ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ (BJP-JDS Alliance) ಮಾಡಿಕೊಂಡು ಜಾತ್ಯತೀತ ಜನತಾದಳವು ಎನ್‌ಡಿಎ ಮಿತ್ರಕೂಟದ ಸದಸ್ಯ ಎಂದು ಅಧಿಕೃತವಾಗಿ ಘೋಷಣೆಯಾದ ಬಳಿಕ ಸಿ.ಎಂ. ಇಬ್ರಾಹಿಂ (CM Ibrahim) ಸಿಡಿದು ನಿಂತಿದ್ದಾರೆ. ಮೈತ್ರಿ ಮಾಡಿಕೊಂಡ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರ ವಿರುದ್ಧ ವಾಗ್ದಾಳಿ ನಡೆಸಿ, ಮೈತ್ರಿಯನ್ನು ಒಪ್ಪುವುದಿಲ್ಲ ಎಂದಿದ್ದಾರೆ. ಕೊನೆಗೆ ನಮ್ಮದೇ ಒರಿಜಿನಲ್ ಜೆಡಿಎಸ್ ಎಂದು ಘೋಷಿಸಿದ್ದಾರೆ. ಈ ಮೂಲಕ ಅವರು ಜೆಡಿಎಸ್‌ನಿಂದ ಉಚ್ಚಾಟನೆಗೆ ವೇದಿಕೆ ಸೃಷ್ಟಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಟ್ಯಾನರಿ ರಸ್ತೆಯ ಸಭಾಂಗಣದಲ್ಲಿ ನಡೆದ ಜೆಡಿಎಸ್ ಚಿಂತನ ಮಂಥನ ಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ವಿರೋಧಿಸುವ ಮಹಿಮಾ ಪಟೇಲ್ ಹಾಗೂ ಹಲವು ಮುಸ್ಲಿಂ ಮುಖಂಡರು ಭಾಗವಹಿಸಿದ್ದರು. ಈ ಸಭೆಯ ವೇದಿಕೆ ಮತ್ತು ಹೊರಗಡೆ ಹಾಕಿದ ಫ್ಲೆಕ್ಸ್‌ಗಳಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (CM Ibrahim Vs HDK) ಪೋಟೋ ಇರಲಿಲ್ಲ. ಆದರೆ, ಎಚ್.ಡಿ ದೇವೇಗೌಡರ ಫೋಟೊ ಇತ್ತು.
ಸಭೆಯಲ್ಲಿ ಮಾತನಾಡಿದ ಹಾಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು, ʻʻನಮ್ಮದೇ ಒರಿಜಿನಲ್ ಜೆಡಿಎಸ್. ನಾನೇ ಅದರ ಅಧ್ಯಕ್ಷನಾಗಿದ್ದೇನೆ. ಇದು ನನ್ನ ಮನೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ನನ್ನನ್ನು ಯಾರಿಂದಲೂ ತೆಗೆಯಲು ಸಾಧ್ಯವಿಲ್ಲʼʼ ಎಂದು ಹೇಳಿದರು.
ʻʻನಿತೀಶ್ ಕುಮಾರ್, ಶರದ್ ಪವಾರ್ ಸೇರಿದಂತೆ ಕಾಂಗ್ರೆಸ್ ನವರೂ ಮಾತನಾಡಿದ್ದಾರೆ. ಚಿಂತನ ಮಂಥನ ಸಭೆಯ ವಿವರಗಳನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ತಿಳಿಸುತ್ತೇನೆ. ಹೊಸ ಕೋರ್ ಕಮಿಟಿ ರಚನೆ ಮಾಡುತ್ತೇನೆ. ಅದರ ಸಭೆಯನ್ನು ಕರೆಯುತ್ತೇನೆ. ನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆʼʼ ಎಂದು ಘೋಷಿಸಿದರು.
ʻಎಚ್ ಡಿ ಕುಮಾರಸ್ವಾಮಿ ಅವರು ಯಾರ ಅಭಿಪ್ರಾಯವನ್ನೂ ಕೇಳದೆ ಏಕಾಏಕಿ ದೆಹಲಿಗೆ ಹೋಗಿ ಅಮಿತ್ ಶಾ ಜೊತೆಗೆ ಫೋಟೊ ತೆಗೆಸಿ ಮೈತ್ರಿ ಘೋಷಣೆ ಮಾಡಿದ್ದಾರೆ. ಎರಡು ದಿನ ಮೊದಲು ನಾನೇ ಜೆಡಿಎಸ್ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ನಡೆಯಲ್ಲಿ ನಂಬಿಕೆ ಇಟ್ಟ ಪಕ್ಷ. ನಾವು ಅಲ್ಲಿ ಹೋಗೋದು ಅಲ್ಲ, ಅವರು ಇಲ್ಲಿ ಬರಲಿ ಎಂದಿದ್ದೆʼʼ ಎಂದು ಹೇಳಿದರು.
