ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎತ್ತರದ ಆಳೇನೂ ಅಲ್ಲ. ತಮ್ಮ ನೋಟ, ನಿಲುವುಗಳಿಂದ ಭಯ ಹುಟ್ಟಿಸುವಂಥ ಗಂಭೀರ ವದನವೂ ಅವರದಲ್ಲ. ಕೆಲವರು ಅವರನ್ನು ಮಾಸ್ ಲೀಡರ್ ಅಲ್ಲ ಅಂತಾರೆ, ಅವರಿಗೆ ಚುನಾವಣೆ ಗೆಲ್ಲಿಸುವಷ್ಟು ಸಾಮರ್ಥ್ಯ ಇಲ್ಲ ಅಂತಾರೆ.
ಹೌದು.. ಅವರಿಗೆ ಎತ್ತರದ ಆಳ್ತನ ಇಲ್ಲದಿರಬಹುದು, ಅವರದು ಎಲ್ಲರನ್ನೂ ಹೆದರಿಸಿ ಅಂಕೆಯಲ್ಲಿಟ್ಟುಕೊಳ್ಳುವ ವ್ಯಕ್ತಿತ್ವ ಅಲ್ಲದಿರಬಹುದು, ಅವರು ಸಮೂಹವನ್ನು ಮಂತ್ರಮುಗ್ಧಗೊಳಿಸಬಲ್ಲ ಮಾಸ್ ಲೀಡರ್ ಅಲ್ಲದೆ ಇರಬಹುದು.. ಆದರೆ, ಅದೆಲ್ಲವನ್ನೂ ನಿವಾಳಿಸಿ ಎಸೆಯಬಲ್ಲಷ್ಟು ದೊಡ್ಡ ಸಾಮರ್ಥ್ಯ ಅವರಲ್ಲಿದೆ. ಅದುವೇ ಜನರನ್ನು, ಸಮಾಜವನ್ನು, ಬದುಕನ್ನು, ಸರ್ವರನ್ನೂ ಮುಕ್ತ ಹೃದಯದಿಂದ ಪ್ರೀತಿಸಬಲ್ಲ ಶಕ್ತಿ. ಬೊಮ್ಮಾಯಿ ಅವರ ವ್ಯಕ್ತಿತ್ವದಲ್ಲಿ ರಾಜಕಾರಣಿಗಳಿಗೆ ಸಾಮಾನ್ಯವಾಗಿರುವ ಆಷಾಢಭೂತಿತನಗಳಿಲ್ಲ, ನಯವಂಚನೆಯ ಸುಳಿವಿಲ್ಲ. ಎಂಥ ಸಾಮಾನ್ಯ ವ್ಯಕ್ತಿಯಾದರೂ ಬೆನ್ನು ತಟ್ಟಿ ಮಾತನಾಡಿಸಬಲ್ಲರು, ಅವನ ಮಾತನ್ನು ಜತನದಿಂದ ಕೇಳಬಲ್ಲರು, ಎದುರಿಗಿರುವವನ ಕಣ್ಣೀರಿಗೆ ತಾನೇ ಮರುಗಬಲ್ಲರು, ಅವನ ಸಮಸ್ಯೆಗೊಂದು ಪರಿಹಾರವನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಬಲ್ಲರು.
