Site icon Vistara News

Siddheshwar Swamiji | ಸಿದ್ದೇಶ್ವರ ಶ್ರೀಗಳ ಜತೆಗಿನ ಒಡನಾಟ ನನ್ನ ಜೀವನದ ಅಮೃತ ಗಳಿಗೆ ಎಂದ ಸಿಎಂ ಬೊಮ್ಮಾಯಿ

CM Basavaraj Bommai

ಬೆಂಗಳೂರು : ಸಾಧಕನಿಗೆ ಸಾವಿಲ್ಲ ಎಂಬ ವಿವೇಕಾನಂದರ ವಾಣಿ ಸಿದ್ದೇಶ್ವರ ಶ್ರೀಗಳಿಗೆ ಅನ್ವಯ. ಅವರು ನಮ್ಮನ್ನು ದೈಹಿಕವಾಗಿ ಬಿಟ್ಟು ಹೋಗಿದ್ದಾರೆ. ಅವರ ಆದರ್ಶಗಳು ಅಮರ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದೇ ವೇಳೆ ಸಿಎಂ ಸ್ವಾಮೀಜಿಗಳ ಒಡನಾಟವನ್ನು ಸ್ಮರಿಸಿ ಗದ್ಗದಿತರಾದರು.

ವಿಜಯಪುರ ಜ್ಞಾನ ಯೋಗಾಶ್ರಮ ಸಿದ್ದೇಶ್ವರ ಶ್ರೀಗಳು ದೇಹಾಂತ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀಗಳು ವಿವೇಕಾನಂದರಂತೆ ಬದುಕಿದ್ದಾರೆ. ಅವರನ್ನು ಮುಂದಿನ ಪೀಳಿಗೆ ಸ್ಮರಿಸಲಿದೆ ಎಂದರು.

ಸಿದ್ದೇಶ್ವರ ಶ್ರೀಗಳು ಯಾವುದೇ ಪಂಥವನ್ನು ನಂಬಿಕೊಂಡವರಲ್ಲ. ಎಲ್ಲವನ್ನೂ ತಿಳಿದುಕೊಂಡವರು. ಸಹಜವಾಗಿ ತತ್ವಗಳನ್ನು ತಿಳಿಸಿದರು. ಅವರು ಜ್ಞಾನಿಗಳು. ಅವರ ನಡೆ ನುಡಿಯಲ್ಲಿ ವ್ಯತ್ಯಾಸ ಇರಲಿಲ್ಲ. ಹೀಗಾಗಿ ಅವರು ಮನುಕುಲಕ್ಕೆ ಆದರ್ಶ ಎಂದು ಹೇಳಿದರು.

ಸ್ವಾಮೀಜಿಗಳು ನಿರ್ಮೋಹಿಗಳಾಗಿದ್ದರು. ಆಶ್ರಮ ಮತ್ತು ಮಠ ಕಟ್ಟುವ ಉದ್ದೇಶ ಇರಲಿಲ್ಲ. ಅತ್ಯಂತ ಮೇಲ್ಬಂಕ್ತಿಯಲ್ಲಿ ಬದುಕಿದ ಸಂತ. ಅವರು ಏನನ್ನೂ ಬೇಡಿದವರಲ್ಲ ಎಂಬುದಾಗಿಯೂ ಸಿಎಂ ನುಡಿದರು.

ಸಿದ್ದೇಶ್ವರ ಮತ್ತು ನನ್ನ ನಡುವೆ 25 ವರ್ಷಗಳ ಸಂಬಂಧವಿದೆ. ಅವರ ಜತೆ ಕಾಲ ಕಳೆದಿರುವುದು ನನ್ನ ಜೀವನದ ಅಮೃತ ಗಳಿಗೆ ಎಂದು ಸಿಎಂ ಹೇಳಿದರು.

ಆಧ್ಯಾತ್ಮ, ನೀರಾವರಿ, ಮನುಕುಲದ ಸವಾಲುಗಳ ಬಗ್ಗೆ ಸ್ವಾಮೀಜಿ ಚರ್ಚೆ ನಡೆಸುತ್ತಿದ್ದರು. ನಮಗೆ ಸಮಯ ಇದ್ದರೆ ಮಾತ್ರ ಮಾತನಾಡುತ್ತಿದ್ದರು ಹೀಗಾಗಿ ಅವರ ಮಾತುಗಳು ಎಂದಿಗೂ ಅಮರ ಎಂದ ಹೇಳಿದರು.

ಯಾವಾಗ ರೈತ ರೇಷ್ಮೆ ಅಂಗಿ ಹಾಕಿಕೊಂಡನೊ ಆಗ ದೇಶ ಉದ್ಧಾರವಾಗುತ್ತದೆ ಎಂದಿದ್ದರು ಸ್ವಾಮೀಜಿಗಳು. ಈ ಮೂಲಕ ರೈತರ ಉದ್ಧಾರದ ಕಲ್ಪನೆ ಇಟ್ಟುಕೊಂಡಿದ್ದರು ಎಂದು ಹೇಳಿದ್ದಾರೆ.

ಭಕ್ತರಿಗೆ ಮನವಿ: ಸ್ವಾಮೀಜಿಗಳು ಪ್ರವಚನದಲ್ಲಿ ಶಾಂತಿಯ ಬಗ್ಗೆ ಮಾತನಾಡುತ್ತಿದ್ದರು. ಅವರ ಅಂತಿಮ ಯಾತ್ರೆಗೆ ಬರುವ ಭಕ್ತರೂ ಶಾಂತಿ ಕಾಪಾಡಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ | Siddheshwar Swamiji | ಭಕ್ತರಿಗೆ ಸಿದ್ದೇಶ್ವರ ಶ್ರೀಗಳ ʼಅಂತಿಮ ಅಭಿವಂದನ ಪತ್ರʼ, ಏನಿದೆ ಸಂದೇಶ?

Exit mobile version