Site icon Vistara News

Siddaramaiah: ಸಿಎಂ ಸಿದ್ದರಾಮಯ್ಯ ಪತ್ನಿ ಆಸ್ಪತ್ರೆಗೆ ದಾಖಲು, ದಿಲ್ಲಿ ಪ್ರಯಾಣ ಸಮಯ ಬದಲು

siddaramaiah wife

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಪತ್ನಿ ಪಾರ್ವತಿ (Siddaramaiah wife) ಅವರಿಗೆ ಮಂಗಳವಾರ ರಾತ್ರಿ ದಿಢೀರ್‌ ಅನಾರೋಗ್ಯ (Health problem) ಕಾಣಿಸಿಕೊಂಡು ಅವರನ್ನು ಕೂಡಲೇ ಆಸ್ಪತ್ರೆಗೆ (Admitted to Hospital) ದಾಖಲಿಸಲಾಗಿದೆ. ಪತ್ನಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ದಿಲ್ಲಿ ಪ್ರಯಾಣದ ಸಮಯವನ್ನು ಬದಲಿಸಲಾಗಿದೆ.

ಪಾರ್ವತಿ ಅವರಿಗೆ ರಾತ್ರಿ ತೀವ್ರ ಜ್ವರ ಕಾಣಿಸಿಕೊಂಡು, ಅಸ್ವಸ್ಥರಾದ ಹಿನ್ನೆಲೆಯಲ್ಲಿ ಅವರನ್ನು ರಾತ್ರಿ 11.30ರ ಹೊತ್ತಿಗೆ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಬೆಳಗ್ಗಿನ ಹೊತ್ತಿಗೆ ಅವರ ಆರೋಗ್ಯ ಸುಧಾರಿಸಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ತೀವ್ರ ಜ್ವರದೊಂದಿಗೆ ಆಸ್ಪತ್ರೆಗೆ ದಾಖಲಾದ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಆರೋಗ್ಯ ಸ್ಥಿರವಾಗಿದೆ ಸದ್ಯ ವೈದ್ಯಕೀಯ ತುರ್ತು ನಿಗಾ ವಿಭಾಗದಲ್ಲಿ (MICU) ಚಿಕಿತ್ಸೆ ಪಡೆಯುತ್ತಿದ್ದಾರೆ. ಬಳಿಕ ಅವರನ್ನು MICU ನಿಂದ ವಾರ್ಡ್ ಗೆ ಶಿಫ್ಟ್ ಮಾಡಲಾಗುವುದು ಎಂದು ಮಣಿಪಾಲ್ ಆಸ್ಪತ್ರೆಯ ಮಾಹಿತಿ ತಿಳಿಸಿದೆ.

ಸಿಎಂ ದೆಹಲಿ ಪ್ರವಾಸ ಸಮಯ ಬದಲಾವಣೆ

ಪತ್ನಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ದಿಲ್ಲಿ ಪ್ರಯಾಣದ ಸಮಯ ಬದಲಾಗಿದೆ.

ಸಿಎಂ ಆದ ಬಳಿಕ ಮೊದಲ ಬಾರಿಗೆ ಕೇಂದ್ರ ನಾಯಕರನ್ನು ಭೇಟಿಯಾಗಲು ಸಿದ್ದರಾಮಯ್ಯ ಅವರು ಬುಧವಾರ ಬೆಳಗ್ಗೆ ದಿಲ್ಲಿಗೆ ವಿಮಾನ ಮೂಲಕ ಪ್ರಯಾಣಿಸುವವರಿದ್ದರು. ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರ ಭೇಟಿ ಇದರಲ್ಲಿ ಪ್ರಮುಖವಾಗಿದೆ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದ ಸಹಕಾರವನ್ನು ಅವರು ಈ ಸಂದರ್ಭದಲ್ಲಿ ಕೋರಲಾಗುತ್ತದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ. ಜತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗುವ ಕಾರ್ಯಕ್ರಮವೂ ಇದೆ.

ರಾಜ್ಯದಲ್ಲಿ ಅನ್ನ ಭಾಗ್ಯ ಯೋಜನೆ ಪೂರ್ಣ ಪ್ರಮಾಣದ ಜಾರಿಗೆ ಕೇಂದ್ರದ ನೆರವು ಕೋರಿಕೆಗೆ ಸಂಬಂಧಿಸಿ ಚರ್ಚಿಸಲು ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ.ಎಚ್‌. ಮುನಿಯಪ್ಪ ಅವರು ಈಗಾಗಲೇ ದಿಲ್ಲಿಯಲ್ಲಿದ್ದಾರೆ. ಅವರು ಬುಧವಾರ ಕೇಂದ್ರದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಪಿಯೂಶ್‌ ಗೋಯಲ್‌ ಅವರನ್ನು ಭೇಟಿಯಾಗಲಿದ್ದಾರೆ. ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಮೂರು ದಿನಗಳ ಬಳಿಕ ದಿಲ್ಲಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ಮುಖ್ಯಮಂತ್ರಿಗಳ ಪ್ರವಾಸ ಪಟ್ಟಿಯ ಪ್ರಕಾರ, ಸಿದ್ದರಾಮಯ್ಯ ಅವರು ಬುಧವಾರ ಬೆಳಗ್ಗೆ 9.50ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಬೇಕಿತ್ತು. ಆದರೆ, ಪತ್ನಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಬೆಳಗ್ಗೆ 11.30ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನ ಮೂಲಕ ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Fact Check Unit: ಫೇಕ್‌ ನ್ಯೂಸ್‌ ಮೂಲವನ್ನು ಬೇರು ಸಮೇತ ಕತ್ತರಿಸಿ: ಸಿದ್ದರಾಮಯ್ಯ

Exit mobile version