ದೊಡ್ಡ ದೊಡ್ಡ ಸಮಾವೇಶದಲ್ಲಿ ಅವರು ಅಬ್ಬರದ ಮಾತುಗಳಿಂದ ಭಾವಾವೇಶ ಸೃಷ್ಟಿಸದೆ ಇರಬಹುದು. ಆದರೆ, ಇರುವ ಅಷ್ಟೂ ಜನರ ಮನಸ್ಸನ್ನು ಹಿತವಾಗಿ ತಟ್ಟುವ ರೀತಿಯಲ್ಲಿ ಮಾತನಾಡಬಲ್ಲರು. ಒಂದಿಷ್ಟು ಕುಶಾಲು, ಮತ್ತೊಂದಿಷ್ಟು ಭಾವುಕತೆ ಇನ್ನೊಂದಿಷ್ಟು ಹೃದಯವಂತಿಕೆ ಬೆರೆಸಿ ಎಲ್ಲರ ಮನಸ್ಸನ್ನೂ ಪ್ರೀತಿಯಿಂದಲೇ ಗೆಲ್ಲಬಲ್ಲರು. ಹಾಗಂತ ಅವರು ಯಾವುದನ್ನೂ ಗಿಮಿಕ್‌ಗಾಗಿ ಮಾಡುವುದಿಲ್ಲ. ಅವರ ನಡೆನುಡಿಗಳೆಲ್ಲವೂ ಹೃದಯಾಂತರಾಳದಿಂದಲೇ ಬಂದಿರುತ್ತವೆ. ಹಾಗಾಗಿಯೇ ಅವರು ಸಿಎಂ ಎಂದರೆ ಬರೀ ಚೀಫ್‌ಮಿನಿಸ್ಟರ್ ಅಲ್ಲ.. ಕಾಮನ್‌ಮ್ಯಾನ್ ಕೂಡಾ!
ಮುದ್ದು ನಾಯಿಗೆ ಮುತ್ತಿಕ್ಕಿದ ಬೊಮ್ಮಾಯಿ
ಅದು ಜುಲೈ 12, 2021. ಆಗಿನ್ನೂ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿ ಆಗಿರಲಿಲ್ಲ. (ಅವರು ಪ್ರಮಾಣ ವಚನ ಸ್ವೀಕರಿಸಿದ್ದು ಜುಲೈ 28ರಂದು). ಬೊಮ್ಮಾಯಿ ಅವರ ಮುದ್ದಿನ ನಾಯಿ ಸನ್ನಿ ಪ್ರಾಣ ಕಳೆದುಕೊಂಡಿತ್ತು. ಆವತ್ತು ಸಿಎಂ ನಡೆದುಕೊಂಡ ರೀತಿ, ಹಾಕಿದ ಕಣ್ಣೀರು ಮನೆಯಲ್ಲೇ ಯಾರೋ ಒಬ್ಬರನ್ನು ಕಳೆದುಕೊಂಡಂತೆ ಭಾಸವಾಗುತ್ತಿತ್ತು.
ಮನೆಯ ಹೊರಗಡೆ ಹೂವುಗಳಿಂದ ಅಲಂಕೃತವಾಗಿದ್ದ ಸನ್ನಿಯ ಶವದ ಮುಂದೆ ಕಣ್ಣೀರಿಟ್ಟ ಬೊಮ್ಮಾಯಿ ಅವರು ಮೊಣಕಾಲಿನ ಮೇಲೆ ಕುಳಿತು ಬಾಗಿ ಮುತ್ತಿಟ್ಟಿದ್ದರು. ಉಕ್ಕಿ ಬರುತ್ತಿದ್ದ ಕಣ್ಣೀರನ್ನು ಕರವಸ್ತ್ರದಿಂದ ಒರೆಸಿಕೊಂಡಿದ್ದರು. ಸಾವಿನ ದಿನ ಬೇಸರದಿಂದಲೇ ಟ್ವೀಟ್ ಮಾಡಿದ್ದ ಅವರು, ʻʻಇಂದು ನಮ್ಮ ಮನೆಯ ಮುದ್ದಿ ನಾಯಿ ಸನ್ನಿ ವಯೋಸಹಜವಾಗಿ ಸಾನ್ನಪ್ಪಿದ್ದು ತೀವ್ರ ದುಃಖ ತಂದಿದೆ. ಕುಟುಂಬದ ಒಬ್ಬ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಮನೆಯ ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತುʼʼ ಎಂದು ಬರೆದುಕೊಂಡು ಅತ್ಯಂತ ಮನಕಲಕುವ ಚಿತ್ರಗಳನ್ನು ಹಾಕಿದ್ದರು.
