ಬೆಳಗಾವಿ: ವೀರಶೈವ ಲಿಂಗಾಯತ ಸಮುದಾಯದ ಉಪಪಂಗಡವಾದ ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ಪಟ್ಟಿಗೆ ಸೇರಿಸಬೇಕು ಎಂಬ ಹೋರಾಟದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ವಾರ ಕಾಲಾವಕಾಶ ಪಡೆದಿದೆ. ಡಿಸೆಂಬರ್ 29ರವರೆಗೆ ಸಮಯ ನೀಡಿ, ಮೀಸಲಾತಿ ಘೋಷಣೆ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಾಲಾವಕಾಶ ಪಡೆದುಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಹಾಗೂ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿರುವ ಬಸನಗೌಡ ಪಾಟೀಲ್ ಯತ್ನಾಳ್ ಘೋಷಣೆ ಮಾಡಿದ್ದಾರೆ.
ಮೀಸಲಾತಿಗಾಗಿ ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆಯ ನಡುವೆ ಆಯೋಜಿಸಿದ್ದ ಪಂಚ ಶಕ್ತಿ ವಿರಾಟ ಮಹಾಸಮಾವೇಶದಲ್ಲಿ ಯತ್ನಾಳ್ ಮಾತನಾಡಿದರು.
ಪಂಚಮಸಾಲಿ ಸಮಾಜದ ಮೀಸಲಾತಿಗಾಗಿ ಪಕ್ಷಾತೀತವಾಗಿ ಹೋರಾಡುತ್ತಿದ್ದೇವೆ. ಕೂಡಲ ಸಂಗಮ ಸ್ವಾಮೀಜಿಗಳು ಪ್ರಾಮಾಣಿಕವಾಗಿ ಹೋರಾಡುತ್ತಿದ್ದಾರೆ. ಪಂಚಮಸಾಲಿ ಸಮಾಜಕ್ಕೆ ಸ್ವಾಮೀಜಿಯೆಂದರೆ ಅದು ಕೂಡಲ ಸಂಗಮ ಸ್ವಾಮೀಜಿಗಳು ಒಬ್ಬರೇ ಒಬ್ಬರು. ಜನಶಕ್ತಿಯ ಮುಂದೆ ಯಾರಾದರೂ ಬಗ್ಗಬೇಕು. ಲಿಂಗಾಯತರಲ್ಲಿ ಶೇಕಡಾ 72ರಷ್ಟು ನಾವಿದ್ದೇವೆ. ಇತರ ಲಿಂಗಾಯತರು 2A ಮಾಡಿಕೊಂಡರು, ಆದರೆ ನಾವು ಮೀಸಲಾತಿ ಇಲ್ಲದೆ ಹೀಗೆ ಇದ್ದೇವೆ.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡದೆ ಇಷ್ಟು ದಿನ ಮೋಸ ಮಾಡಿದ್ದೀರಿ. ನೀವು ಒಳಗಿಂದೊಳಗೆ ಮೀಸಲಾತಿ ಮಾಡಿಕೊಂಡಿರಿ, ನಮಗೆ ಕೊಡಲಿಲ್ಲ. ನೀರಾವರಿ ಆಗದಂತೆ ನೋಡಿಕೊಂಡವರು ನಮ್ಮ ಜಿಲ್ಲೆಯವರೇ. ಮೀಸಲಾತಿ ಕೊಡುತ್ತೀರೋ ಇಲ್ಲವೋ ಹೇಳಿ ಎಂದು ಅಂತಾ ಇವತ್ತು ಪಟ್ಟು ಹಿಡಿದು ಕುಳಿತಿದ್ದೆವು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಇವತ್ತು ಬೆಳಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಪಂಚಮಸಾಲಿಗಳು ಹಿಂದುಳಿದವರು ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಮೀಸಲಾತಿ ಕೊಡುವ ಬಗ್ಗೆ ಸೂಕ್ತ ಸಲಹೆ ಕೊಡುತ್ತೇವೆ ಎಂದು ವರದಿಯಲ್ಲಿ ಹೇಳಿದ್ದಾರೆ. ಸಿಎಂ ಆತ್ಮಸಾಕ್ಷಿಯಾಗಿ, ತಾಯಿಯ ಮೇಲೆ ಆಣೆ ಮಾಡಿದ್ದಾರೆ. ಮೂರು ಹಂತದಲ್ಲಿ ಕಾನೂನಾತ್ಮಕವಾಗಿ ನಡೆದುಕೊಳ್ಳಬೇಕಾಗಿದೆ ಎಂದಿದ್ದಾರೆ. ಆಯೋಗದ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ. ಡಿಸೆಂಬರ್ 29ಕ್ಕೆ ಮೀಸಲಾತಿ ಘೋಷಣೆ ಮಾಡುವುದಾಗಿ ಮಾತು ಕೊಟ್ಟಿದ್ದಾರೆ.
