Site icon Vistara News

ಮಾಸ್ಕ್‌ ಕಡ್ಡಾಯ But ದಂಡ ಇಲ್ಲ: CM ಅಧ್ಯಕ್ಷತೆಯ ಸಭೆಯಲ್ಲಿ “ಮಹತ್ವದ” ನಿರ್ಧಾರ !

cm basavaraj

ಬೆಂಗಳೂರು: ದೇಶದ ವಿವಿಧೆಡೆ ಕೊರೋನಾ(Covid-19) ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ 4ನೇ ಅಲೆಯನ್ನು ತಡೆಗಟ್ಟಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಧ್ಯಕ್ಷತೆಯಲ್ಲಿ “ಮಹತ್ವದ” ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್‌ (Sudhakar) ಹೇಳಿದ್ದಾರೆ. ಅದೇನೆಂದರೆ ರಾಜ್ಯದಲ್ಲಿ ಇನ್ನುಮುಂದೆ ಮಾಸ್ಕ್‌ ಧಾರಣೆ ಕಡ್ಡಾಯವಾಗಿರುತ್ತದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೂ ಕಡ್ಡಾಯವಾಗಿರುತ್ತದೆ. ಆದರೆ ಪಾಲನೆ ಮಾಡದಿದ್ದರೆ ದಂಡ ವಿಧಿಸುವುದಿಲ್ಲ !

4ನೇ ಅಲೆಯನ್ನು ತಡೆಯುವ ಕುರಿತು ನಡೆದ ಸಭೆಯಲ್ಲಿ ಡಾ. ಕೆ. ಸುಧಾಕರ್‌, ಕಂದಾಯ ಸಚಿವ ಆರ್‌. ಅಶೋಕ್‌, ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರು, ಸದಸ್ಯರೆಲ್ಲರೂ ಉಪಸ್ಥಿತರಿದ್ದರು. ಏಪ್ರಿಲ್‌ 27ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರ ವಿಡಿಯೋ ಕಾನ್ಫರೆನ್ಸ್‌ ಸಭೆ ನಡೆಯಲಿದೆ. ಈಗಾಗಲೆ ದೆಹಲಿ ಸೇರಿ ಅನೇಕ ಕಡೆಗಳಲ್ಲಿ ಮಾಸ್ಕ್‌ ಕಡ್ಡಾಯ ಸೇರಿ ಕೋವಿಡ್‌ ನಿಯಮಾವಳಿಗಳನ್ನು ಕಠಿಣಗೊಳಿಸಲಾಗಿದೆ. ರಾಜ್ಯದಲ್ಲಿ ಈಗಾಗಲೆ ಕಡ್ಡಾಯ ಮಾಸ್ಕ್‌ ಹಾಗೂ ವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕೆಂಬ ಆದೇಶ ಜಾರಿಯಲ್ಲಿದೆ. ಅದನ್ನು ಕಡ್ಡುನಿಟ್ಟಾಗಿ ಜಾರಿಗೆ ತರುವ ಹಾಗೂ ಪಾಲಿಸದಿರುವವರಿಗೆ ದಂಡ ವಿಧಿಸುವ ನಿರ್ಧಾರವನ್ನು ಸೋಮವಾರದ ಸಭೆಯಲ್ಲಿ ಕೈಗೊಳ್ಳಬಹುದು ಎಂಬ ನಿರೀಕ್ಷೆ ಇತ್ತು.