ಬೊಮ್ಮಾಯಿ ಅವರ ಈ ನಡೆಗಳು ಕೇವಲ ಬಿಜೆಪಿ ಕಾರ್ಯಕರ್ತರನ್ನು ಮಾತ್ರವಲ್ಲ ಕಾಂಗ್ರೆಸ್‌ನಾಯಕರ ಪ್ರಶಂಸೆಗೂ ಒಳಗಾಗಿತ್ತು. ಕಾಂಗ್ರೆಸ್‌ನಾಯಕ ದಿನೇಶ್‌ಗುಂಡೂ ರಾವ್‌ಅವರ ಪತ್ನಿ ಟಬು ಅವರೂ ಕಂಬನಿ ಮಿಡಿದಿದ್ದರು. ತಮಿಳುನಾಡು ಕಾಂಗ್ರೆಸ್‌ನ ವಕ್ತಾರ ಅಮೆರಿಕೈ ವಿ ನಾರಾಯಣನ್‌ಅವರು ಬೊಮ್ಮಾಯಿ ಅವರನ್ನು ಹಾಡಿ ಹೊಗಳಿದ್ದರು. ಜತೆಗೆ, ಮನೆಯ ನಾಯಿಯನ್ನು ಇಷ್ಟೊಂದು ಪ್ರೀತಿಸುವ ಬೊಮ್ಮಾಯಿ ಅವರು ಬೀದಿ ನಾಯಿಗಳಿಗೂ ಪ್ರೀತಿಯ ಮನೆ ಒದಗಿಸಲು ಮನಸು ಮಾಡಬೇಕು ಎಂದಿದ್ದರು.
ಮರೆಯಲಾಗದ ಪುನೀತ್ ಸಾವಿನ ಕ್ಷಣ
ಖ್ಯಾತ ನಟ ಪುನೀತ್‌ಕುಮಾರ್‌ಅವರು ಸಾವನ್ನಪ್ಪಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಿದ್ದ ಬೊಮ್ಮಾಯಿ ಅವರು ನಡೆದುಕೊಂಡ ರೀತಿ, ತೋರಿದ ಮುತ್ಸದ್ಧಿತನ ಸಾರ್ವಕಾಲಿಕ ಮಾದರಿ. ಆವತ್ತು ಬೆಳಗ್ಗೆ ಪುನೀತ್‌ರಾಜ್‌ಕುಮಾರ್‌ಅವರು ಹೃದಯಾಘಾತದಿಂದ ಮೃತಪಟ್ಟಾಗ ಇಡೀ ಬೆಂಗಳೂರಿನಲ್ಲಿ ಸಣ್ಣದೊಂದು ಅಹಿತಕರ ಘಟನೆಯೂ ನಡೆಯದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದರು. ಸಾವಿನ ಸುದ್ದಿ ಹೊರಬಿದ್ದರೆ ಜನ ಆಸ್ಪತ್ರೆಯ ಕಡೆಗೆ ನುಗ್ಗಬಹುದು ಎಂಬ ಕಾರಣಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡ ಬಳಿಕವೇ ಸಾವಿನ ಸುದ್ದಿಯನ್ನು ಘೋಷಿಸಲಾಯಿತು.
ಅದಕ್ಕಿಂತಲೂ ಪುನೀತ್‌ಅವರ ಸಾವಿನ ಕ್ಷಣದಿಂದ ಅಂತ್ಯಕ್ರಿಯೆಯ ಕೊನೆಯ ಕ್ಷಣದವರೆಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾಜ್‌ಕುಮಾರ್‌ಕುಟುಂಬದ ಜತೆಗೆ ನಿಂತಿದ್ದರು. ತುರ್ತು ಅಗತ್ಯಕ್ಕೆ ಹೊರಗೆ ಹೋಗಿದ್ದು ಬಿಟ್ಟರೆ ಪುನೀತ್‌ಅವರ ಮೃತದೇಹದ ಬಳಿಯೇ ನಿಂತಿದ್ದರು ಬೊಮ್ಮಾಯಿ. ಪುನೀತ್ ಅವರ ಮಗಳು ವಿದೇಶದಿಂದ ಬರುವವರೆಗೆ ಎರಡು ದಿನಗಳ ಕಾಲ ತಾಳ್ಮೆಯಿಂದ ಕಾಯುವ ನಿರ್ಧಾರವೂ ಗಮನ ಸೆಳೆದಿತ್ತು.
