ತುಮಕೂರು: 2023ರಲ್ಲಿ ನಾನು(CM Ibrahim) ಜೆಡಿಎಸ್ ರಾಜ್ಯ ಅಧ್ಯಕ್ಷನಾಗಿದ್ದೇನೆ, ಕುಮಾರಸ್ವಾಮಿ ಸಿಎಂ ಆಗುತ್ತಾರೆ. ಮುಸ್ಲಿಮರಿಗಿದ್ದ ಶೇ.4 ಮೀಸಲಾತಿಯನ್ನು ಬಿಜೆಪಿಯವರು ತೆಗೆದಿದ್ದಾರೆ. ಈ ಚುನಾವಣೆಯಲ್ಲಿ (Karnataka Election) ಕುಮಾರಸ್ವಾಮಿ(Kumaraswamy) ಮತ್ತೆ ಸಿಎಂ ಆಗಿ ಬಂದು ಆ ಮೀಸಲಾತಿಯನ್ನು ವಾಪಸ್ ಕೊಡಿಸುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಭರವಸೆ ನೀಡಿದರು.
ಶಿರಾ ನಗರದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇವತ್ತು ಅಪ್ಪಾಜಿಯವರಿಗೆ (ಎಚ್.ಡಿ.ದೇವೇಗೌಡ) 92 ವರ್ಷ. ಪಟ್ಟನಾಯಕನಹಳ್ಳಿ ಸ್ಫಟಿಕಪುರಿ ಸಂಸ್ಥಾನ ಮಠದಲ್ಲಿ ಪೂಜೆ ಮಾಡಿ, ಶಿರಾದಿಂದಲೇ ಪ್ರಚಾರ ಮಾಡುತ್ತೇನೆ ಎಂದಿದ್ದರು. ಹೀಗಾಗಿ ಇವತ್ತು ದೇವೇಗೌಡರು ಕ್ಷೇತ್ರದಿಂದ ಪ್ರಚಾರ ಆರಂಭಿಸಿದ್ದಾರೆ ಎಂದು ತಿಳಿಸಿದರು.
ಸೋನಿಯಾ ಗಾಂಧಿಗೆ ಮಗನ ಚಿಂತೆ, ಬಿಜೆಪಿಯವರಿಗೆ ಮೋದಿ ಚಿಂತೆ, ಆದರೆ ಕನ್ನಡಿಗರಿಗೆ ನಮ್ಮ ದೇವೇಗೌಡರ ಚಿಂತೆ. ಕಾಡುಗೊಲ್ಲ ಸಮುದಾಯದವರು ಮುಂದೆ ಬಂದು ಜೆಡಿಎಸ್‌ಗೆ ಸಪೋರ್ಟ್ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಏನು ಎಂದರೆ, ದೇವೇಗೌಡರು ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕೊಟ್ಟಿದ್ದರು. ಇವತ್ತು ದೇವೇಗೌಡ ಎಂಬ ವೃಕ್ಷದ ಬೀಜ ಬಿತ್ತನೆ ಬೀಜವೇ ಹೊರತು ಮಾರೋ ಬೀಜ ಅಲ್ಲ. ದೇವೇಗೌಡರ ಚಿಂತನೆಗಳನ್ನೇ ಇಟ್ಟುಕೊಂಡು ಅವರ ಮಗ ಕುಮಾರಸ್ವಾಮಿ ಹೋರಾಟ ಮಾಡುತ್ತಿದ್ದಾರೆ ಎಂದರು.
ಇಲ್ಲಿ ಮೂರು ಸಾವಿರ ಮುಸ್ಲಿಂ ಹೆಣ್ಣುಮಕ್ಕಳು ಬುರ್ಖಾ ಹಾಕಿಕೊಂಡು ಬಂದು ಕೂತಿದ್ದಾರೆ. ಕಾಂಗ್ರೆಸ್‌ನವರು ಮಹಿಳೆಯವರಿಗೆ 2000 ರೂಪಾಯಿ ಕೊಡುತ್ತೇನೆ ಎಂದಿದ್ದಾರೆ. ನಾನು ಸಿದ್ದರಾಮಯ್ಯರನ್ನು ಕೇಳಿದೆ, ಅತ್ತೆಗೆ ಕೊಡುತ್ತೀರೋ ಸೊಸೆಗೋ ಅಂತ. ಮನೆ ಯಜಮಾನಿಗೆ ಅಂದರು, ಅಲ್ಲಿಯೂ ಜಗಳ ಹಚ್ಚಿದರು ಎಂದು ವ್ಯಂಗ್ಯವಾಡಿದರು.
