Site icon Vistara News

CM Siddaramaiah : ಅನ್ನದಾತರಿಗೆ ಅಪಮಾನ ಮಾಡಬೇಡಿ; ಎಲ್ಲ ನಾಯಕರಿಗೆ ಸಿದ್ದರಾಮಯ್ಯ ವಾರ್ನಿಂಗ್

CM Siddaramaiah Warns Ministers not to Insult farmers

ಬೆಂಗಳೂರು: ʻರೈತರು ಬರಗಾಲ ಬರಲಿ, ಸಾಲ ಮನ್ನಾ ಆಗಲಿ ಎಂದು ಕಾಯುತ್ತಿರುತ್ತಾರೆʼ ಎಂಬ ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ (Shivananda Pateel) ಅವರ ಹೇಳಿಕೆಯ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ಹೇಳಿಕೆಯ ಬಗ್ಗೆ ಮಾತನಾಡಿರುವ ಅವರು, ʻʻಅನ್ನದಾತರಾದ ರೈತರ ಬಗ್ಗೆ ನಾವು ಎಚ್ಚರಿಕೆಯಿಂದ ಮಾತ್ರವಲ್ಲ ಗೌರವದಿಂದ ಮಾತನಾಡಬೇಕು. ಹಗುರ ಮಾತುಗಳ ಮೂಲಕ ರೈತರಿಗೆ ಅವಮಾನವಾಗುವಂತೆ ಮಾಡಬಾರದು (Dont insult farmers). ಇದು ಪ್ರತಿಯೊಬ್ಬರು ಕಡ್ಡಾಯವಾಗಿ ಅನುಸರಿಸಿಕೊಂಡು ಬರಬೇಕಾದ ನೀತಿ ಸಂಹಿತೆʼʼ ಎಂದು ಎಚ್ಚರಿಕೆ ನೀಡಿದ್ದಾರೆ.

ಫೇಸ್‌ ಬುಕ್‌ ಮತ್ತು ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಪೋಸ್ಟ್‌ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಒಂದು ಕಡೆ ಶಿವಾನಂದ ಪಾಟೀಲ್‌ ಸೇರಿದಂತೆ ನಾಯಕರಿಗೆ ಎಚ್ಚರಿಕೆ‌ ನೀಡುವ ಜತೆಗೆ ಬಿಜೆಪಿ ನಾಯಕರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿದ್ದರಾಮಯ್ಯ ಅವರ ಪೋಸ್ಟ್‌ನಲ್ಲಿ ಏನಿದೆ?