ಅದಕ್ಕಿಂತಲೂ ಹೆಚ್ಚು ಕಾಡಿದ್ದು. ಕೊನೆಯದಾಗಿ ಪುನೀತ್‌ಅವರ ತಲೆಯನ್ನು ತನ್ನ ಕೈಯಲ್ಲಿ ಹಿಡಿದು ಮಗುವಿಗೆ ಮುತ್ತಿಡುವಂತೆ ಹಣೆಗೆ ತುಟಿ ಇತ್ತು ಚುಂಬಿಸಿದ್ದು. ಪುನೀತ್‌ಅವರನ್ನು ಸಣ್ಣ ಮಗುವಾಗಿದ್ದಾಗಿದ್ದಾಗಿನಿಂದಲೇ ನೋಡುತ್ತಿದ್ದೇನೆ. ನಮ್ಮ ನಡುವೆ ಒಂದು ಪ್ರೀತಿಯ ಬಂಧವಿದೆ. ಹೀಗಾಗಿ ಭಾವನೆಗಳನ್ನು ನಿಯಂತ್ರಿಸಲಾಗದೆ ಮುತ್ತಿಟ್ಟೆ ಎಂದು ಬಳಿಕ ಬೊಮ್ಮಾಯಿ ಹೇಳಿದ್ದರು. ಸಂಬಂಧಗಳೆಲ್ಲ ಶಿಥಿಲಗೊಳ್ಳುತ್ತಿರುವ ಕಾಲದಲ್ಲಿ, ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಮನೆಯ ಸದಸ್ಯನಂತೆ ನಡೆದುಕೊಳ್ಳುವ ಅವರ ನಡೆನುಡಿಯನ್ನು ಇಡೀ ರಾಜ್ಯ ಕೊಂಡಾಡಿತ್ತು.
ಸಿನಿಮಾ ನೋಡಿದಾಗಲೂ ಭಾವುಕ
ಕಳೆದ ತಿಂಗಳು ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಚಿತ್ರವನ್ನು ನೋಡಲು ಹೋಗಿದ್ದ ಸಿಎಂ ಬೊಮ್ಮಾಯಿ ಅವರು ಕುಳಿತಲ್ಲೇ ಕಣ್ಣೀರಾಗಿದ್ದರು. ಆಗಾಗ ಕರವಸ್ತ್ರ ತೆಗೆದು ಕಣ್ಣೀರು ಒರೆಸಿಕೊಳ್ಳುತ್ತಿದ್ದರು. ಕೊನೆಗೆ ಹೊರಗೆ ಬಂದವರೇ ಮಾಧ್ಯಮಗಳ ಜತೆ ಮಾತನಾಡುತ್ತಾ ʻಭಾವನೆಗಳು ಅತ್ಯಂತ ಹದವಾಗಿ ಬೆರೆತ ಚಿತ್ರವಿದು. ಅದರಲ್ಲೂ ನಾಯಿಯೊಂದು ಕಣ್ಣಿನಲ್ಲಿ ವ್ಯಕ್ತಪಡಿಸುವ ಭಾವನೆಗಳನ್ನು ಸೆರೆಹಿಡಿದ ರೀತಿ ನಿಜಕ್ಕೂ ಅದ್ಭುತ. ನಾನು ಯಾವತ್ತೂ ಹೇಳುತ್ತೇನೆ. ನಾಯಿಗಳ ಪ್ರೀತಿ ಯಾವತ್ತೂ ಅನ್‌ಕಂಡಿಷನಲ್. ಚಾರ್ಲಿ ಮತ್ತು ರಕ್ಷಿತ್ ಶೆಟ್ಟಿ ಅವರ ಮೂಲಕ ಪವಿತ್ರ ಪ್ರೀತಿಯನ್ನು ಹೊರಗೆಳೆಯಲಾಗಿದೆʼʼ ಎಂದು ಹೇಳುತ್ತಿದ್ದಾಗ ಬೊಮ್ಮಾಯಿ ಅವರ ಗಂಟಲು ಕಟ್ಟಿಬರುತ್ತಿತ್ತು. ʻʻನನಗೆ ನನ್ನ ಪ್ರೀತಿಯ ಸನ್ನಿ ನೆನಪಾದʼ ಎಂದು ಅಲ್ಲೇ ಅವರು ತಮ್ಮ ಮುದ್ದಿನ ನಾಯಿಯನ್ನು ನೆನಪು ಮಾಡಿಕೊಂಡರು.