ರೈತ ಯುವಕನನ್ನು ಮದುವೆಯಾದರೆ ಹುಡುಗಿಗೆ ಸರ್ಕಾರದಿಂದ 2 ಲಕ್ಷ ರೂಪಾಯಿ ಕೊಡುವ ಯೋಜನೆಯನ್ನು ಕುಮಾರಸ್ವಾಮಿ ಮಾಡುತ್ತಾರೆ. ಇಂತಹ ಕಾರ್ಯಕ್ರಮ ಮಾಡಲು ಯಾವ ಮುಖ್ಯಮಂತ್ರಿಯಾದರೂ ಸಾಧ್ಯವೇ ಎಂದು ಚಿಂತನೆ ಮಾಡಿದ್ದಾರಾ? ರೈತರ ಮಕ್ಕಳ ಬಗ್ಗೆ ಯಾರಿಗಾದರೂ ಚಿಂತೆ ಇದೆಯಾ?, ಇನ್ನು ಆಟೋ ಚಾಲಕರಿಗೆ ಮಾಸಿಕ 2000 ರೂಪಾಯಿ ನೀಡುವುದಾಗಿ ಎಚ್‌ಡಿಕೆ ತಿಳಿಸಿದ್ದಾರೆ. ಜನರಿಗೆ ಆರೋಗ್ಯ ಕೆಟ್ಟರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತವಾಗಿ ನೀಡುವುದಾಗಿ ಘೋಷಿಸಿರುವುದಾಗಿ ತಿಳಿಸಿದರು.
ಇದನ್ನೂ ಓದಿ | BJP Karnataka: ಮೀನಿಗೆ ಗಾಳ ಹಾಕಿ ಕಾಯುವುದು ಪ್ರಾಮಾಣಿಕ ಕಾಯಕ: ಡಿ.ಕೆ. ಶಿವಕುಮಾರ್‌ಗೆ ಪ್ರಮೋದ್ ಮಧ್ವರಾಜ್ ತಿರುಗೇಟು
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜೆಡಿಎಸ್ ಅಭ್ಯರ್ಥಿ ಉಗ್ರೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್, ಮುಖಂಡರಾದ ಎಸ್.ಆರ್ ಗೌಡ, ಕಲ್ಕೆರೆ ರವಿಕುಮಾರ್ ಸೇರಿ ಹಲವು ಮುಖಂಡರು, ಕಾರ್ಯಕರ್ತರು ಇದ್ದರು.
ಇದನ್ನೂ ಓದಿ | Amit Shah: ಲಿಂಗಾಯತ, ಒಕ್ಕಲಿಗರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡುತ್ತೀರಾ?; ಕಾಂಗ್ರೆಸ್‌ಗೆ ಅಮಿತ್ ಶಾ ಪ್ರಶ್ನೆ
50 ಸಾವಿರ ರೂ. ದೇಣಿಗೆ ಕೊಟ್ಟ ಅಭಿಮಾನಿ
ಈ ಬಾರಿ ಶಿರಾದಲ್ಲಿ ಜೆಡಿಎಸ್ ಅಭ್ಯರ್ಥಿ ಉಗ್ರೇಶ್ ಅವರನ್ನು ಗೆಲ್ಲಿಸಬೇಕು ಎಂದು ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಸಿ.ಎಂ. ಇಬ್ರಾಹಿಂ ಅವರಿಗೆ ಅಭಿಮಾನಿ ಲಕ್ಕನಹಳ್ಳಿ ಮಂಜಣ್ಣ ಎಂಬುವವರು ಚುನಾವಣಾ ಖರ್ಚಿಗೆ 50 ಸಾವಿರ ರೂಪಾಯಿ ದೇಣಿಗೆ ನೀಡಿದರು. ಉಗ್ರೇಶ್ ಅಣ್ಣನಿಗೆ ಹಣ ಕೊಡಿ ಅಂತ ನನ್ನ ಬಳಿ ಅಭಿಮಾನಿ ಹಣ ಕೊಟ್ಟಿದ್ದಾರೆ. ಸಾಬ್ರು ಕಡೆಯಿಂದ ಹಣ ಕೊಟ್ಟರೆ ಒಳ್ಳೆಯದು ಆಗುತ್ತೆ ಎಂದು ಸಿ.ಎಂ. ಇಬ್ರಾಹಿಂ ಹೇಳಿದರು.