  1. ರೈತ ಕುಟುಂಬದಿಂದ ಬಂದಿರುವ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ರೈತರನ್ನು ಅವಮಾನಿಸಬೇಕೆಂಬ ದುರುದ್ದೇಶ ಖಂಡಿತ ಇರಲಾರದು. ತನ್ನ ಜೊತೆಗಿದ್ದ ರೈತರೊಂದಿಗಿನ ಸಲಿಗೆಯಿಂದ ಕೆಲವು ಮಾತುಗಳನ್ನು ಆಡಿದ್ದಾರೆ. ಆದರೆ ಇದು ಸಮಸ್ತ ರೈತ ಸಮುದಾಯಕ್ಕೆ ಅನ್ವಯಮಾಡುವಾಗ ವಿಪರೀತ ಅರ್ಥಕ್ಕೆ ಕಾರಣವಾಗುತ್ತದೆ. ಇದು ಸಲ್ಲದು.
  2. ರೈತರ ಕಲ್ಯಾಣಕ್ಕಾಗಿ ಕಿಂಚಿತ್ತೂ ಕೆಲಸ ಮಾಡದೆ ಇರುವ, ಮೂಲತ: ರೈತ ವಿರೋಧಿಯಾಗಿರುವ ಬಿಜೆಪಿಯ ನಾಯಕರು ಇಂತಹದ್ದೇ ಅವಕಾಶಕ್ಕಾಗಿ ಕಾದು ಕೂತವರಂತೆ ಶಿವಾನಂದ ಪಾಟೀಲರ ಮಾತುಗಳನ್ನು ವಿವಾದವನ್ನಾಗಿ ಮಾಡಿದ್ದಾರೆ. ಬೀಜ-ಗೊಬ್ಬರ ಕೊಡಿ ಎಂದು ಕೇಳಿದ ರೈತರನ್ನು ಗುಂಡಿಕ್ಕಿ ಸಾಯಿಸಿದ ಮತ್ತು ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದರೆ ನೋಟ್ ಪ್ರಿಂಟಿಂಗ್ ಮೆಷಿನ್ ಇದೆಯೇ ಎಂದು ಕೇಳಿದ ಭಾರತೀಯ ಜನತಾ ಪಕ್ಷದ ನಾಯಕರಿಗೆ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುವ ಯಾವ ನೈತಿಕತೆ ಇದೆ?
  3. ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಬಿಜೆಪಿ ನಾಯಕರು ರೈತರ ಕಲ್ಯಾಣಕ್ಕಾಗಿ ಏನು ಮಾಡಿದ್ದಾರೆ? ನಾವು ನಿಜವಾದ ರೈತ ಮಿತ್ರರು, ಬಿಜೆಪಿಯವರಂತೆ ನಕಲಿ ಮಿತ್ರರಲ್ಲ. ರೈತರ ಬಗೆಗಿನ ನಮ್ಮ ಪ್ರೀತಿ-ಅಭಿಮಾನಕ್ಕೆ ನಮ್ಮ ಸರ್ಕಾರದ ಕಳೆದ ಆರು ತಿಂಗಳುಗಳ ಅವಧಿಯಲ್ಲಿ ಜಾರಿಗೆ ತಂದಿರುವ ರೈತ ಪರ ಕಾರ್ಯಕ್ರಮಗಳೇ ಸಾಕ್ಷಿ.
  4. ರಾಜ್ಯದಲ್ಲಿನ ಬರಗಾಲದಿಂದ ನೊಂದಿರುವ ರೈತರಿಗೆ ಕೇಂದ್ರ ಸರ್ಕಾರ ಚಿಕ್ಕಾಸಿನ ಪರಿಹಾರ ನೀಡದೆ ಇದ್ದರೂ ನಾವು ಪ್ರತಿ ರೈತ ಕುಟುಂಬಗಳಿಗೆ ಎರಡು ಸಾವಿರ ರೂಪಾಯಿಗಳನ್ನು ನೀಡಿದ್ದೇವೆ. ಸಹಕಾರಿ ಬ್ಯಾಂಕುಗಳಿಂದ ಪಡೆದಿರುವ ಮಧ್ಯಮಾವಾಧಿ ಮತ್ತು ದೀರ್ಘಾವಧಿ ಸಾಲಗಳ ಬಡ್ಡಿ ಮನ್ನಾ ಮಾಡಲು ನಿರ್ಧರಿಸಿದ್ದೇವೆ. ರಾಜ್ಯದ 24 ಜಿಲ್ಲೆಗಳ 106 ತಾಲ್ಲೂಕುಗಳಲ್ಲಿ 100 ಕೋಟಿ ರೂ.ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆಗೆ ಚಾಲನೆ ನೀಡಿದ್ದೇವೆ.
  5. ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆಗಳ ಕಾಲ ಮೂರು ಫೇಸ್ ವಿದ್ಯುತ್ ನೀಡುತ್ತಿದ್ದೇವೆ. ಹದಿನೈದು ವರ್ಷ ಸಾಗುವಳಿ ಮಾಡಿದ ಬಗರ್ ಹುಕುಂ ಭೂಮಿಗಳ ಸಕ್ರಮ ಗೊಳಿಸಲು ತೀರ್ಮಾನಿಸಿದ್ದೇವೆ. ಅಕ್ರಮ ವಿದ್ಯುತ್ ಸಂಪರ್ಕ ಹೊಂದಿರುವ 4 ಲಕ್ಷ ಕೃಷಿ ಪಂಪ್ ಸೆಟ್ ಗಳ ಸಕ್ರಮ ಮಾಡುವ ದಿಟ್ಟ ನಿರ್ಧಾರ ಕೈಗೊಂಡಿದ್ದೇವೆ. ಕೃಷಿಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸಲು 100 ಕೋಟಿ ರೂ.ವೆಚ್ಚದಲ್ಲಿ ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಸ್ಥಾಪಿಸಲಾಗುತ್ತಿದೆ.
  6. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡುವಂತೆ ದೇಶಾದ್ಯಂತ ರೈತರು ಒತ್ತಾಯಿಸುತ್ತಿದ್ದರೆ, ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರ ರೈತರ ಕತ್ತು ಹಿಸುಕಿ ಸಾಯಿಸುವ ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಏನೆಲ್ಲ ಕಸರತ್ತು ನಡೆಸಿತ್ತು ಎನ್ನುವುದನ್ನು ಇಡೀ ದೇಶ ಕಂಡಿದೆ.
  7. ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಧಣಿಗಳಿಗೆ ಒತ್ತೆ ಇಡುವ ಬಿಜೆಪಿಯ ಹುನ್ನಾರವನ್ನು ದೇಶದ ರೈತರು ಅರ್ಥಮಾಡಿಕೊಂಡಿದ್ದಾರೆ. ತಮ್ಮ ರೈತ ವಿರೋಧಿ ಕೃತ್ಯಗಳನ್ನು ಮುಚ್ಚಿಹಾಕಲು ಬಿಜೆಪಿ ನಾಯಕರು ಆಗಾಗ ತಿರುಚಿದ ಹೇಳಿಕೆಗಳನ್ನು ಹಿಡ್ಕೊಂಡು ಎದೆ ಬಡಿದುಕೊಳ್ಳುತ್ತಾ ಇರುತ್ತಾರೆ.

ಇದನ್ನೂ ಓದಿ: Shivananda Pateel: ಬರ ಬರ್ಲಿ ಅಂತ ರೈತರೇ ಕಾಯ್ತಾರೆ; ಸಚಿವ ಶಿವಾನಂದ ಪಾಟೀಲ್‌ ಇದೆಂಥಾ ಮಾತು

Exit mobile version