Site icon Vistara News

CM Siddaramaiah @76: ಸಿಎಂ ಸಿದ್ದರಾಮಯ್ಯ 76ನೇ ಹುಟ್ಟುಹಬ್ಬ ಇಂದು; ಇವರ ಬಗ್ಗೆ 18 ವಿಶೇಷ ಸಂಗತಿಗಳು ಇಲ್ಲಿವೆ

cm siddaramiah birthday

ಬೆಂಗಳೂರು: ಸಿಎಂ ಸಿದ್ದರಾಯಯ್ಯ (CM Siddaramaiah @76) ಅವರ 76ನೇ ಜನ್ಮದಿನವಿಂದು. ಪ್ರಸ್ತುತ ದೆಹಲಿಯಲ್ಲಿರುವ ಸಿದ್ದರಾಮಯ್ಯ (CM Siddaramaiah birthday), ಪಕ್ಷದ ಹೈಕಮಾಂಡ್‌ ಸಭೆ, ಪ್ರಧಾನಿ ಮೋದಿಯವರ (pm Narendra Modi) ಭೇಟಿ ಮುಂತಾದ ಕಾರ್ಯಕ್ರಮಗಳಲ್ಲಿ ವ್ಯಸ್ತರಾಗಿದ್ದಾರೆ. ರಾಜ್ಯದ ಜನಪ್ರಿಯ ಸಿಎಂ ಬಗೆ ಕೆಲವು ಸಂಗತಿಗಳು ಇಲ್ಲಿವೆ:

1. ಸಿದ್ದರಾಮಯ್ಯ ಅವರು ರಾಜ್ಯದ 24ನೇ ಮುಖ್ಯಮಂತ್ರಿ. ಅವರು ದೇವರಾಜ್ ಅರಸ್ (1972-1980) ನಂತರ ಪೂರ್ಣಾವಧಿಯ ಅಧಿಕಾರವನ್ನು ಪೂರ್ಣಗೊಳಿಸಿ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದ ಮೊದಲ ಮುಖ್ಯಮಂತ್ರಿ ಕೂಡ.

2. ರಾಜ್ಯದಲ್ಲಿ 13 ಬಜೆಟ್ ಮಂಡಿಸಿದ ಏಕೈಕ ವ್ಯಕ್ತಿ ಸಿದ್ದರಾಮಯ್ಯ. ರಾಜ್ಯದಲ್ಲಿ ಎರಡು ಬಾರಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಏಕೈಕ ನಾಯಕ ಕೂಡ ಇವರು.

3. ಮೈಸೂರಿನ ವರುಣಾ ಹೋಬಳಿಯ ಸಿದ್ಧರಾಮನಹುಂಡಿಯಲ್ಲಿ 1948ರ ಆಗಸ್ಟ್ 12ರಂದು ಜನಿಸಿದರು. ಇವರ ತಂದೆ ಸಿದ್ಧರಾಮೇಗೌಡ, ತಾಯಿ-ಬೋರಮ್ಮ. ಚಿಕ್ಕಂದಿನಲ್ಲೇ ಜಾನಪದ ನೃತ್ಯ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯಗಳನ್ನು ಕಲಿತಿದ್ದಾರೆ. ಹತ್ತನೇ ವರ್ಷದವರೆಗೆ ಶಾಲೆಗೆ ಹೋಗದ ಸಿದ್ದರಾಮಯ್ಯ, ನಂತರ ನೇರವಾಗಿ ಐದನೇ ತರಗತಿಗೆ ಶಾಲೆಗೆ ಪ್ರವೇಶ ಪಡೆದರು.