ಜನತಾ ದರ್ಶನದಲ್ಲೂ ಪ್ರೀತಿ ದರ್ಶನ
ಬೊಮ್ಮಾಯಿ ಅವರು ಕೇವಲ ಮನೆ ವಿಚಾರದಲ್ಲಿ, ಬಂಧುಗಳ ವಿಚಾರದಲ್ಲಿ, ಪ್ರಾಣಿಗಳ ವಿಚಾರದಲ್ಲಿ ಇಷ್ಟೊಂದು ಭಾವುಕರಾಗುತ್ತಾರೆ ಎಂದು ಯಾರೂ ಅಂದುಕೊಳ್ಳಬೇಕಾಗಿಲ್ಲ. ಅವರದು ಜನರ ಸಮಸ್ಯೆಗಳಿಗೂ ಅಷ್ಟೇ ಗಾಢವಾಗಿ ಸ್ಪಂದಿಸುವ ತಾಯಿ ಹೃದಯ. ಹೋದಲ್ಲಿ ಬಂದಲ್ಲಿ ಅವರ ದೃಷ್ಟಿ ಬಡವರ ಮೇಲಿರುತ್ತದೆ. ಅವರು ಯಾವುದೋ ಸಣ್ಣ ಹೋಟೆಲಿನಲ್ಲಿ ಹೋಗಿ ಊಟ ಮಾಡಬಲ್ಲರು. ಯಾರು ಸಿಕ್ಕಿದರೂ ಪ್ರೀತಿ ತೋರಬಲ್ಲರು.
ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಅವರು ಮಕ್ಕಳೊಂದಿಗೆ ಮಗುವಿನಂತೆ ಬೆರೆತ ರೀತಿಯನ್ನು ಇಡೀ ಕರ್ನಾಟಕ ನೋಡಿ ಸಿಎಂ ಎಷ್ಟು ಸರಳ ಅಂತ ಚಪ್ಪಾಳೆ ತಟ್ಟಿದೆ.
ಅವರು ಪ್ರತಿ ದಿನ ಬೆಳಗ್ಗೆ ಜನತಾ ದರ್ಶನ ಮಾಡದೆ ಮನೆಯಿಂದ ಹೊರಗೆ ಹೊರಡುವುದಿಲ್ಲ. ದಿನವೂ ಹತ್ತಾರು ಮಂದಿಯ ಸಮಸ್ಯೆ ಆಲಿಸುತ್ತಾರೆ, ಸ್ಥಳದಲ್ಲೇ ಪರಿಹಾರ ಹೇಳುತ್ತಾರೆ. ಅದಕ್ಕಾಗಿಯೇ ಅಸಹಾಯಕರು, ಸಂಕಷ್ಟದಲ್ಲಿರುವ ನೂರಾರು ಮಂದಿ ಮುಖ್ಯಮಂತ್ರಿಯ ಮನೆ ಬಾಗಿಲಿಗೆ ಬರುತ್ತಾರೆ.
ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ನಂತರ ಸಿಎಂ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಿದವರಲ್ಲಿ ಶೇಕಡಾ 70 ಜನರಿಗೆ ಅತಿ ತ್ವರಿತವಾಗಿ ಪರಿಹಾರ ಸಿಗುತ್ತಿದೆ. ಸಂಪುಟದ ಎಲ್ಲ ಮಂತ್ರಿಗಳು ಹಳ್ಳಿಗಳ ಕಡೆಗೆ ಹೋಗಬೇಕು, ಜನರ ಸಮಸ್ಯೆ ಆಲಿಸಬೇಕು, ಅಧಿಕಾರಿಗಳು ಬಡವರ ನೋವಿಗೆ ಮೊದಲು ಸ್ಪಂದಿಸಬೇಕು ಎಂದು ಕಿವಿ ಮಾತು ಹೇಳುತ್ತಾರೆ.
