Site icon Vistara News

46% ಇರುವ ಯುವಕರೇ ದೇಶದ ಆಸ್ತಿ: CM ಬಸವರಾಜ ಬೊಮ್ಮಾಯಿ

ದೇಶದ ಜನಸಂಖ್ಯೆಯಲ್ಲಿ ಶೇ.46ರಷ್ಟಿರುವ ಯುವಜನರನ್ನು ದೇಶದ ಆಸ್ತಿಯೆಂದು ಭಾವಿಸಲಾಗಿದೆ. ಯುವಜನರಿಗೆ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಇವೇ ಸರಕಾರದ ಮೂಲಮಂತ್ರಗಳಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ತಿಳಿಸಿದರು.

ಕೇಂದ್ರ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ಸ್ಥಾಪಿಸಲಾಗಿರುವ ನೃಪತುಂಗ ಏಕೀಕೃತ ವಿಶ್ವವಿದ್ಯಾಲಯ ಅಧಿಕೃತ ಉದ್ಘಾಟನೆ, ಶೈಕ್ಷಣಿಕ ಸಮುಚ್ಚಯ ನಿರ್ಮಾಣಕ್ಕೆ ಶಂಕುಸ್ಥಾಪನೆ, ಲಾಂಛನ ಅನಾವರಣ ಮತ್ತು ಬಳ್ಳಾರಿಯಲ್ಲಿ ಸ್ಥಾಪಿಸಲಾಗಿರುವ ವಿಧಿವಿಜ್ಞಾನ ಪ್ರಯೋಗಾಲಯದ ವರ್ಚುಯಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ಯಾಂಪಸ್ ಸಂದರ್ಶನ, ಸ್ವ-ಉದ್ಯೋಗಕ್ಕೆ ಒತ್ತು ಕೊಡುವುದರ ಜತೆಗೆ ಪ್ರತೈಕ ಉದ್ಯೋಗ ನೀತಿಯನ್ನೇ ರಾಜ್ಯದಲ್ಲಿ ರೂಪಿಸಲಾಗಿದೆ. ನೃಪತುಂಗ ವಿವಿಗೆ ಕೇಂದ್ರ ಸರ್ಕಾರ ₹55 ಕೋಟಿ ಅನುದಾನ ಮಂಜೂರು ಮಾಡಿದೆ. ಬಾಕಿ ಹಣವನ್ನು ರಾಜ್ಯ ಸರ್ಕಾರ ಒದಗಿಸಲಿದೆ. ಕಾಲದ ಜತೆಯಲ್ಲಿ ಬದಲಾವಣೆಗೆ ತೆರೆದುಕೊಳ್ಳದೆ ಹೋದರೆ ಅವಕಾಶಗಳು ಕೈತಪ್ಪಿ ಹೋಗಲಿವೆ. ಹೀಗಾಗಿ, ರಾಜ್ಯದಲ್ಲಿ ಎನ್ಇಪಿ ಜಾರಿಗೊಳಿಸುತ್ತಿದ್ದು, ಪೂರ್ವ ಪ್ರಾಥಮಿಕ ಹಂತದಿಂದ ಹಿಡಿದು ಸ್ನಾತಕೋತ್ತರ ಮಟ್ಟದವರೆಗೂ ಇನ್ನುಮುಂದೆ ಸಮಗ್ರ ಪರಿವರ್ತನೆ ಕಾಣಿಸಿಕೊಳ್ಳಲಿದೆ. ನೃಪತುಂಗ ವಿವಿ ಎನ್ಇಪಿ ನೀತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿದೆ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ನವಭಾರತ ನಿರ್ಮಾಣಕ್ಕಾಗಿ ನವಕರ್ನಾಟಕವು ತನ್ನ ಮೌಲಿಕ ಕೊಡುಗೆ ನೀಡಲಿದೆ. ಕಳೆದ ಎರಡು ವರ್ಷಗಳಲ್ಲಿ 6 ವಿವಿಗಳನ್ನು ಸ್ಥಾಪಿಸಲಾಗಿದ್ದು, ಸದ್ಯದಲ್ಲೇ ಇನ್ನೂ 7 ವಿವಿಗಳು ಅಸ್ತಿತ್ವಕ್ಕೆ ಬರಲಿವೆ. ಒಟ್ಟಿನಲ್ಲಿ ಒಂದು ಜಿಲ್ಲೆಗೆ ಒಂದು ವಿವಿಯಾದರೂ ಇರುವಂತೆ ಮುಂದಡಿ ಇಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಪಿ.ಸಿ.ಮೋಹನ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಕುಲಪತಿ ಶ್ರೀನಿವಾಸ ಎಸ್ ಬಳ್ಳಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಉಪಸ್ಥಿತರಿದ್ದರು.

Exit mobile version