ಬೆಂಗಳೂರು: ಕಾರ್ಮಿಕರ ಕಲ್ಯಾಣವೇ ರಾಜ್ಯ ಸರ್ಕಾರದ ಪ್ರಥಮ ಪ್ರಾಶಸ್ತ್ಯ, ಕಾರ್ಮಿಕ ವರ್ಗಕ್ಕೆ ಸಕಾಲಕ್ಕೆ ಸವಲತ್ತು ನೀಡುವ ಮೂಲಕ ಅವರ ಶ್ರಮಕ್ಕೆ ಬೆಲೆ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಮಿಕ ಇಲಾಖೆಯ ಪ್ರತ್ಯೇಕ ತಂತ್ರಾಂಶ (ವೆಬ್ಸೈಟ್), ಕಟ್ಟಡ ಕಾರ್ಮಿಕರಿಗೆ ಸಾರಿಗೆ ಬಸ್ಗಳಲ್ಲಿ ಸಂಚರಿಸಲು ಉಚಿತ ಬಸ್ ಪಾಸ್ ಮತ್ತು ಶೈಕ್ಷಣಿಕವಾಗಿ ಸಾಧನೆಗೈದಿರುವ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಇದನ್ನೂ ಓದಿ | 4 ದಿನಗಳ ಧಾರವಾಡ ಕೃಷಿ ಮೇಳ ಅಂತ್ಯ; ಯಂತ್ರೋಪಕರಣಕ್ಕೇ ಬೇಡಿಕೆ ಹೆಚ್ಚು
ದೇಶದ ಪ್ರಗತಿಯಲ್ಲಿ ಕಾರ್ಮಿಕರ ಪಾತ್ರ ಹಿರಿದು, ತಾವು ಎಷ್ಟೇ ಹಣ ಮಂಜೂರು ಮಾಡಿದರೂ ಬಿಸಿಲಿನಲ್ಲಿ ಕೆಲಸ ಮಾಡಿ ರಸ್ತೆ ನಿರ್ಮಾಣ, ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವುದು ಕಾರ್ಮಿಕರು. ಹೀಗಾಗಿ ಕಾರ್ಮಿಕರಿಗೆ ಭವಿಷ್ಯ ಸದೃಢ ಎನಿಸುವಂತೆ ಮಾಡಲು ಸಮಾಜ, ಸರ್ಕಾರ ಮತ್ತು ಖಾಸಗಿ ಕೈಗಾರಿಕೆಗಳು ಮುಂದಾಗಬೇಕು. ಶ್ರಮಿಕನಿಗೆ ಸ್ಥಿರತೆ ನೀಡಿದಾಗ ಉತ್ತಮ ಕೆಲಸ ಆಗಲಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಮಿಕ ನಿಧಿಯಿಂದ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ ಎಂದರು.
ರೈತರು ಮತ್ತು ಕಾರ್ಮಿಕರು ಶ್ರಮ ಜೀವಿಗಳು ಎಂದ ಅವರು, ರವೀಂದ್ರನಾಥ್ ಠಾಗೂರ್ ಅವರು ದೇವರೆಲ್ಲಿದ್ದಾನೆ? ಎಂಬುವುದಕ್ಕೆ ದೇವರು ರೈತನ ಶ್ರಮದಲ್ಲಿದ್ದಾನೆ, ಕಾರ್ಮಿಕರ ಬೆವರಿನಲ್ಲಿದ್ದಾನೆ ಎಂದಿದ್ದರು. ಹೀಗಾಗಿ ʼರೈತರು- ಕಾರ್ಮಿಕರು- ಸೈನಿಕರು’ ಬಹಳ ಮುಖ್ಯವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಕ್ಲಿನಿಕ್, ಕಾರ್ಮಿಕ ಮಕ್ಕಳ ಉನ್ನತ ಶಿಕ್ಷಣಕ್ಕೆ ತರಬೇತಿ, ಮನೆ ಕಟ್ಟಲು ಸಹಾಯ ಸೇರಿ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದ್ದು, ಈ ಯೋಜನೆಗಳ ಪಟ್ಟಿಗೆ ಉಚಿತ ಬಸ್ ಪಾಸ್ ಸೇರಿದೆ ಎಂದು ನುಡಿದರು.
ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮಾತನಾಡಿ, ರಾಜ್ಯದ ಶ್ರಮಿಕ ವರ್ಗದ ಬಹು ದಿನಗಳಿಂದ ಬಾಕಿ ಉಳಿದಿದ್ದ ಸವಲತ್ತುಗಳ ಅರ್ಜಿಗಳನ್ನು ಒಂದೇ ಬಾರಿಗೆ ಇತ್ಯರ್ಥ ಪಡಿಸುವ ಸಲುವಾಗಿ ಕಾರ್ಮಿಕ ಅದಾಲತ್ಗಳನ್ನು ನಡೆಸಲಾಗಿದೆ. ಕಾರ್ಮಿಕ ಅದಾಲತ್ಗೆ ಸಲ್ಲಿಕೆಯಾಗಿದ್ದ 3 ಲಕ್ಷಕ್ಕೂ ಅಧಿಕ ಅರ್ಜಿಗಳ ಪೈಕಿ ಸ್ಥಳದಲ್ಲಿಯೇ 2.97 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಒಟ್ಟಾರೆ 92 ಕೋಟಿ ರೂಪಾಯಿಗಳ ಸವಲತ್ತು ಮತ್ತು ಸಹಾಯಧನವನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಶ್ರಮಿಕ ವರ್ಗ ಮತ್ತು ಅವರ ಕುಟುಂಬ ವರ್ಗದ ಸಂಕ್ಷೇಮಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿ ಮಾಡಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿದ ಕಾರ್ಮಿಕ ಸಚಿವರು, 750 ಕಾರ್ಮಿಕ ಮಕ್ಕಳ ಉನ್ನತ ವ್ಯಾಸಂಗಕ್ಕೆ ತರಬೇತಿ ನೀಡಲಾಗುತ್ತಿದೆ. 2019 ಮತ್ತು 2022ರ ತಮ್ಮ ಅಧಿಕಾರದ ಅವಧಿಯಲ್ಲಿ ಒಟ್ಟಾರೆ 3,1619 ಕೋಟಿ ರೂ. ಸಹಾಯಧನವನ್ನು ವಿತರಿಸಲಾಗಿದ್ದು, ಇದು ಕಾರ್ಮಿಕ ಇಲಾಖೆ ಇತಿಹಾಸದಲ್ಲೇ ದಾಖಲೆ ಎಂದು ವಿವರಿಸಿದರು.
ರಾಜ್ಯದ ಕಾರ್ಮಿಕರ ಸಂಕ್ಷೇಮಕ್ಕಾಗಿ ಪ್ರತ್ಯೇಕ ವೆಬ್ಸೈಟ್ ರೂಪಿಸಿದ್ದು, ಇಂದು ಕರ್ನಾಟಕ ಕಾರ್ಮಿಕ ಇಲಾಖೆಗಾಗಿಯೇ ಪ್ರತ್ಯೇಕ ವೆಬ್ಸೈಟ್ ಹೊಂದಿರುವ ಎರಡನೇ ರಾಜ್ಯವಾಗಿದೆ ಎಂದರಲ್ಲದೆ, ಉಚಿತ ಬಸ್ ಪಾಸ್ ಜತೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಕಾರ್ಮಿಕರ ಮಕ್ಕಳಿಗೆ 10 ಸಾವಿರ ರೂ. ಪ್ರತಿಭಾ ಪುರಸ್ಕಾರ ನೀಡುವ ಯೋಜನೆಯನ್ನೂ ಜಾರಿಗೊಳಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕೆಎಸ್ಆರ್ಟಿಸಿ ಅಧ್ಯಕ್ಷ ಮತ್ತು ಶಾಸಕ ಕೆ. ಚಂದ್ರಪ್ಪ, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ಇಲಾಖೆ ಆಯುಕ್ತ ಅಕ್ರಂ ಪಾಷಾ, ಕಲ್ಯಾಣ ಕರ್ನಾಟಕ ಮಂಡಳಿಯ ಡಾ.ರಾಜ್ ಕುಮಾರ್, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯದರ್ಶಿ ಗುರು ಪ್ರಸಾದ್ ಎಂ.ಪಿ, ಜಂಟಿ ಕಾರ್ಯದರ್ಶಿ ಶಿವಪುತ್ರ, ಸಚಿವರ ಆಪ್ತ ಕಾರ್ಯದರ್ಶಿ ಮಂಜುನಾಥ್ ಬಳ್ಳಾರಿ ಸೇರಿ ಹಲವರು ಉಪಸ್ಥಿತರಿದ್ದರು.
2013ರಿಂದ 2018ರವರೆಗೆ 278 ಕೋಟಿ ರೂ. ಮಾತ್ರ ವ್ಯಯಿಸಲಾಗಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶ್ರಮಿಕರ ಕಲ್ಯಾಣಕ್ಕಾಗಿ 1,619 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ಇದು ರಾಜ್ಯದ ಕಾರ್ಮಿಕ ಇಲಾಖೆಯ ಇತಿಹಾಸದಲ್ಲೇ ಒಂದು ದಾಖಲೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ದೇಶದಲ್ಲೇ ಮೊದಲು ಎಂಬಂತಹ ಮೂರು ಹೊಸ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ.
| ಶಿವರಾಂ ಹೆಬ್ಬಾರ್, ಕಾರ್ಮಿಕ ಸಚಿವರು
ಇದನ್ನೂ ಓದಿ | PSI Scam | ಗದ್ದಲದಲ್ಲೇ ಸರ್ಕಾರದ ಉತ್ತರ, ತಾಳ್ಮೆ ಕಳೆದುಕೊಂಡ ಪ್ರಿಯಾಂಕ್ ಖರ್ಗೆ: ಚರ್ಚೆ ಮುಕ್ತಾಯ