ಯಾವುದೂ ಶಾಶ್ವತವಲ್ಲ ಇಲ್ಲಿ!
ಅದು 2021ರ ಜೂನ್. ಅವರ ಮೇಲೆ ಬಿಟ್‌ಕಾಯಿನ್‌ಗೆ ಸಂಬಂಧಿಸಿ ಕೆಲವು ಆರೋಪಗಳನ್ನು ಮಾಡಲಾಗಿತ್ತು. ಅವರದೇ ಹಾವೇರಿ ಜಿಲ್ಲೆಯ ಹಾನಗಲ್‌ಉಪಚುನಾವಣೆಯಲ್ಲಿ ಬಿಜೆಪಿ ಸೋತಿತ್ತು. ಮುಖ್ಯಮಂತ್ರಿಯನ್ನು ಬದಲಾಯಿಸುತ್ತಾರಂತೆ ಎಂಬ ಮಾತುಗಳೆಲ್ಲ ಓಡಾಡುತ್ತಿದ್ದ ಕಾಲವದು. ಅಂತ ಹೊತ್ತಲ್ಲಿ ನಡೆದ ಪಂಚಮಸಾಲಿ ಲಿಂಗಾಯತ ಸಮುದಾಯ ಭವನಕ್ಕೆ ಅಡಿಗಲ್ಲಿಡುವ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಅವರು ಆಡಿದ ಒಂದೊಂದು ಮಾತು ಅವರೊಳಗಿನ ಒಬ್ಬ ದಾರ್ಶನಿಕನನ್ನು ಪರಿಚಯಿಸಿತ್ತು. ʻನಮ್ಮ ಬದುಕಿನಲ್ಲಿಯಾವುದೂ ಪರ್ಮನೆಂಟ್ ಅಲ್ಲ. ಈ ಹುದ್ದೆ, ಈ ಸ್ಥಾನಮಾನಗಳು ಅಷ್ಟೇ ಅಲ್ಲ, ನಮ್ಮ ಜೀವ ಕೂಡಾʼ ಎಂದು ಹೇಳಿದ್ದರು ಬೊಮ್ಮಾಯಿ. ಆಗ ಅದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಮುನ್ಸೂಚನೆ ಎಂಬಂತೆ ವ್ಯಾಖ್ಯಾನಿಸಲ್ಪಟ್ಟಿತ್ತು. ಆದರೆ, ಎಲ್ಲ ಸ್ಥಾನಮಾನಗಳನ್ನು ಧಿಕ್ಕರಿಸಬಲ್ಲ ಅವರೊಳಗಿನ ಧೀಶಕ್ತಿ ಈ ಮಾತು ಆಡಿಸಿತ್ತು ಎಂದೂ ಇದನ್ನು ವ್ಯಾಖ್ಯಾನಿಸಬಹುದು. ಜತೆಗೆ ಬೊಮ್ಮಾಯಿ ಅವರು ಅನುಸರಿಸುತ್ತಿರುವ ಶರಣ ಸಂಸ್ಕೃತಿ, ಅವರ ನಡವಳಿಕೆಯ ರೀತಿ ಇದು ಎಂದೂ ಹೇಳಬಹುದು.
ಇದನ್ನೂ ಓದಿ | Bommai College Days | ಲಾಸ್ಟ್ ಬೆಂಚ್ ಜೀವನವೇ ಬೆಸ್ಟ್! ಕಾಲೇಜ್ ಕ್ಯಾಂಪಸ್ ಮಿಸ್ ಮಾಡ್ಕೋತೀನಿ ಎಂದ ಸಿಎಂ ಬೊಮ್ಮಾಯಿ