ಬೆಳಗಾವಿ: ಆಹಾರ ಪದಾರ್ಥಗಳೂ ಸೇರಿ ಯಾವುದೇ ಉತ್ಪನ್ನಗಳಿಗೆ ಖಾಸಗಿ ಸಂಸ್ಥೆಗಳು ಹಲಾಲ್ ಪ್ರಮಾಣಪತ್ರ (Halal Certification) ನೀಡುವುದನ್ನು ನಿಷೇಧಿಸಬೇಕು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಂಡಿಸಲು ಮುಂದಾಗಿದ್ದ ಖಾಸಗಿ ವಿಧೇಯಕಕ್ಕೆ ಪ್ರಾರಂಭದಲ್ಲೇ ಹಿನ್ನಡೆ ಉಂಟಾಗಿದೆ.
ಹಲಾಲ್ ಪ್ರಮಾಣಪತ್ರ ವಿಚಾರಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಲಾಲ್ ಪ್ರಮಾಣಪತ್ರಗಳನ್ನು ಈ ಹಿಂದೆ ಆಹಾರ ಪದಾರ್ಥಗಳಿಗೆ ನೀಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಸೌಂದರ್ಯ ವರ್ಧಕಗಳು, ರಿಯಲ್ ಎಸ್ಟೇಟ್ ಉದ್ಯಮ, ಆಸ್ಪತ್ರೆ, ದಿನಬಳಕೆ ವಸ್ತುಗಳಿಗೂ ನೀಡಲಾಗುತ್ತಿದೆ. ಇದನ್ನು ತಡೆಯಲು ಎನ್. ರವಿಕುಮಾರ್ ಖಾಸಗಿ ವಿಧೇಯಕ ಮಂಡನೆಗೆ ಮುಂದಾಗಿದ್ದರು.
ಆಹಾರ ಸುರಕ್ಷತೆ ಕಾಯ್ದೆಯಲ್ಲಿ ತಿದ್ದುಪಡಿ ತರಲು ಅವಕಾಶ ನೀಡಬೇಕು ಎಂದು ರವಿಕುಮಾರ್ ಖಾಸಗಿ ವಿಧೇಯಕ ಮಂಡನೆಗೆ ಅನುಮತಿ ಕೋರಿದ್ದರು. ಇದು ಚುನಾವಣೆ ವರ್ಷದಲ್ಲಿ ಬಿಜೆಪಿಯ ಹಿಂದುತ್ವ ಕಾರ್ಡ್ ಎಂದೂ ವಿಶ್ಲೇಷಣೆ ಮಾಡಲಾಗಿತ್ತು.
ಬೆಳಗಾವಿಯಲ್ಲಿ ಈ ಕುರಿತು ಪತ್ರಕರ್ತರು ಪ್ರಶ್ನೆ ಕೇಳಿದ ಕೂಡಲೆ ಸಿಎಂ ಬಸವರಾಜ ಬೊಮ್ಮಾಯಿ ಸಿಟ್ಟಿಗೆದ್ದರು. ನೀವು ಮೊದಲಿಗೆ ಈ ಹಲಾಲ್ ವಿಚಾರದಿಂದ ಹೊರಗೆ ಬನ್ನಿ. ಪ್ರಪಂಚ ಸಾಕಷ್ಟು ಮುಂದುವರಿದಿದೆ ಎಂದರು. ನಿಮ್ಮದೇ ಪಕ್ಷದ ವಿಧಾನ ಪರಿಷತ್ ಸದಸ್ಯರು ಖಾಸಗಿ ವಿಧೇಯಕ ಮಂಡಿಸಿದ್ದಾರಲ್ಲ ಎಂದು ಪ್ರತಿಪ್ರಶ್ನೆ ಕೇಳಿದ್ದಕ್ಕೆ, ಸರ್ಕಾರಕ್ಕೂ ಈ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜಾರಕಿಹೊಳಿ, ಈಶ್ವರಪ್ಪ ಸಂಪರ್ಕದಲ್ಲಿದ್ದೇನೆ
ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ಅವರು ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸದೇ ಇರುವುದು ಬಹಿಷ್ಕಾರವಲ್ಲ. ತಮ್ಮ ಮೇಲಿದ್ದ ಪ್ರಕರಣಗಳಲ್ಲಿ ಮುಕ್ತರಾದ ಮೇಲೆ ಮತ್ತೊಮ್ಮೆ ಸಂಪುಟಕ್ಕೆ ಸೇರಬೇಕೆನ್ನುವ ಅವರ ಚಿಂತನೆ ಸರಿಯಿದೆ. ಅವರ ವಿಚಾರವನ್ನು ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಚರ್ಚೆ ಮಾಡಿದ್ದೇನೆ. ಅವರೂ ಕೂಡ ಸಕಾರಾತ್ಮಕ ವಾಗಿದ್ದಾರೆ. ಮಿಕ್ಕ ವಿಚಾರಗಳನ್ನು ವೈಯಕ್ತಿಕವಾಗಿ ಹೇಳಲಾಗುವುದು. ಕೆಲವು ವಿಚಾರಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದರು.
ಸಿಬಿಐ ದಾಳಿ
ಸಿಬಿಐ ದಾಳಿ ಬಗ್ಗೆ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಸಂವಿಧಾನಾತ್ಮಕವಾಗಿ ಸ್ವಾಯತ್ತವಾಗಿರುವ ಸಂಸ್ಥೆ ಅವರ ಬಳಿ ಇರುವ ಪ್ರಕರಣ ಇದೆ ಅದರ ಮೇಲೆ ಅವರು ಕ್ರಮ ಕೈಗೊಳ್ಳುತ್ತಾರೆ. ಇದು ಡಿ.ಕೆ.ಶಿವಕುಮಾರ್ ಅವರಿಗೂ ತಿಳಿದಿರುವ ವಿಚಾರ ಎಂದರು.
ಇದನ್ನೂ ಓದಿ | Halal Certification | ಮತ್ತೆ ಮುನ್ನೆಲೆಗೆ ಬಂದ ಹಲಾಲ್ ಪ್ರಮಾಣ ಪತ್ರ ವಿಚಾರ: ಅಧಿವೇಶನದಲ್ಲಿ ವಿಧೇಯಕ ಮಂಡನೆಗೆ ಸಿದ್ಧತೆ