ನೀವೇ ಕೊನೆಯ ಸಿಎಂ ಆಗಬೇಕು ಎಂದು ನಿರ್ಧರಿಸಿದ್ದೀರ? ಎಂದು ಸಿಎಂಗೆ ಪ್ರಶ್ನಿಸಿದ ಯತ್ನಾಳ್, ಸೂರ್ಯ ಚಂದ್ರ ಇರೋವರೆಗೆ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ತೋರಿಸಿ. ನಾನು ಯಾವುದಕ್ಕೂ ಅಂಜೋದಿಲ್ಲ ಎಂದು ಸಿಎಂಗೆ ಹೇಳಿದ್ದೇನೆ. ಟಿಕೆಟ್ ಕೊಡುತ್ತೀರೋ ಇಲ್ಲವೋ, ಮಂತ್ರಿ ಮಾಡುತ್ತೀರೋ ಇಲ್ಲವೋ ಗೊತ್ತಿಲ್ಲ. ಮಾಡುತ್ತೇವೆ, ನೋಡುತ್ತೇವೆ, ಪರಿಶೀಲಿಸುತ್ತೇವೇ ಎನ್ನುವ ಮಾತು ನಾವು ಕೇಳುವುದಿಲ್ಲ.
ಯಾರೂ ತಲೆ ಕೆಡಿಸಿಕೊಳ್ಳಬೇಡಿ, 29ಕ್ಕೆ ಜಾತ್ರೆ ಮಾಡುತ್ತೇವೆ. ಮೀಸಲಾತಿ ಕೊಡದಿದ್ದರೆ ಎಲ್ಲರನ್ನೂ ಮನೆಗೆ ಕಳಿಸುವ ಕೆಲಸ ಮಾಡುತ್ತೇವೆ. 29ರಂದು ಮೀಸಲಾತಿ ಕೊಡದಿದ್ರೆ ನಾವು ವಿಧಾನ ಸೌಧದಲ್ಲಿ ನೋಡಿಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ | Motivational story: ನೆಮ್ಮದಿಯೇ ಇಲ್ಲದ ಶ್ರೀಮಂತ ಮಹಿಳೆಗೆ ಏನೂ ಇಲ್ಲದ ವಿಶಾಲಾಕ್ಷಮ್ಮ ಹೇಳಿದ ಕಥೆ
ಇದಕ್ಕೂ ಮೊದಲು ಮಾತನಾಡಿದ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಒಮ್ಮೆ ಒಬ್ಬ ಶಾಸಕರು ನನಗೆ ಮಧ್ಯರಾತ್ರಿ ಫೋನ್ ಮಾಡಿದರು. ನಾನು ಸಚಿವನಾಗಲು ನೀವು ಬೆಂಬಲ ನೀಡಬೇಕು. ಆಗ ನಾನು ನಿಮಗೆ ಎಲ್ಲ ಸಹಕಾರ ನೀಡುತ್ತೇನೆ. ಇಲ್ಲದಿದ್ದರೆ ಸಹಕಾರ ನೀಡುವುದಿಲ್ಲ ಎಂದರು. ಆಗ ನನಗೆ ಬಹಳ ಬೇಸರವಾಯಿತು. ನಾನು ಇಲ್ಲಿ ಸನ್ಯಾಸಿ ಆಗಿರುವುದು ಯಾರನ್ನೋ ಸಚಿವರನ್ನಾಗಿ ಮಾಡಲು ಅಲ್ಲ. ಪಂಚಮಸಾಲಿ ಸಮುದಾಯಕ್ಕೆ ಸೇವೆ ಸಲ್ಲಿಸಬೇಕು ಎಂಬ ಕಾರಣಕ್ಕೆ ಪಂಚಮಸಾಲಿ ಮೀಸಲಾತಿ ಹೋರಾಟ ಆರಂಭಿಸಿದೆ ಎಂದರು. ಆದರೆ ಅವರಿಗೆ ಕರೆ ಮಾಡಿದ ಶಾಸಕರು ಯಾರು ಎಂದು ಸ್ವಾಮೀಜಿ ಹೇಳಲಿಲ್ಲ.