ʻʻನಾನು ಯಾವುದೇ ಕಾರಣಕ್ಕೂ ಮೈತ್ರಿ ಒಪ್ಪಲ್ಲ. ಎಂಎಲ್‌ಎ ಗಳು ನನ್ನ ಸಂಪರ್ಕದಲ್ಲಿ ಇದ್ದಾರೆ. ದೇವೇಗೌಡರ ಜೊತೆಗೆ ಮಾತನಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆʼʼ ಎಂದರು. ಜಿಲ್ಲಾ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.
ʻʻ92 ವಯಸ್ಸಾಗಿದೆ ದೇವೇಗೌಡರೇ ತಪ್ಪು ಹೆಜ್ಜೆ ಇಡಬೇಡಿʼʼ ಎಂದು ಹೇಳಿದ ಸಿಎಂ ಇಬ್ರಾಹಿಂ ಅವರು, ʻʻದೇವೇಗೌಡರನ್ನು ಪ್ರಧಾನ ಮಂತ್ರಿ ಮಾಡಿದ್ದೇ ಜಾತ್ಯತೀತ ತತ್ವ ಉಳಿಸಲು. ಒಂದು ವರ್ಷ ದೆಹಲಿಯಲ್ಲಿ ಇದ್ದಿದ್ದರೆ ರಾಮಮಂದಿರ ವಿವಾದ ಕೂಡಾ ಪರಿಹಾರ ಆಗ್ತಿತ್ತುʼʼ ಎಂದರು. ʻʻಸಿದ್ಧಾಂತವಾಗಿ ಬಿಜೆಪಿ ಜೊತೆಗೆ ಭಿನ್ನಾಭಿಪ್ರಾಯ ಇದೆ. ವೈಯಕ್ತಿಕವಾಗಿ ಅಮಿತ್ ಶಾ ಜೊತೆಗೆ ದ್ವೇಷ ಇಲ್ಲʼʼ ಎಂದು ಸ್ಪಷ್ಟಪಡಿಸಿದರು.
ʻʻಮುಸ್ಲಿಮರನ್ನು ನಂಬಿ ರಾಜಕೀಯ ಮಾಡಿಲ್ಲ ಅಂತ ಕುಮಾರಸ್ವಾಮಿ ಹೇಳುತ್ತಾರೆ. ಆದರೆ ಯಾರನ್ನು ನಂಬಿ ರಾಜಕೀಯ ಮಾಡಿದ್ದರೂ ಅವರೇ ಕೈ ಬಿಟ್ಟಿದ್ದಾರೆ. ಈಗ ಒಕ್ಕಲಿಗರೂ ಜೆಡಿಎಸ್ ಕೈ ಬಿಡುತ್ತಿದ್ದಾರೆʼʼ ಎಂದು ನೆನಪಿಸಿದರು.
ʻʻಒಂದು ವರ್ಷ ರಾತ್ರಿ ಹಗಲು ತಿರುಗಾಡಿದ್ದೇನೆ. ಸಮಾಜದವರ ಕಾಲು ಹಿಡಿದು ಓಟ್ ಹಾಕಿಸಿದ್ದೇನೆ. ಇದಕ್ಕೆ ನೀವು ಕೊಡುವ ಪ್ರತಿ ಉಪಕಾರನಾ ಇದುʼʼ ಎಂದು ಎಚ್ಡಿಕೆ ವಿರುದ್ಧ ಕಿಡಿಕಾರಿದ ಇಬ್ರಾಹಿಂ ಅವರು, ಮಾನ ಇಲ್ಲದ ಸ್ಥಾನ ನನಗೆ ಬೇಡ. ನನಗೆ ಸ್ಥಾನ ಬೇಡ ಮಾನ ಬೇಕು. ನಮಗೆ ಸಂಸ್ಕಾರ ಇದೆ. ಅದನ್ನು ಇಟ್ಟುಕೊಂಡು ಕೆಲಸ ಮಾಡುತ್ತೇನೆʼʼ ಎಂದು ಹೇಳಿದರು.
ಕುಮಾರಸ್ವಾಮಿ ಮೇಲೆ ಕ್ರಮ ಕೈಗೊಳ್ಳುತ್ತಾರಾ ಇಬ್ರಾಹಿಂ!
