Site icon Vistara News

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಕಾಂಗ್ರೆಸ್ ಪಕ್ಷದವರೇ ರೂವಾರಿಗಳು; ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

ಯಾದಗಿರಿ: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಕಾಂಗ್ರೆಸ್ ಪಕ್ಷದವರೇ ರೂವಾರಿಗಳು. ಅವರ ಕಾಲದ ಎಲ್ಲ ಅಕ್ರಮಗಳ ಬಗ್ಗೆ ದಾಖಲೆಗಳನ್ನು ರಾಹುಲ್‌ ಗಾಂಧಿಗೆ ಕಳುಹಿಸಲಾಗುತ್ತಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಾದ ಹಗರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹುಣಸಗಿಯಲ್ಲಿ ಜಿಲ್ಲಾ ಬಿಜೆಪಿಯಿಂದ ಬುಧವಾರ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ದೇಶ ಹಾಗೂ ಕರ್ನಾಟಕದ ಬಗ್ಗೆ ಗೊತ್ತಿಲ್ಲ. ಕರ್ನಾಟಕದ ಜನರ ಭಾವನೆಗಳೂ ತಿಳಿದಿಲ್ಲ. ರಾಹುಲ್ ಗಾಂಧಿಗೆ ದಾಖಲೆ ಕೊಡುತ್ತೇನೆ ಎಂದರೆ ಆ ಪಕ್ಷದ ನಾಯಕರಿಗೆ ಭಯ ಶುರುವಾಗಿದೆ. ಇಂತಹವರ ಮೇಲೆ ಕ್ರಮ ತೆಗೆದುಕೊಳ್ಳುವ ಧೈರ್ಯ ಕಾಂಗ್ರೆಸ್‌ ಹೈಕಮಾಂಡ್‌ಗೆ ಇದೆಯೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | National Politics | ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಕನ್ನಡಿಗರ ಕಾರುಬಾರು

ಭಾಷಣದಲ್ಲಿ ಸಾಮಾಜಿಕ ನ್ಯಾಯ
ಕಾಂಗ್ರೆಸ್ ನಾಯಕರು ಸಾಮಾಜಿಕ ನ್ಯಾಯವನ್ನು ಭಾಷಣದಲ್ಲಿ ಹೇಳಿ 70 ವರ್ಷ ಆಡಳಿತ ಮಾಡಿದರು. ಮೀಸಲಾತಿಯ ಬೇಡಿಕೆ ಐದು ದಶಕಗಳದ್ದು. ದುರ್ಬಲ ವರ್ಗದವರು ಹೇಗಿದ್ದಾರೆ ಎಂದು ತಿರುಗಿ ನೋಡಲು ಅವರಿಗೆ ಪುರುಸೊತ್ತು ಸಿಗಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಮಿತಿ ರಚನೆಯಾಯಿತು. ನಾವು ಅದನ್ನು ಅನುಷ್ಠಾನ ಮಾಡಬೇಕೆಂಬ ಇಚ್ಛಾಶಕ್ತಿಯಿಂದ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಿಸುವ ಐತಿಹಾಸಿಕ ತೀರ್ಮಾನ ಮಾಡಿದ್ದೇವೆ ಎಂದರು.

ಮಾತಿನಲ್ಲಿ ಅಲ್ಲ, ಕೃತಿಯಲ್ಲಿ ತೋರಿಸಿದ್ದೇವೆ
ಅಧಿಕಾರದಲ್ಲಿ ಕಾಂಗ್ರೆಸ್‌ನವರಿದ್ದಾಗ ಕೆಕೆಆರ್‌ಡಿಬಿ ಅನುದಾನ ಜನರಿಗೆ ಮುಟ್ಟಲಿಲ್ಲ. ನರೇಗಾ ಯೋಜನೆಯಡಿ ನೂರಾರು ಕೋಟಿ ರೂ.ಗಳನ್ನು ಕಾಂಗ್ರೆಸ್ ಶಾಸಕರು ಲೂಟಿ ಮಾಡಿದ್ದರು. ಕನಕದಾಸರ ಊರಿನಿಂದ ಬಂದಿರುವ ನಾನು ಬಾಡಾ ಕ್ಷೇತ್ರವನ್ನು ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಿದ್ದೇನೆ. ಯಡಿಯೂರಪ್ಪ ಅವರು ಕಾಗಿನೆಲೆಯನ್ನು ಅಭಿವೃದ್ಧಿಗೊಳಿಸಿದ್ದಾರೆ. ಎಸ್.ಟಿ ಸಮುದಾಯಕ್ಕೆ ನಿಗಮ ಮಾಡಿದ್ದು, ವಾಲ್ಮೀಕಿ ಜಯಂತಿ, ಎಸ್.ಟಿ ಸಮುದಾಯಕ್ಕೆ ಪ್ರತ್ಯೇಕ ಇಲಾಖೆಯನ್ನು ಬಿಜೆಪಿ ಕಲ್ಪಿಸಿದೆ. ಈ ಮೂಲಕ ನಾವು ಮಾತಿನಲ್ಲಿ ಅಲ್ಲದೆ ಕೆಲಸದ ಮೂಲಕ ಸಾಮರ್ಥ್ಯ ತೋರಿಸಿದ್ದೇವೆ. ಸುರಪುರದ ನಾಯಕರ ಇತಿಹಾಸ ದೊಡ್ಡದಿದೆ, ಔರಂಗಜೇಬನನ್ನು ಹಿಮ್ಮೆಟ್ಟಿಸಿದಂತೆಯೇ ಈ ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸಿ ಮತ್ತೊಮ್ಮೆ ಕರ್ನಾಟಕದಲ್ಲಿ ಕಮಲವನ್ನು ಅರಳಿಸಬೇಕು ಎಂದರು.

