ಬೆಂಗಳೂರು: ಪೌರಕಾರ್ಮಿಕರ ಬಹುವರ್ಷಗಳ ಬೇಡಿಕೆಯಾಗಿದ್ದ ಸೇವೆ ಕಾಯಂ ಮಾಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಅವರನ್ನು ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರೆಲ್ಲರಿಗೂ ತಿಂಡಿ ಬಡಿಸಿ, ಅವರೊಂದಿಗೆ ಬೆರೆತು ಉಪಾಹಾರ ಸೇವಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೇಸ್ ಕೋರ್ಸ್ ರಸ್ತೆ ನಿವಾಸದಲ್ಲಿ ಶುಕ್ರವಾರ ಸಡಗರದ ವಾತಾವರಣವಿತ್ತು. ಪೌರ ಕಾರ್ಮಿಕರು ಮುಖ್ಯಮಂತ್ರಿ ಜತೆ ಕುಳಿತು ಬೆಳಗಿನ ಉಪಾಹಾರ ಸವಿದರು.
ಇದನ್ನೂ ಓದಿ | NIA Raid | ಎನ್‌ಐಎ ಬಂಧಿಸಿರುವ ಬೆಂಗಳೂರಿನ ಏಳು ಪಿಎಫ್‌ಐ ಮುಖಂಡರ ಸಂಪೂರ್ಣ ಕ್ರೈಂ ಹಿಸ್ಟರಿ ಇಲ್ಲಿದೆ!
ಬೆಳಗ್ಗೆ ಸಿಎಂ ನಿವಾಸದಲ್ಲಿ ಪೌರ ಕಾರ್ಮಿಕರು ಜಮಾವಣೆಗೊಂಡಿದ್ದರು. ಸಿಎಂ ಬರುವಿಕೆಗಾಗಿ ಕಾಯುತ್ತಿದ್ದರು. ಸಿಎಂ ಬಂದೊಡನೆ ಅವರನ್ನು ಸುತ್ತುವರಿದು, ಶಾಲು, ಹಾರ, ಫಲ ತಾಂಬೂಲ ಅರ್ಪಿಸಿ ಧನ್ಯವಾದವನ್ನು ಅರ್ಪಿಸಿದರು. ಅವರ ಕುಶಲೋಪರಿ ವಿಚಾರಿಸಿದ ಸಿಎಂ ಬೊಮ್ಮಾಯಿ, ಪೌರಕಾರ್ಮಿಕರ ಕುಟುಂಬಗಳ ಯೋಗಕ್ಷೇಮ, ಮಕ್ಕಳ ಶಿಕ್ಷಣದ ಬಗ್ಗೆ ಸರ್ಕಾರ ಕಾಳಜಿ ವಹಿಸಲಿದೆ ಎಂದು ಭರವಸೆ ತುಂಬಿದರು.
ನಂತರ ಪೌರ ಕಾರ್ಮಿಕರಿಗೆ ತಿಂಡಿ ಬಡಿಸಿದ ಸಿಎಂ, ತಮ್ಮ ಪಕ್ಕ ಕುಳಿತ ಭಾರತಿ ಅವರೊಂದಿಗೆ ಮಾತಿಗಿಳಿದರು. ವೇತನ ಸರಿಯಾಗಿ ಆಗುತ್ತಿದೆಯೇ, ಕೆಲಸದ ಸ್ಥಳದಲ್ಲಿ ಸೂಕ್ತ ಸೌಲಭ್ಯಗಳು ದೊರೆಯುತ್ತಿವೆಯೇ ಹೀಗೆ ಹಲವು ವಿಷಯಗಳ ಕುರಿತು ಮಾಹಿತಿ ಪಡೆದು, “ಪೌರ ಕಾರ್ಮಿಕರಿಗೆ ಆತ್ಮವಿಶ್ವಾಸ ಹಾಗೂ ಆತ್ಮ ಗೌರವ ಮೂಡಿಸುವ ಕೆಲಸ ಮಾಡುವುದಾಗಿ” ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಕೋಟ ಶ್ರೀನಿವಾಸ ಪೂಜಾರಿ, ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ | KCC | ಕಂಗಾಲ ಕಾಂಗ್ರೆಸ್ ಕಂಪನಿ; ಬಿಜೆಪಿಯಿಂದ ಕೌಂಟರ್ ಅಟ್ಯಾಕ್