ನಾನು ಇವತ್ತು ಸಭೆ ಮಾಡಿದ್ದು ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ಇರುವ ಪವರ್‌ನ ಅಧಾರದಲ್ಲೇ. ಸಭೆಯಲ್ಲಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಬಂದಿದೆ. ಆದರೆ, ಇದಕ್ಕೆ ಕಾಲ ಪಕ್ವ ಆಗಿಲ್ಲ ಎಂದರು. ಪಕ್ಷ ಬಿಟ್ಟು ಹೋಗುತ್ತೀರಾ ಎಂಬ ಪ್ರಶ್ನೆಗೆ ನಾನು ಯಾಕೆ ಪಕ್ಷ ಬಿಟ್ಟು ಹೋಗಲಿ ಎಂದು ಕೇಳಿದರು. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗೆದ್ದಿದ್ದು ಮುಸ್ಲಿಮರ ಓಟಿನಿಂದ ಎಂದು ನೆನಪಿಡಬೇಕು ಎಂದು ಹೇಳಿದರು.
ದೇವೇಗೌಡರ ಮನಸ್ಸಿನಲ್ಲಿ ನೋವಿದೆ ಎಂಬ ಇಬ್ರಾಹಿಂ
ʻʻದೇವೇಗೌಡರು ನಿಮ್ಮ ತಂದೆ ಆಗಿರಬಹುದು. ಆದರೆ ಅವರು ರಾಷ್ಟ್ರದ ನಾಯಕರು. ಅವರ ಮನಸ್ಸಿನಲ್ಲಿ ನೋವಿದೆ. ಸ್ವಯಂ ನಿರ್ಣಯ ತೆಗೆದುಕೊಳ್ಳಲು ಆಗ್ತಿಲ್ಲ ಅವರಿಗೆ. ಕೇರಳ, ತಮಿಳುನಾಡು, ಮಹಾರಾಷ್ಟ್ರದ ಎಲ್ಲಾ ನಾಯಕರು ಜೆಡಿಎಸ್ ಬಿಜೆಪಿ ಜತೆ ಹೋಗಬಾರದು ಎಂಬ ತೀರ್ಮಾನ ಮಾಡಿದ್ದಾರೆ. ನಾನು ಇಲ್ಲಿನ 19 ಶಾಸಕರನ್ನು ಮಾತನಾಡಿಸುತ್ತೇನೆ. ನಾನೇ ಕೋರ್ ಕಮಿಟಿ ಮಾಡುತ್ತೇನೆ.. ಸಾಬ್ರು ಪುಕ್ಕಟೆ ಸಿಕ್ಕಿಲ್ಲ ಎಂದು ಪ್ರೂವ್ ಮಾಡುತ್ತೇವೆʼʼ ಎಂದು ಹೇಳಿದರು.
ಜಾತ್ಯತೀತರ ಜತೆ ಹೋಗಬೇಕು ನಾವು ಎನ್ನುವುದು ಇಬ್ರಾಹಿಂ ದೂರದೃಷ್ಟಿ!
ನಾವು ಯಾವ ಕಾರಣಕ್ಕೂ ಬಿಜೆಪಿ ಜತೆ ಹೋಗಬಾರದು, ಜಾತ್ಯತೀತರ ಜತೆ ಹೋಗಬೇಕು ಎನ್ನುವುದು ಎಲ್ಲರ ಅಭಿಪ್ರಾಯ ಎಂದು ಹೇಳುವ ಮೂಲಕ ಸಿ.ಎಂ ಇಬ್ರಾಹಿಂ ಅವರು ತಾವು ಕಾಂಗ್ರೆಸ್‌ಗೆ ಬೆಂಬಲ ಕೊಡುವ ಸಾಧ್ಯತೆ ಕಡೆಗೆ ಬೆಟ್ಟು ಮಾಡಿದರು.
ಭವಿಷ್ಯದ ದೃಷ್ಟಿಯಿಂದ ನಿರ್ಧಾರ ಮಾಡಬೇಕು ಎಂದ ಮಹಿಮಾ ಪಟೇಲ್
ʻʻಜನತಾದಳದ ಹೆಸರೇ ಸಮಸ್ಯೆ ಇದ್ದ ಹಾಗೆ. ದಳ ದಳ ಅಂತ ಆಗುತ್ತಾ ಹೋಗುತ್ತದೆ. ಆದರೆ, ಭವಿಷ್ಯದ ದೃಷ್ಟಿಯಿಂದ ನಾವು ನಿರ್ಧಾರ ಮಾಡಬೇಕು. ಹೊಸ ಭವಿಷ್ಯ ಕರ್ನಾಟಕದಲ್ಲಿ ಕಟ್ಟೋಕೆ ಈಗ ಸಮಯ ಬಂದಿದೆ. ಬಿಜೆಪಿ, ಕಾಂಗ್ರೆಸ್ ಹೊರತಾದ ಪ್ರತ್ಯೇಕ ಪಕ್ಷ ಕಟ್ಟುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕುʼʼ ಎಂದು ಮಾಜಿ ಸಿಎಂ ಜಿ.ಎಚ್. ಪಟೇಲ್ ಅವರ ಪುತ್ರ ಮಹಿಮಾ ಪಟೇಲ್ ಹೇಳಿದರು.
