿಸಲಾಗುತ್ತದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಪಟ್ಟ ಜಿಲ್ಲೆಯಲ್ಲಿ ಮಳೆ ಹಾನಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.
ಇದನ್ನೂ ಓದಿ | Rain News | ಮಹಾ ಮಳೆಗೆ ಕೊಡಗಿನಲ್ಲಿ ಮೊದಲ ಸಾವು