ಇದನ್ನೂ ಓದಿ | ನಡುರಾತ್ರಿ ಏನಾಗುತ್ತೆ ಹೃದಯಕ್ಕೆ? ಜಯದೇವ ಆಸ್ಪತ್ರೆ ಹೊರಗೆಡಹಿದ ಸತ್ಯ

ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಡಾ. ಕೆ. ಸುಧಾಕರ್‌ ಮಾಹಿತಿ ನೀಡಿದರು. “ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಮೊದಲನೆಯದಾಗಿ ಎಲ್ಲರೂ ಮಾಸ್ಕ್‌ ಧಾರಣೆಯನ್ನು ಕಡ್ಡಾಯವಾಗಿ ಮಾಡಬೇಕು. ಅದರಲ್ಲೂ ಜನಸಂದಣಿಯಿರುವ ಪ್ರದೇಶಗಳು ಮತ್ತು ಒಳಾಂಗಣದಲ್ಲಿ ಮಾಸ್ಕ್‌ ಧಾರಣೆ ಕಡ್ಡಾಯವಾಗಿರುತ್ತದೆ. ಜತೆಗೆ ಎಲ್ಲರೂ ವೈಯಕ್ತಿಕ ಅಂತರವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಈ ಕುರಿತು ಸೋಮವಾರ ಸಂಜೆಯೊಳಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದರು. ಮುಂದುವರಿದು, ಮಾಸ್ಕ್‌ ಧಾರಣೆ, ವೈಯಕ್ತಿಕ ಅಂತರ ಕಡ್ಡಾಯವಾಗಿದ್ದರೂ, ಪಾಲನೆ ಮಾಡದಿದ್ದರೆ ದಂಡವನ್ನು ವಿಧಿಸಲಾಗುವುದಿಲ್ಲ. ಸದ್ಯಕ್ಕೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಸುಧಾಕರ್‌ ತಿಳಿಸಿದರು.

ಜನಸಾಮಾನ್ಯರಿಗೆ ಮಾತ್ರ ಕೋವಿಡ್‌ ನಿಯಮವನ್ನು ಕಡ್ಡಾಯಗೊಳಿಸಿ ರಾಜಕೀಯ ಪಕ್ಷಗಳು ಮಾತ್ರ ಬೃಹತ್‌ ಸಭೆ ಸಮಾರಂಭಗಳನ್ನು ಆಯೋಜಿಸುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಸುಧಾಕರ್‌, ರಾಜಕೀಯ ಪಕ್ಷಗಳಿಗೂ ಇದೇ ಮಾರ್ಗಸೂಚಿ ಅನ್ವಯವಾಗುತ್ತದೆ. ಆರೋಗ್ಯದ ಹಿತದೃಷ್ಟಿಯಿಂದ ಈ ಮಾರ್ಗಸೂಚಿ ಪಾಲನೆ ಮಾಡುವುದು ಒಳ್ಳೆಯದು ಎಂದಷ್ಟೆ ಹೇಳಿದರು.

ರಾಜ್ಯದ ಇತರೆಡೆಯ ಹೋಲಿಕೆಯಲ್ಲಿ ಬೆಂಗಳೂರಿನಲ್ಲಿ ಸೋಮವಾರ ಕೋವಿಡ್‌ ಪಾಸಿಟಿವಿಟಿ ದರ ಹೆಚ್ಚಿದೆ. 1.9% ಪಾಸಿಟಿವಿಟಿ ದರ ಇರುವುದರಿಂದ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವುದು ಮುಖ್ಯವಾಗಿದೆ. ಸೋಮವಾರ ಸಂಜೆಯೊಳಗೆ ಬಿಬಿಎಂಪಿ ವ್ಯಾಪ್ತಿಗೆ ನಿರ್ದಿಷ್ಟವಾಗಿ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುತ್ತದೆ ಎಂದು ಸುಧಾಕರ್‌ ತಿಳಿಸಿದರು.