ಸರ್ವಾಧಿಕಾರಿ ಧೋರಣೆ, ಶೋಷಣೆ, ಸಾವಿನ ಕಾರಣ ಹೋರಾಟಕ್ಕೆ ಇಳಿದಿದ್ದೇನೆ. ನನಗೆ ಸಾವು ಯಾವಾಗಲೂ ಬರಬಹುದು. ಸಾಯುವುದರೊಳಗೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿಸುವುದು ನನ್ನ ಉದ್ದೇಶ. ಪಂಚಮಸಾಲಿ ಸಮಾಜವೇ ನನಗೆ ಜಗದ್ಗುರು, ತಂದೆತಾಯಿ. ಸರ್ಕಾರದಿಂದ ಅನುದಾನ ಪಡೆಯಲು, ಮೆರೆಯಲು ಸ್ವಾಮಿಗಳಾಗುವ ಪದ್ಧತಿಯಿದೆ. ಸ್ವಾಮಿಗಳು ಸಮಾಜ ಕಟ್ಟುವುದು ಬಿಟ್ಟು, ಭೌತಿಕ ಕಟ್ಟಡ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಕೊಟ್ಟ ಮಾತು ತಪ್ಪಿದರು. ಬಸನಗೌಡ ಪಾಟೀಲ್ ಹಿಂದುತ್ವಕ್ಕಾಗಿ ಹೋರಾಟ ಮಾಡುವವರು. ನಮ್ಮ ಮಾತಿಗೆ ಬೆಲೆಕೊಟ್ಟು ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಧುಮುಕಿದ್ದಾರೆ ಎಂದು ಶ್ಲಾಘಿಸಿದರು.
ಪಾದಯಾತ್ರೆ ತಪ್ಪಿಸಲು ಯತ್ನಿಸಿದರು. ಬೆಂಗಳೂರು ಮುಟ್ಟಬಾರದು ಎಂದು ಪ್ರಯತ್ನಿಸಿದರು. ಅರಮನೆ ಮೈದಾನದಲ್ಲಿ ಸಮಾವೇಶ ಮಾಡದಂತೆ ಕುತಂತ್ರ ಮಾಡಿದರು. ಯತ್ನಾಳ್, ಕಾಶಪ್ಪನವರನ್ನು ಬಂಧಿಸುವ ಹುನ್ನಾರ ಮಾಡಿದರು. ಹೊರಗಿನ ಶಕ್ತಿಗಿಂತ ಒಳಗಿನ ಶಕ್ತಿಗಳೇ ನಮ್ಮನ್ನು ತುಳಿಯಲು ಪ್ರಯತ್ನಿಸಿದವು. ಪರ್ಯಾಯ ಪೀಠ ರಚಿಸಿ ಸಮಾಜ ಒಡೆಯುವ ಯತ್ನ ಮಾಡಿದರು. ನಮ್ಮ ಹೋರಾಟದಲ್ಲಿ ಪ್ರಾಮಾಣಿಕತೆ ಇರುವ ಕಾರಣ ಇವತ್ತು ಯಶಸ್ವಿಯಾಗಿ ಹೋರಾಟ ಮಾಡಿತ್ತಿದ್ದೇವೆ. ವಿನಯ ಕುಲಕರ್ಣಿಯವರಿಗೆ ಕೊಟ್ಟಿರುವ ತೊಂದರೆ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ.
ನಮ್ಮ ಸಮಾಜಕ್ಕೆ ಬೆಂಬಲವಾಗಿ ನಿಂತವರಿಗೆ ನೀವು ಮತ ಹಾಕಬೇಕು. ಮುಂಬರುವ ಚುನಾವಣೆಯಲ್ಲಿ ಪಕ್ಷಾತೀತವಾಗಿ ನಮ್ಮ ಸಮಾಜದ ಬೆಂಬಲಿಗರಿಗೆ ಮತ ಹಾಕಿ. ಶಾಸಕ ಮಾಡಲು ಮಂತ್ರಿ ಮಾಡಲು ನಮ್ಮ ಪೀಠವಿದೆ ಎಂದುಕೊಂಡಿದ್ದೆ. ಈಗ ಸಮಾಜದ ಕಣ್ಣೀರು ಒರೆಸಲು ಪೀಠವಿದೆ ಏನ್ನುವ ಅರಿವಾಗಿದೆ. ಸಮಾಜಕ್ಕಾಗಿ ಪ್ರಾಮಾಣಿಕವಾಗಿ ಹೋರಾಡುವ ಹತ್ತೇ ಜನ ಶಾಸಕರಿದ್ದರೆ ಸಾಕು ಎನ್ನಿಸುತ್ತಿದೆ. ಸಮಾಜಕ್ಕಾಗಿ ಒಗ್ಗಟ್ಟಾಗಿ ಹೋರಾಡೋಣ, ಪಕ್ಷಕ್ಕಿಂತ ಜನ್ಮ ಕೊಟ್ಟ ಸಮಾಜ ಮುಖ್ಯ. ಮುಖ್ಯಮಂತ್ರಿ ಐದು ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ಪಂಚಮಸಾಲಿ ಸಮಾಜ ಹಾಗೂ ಮುಖಂಡರು ಮುಂದಿನ ಚುನಾವಣೆಗೆ ಸಿದ್ಧರಾಗಿ. ಇವತ್ತು ಸರ್ಕಾರ ಒಪ್ಪುತ್ತದೆಯೋ ಇಲ್ಲವೋ ನೋಡೋಣ. ನಾನು ಒಬ್ಬನೇ ಈ ಹೋರಾಟವನ್ನು ಮಾಡುತ್ತೇನೆ. ಮೀಸಲಾತಿ ಕೊಡುವವರೆಗೆ ಹೋರಾಟ ಮಾಡುತ್ತೇನೆ. ನೀವು ಚುನಾವಣೆಗೆ ಸಿದ್ಧರಾಗಿ ಎಂದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಪಂಚಮಸಾಲಿ ಮೀಸಲಾತಿಗಾಗಿ ಮಾಡು ಇಲ್ಲವೆ ಮಡಿ ಹೋರಾಟ ಮಾಡುತ್ತೇನೆ. ಮಡಿಯುವ ಮುನ್ನ ಮೀಸಲಾತಿ ಕೊಡಿ. 28 ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಗುರುಗಳು 2 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ಗಡುವು ಮೇಲೆ ಗಡುವು ಕೊಡುತ್ತಾರೆ. ನಾವು ಯಾರಿಗೂ ಅಂಜುವುದಿಲ್ಲ, ಮೀಸಲಾತಿ ಬಿಡುವುದಿಲ್ಲ. ಡಿ.19ಕ್ಕೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ಸರ್ಕಾರಕ್ಕೆ ಕೊಟ್ಟಂತಹ ಗಡುವು ಮುಗಿದಿದೆ. ಯಾರೂ ಕೂಡ ನಿರಾಶ್ರಿತರಾಗಿ ಇಲ್ಲಿಂದ ಹೋಗಬೇಡಿ. ನಿಮ್ಮ ಬೇಡಿಕೆಯನ್ನು ನಾವು ಈಡೇರಿಸುತ್ತೇವೆ. ತಹಶೀಲ್ದಾರ್ ಕಚೇರಿಗೆ ಹೋಗಿ 2ಎ ಮೀಸಲಾತಿ ಕೊಡಿಸುತ್ತೇವೆ. ಪ್ರತಿಯೊಂದು ಮನೆ ಮನೆಗೂ ಹೋಗಿ ಪತ್ರವನ್ನು ಕೊಡುತ್ತೇವೆ. ನಿಮಗೆ ಮೀಸಲಾತಿ ಸಿಕ್ಕಿದೆ, ಇದನ್ನು ಯತ್ನಾಳ್ ಅವರೇ ಹೇಳುತ್ತಾರೆ ಎಂದರು.
ತಥಾಸ್ತು ಎನ್ನುವವನು ಎಸಿ ರೂಮಲ್ಲಿ ಮಲಗಿದ್ದಾನೆ. ಜನ ಸೇರಿದ್ದು ನೋಡಿ ಹಲವರು ವೇದಿಕೆಗೆ ಬರುತ್ತೇವೆ ಎಂದು ಫೋನ್ ಮಾಡಿದ್ದರು. ಬನ್ನಿರೋ ಗಂಡುಮಕ್ಕಳ ನೋಡುತ್ತೇನೆ ಎಂದಿದ್ದೆ. ಎಷ್ಟು ಸಾರಿ ಗಡುವು ಕೊಡುತ್ತೀರಿ ಎಂದು ನಮ್ಮವನೇ ಒಬ್ಬ ಮಂತ್ರಿ ಕೇಳುತ್ತಿದ್ದಾನೆ. ಇವತ್ತು ಬರಬೇಕಿತ್ತು ಅವನು, ಸರಿಯಾಗೊ ಮಾಡುತ್ತಿದ್ದೆವು. ನನ್ನನ್ನು ನೋಡಿಕೊಳ್ತೀನಿ ಎಂದು ಬಹಳ ಜನರು ಹೇಳಿದ್ದಾರೆ. ಬಹಳ ಜನ ನನ್ನನ್ನು ಸೋಲಿಸಲಿಕ್ಕೆ ನನ್ನ ಕ್ಷೇತ್ರಕ್ಕೆ ಬರುತ್ತಾರಂತೆ. ನಾನು ಯಾರಿಗೂ ಹೆದರೋ ಮಗಾ ಅಲ್ಲ ಎಂದರು.
ಇದನ್ನೂ ಓದಿ | ವಿಸ್ತಾರ Explainer | ಚೀನಾದಲ್ಲಷ್ಟೇ ಇಲ್ಲ ಕೊರೊನಾ, ವಿಶ್ವದ ಎಲ್ಲೆಲ್ಲಿ ಆತಂಕ? ಭಾರತದ ಪರಿಸ್ಥಿತಿ ಏನು?