ಇದನ್ನೂ ಓದಿ | BTS-2022 | ಬೆಂಗಳೂರಿನಲ್ಲಿ ನ.16ರಿಂದ ಬಿಟಿಎಸ್‌-25; 5ಜಿ ಸೇರಿ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ಚರ್ಚೆ

ಕಲ್ಯಾಣ ನಾಡನ್ನಾಗಿ ಮಾಡುವ ಸಂಕಲ್ಪ
ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಇನ್ನು ಮುಂದೆ ಈ ಭಾಗದ ಜನರಿಗೆ ವಿಶ್ವಾಸ ದ್ರೋಹ ಮಾಡುವುದು ಕಾಂಗ್ರೆಸ್‌ಗೆ ಸಾಧ್ಯವಿಲ್ಲ. ನಮ್ಮ ಸರ್ಕಾರ ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ನಾಮಕರಣ ಮಾಡಿರುವುದು ಮಾತ್ರವಲ್ಲ, ಈ ಭಾಗವನ್ನು ಕಲ್ಯಾಣ ನಾಡನ್ನಾಗಿ ಮಾಡುವ ಸಂಕಲ್ಪ ತೊಟ್ಟಿದೆ. ಅದಕ್ಕಾಗಿ ಮುಂದಿನ ಬಜೆಟ್‌ನಲ್ಲಿ 5 ಸಾವಿರ ಕೋಟಿ ರೂ. ಮೀಸಲಿಡಲಾಗುತ್ತಿದೆ. ಪ್ರಸ್ತುತ ಒಂದು ಕ್ಷೇತ್ರಕ್ಕೆ 50-100 ಕೋಟಿ ರೂಪಾಯಿ ಬಂದರೆ, 5 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಲ್ಲಿ 100-200 ಕೋಟಿ ರೂ.ಗಳ ಅನುದಾನ ಬರಲಿದೆ. ಇದು ನಿಮ್ಮ ಹಕ್ಕು, ಉಪಕಾರವಲ್ಲ ಎಂದರು.

ಹೈದರಾಬಾದ್‌ ಕರ್ನಾಟಕ ವಿಶೇಷ ಸ್ಥಾನಮಾನ (371 ಜೆ) ಬೇಡುವಂತಹ ಪರಿಸ್ಥಿತಿ ಬಂತು. ನಾಲ್ಕು ದಶಕಗಳ ಕಾಲ ಈ ಭಾಗ ಅಭಿವೃದ್ಧಿಯನ್ನೇ ಕಾಣಲಿಲ್ಲ. ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭದಲ್ಲಿ ನಂಜುಂಡಪ್ಪ ವರದಿ ಸಲ್ಲಿಕೆಯಾಯಿತು. 2007ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಗಳಾದಾಗ ಅದಕ್ಕೆ ಅನುದಾನ ನೀಡಿದರು. 5 ವರ್ಷ ಕಾಂಗ್ರೆಸ್ ಆಡಳಿತದಲ್ಲಿ ನಂಜುಂಡಪ್ಪ ವರದಿ ಧೂಳು ತಿನ್ನುತ್ತಿತ್ತು. ಅದನ್ನು ಕಸದ ಬುಟ್ಟಿಗೆ ಹಾಕಿದ್ದರು. 371 ಜೆ ವಿಧಿ ಬಂದ ನಂತರ 5 ವರ್ಷ ಸರಿಯಾದ ಅನುದಾನ ಬರಲಿಲ್ಲ, ಹೀಗಾಗಿ ಈ ಪ್ರದೇಶ ಹಿಂದುಳಿಯಿತು ಕಾಂಗ್ರೆಸ್‌ ಆಡಳಿತದ ಬಗ್ಗೆ ಟೀಕಿಸಿದರು.

ಇದನ್ನೂ ಓದಿ | ಬಿಜೆಪಿಯ SCST ಮೀಸಲಾತಿ ಮಾಸ್ಟರ್‌ ಸ್ಟ್ರೋಕ್‌ಗೆ ಕಾಂಗ್ರೆಸ್‌ ಉತ್ತರ ಮಲ್ಲಿಕಾರ್ಜುನ ಖರ್ಗೆ?

Exit mobile version