ಬೆಂಗಳೂರು: ಪತ್ರಕರ್ತರಿಗೆ ದೀಪಾವಳಿ ಉಡುಗೊರೆ ಜತೆಗೆ ಲಂಚ ನೀಡಲಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಇದು ಕಾಂಗ್ರೆಸ್ಸಿನ ಟೂಲ್ ಕಿಟ್ ಪರಿಣಾಮ ಎಂದಿದ್ದಾರೆ.
ಸುಳ್ಳನ್ನು ಸೃಷ್ಟಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ನಾನು ಯಾರಿಗೂ ಹಣ ನೀಡುವಂತೆ ಸೂಚನೆಯನ್ನು ನೀಡಿಲ್ಲ. ಕಾಂಗ್ರೆಸ್ ಇದ್ದಾಗ ಹಲವಾರು ಜನರಿಗೆ ಏನೇನು ಉಡುಗೊರೆಗಳನ್ನು ನೀಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಪತ್ರಿಕೆಗಳಲ್ಲಿ ವರದಿಯೂ ಆಗಿದೆ. ಐ ಫೋನ್, ಲ್ಯಾಪ್ಟಾಪ್, ಬಂಗಾರದ ನಾಣ್ಯಗಳನ್ನೇ ಕೊಟ್ಟಿದ್ದಾರೆ.
ಇವರಿಗೆ ಮಾತನಾಡಲು ಯಾವ ನೈತಿಕ ಹಕ್ಕೂ ಇಲ್ಲ. ಯಾರೋ ಒಬ್ಬರು ಲೋಕಾಯುಕ್ತಕ್ಕೆ ದೂರನ್ನು ನೀಡಿದ್ದು, ತನಿಖೆಯಾಗುತ್ತದೆ. ಇದರ ಅರ್ಥ ಎಲ್ಲ ಪತ್ರಕರ್ತರು ಉಡುಗೊರೆಯನ್ನು ಪಡೆದಿದ್ದಾರೆ ಎಂದು ವ್ಯಾಖ್ಯಾನ ಮಾಡುವುದು ಸರಿಯಲ್ಲ. ಕಾಂಗ್ರೆಸ್ ವಕ್ತಾರ ಬಹಳ ಕೆಟ್ಟದಾಗಿ ಅದನ್ನು ವ್ಯಾಖ್ಯಾನ ಮಾಡಿದ್ದು ಅದನ್ನು ನಾನು ಖಂಡಿಸುತ್ತೇನೆ. ಉಡುಗೊರೆ ನೀಡುವ ಬಗ್ಗೆ ನಾನು ಯಾರಿಗೂ ಸೂಚನೆ ನೀಡಿಲ್ಲ. ಲೋಕಾಯುಕ್ತ ತನಿಖೆಯಾಗಲಿ ಎಂದಿದ್ದಾರೆ.
ಕಾಂಗ್ರೆಸ್‌ಗೆ ನೋಟಿಸ್:
ಪತ್ರಕರ್ತರಿಗೆ ಹಣ ನೀಡಿದ್ದಾಗಿ ಟ್ವೀಟ್ ಮಾಡಿದ್ದ ಕಾಂಗ್ರೆಸ್‌ಗೆ ಸಿಎಂ ಕಚೇರಿ ವತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಈ ರೀತಿ ಆರೋಪಕ್ಕೆ ಸಾಕ್ಷ್ಯಾಧಾರ ನೀಡಿ ಅಥವಾ ಮುಂದಿನ ಕಾನೂನು ಕ್ರಮಕ್ಕೆ ಸಿದ್ಧವಾಗಿ ಎಂದು ತಿಳಿಸಲಾಗಿದೆ.
ಇದನ್ನೂ ಓದಿ | ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ ಹೆಸರಿನಲ್ಲಿ ಲಂಚ ಆರೋಪ: ರಾಜಕೀಯ ನಾಯಕರ ಪ್ರತಿಕ್ರಿಯೆ ಏನು?