ಕಲಬುರಗಿ: ಹಲವು ವರ್ಷಗಳಿಂದ ರಾಜ್ಯದಲ್ಲಿ ಹಿಂದುಳಿದ ವರ್ಗದವರನ್ನು ಕತ್ತಲಲ್ಲಿಡುವ ಕಾರ್ಯ ನಡೆದಿತ್ತು. ಹಿಂದುಳಿದವರ ಮತ ಪಡೆದು ರಾಜ್ಯವೇ ಹಿಂದುಳಿಯುವ ಹಾಗೆ ಕಾಂಗ್ರೆಸ್ ಮಾಡಿದೆ. ಆದರೆ, ರಾಜ್ಯದಲ್ಲಿ ಬದಲಾವಣೆ ಕಾಲ ಬಂದಿದೆ. ಹಿಂದುಳಿದ ವರ್ಗಗಳ ಏಳಿಗೆಗೆ ಬಿಜೆಪಿ(BJP OBC convention) ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕೆಸರಟಗಿ ರದ್ದೇವಾಡಗಿ ಲೇಔಟ್‌ನಲ್ಲಿ ಭಾನುವಾರ ಆಯೋಜಿಸಿದ್ದ ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ನಾಡನ್ನು ಅಭಿವೃದ್ಧಿ ಮಾಡಿದವರು ನಮ್ಮ ಯಡಿಯೂರಪ್ಪ ಹಾಗೂ ಈಶ್ವರಪ್ಪ. ಎಸ್‌ಸಿ ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿ ಆ ಸಮುದಾಯಗಳಿಗೆ ನಮ್ಮ ಸರ್ಕಾರ ಸಾಮಾಜಿಕ ನ್ಯಾಯ ದೊರಕಿಸಿದೆ ಎಂದರು.
ಇದನ್ನೂ ಓದಿ | ಪತ್ರಕರ್ತರಿಗೆ ಲಂಚ ಎನ್ನುವುದು ಕಾಂಗ್ರೆಸ್ ಟೂಲ್‌ಕಿಟ್‌ನ ಸುಳ್ಳು ಎಂದ ಸಿಎಂ ಬೊಮ್ಮಾಯಿ: ಕಾಂಗ್ರೆಸ್‌ಗೆ ನೋಟಿಸ್
ಅಧಿಕಾರದಲ್ಲಿದ್ದಾಗ ನೀವು ಏನು ಮಾಡಿದ್ದೀರಿ? ಎಸ್‌ಸಿ ಎಸ್‌ಟಿ ಮಿಸಲಾತಿ ಹೆಚ್ಚಳ ಮಾಡಲು 50 ವರ್ಷಗಳಿಂದ ಬೇಡಿಕೆ ಇತ್ತು. ಅವರು ಸಹ ಮುಖ್ಯವಾಹಿನಿಗೆ ಬರಬೇಕು, ಸ್ವಾಭಿಮಾನದ ಜೀವನ ಮಾಡಬೇಕು ಎನ್ಮುವುದು ನಮ್ಮ ಧ್ಯೇಯ. ಹೀಗಾಗಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಕುರಿ ಕಾಯುವ ಜನಾಂಗಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಅವರ ಮುಖ್ಯ ಕಾಯಕಕ್ಕೆ ಯಾವುದೇ ಯೋಜನೆ ಇಲ್ಲ. ಹೀಗಾಗಿ ಅಮೃತ ಯೋಜನೆ ಮಾಡಿದ್ದೇವೆ. ಅಧಿಕಾರ ಇದ್ದಾಗ ಸಿದ್ದಣ್ಣ ಅವರಿಗೆ ಸಹಾಯ ಮಾಡಲು ಮನಸು ಬರಲಿಲ್ಲವೇ? ಬರೀ ಭಾಷಣ ಮಾಡಿದರೆ ಅವರ ಹೊಟ್ಟೆ ತುಂಬಲ್ಲ, ಸಾಮಾಜಿಕ ನ್ಯಾಯ, ಸಮಾನವಾಗಿ ಸೌಲಭ್ಯ ಕೊಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಳಿದ ವರ್ಗದಿಂದಲೇ ಬಂದವರು. ಹೀಗಾಗಿ ಬಡ ವರ್ಗಕ್ಕೆ ಹಲವು ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದರು.
ತಳವಾರ ಹಾಗೂ ಪರಿವಾರ ಸಮಾಜವನ್ನು ಎಸ್‌ಟಿಗೆ ಸೇರಿಸಲಾಗಿದೆ. ಆದೇಶ ಪ್ರತಿ ಹಿಡಿದುಕೊಂಡು ನಾನು ಕಲಬುರಗಿಗೆ ಬಂದಿದ್ದೇನೆ. ಸಾಮಾಜಿಕ ನ್ಯಾಯವೆಂದರೆ ಇದು ಎಂದ ಅವರು, ಅಧಿಕಾರ ಶಾಶ್ವತವಲ್ಲ. ಹಿಂದುಳಿದ ವರ್ಗದ ಜನ ಒಗ್ಗಟ್ಟಾಗಿ ದುಡಿಮೆಯಿಂದ ಮೇಲೆ ಬರಬೇಕು. ದುಡಿಮೆ ದೊಡ್ಡಪ್ಪ, ದುಡ್ಡೇ ದೊಡ್ಡಪ್ಪ ಎಂದ ಅವರು,
ಕಲ್ಯಾಣ ಕರ್ನಾಟಕದಲ್ಲಿ ನಾವು ಕಲ್ಯಾಣ ಕಾರ್ಯಕ್ರಮಗಳನ್ನು ಆರಂಭಿಸುತ್ತೇವೆ ಎಂದರು.