4. ಸಿದ್ದರಾಮಯ್ಯಗೆ ಒಬ್ಬ ಅಣ್ಣ, ಇಬ್ಬರು ಅಕ್ಕ, ಇಬ್ಬರು ಕಿರಿಯ ಸಹೋದರರು ಇದ್ದಾರೆ. ತಮ್ಮ ಕುಟುಂಬದಿಂದ ಪದವೀಧರರಾಗಿರುವ ಏಕೈಕ ವ್ಯಕ್ತಿ ಸಿದ್ದರಾಮಯ್ಯ. ಅವರ ಸಹೋದರ ಸಹೋದರಿಯರಲ್ಲಿ ಯಾರೂ 10ನೇ ತರಗತಿಗಿಂತ ಹೆಚ್ಚು ಓದಿಲ್ಲ.

5. ಸಿದ್ದರಾಮಯ್ಯನವರ ತಂದೆ ಅವರು ವೈದ್ಯರಾಗಬೇಕೆಂದು ಬಯಸಿದ್ದರು. ಆದರೆ ಎರಡನೇ ಪಿಯುಸಿಯಲ್ಲಿ ಅಗತ್ಯ ಅಂಕಗಳನ್ನು ಪಡೆಯಲು ಸಾಧ್ಯವಾಗದ ಕಾರಣ ಅವರಿಗೆ ವೈದ್ಯಕೀಯ ಸೀಟು ಸಿಗಲಿಲ್ಲ. ಸಿದ್ದರಾಮಯ್ಯ ಅವರ ತಂದೆ ಕಾನೂನು ಕಲಿಯಲು ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ಹಠ ಹಿಡಿದ ಬಳಿಕ ಒಪ್ಪಿದ್ದರು.

6. ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರಿನಲ್ಲೂ, ಪಿಯುಸಿಯನ್ನು ಮೈಸೂರಿನಲ್ಲಿ, ಬಿ.ಎಸ್ಸಿಯನ್ನು ಯುವರಾಜ ಕಾಲೇಜಿನಲ್ಲಿ ಓದಿದರು. ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು, ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿಯರ್ ಆಗಿ ನಂತರ 1978ರವರೆಗೆ ವಕೀಲಿ ವೃತ್ತಿ ನಡೆಸಿದರು.

7. ಮೇ 5, 1977ರಂದು ಸಿದ್ದರಾಮಯ್ಯ ಅವರು ಪಾರ್ವತಿ ಅವರನ್ನು ವಿವಾಹವಾದರು. ಅವರಿಬ್ಬರೂ ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಸಿದ್ದರಾಮಯ್ಯನವರ ಪ್ರಕಾರ ಇಂತಹ ಕಾರ್ಯಕ್ರಮಗಳಲ್ಲಿ ಅವರ ಪತ್ನಿಗೆ ಆಸಕ್ತಿ ಇಲ್ಲ. 2013ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲೂ ತಮ್ಮ ಪತ್ನಿ ನಿರಾಕರಿಸಿದ್ದರು ಎಂದು ಸಿದ್ದರಾಮಯ್ಯ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.

8. ಸಿದ್ದರಾಮಯ್ಯನವರ ಹಿರಿಯ ಮಗ ರಾಕೇಶ್ ಅವರು ಬ್ಯಾಚುಲರ್ ಆಫ್ ಆರ್ಟ್ಸ್ ಓದಿದ್ದರು. ಅವರ ಕಿರಿಯ ಮಗ ಯತೀಂದ್ರ ರ್ಯಾಂಕ್ ವಿದ್ಯಾರ್ಥಿಯಾಗಿದ್ದು, ವೃತ್ತಿಯಲ್ಲಿ ವೈದ್ಯ. ಸಿದ್ದರಾಮಯ್ಯ ಮೊದಲ ಅವಧಿಗೆ ಮುಖ್ಯಮಂತ್ರಿಯಾಗಿದ್ದಾಗ 38 ವರ್ಷದ ರಾಕೇಶ್ ಲಿವರ್ ಕಾಯಿಲೆಯಿಂದ ಬೆಲ್ಜಿಯಂನಲ್ಲಿ ಸಾವನ್ನಪ್ಪಿದ್ದರು.