ʻʻಇಂತಹ ರಾಜಕೀಯ ಬೇಡ ಅಂತ ಅನೇಕ ಜನರು ದೂರ ಇದ್ದಾರೆ. ಇಂತಹವರನ್ನ ಕರೆದುಕೊಂಡು ಬಂದರೆ ಒಳ್ಳೆ ಪಕ್ಷ ಕಟ್ಟಬಹುದು. ಹೀಗಾಗಿ ನಾವೆಲ್ಲ ಒಟ್ಟಾಗಿ ಮುಂದೆ ಹೋಗೋ ಅವಶ್ಯಕತೆ ಇದೆʼʼ ಎಂದು ಹೇಳುವ ಮೂಲಕ ಹೊಸ ಪಕ್ಷ ಕಟ್ಟುವ ಸಲಹೆ ನೀಡಿದರು ಮಹಿಮಾ ಪಟೇಲ್.
ʻʻಕುಮಾರಸ್ವಾಮಿ, ಮೋದಿ, ರಾಹುಲ್ ಗಾಂಧಿ ಎಲ್ಲರು ನಮ್ಮ ಜೊತೆ ಬರಲಿ. ನಾವು ಅವರ ಜೊತೆ ಹೋಗೋದು ಬೇಡ. ನಾವು ಒಟ್ಟಾಗಿ ನಿಲ್ಲೋಣ. ಜಿಲ್ಲೆ ಜಿಲ್ಲೆ ಪ್ರವಾಸ ಮಾಡಿ ಹೊಸ ಸಂಚಲನ ಮುಡಿಸೋ ವ್ಯವಸ್ಥೆ ಕಟ್ಟೋಣ. ಲೋಕಸಭೆ ನಾವು ಗುರಿಯಾಗಿಸೋದು ಬೇಡ. 2028 ಚುನಾವಣೆ ಗುರಿ ಇಟ್ಟು ಕೆಲಸ ಮಾಡೋಣʼʼ ಎಂದರು ಮಹಿಮಾ ಪಟೇಲ್.
ಇದನ್ನೂ ಓದಿ: BJP-JDS alliance: ದಸರಾ ನಂತರ ಸೀಟು ಹಂಚಿಕೆಯ ಚರ್ಚೆಯಾಗಲಿದೆ: ಎಚ್.ಡಿ.ದೇವೇಗೌಡ
ಬೇಕಿದ್ದರೆ ಕುಮಾರಸ್ವಾಮಿ ಅವರನ್ನೇ ಕಿತ್ತು ಹಾಕಿ ಎಂದ ಶಾಹಿದ್
ʻʻಜಾತ್ಯತೀತ ಎಂಬ ಸಿದ್ಧಾಂತ ಅಂತ ಒಪ್ಪಿ ನಾನು ಪಕ್ಷಕ್ಕೆ ಸೇರಿದೆ. ಕುಮಾರಸ್ವಾಮಿ, ದೇವೇಗೌಡರ ಮೇಲೆ ಯಾವುದೇ ಬೇಜಾರು ಇಲ್ಲ. ಆದರೆ ಅವರು ಸೇರಿಕೊಂಡಿರುವ ಸಿದ್ಧಾಂತದ ಮೇಲೆ ಅಸಮಾಧಾನ ಇದೆ. ಮೈಸೂರಿನ ಅಲ್ಪಸಂಖ್ಯಾತ ಘಟಕ ಈಗಾಗಲೇ ರಾಜೀನಾಮೆ ಕೊಡಲಾಗಿದೆʼʼ ಎಂದು ಮೈಸೂರಿನ ಜೆಡಿಎಸ್ ಮುಖಂಡ ಶಾಹಿದ್ ಹೇಳಿದರು.
ʻʻಇಬ್ರಾಹಿಂ ಅವರು ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ಬೇಕಾದ್ರೆ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಕಿತ್ತುಹಾಕಿ. ನಿಖಿಲ್ ಅಥವಾ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕುʼʼ ಎಂದು ಅವರು ಆಗ್ರಹಿಸಿದರು.