ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ(Amrit Mahotsav) ಹಿನ್ನೆಲೆಯಲ್ಲಿ ನಗರದ ಮಲ್ಲೇಶ್ವರಂನಲ್ಲಿ ಭಾನುವಾರ ಮಧ್ಯರಾತ್ರಿ ಹಮ್ಮಿಕೊಂಡಿದ್ದ ಅದ್ಧೂರಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಸಿಡಿಮದ್ದು ಪ್ರದರ್ಶನ ಕೂಡ ನಡೆಯಿತು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸಚಿವ ಅಶ್ವತ್ಥನಾರಾಯಣ ಏನೇ ಮಾಡಿದರೂ ಸ್ಪೆಷಲ್ ಆಗಿ ಮಾಡುತ್ತಾರೆ. ಇಂದು ಸ್ವಾತಂತ್ರ್ಯ ಹೋರಾಟವನ್ನು ನೆನಪು ಮಾಡಿಕೊಟ್ಟಿದ್ದಾರೆ. ಆ.15ರಂದು ದೇಶಾದ್ಯಂತ ಜನರು ಸಂಭ್ರಸುತ್ತಿದ್ದಾರೆ ಎಂದು ತಿಳಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಲಾಲಾ ಲಜಪತ್ ರಾಯ್, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಸೇರಿ ಹಲವರು ಇನ್ನೂ ನಮ್ಮ ಮನಸ್ಸಲ್ಲಿದ್ದಾರೆ. ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟ ಎಷ್ಟೋ ಸ್ವಾತಂತ್ರ್ಯ ವೀರರಿದ್ದಾರೆ. ಅವರ ಹೋರಾಟದಿಂದಾಗಿಯೇ ನಾವಿಂದು ಇಲ್ಲಿ ಸೇರುವಂತಾಗಿದೆ ಎಂದರು.
ಸಚಿವ ಡಾ.ಸಿ.ಎನ್.ಅಶ್ವತ್ಥನಾರಯಣ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮನೆ ಮನೆಯಲ್ಲೂ ತ್ರಿವರ್ಣ ದ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗುತ್ತಿದ್ದು, ಈ ದಿನ ಅತ್ಯಂತ ಸ್ಮರಣೀಯವಾಗಿ ಉಳಿಯಲಿದೆ. ಸ್ವಾತಂತ್ರ್ಯ ಪಡೆಯಲು ದೇಶದ ಹಲವು ಮಹಾನ್ ವೀರರ ತ್ಯಾಗ ಬಲಿದಾನ ಕಾರಣವಾಗಿದೆ. ಅವರ ಕನಸನ್ನು ನನಸು ಮಾಡುವ ಕೆಲಸವಾಗಬೇಕು. ಉತ್ತಮ ದೇಶವನ್ನು ಕಟ್ಟುವಲ್ಲಿ ನಾವೆಲ್ಲರೂ ಶ್ರಮವಹಿಸಬೇಕು, ಜಾತಿ, ಧರ್ಮಗಳನ್ನು ಮೀರಿ ಒಗ್ಗಟ್ಟಿನಿಂದ ಬಾಳೋಣ, ವಿವಿಧತೆಯಲ್ಲಿ ಏಕತೆ ತೋರಿಸೋಣ ಎಂದು ತಿಳಿಸಿದರು.
ವೈಭವದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಮಂಗ್ಲಿ ಮತ್ತು ಇನ್ನಿತರ ಗಾಯಕರು ದೇಶಭಕ್ತಿ ಹಾಡುಗಳ ಮೂಲಕ ರಂಜಿಸಿದರು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯಗಳು ಗಮನ ಸೆಳೆದವು.
ಇದನ್ನೂ ಓದಿ | Amrit Mahotsav | ದೇಶ ಪ್ರೇಮ ಮನೆ-ಮನದ ಒಳಗಿಳಿಯಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