9. ಚರ್ಮದ ಆರೋಗ್ಯದ ದೃಷ್ಟಿಯಿಂದ ಶುದ್ಧ ಕಾಟನ್ ಪ್ಯಾಂಟ್ ಅಥವಾ ಧೋತಿಯನ್ನೇ ಧರಿಸುವಂತೆ ವೈದ್ಯರು ಸೂಚಿಸಿದ್ದರಿಂದ, 1992ರ ಬಳಿಕ ಸಿದ್ದರಾಮಯ್ಯ ಧೋತಿ ಮಾತ್ರ ಧರಿಸುತ್ತಿದ್ದಾರೆ. ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿರುವ ಖಾದಿ ಅಂಗಡಿಯಲ್ಲಿ ಅವರು ಬಟ್ಟೆ ಖರೀದಿಸುತ್ತಾರೆ.

10. ಸಿದ್ದರಾಮಯ್ಯನವರ ಮೊದಲ ವಾಹನ ಲ್ಯಾಂಬ್ರೆಟ್ಟಾ ಸ್ಕೂಟರ್. ಅವರು ಶಾಸಕ ಮತ್ತು ಸಚಿವರಾದ ನಂತರವೂ ಅದನ್ನು ಬಳಸುತ್ತಿದ್ದರು.

11. 1983ರ ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಭಾರತೀಯ ಲೋಕದಳದಿಂದ ಜನತಾ ಪಕ್ಷಕ್ಕೆ ಸೇರಿದರು.

12. 1985ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು. ಪಶುಸಂಗೋಪನೆ ಸಚಿವರಾಗಿ, ರೇಷ್ಮೆ ಮತ್ತು ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸಿದರು.

13. 1989ರ ಕಾಂಗ್ರೆಸ್ ಅಲೆಯಲ್ಲಿ ಚುನಾವಣೆ ಸೋತರು. ಜನತಾ ಪಕ್ಷ ಹೋಳಾದಾಗ ಜನತಾದಳ ಸೇರಿದರು.

14. 1994ರ ಚುನಾವಣೆಯಲ್ಲಿ ಗೆದ್ದು ಹಣಕಾಸು ಸಚಿವರಾದರು. 1999ರ ಚುನಾವಣೆಯ ಹೊತ್ತಿಗೆ ಜನತಾ ದಳ ಎರಡು ಭಾಗವಾದಾಗ, ದೇವೇಗೌಡರೊಂದಿಗೆ ಸೇರಿ ಜಾತ್ಯತೀತ ಜನತಾದಳ ಪಕ್ಷದ ಅಧ್ಯಕ್ಷರಾದರು.

15. 2004ರಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ, ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಯಾದಾಗ 2 ಬಾರಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದರು. 2006ರಲ್ಲಿ ಸೋನಿಯಾ ಗಾಂಧಿಯವರ ಅಂದಿನ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರಿಂದ ಕಾಂಗ್ರೆಸ್ ಸೇರುವ ಪ್ರಸ್ತಾಪ ಬಂತು; ಸೇರಿದರು.

16. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾದರು. ಮೇ 13, 2014ರಂದು ಕರ್ನಾಟಕದ 22ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

17. ಮುಖ್ಯಮಂತ್ರಿಯಾಗಿ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯಗಳಂತಹ ಯೋಜನೆಗಳನ್ನು, ದಲಿತವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ ನೀಡಿದರು.

18. 2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದ್ದರು.

ಇದನ್ನೂ ಓದಿ: Siddaramaiah @76: ಜನುಮ ದಿನದಂದೇ ಮೋದಿ ಭೇಟಿಯಾಗಲಿದ್ದಾರೆ ಸಿದ್ದರಾಮಯ್ಯ; Wish ಮಾಡ್ತಾರಾ ಪ್ರಧಾನಿ?

Exit mobile version