ನಿಮ್ಮ ಆಶೀರ್ವಾದಕ್ಕೆ ಬಹಳ ದೊಡ್ಡ ಶಕ್ತಿ ಇದೆ. ನಿಮಗಾಗಿ 24 ತಾಸು ಕೆಲಸ ಮಾಡಲು ತಯಾರಿದ್ದೇನೆ. ಏನೇ ಬರಲಿ ನಿಮ್ಮ ಪರವಾಗಿ ನಾನೀದ್ದೇನೆ. ವೇದಿಕೆ ಮೇಲೆ ನಾನು ಕಾಂಗ್ರೆಸ್ ಮತ್ತೆ ಸವಾಲ್ ಹಾಕುತ್ತೇನೆ. ಹಿಂದುಳಿದ ವರ್ಗ ನಮ್ಮ ಜೇಬಿನಲ್ಲಿದೆ ಎಂದು ಕಾಂಗ್ರೆಸ್ ಹೇಳುತ್ತಿತ್ತು. ಒಮ್ಮೆ ಬಂದು ನೋಡಿ ಹಿಂದುಳಿದ ವರ್ಗ ಬಿಜೆಪಿ ಪಕ್ಷದ ಪರವಾಗಿದೆ. ಧಮ್ಮಿದ್ದರೆ ತಾಕತ್ತಿದ್ದರೆ ನಮ್ಮ ವಿಜಯ ಪತಾಕೆ ನಿಲ್ಲಿಸಿ ಎಂದು ಸವಾಲು ಹಾಕಿ, ಜನತೆಯ ಆಶೀರ್ವಾದ ಹೀಗೆ ಇರಲಿ, ಮತ್ತೊಮ್ಮೆ ನಿಮ್ಮ ಮುಂದೆ ಬರುತ್ತೇವೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸಿದ್ದರಾಮಣ್ಣ ಎಸ್‌ಸಿ ಎಸ್‌ಟಿಯವರಿಗೆ ನ್ಯಾಯ ಕೊಟ್ಟಿಲ್ಲ. ಈಡಿಗ ಸಮಾಜಕ್ಕೂ ಅನ್ಯಾಯ ಮಾಡಿದ್ದಾರೆ. ಹಿಂದುಳಿದ ವರ್ಗದ ಸಮಸ್ಯೆಗಳನ್ನು ಪರಿಹಾರ ಮಾಡಲು ನಮ್ಮ ಸಿಎಂ ಬೊಮ್ಮಾಯಿ ಅವರು ಸಿದ್ಧರಿದ್ದಾರೆ. ಸಿದ್ದರಾಮಣ್ಣ ಕುರುಬ ಸಮಾಜಕ್ಕೆ ನೀವು ಏನು ಕೊಡಗೆ ಕೊಟ್ಟಿದ್ದೀರಾ? ಏಕೆ ನೀವು ಕುರುಬರ ಕಣ್ಣೀರು ಒರೆಸಲಿಲ್ಲ. ಭಾರತ್ ಜೋಡೋ ಏಕೆ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.
ಕರ್ನಾಟಕ ಕಾಂಗ್ರೆಸ್ ಮುಕ್ತವಾಗುತ್ತದೆ. ಅರ್ಜುನ ಕೃಷ್ಣರಂತೆ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರು ಇದ್ದಾರೆ.
ರಾಜ್ಯದಲ್ಲಿ ಮತ್ತೆ ಮಹಾಭಾರತ ಯುದ್ಧ ಶುರುಮಾಡುತ್ತೇವೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುತ್ತೇವೆ ಎಂದರು.
ಮಧ್ಯಪ್ರದೇಶ ಸಿಎಂ ಶಿವರಾಜ ಸಿಂಗ್ ಚೌಹಾಣ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವರಾದ ಎಂ.ಟಿ.ಬಿ ನಾಗರಾಜ್, ಕೋಟ ಶ್ರೀನಿವಾಸ್ ಪೂಜಾರಿ, ಮುನಿರತ್ನ, ಸಚಿವ ಪ್ರಭು ಚವ್ಹಾಣ, ಸಿ.ಟಿ. ರವಿ ಹಾಗೂ ನೆ.ಲ ನರೇಂದ್ರಬಾಬು ಮತ್ತಿತರರು ಇದ್ದರು.
ಇದನ್ನೂ ಓದಿ | ದಲಿತ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನ ಹಂಚಿಕೆ ಕೊರತೆ ಭರ್ತಿಗೆ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