Site icon Vistara News

ರಾಜ್ಯಸಭೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆ | ಸಿಎಂ ಬೊಮ್ಮಾಯಿ, ಸುನೀಲ್‌ ಕುಮಾರ್‌ ಹರ್ಷ

ಡಾ.ಡಿ.ವೀರೇಂದ್ರ ಹೆಗ್ಗಡೆ

ಬೆಂಗಳೂರು: ರಾಜ್ಯಸಭೆಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನಾಮ ನಿರ್ದೇಶನಗೊಂಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸ್ಕೃತಿ ಮತ್ತು ಇಂಧನ ಸಚಿವ ವಿ. ಸುನೀಲ್ ಕುಮಾರ್, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಡಾ. ಹೆಗ್ಗಡೆಯವರನ್ನು ಅಭಿನಂದಿಸಿದ್ದಾರೆ. ʼʼಆರೋಗ್ಯ, ಶಿಕ್ಷಣ, ಸ್ತ್ರೀಶಕ್ತಿ, ಗ್ರಾಮೀಣಾಭಿವೃದ್ಧಿ ಹೀಗೆ ವಿವಿಧ ಕ್ಷೇತ್ರಗಳ ಹಾಗೂ ಆಯಾಮಗಳಲ್ಲಿ ಜನಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಶ್ರಮಿಸುತ್ತಿರುವ ಶ್ರೀ ಹೆಗ್ಗಡೆಯವರ ಅನುಭವ ಸಂಸತ್ತಿನ ಕಲಾಪಗಳ ಸತ್ವ ಹೆಚ್ಚಿಸಲಿದೆʼʼ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಗೆ ವೀರೇಂದ್ರ ಹೆಗ್ಗಡೆಯವರಂಥ ಅರ್ಹರನ್ನು ಶಿಫಾರಸು ಮಾಡಿದ ಪ್ರಧಾನಿ ಮೋದಿಯವರಿಗೆ ಮುಖ್ಯಮಂತ್ರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಅವರೊಂದಿಗೆ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಪಿ. ಟಿ. ಉಷಾ, ಇಳಯರಾಜ, ವಿಜಯೇಂದ್ರ ಪ್ರಸಾದ್ ಅವರನ್ನೂ ಮುಖ್ಯಮಂತ್ರಿಗಳು ಅಭಿನಂದಿಸಿದ್ದಾರೆ.

ರಾಜ್ಯಕ್ಕೆ ಸಂದ ಗೌರವ: ಸುನೀಲ್‌ ಕುಮಾರ್‌

ಡಾ. ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವುದು ರಾಜ್ಯಕ್ಕೆ ಸಂದ ಅತಿದೊಡ್ಡ ಗೌರವ. ರಾಜ್ಯವನ್ನು ಧಾರ್ಮಿಕ ಕ್ಷೇತ್ರದಲ್ಲಿ ಮುನ್ನಡೆಸುವುದರ ಜತೆಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ವೀರೇಂದ್ರ ಹೆಗ್ಗಡೆಯವರು ಅವಿರತ ಶ್ರಮಿಸಿದ್ದಾರೆ. ಅವರ ಕನಸಿನ ಫಲವಾಗಿ ರಾಜ್ಯಾದ್ಯಂತ ಬೆಳೆದಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಗ್ರಾಮೀಣ ಭಾಗದ ಜನರ ನಂದಾದೀಪವಾಗಿದೆ. ಸುಮಾರು 50 ಲಕ್ಷ ಜನ ಈ ಸಂಸ್ಥೆಯ ಸದಸ್ಯರಾಗಿರುವುದು ಸಣ್ಣ ಮಾತಲ್ಲ. ವಿದ್ಯಾಕ್ಷೇತ್ರದಲ್ಲೂ ಹೆಗ್ಗಡೆಯವರ ಸಾಧನೆ ಅನನ್ಯ. ಈ ಎಲ್ಲ ಕಾರಣಕ್ಕಾಗಿ ಕೇಂದ್ರ ಸರಕಾರ ಅವರನ್ನು ರಾಜ್ಯಸಭೆಗೆ ನೇಮಿಸಿರುವುದು ಅತ್ಯಂತ ಅಭಿನಂದನೀಯ ಎಂದು ಕನ್ನಡ- ಸಂಸ್ಕೃತಿ ಮತ್ತು ಇಂಧನ ಸಚಿವ ವಿ.ಸುನೀಲ್ ಕುಮಾರ್ ಶ್ಲಾಘಿಸಿದ್ದಾರೆ.

ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೂಡ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಅಭಿನಂದಿಸಿದ್ದಾರೆ.

Exit mobile version