Site icon Vistara News

108 ಆ್ಯಂಬುಲೆನ್ಸ್ ಸ್ಥಗಿತಕ್ಕೆ ಕಾರಣ ತಿಳಿಸಿದ ಆರೋಗ್ಯ ಸಚಿವ ಸುಧಾಕರ್‌: ಸಿಎಂ ಬೊಮ್ಮಾಯಿ ಜತೆ ಚರ್ಚೆ

108 ambulance sudhakar photo

ಬೆಂಗಳೂರು: ರಾಜ್ಯದಲ್ಲಿ ಪ್ರತಿನಿತ್ಯ ಸಾವಿರಾರು ಜನರಿಗೆ ಆರೋಗ್ಯ ಸೇವೆ ಒದಗಿಸುವ ೧೦೮ ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಂಡಿರುವ ವಿಚಾರದ ಕುರಿತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಸಿಎಂ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ.

ದಿನನಿತ್ಯ ಸುಮಾರಿ 20 ಸಾವಿರ ಕರೆಗಳು ಆಗಮಿಸುವ ಸೇವೆಯಲ್ಲಿ ತಾಂತ್ರಿಕ ತೊಂದರೆ ಎದುರಾಗಿ ಕರೆಗಳು ಸ್ವೀಕೃತವಾಗುತ್ತಿಲ್ಲ.

ವಿದ್ಯಾರಣ್ಯಪುರದಲ್ಲಿ ಕಾರ್ಯಕ್ರಮವೊಂದರ ನಂತರ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಈ ಕುರಿತು ಆರೋಗ್ಯ ಸಚಿವರೊಂದಿಗೆ ಮಾತನಾಡುತ್ತೇನೆ. ಸಮಸ್ಯೆ ಸರಿಪಡಿಸಲಾಗುತ್ತದೆ ಎಂದರು.

ಆರೊಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರು ಆನಂತರ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದರು. ಈ ಕುರಿತು ಪ್ರತಿಕ್ರಿಯಿಸಿದ ಸುಧಾಕರ್‌, ಐಟಿ ಹಾರ್ಡ್‌ವೇರ್‌ನಲ್ಲಿ ಸಮಸ್ಯೆ ಸೃಷ್ಟಿಯಾಗಿದ್ದು, ಅದನ್ನು ಗುತ್ತಿಗೆ ಪಡೆದುಕೊಂಡಿರುವ GVK-EMRI ಸಂಸ್ಥೆ ಶೀಘ್ರದಲ್ಲೇ ಬಗೆಹರಿಸಲಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಅನ್ನುವ ನಿಟ್ಟಿನಲ್ಲಿ ಇಲಾಖೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. 108-ಸಹಾಯವಾಣಿ ಕರೆಗಳು ಆಟೋಮ್ಯಾಟಿಕ್ ಆಗಿ ಕರೆಗಳನ್ನು ಸ್ವೀಕರಿಸಿ 2 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ವಾಹನ ಹಂಚಿಕೆ ಕಾರ್ಯ ಮಾಡುತ್ತಿತ್ತು.

ಈಗಾಗಲೇ ಎಲ್ಲಾ ಆಸ್ಪತ್ರೆಗಳಿಗೆ ಇಂಟರ್ ಫೆಸಿಲಿಟಿ ಟ್ರಾನ್ಸ್‌ಫರ್‌ಗಳಿಗೆ ಮೊದಲ ಆದ್ಯತೆ ನೀಡಬೇಕೆಂದು ಸೂಚಿಸಲಾಗಿದೆ. ಆಂಬ್ಯುಲೆನ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಗಳಿಗೂ ಕರೆ ಬಂದರೆ ಸ್ವೀಕರಿಸಿ ಅಗತ್ಯ ಸೇವೆಗಳನ್ನು ಮಾಡಬೇಕೆಂದು ಸೂಚಿಸಲಾಗಿದೆ. ಮ್ಯಾನ್ಯುವಲ್ ಐಡಿಗಳನ್ನು ಕ್ರಿಯೇಟ್ ಮಾಡಿ ಆ ಮೂಲಕವೂ ಜನರಿಗೆ ತುರ್ತು ಸೇವೆ ಒದಗಿಸಲು ಸೂಚನೆ ನೀಡಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ತುರ್ತು ಸೇವೆ ಒದಗಿಸುವ 112 ಸಹಾಯವಾಣಿಯಲ್ಲಿರುವ 2-3 ಸಿಬ್ಬಂದಿ ಬದಲು ಅಲ್ಲಿಗೆ 7-8 ಸಿಬ್ಬಂದಿ ನಿಯೋಜನೆ ಮಾಡಲು ಸೂಚಿಸಲಾಗಿದೆ. ಈ ಮೂಲಕ 108 ಸಹಾಯವಾಣಿಯ ತಂಡದ ಮುಖ್ಯಸ್ಥರಿಗೆ ಕರೆಗಳನ್ನು ಡೈವರ್ಟ್ ಮಾಡಿ ಆ ಮೂಲಕ ಮ್ಯಾನ್ಯುವಲ್ ಐಡಿ ಜನರೇಟ್ ಮಾಡಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಜೊತೆಗೆ 104- ಸಹಾಯವಾಣಿಯನ್ನು ಕೂಡ ಬಳಸಿಕೊಂಡು 108 -ಸಹಾಯವಾಣಿ ಮೇಲಿನ ಒತ್ತಡ ಕಡಿಮೆ ಮಾಡಲಾಗುತ್ತಿದೆ. ಮಿಸ್ಡ್ ಕಾಲ್‌ಗಳನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದ್ದು, 108 ಸಹಾಯವಾಣಿಯಲ್ಲಿರುವ ಏಜೆಂಟ್‌ಗಳ ಸಂಖ್ಯೆಯನ್ನು ಕೂಡ ಹೆಚ್ಚಿಸಲು ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ | ರಾಜ್ಯದಲ್ಲಿ ರಾತ್ರಿಯಿಂದ 108 ಆ್ಯಂಬುಲೆನ್ಸ್​ ಸೇವೆ ಸ್ಥಗಿತ; ರೋಗಿಗಳಿಗೆ ಸಂಕಷ್ಟ

Exit mobile version