ಮುಂಜಾಗ್ರತಾ ಲಸಿಕೆ ಪಡೆಯಿರಿ

ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿರುವಂತೆ, ಲಸಿಕೆ ಪಡೆಯದವರಲ್ಲಿ ಕೋವಿಡ್‌ ಲಕ್ಷಣಗಳು ಗಂಭೀರವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಮುಂಜಾಗ್ರತೆ ದೃಷ್ಟಿಯಿಂದ ಉಚಿತವಾಗಿ ನೀಡಲಾಗುತ್ತಿರುವ ಮೂರನೇ ಡೋಸ್‌ ಲಸಿಕೆಯನ್ನು ಎಲ್ಲರೂ ಪಡೆಯಬೇಕು ಎಂದು ಸುಧಾಕರ್‌ ತಿಳಿಸಿದರು. ಸದ್ಯ ದಕ್ಷಿಣ ಕೊರಿಯಾ, ಥೈಲೆಂಡ್‌, ಜಪಾನ್‌ನಲ್ಲಿ ಸೋಂಕು ಹೆಚ್ಚಾಗುತ್ತಿದೆ. ಈ ದೇಶಗಳಿಂದ ಬರುತ್ತಿರುವ ಪ್ರಯಾಣಿಕರ ಮೇಲೆ ವಿಶೇಷ ನಿಗಾ ವಹಿಸಲಾಗುತ್ತದೆ. ಅವರ ಸಂಪರ್ಕ ಮಾಹಿತಿ ಸಂಗ್ರಹಿಸಿ, ಮನೆಗೆ ತೆರಳಿದ ನಂತರವೂ ಟೆಲಿ ಮಾನಿಟರಿಂಗ್‌ ಮಾಡಲಾಗುತ್ತದೆ.

ಈಗ ಭಾರತದಲ್ಲಿ ಲಭಿಸಿರುವುದು ಹೊಸ ಕೋವಿಡ್‌ ರೂಪಾಂತರ ಎಂಬುದು ಗೊತ್ತಿಲ್ಲ. ಜಿನೋಮಿಕ್‌ ವರದಿ ಬಂದ ನಂತರವಷ್ಟೆ ಇದರ ಬಗ್ಗೆ ತಿಳಿಯುತ್ತದೆ. ಈಗಾಗಲೆ ಕರ್ನಾಟಕದಲ್ಲಿ ಪ್ರತಿದಿನ 10 ಸಾವಿರದವರೆಗೆ ಪರೀಕ್ಷೆ ನಡೆಸುತ್ತಿದ್ದೇವೆ. ರೋಗದ ಲಕ್ಷಣ ಕಂಡುಬರುವವರಿಗೆ ಪರೀಕ್ಷೆ ಮಾಡಬೇಕು ಎಂಬುದು ಕೇಂದ್ರ ಸರ್ಕಾರದ ಮಾರ್ಗಸೂಚಿ, ಅದನ್ನು ಪಾಲನೆ ಮಾಡುತ್ತಿದ್ದೇವೆ ಎಂದರು.

ನೆರೆ ರಾಜ್ಯಗಳಲ್ಲಿ ಕೋವಿಡ್‌ ಸೋಂಕು ಹೆಚ್ಚಿರುವುದರಿಂದ ಅಲ್ಲಿಂದ ಆಗಮಿಸುವವರ ಮೇಲೆ ನಿಗಾ ವಹಿಸಲಾಗುತ್ತದೆಯೆ ಎಂಬ ಕುರಿತು ಪ್ರತಿಕ್ರಿಯಿಸಿ, ಗಡಿ ಭಾಗಗಳ ಕುರಿತು ಇನ್ನೂ ನಿರ್ಧಾರ ಮಾಡಿಲ್ಲ. ಏಪ್ರಿಲ್‌ 27ಕ್ಕೆ ಪ್ರಧಾನ ಮಂತ್ರಿ ವಿಡಿಯೋ ಸಭೆ ಇದೆ. ಎಲ್ಲ ರಾಜ್ಯಗಳ ಸಿಎಂ, ಆರೋಗ್ಯ ಸಚಿವರ ಜತೆ ಸಂವಾದ ಇರುತ್ತದೆ. ಈ ಸಭೆಯಲ್ಲಿ ಪ್ರಧಾನಿಯವರು ಮಾರ್ಗದರ್ಶನ ಮಾಡುತ್ತಾರೆ. ಆನಂತರ ನಾವು ಮತ್ತೊಂದು ಸಭೆ ನಡೆಸುತ್ತೇವೆ ಎಂದರು.

ಇದನ್ನೂ ಓದಿ | Explainer: ಭಾರತದ ಮಿಲಿಟರಿ ವೆಚ್ಚ ರಷ್ಯಾಕ್ಕಿಂತಲೂ ಹೆಚ್ಚು!

Exit mobile version