Site icon Vistara News

CM Siddaramaiah : ಅಲೆಮಾರಿ, ಅರೆಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಆಯೋಗ; ಸಿದ್ದರಾಮಯ್ಯ ಭರವಸೆ

Siddaramaiah Meeting

ಬೆಂಗಳೂರು: ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಆಯೋಗ ರಚನೆಗೆ (Commission for Alemari community) ಸಂಬಂಧಿಸಿದಂತೆ ಕಾನೂನು ಸಲಹೆ (Legal Advice) ಪಡೆದು ತೀರ್ಮಾನಕ್ಕೆ ಬರಲಾಗುವುದು. ಈ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಅನುದಾನ ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು. ಅಲೆಮಾರಿ ಜನಾಂಗಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಬೇಕು. ಇವರಿಗೆ ವಿಶೇಷವಾಗಿ ವಸತಿ ಸೌಲಭ್ಯ ಕಲ್ಪಿಸುವ ಬಗ್ಗೆಯೂ ಪರಿಶೀಲಿಸಲಾಗುವುದು. ಸಾಮಾಜಿಕ ನ್ಯಾಯ ಎಲ್ಲರಿಗೂ ದೊರಕಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಅವರು ಶುಕ್ರವಾರ ರಾಜ್ಯದ ಎಸ್.ಸಿ, ಎಸ್.ಟಿ ಮತ್ತು ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟು ಸಂಘಟನೆಗಳ ಸಮನ್ವಯ ಸಮಿತಿಯ ರಾಜ್ಯ ಮುಖಂಡರೊಂದಿಗೆ ಅಲೆಮಾರಿ ಜನರ ಕುಂದುಕೊರತೆಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.

ಸಮನ್ವಯ ಸಮಿತಿ ನೀಡಿದ ವಿವರ ಮತ್ತು ಬೇಡಿಕೆಗಳು

  1. ಅಲೆಮಾರಿಗಳ ಸಮಸ್ಯೆಗಳು ವಿಶಿಷ್ಟವಾಗಿದ್ದು, ಒಟ್ಟು 120 ಜಾತಿಗಳಿವೆ. ಈ ಪೈಕಿ ಎಸ್.ಸಿ 51, ಎಸ್.ಟಿ 23 ಹಾಗೂ ಹಿಂದುಳಿದ ವರ್ಗದ 46 ಜಾತಿಗಳಿವೆ.
  2. ವಿವಿಧ ರಾಜ್ಯ ಮಟ್ಟದ ಸಂಘಟನೆಗಳಿದ್ದು, ಅವುಗಳನ್ನು ಒಟ್ಟು ಸೇರಿಸಿ ಸಮನ್ವಯ ಸಮಿತಿ ರಚಿಸಲಾಗಿದೆ.
  3. ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿ ಬದುಕುತ್ತಿರುವ, ಅಸ್ಮಿತೆ ಇಲ್ಲದ ಸಮುದಾಯಗಳಿಗೆ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ. ಸರ್ಕಾರ ಅಲೆಮಾರಿಗಳನ್ನು ಗುರುತಿಸಬೇಕಿದೆ.
  4. ದಾಖಲೆಗಳಲ್ಲಿ ಇವರು ಇಲ್ಲದಿರುವುದರಿಂದ ಸಮಾಜದ ತಿರಸ್ಕಾರಕ್ಕೆ ಒಳಗಾಗಿದ್ದಾರೆ. ಜಾತಿ ಪ್ರಮಾಣಪತ್ರ ಕೂಡ ಇವರಿಗಿಲ್ಲ.
  5. ಸರ್ಕಾರ ಕೆಲವು ಜಾತಿಗಳನ್ನು ಮಾತ್ರ ಗುರುತಿಸಿದ್ದು, ಇವರನ್ನು ಗುರುತಿಸುವ ಔದಾರ್ಯವನ್ನು ಸರ್ಕಾರ ತೋರಬೇಕು.
  6. ಸಮಾನ ಕುಲ, ಗೋತ್ರ, ಭಾಷೆ ಇರುವ ಜಾತಿಗಳನ್ನು ಗುರುತಿಸಬೇಕಿದೆ. ತಬ್ಬಲಿ ಸಮುದಾಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಅಲೆಮಾರಿ ಸಮುದಾಯಗಳಿಗೆ ಆಯೋಗ ರಚಿಸಬೇಕು.
  7. ಆಗಸ್ಟ್ 31ರಂದು ರಾಷ್ಟ್ರೀಯ ಅಲೆಮಾರಿ ವಿಮುಕ್ತ ದಿನಾಚರಣೆಯಂದು ರಾಜ್ಯ ಸರ್ಕಾರ ಆಚರಿಸಬೇಕು.
  8. ಜೋಗಿ, ಪಿಚ್ಚಗುಂಟಲು ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡಿದೆ. ಅವುಗಳನ್ನು ಸೂಕ್ತ ಜಾತಿಗೆ ಸೇರಿಸಿ ಮೀಸಲಾತಿ ಕಲ್ಪಿಸಬೇಕು, ಅಲೆಮಾರಿ ಸಮುದಾಯಕ್ಕೂ ರಾಜಕೀಯ ಪ್ರಾತಿನಿಧ್ಯ ನೀಡಬೇಕು.
  9. ಹಲವು ಜಾತಿಗಳು ಬಹುನಾಮಿಗಳಾಗಿರುವುದರಿಂದ ಜಾತಿ ಪ್ರಮಾಣ ಪತ್ರ ದೊರೆಯುತ್ತಿಲ್ಲ.
  10. ಅಗೋಚರ ಸಮುದಾಯಗಳು ಪ್ರಾತಿನಿಧ್ಯವಿಲ್ಲದೆ ಇದ್ದಾರೆ. ಅವರಿಗೆ ಗುರುತು ಸಿಕ್ಕರೆ, ಶಿಕ್ಷಣ, ಸರ್ಕಾರದ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಸಚಿವ ಭೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ,ಹಿರಿಯ ಪತ್ರಕರ್ತ ಹಾಗೂ ಚಿಂತಕ ಇಂದೂಧರ ಹೊನ್ನಾಪುರ, ಹಂಪಿ ಕನ್ನಡ ವಿ.ವಿ ಹಿರಿಯ ಉಪನ್ಯಾಸಕ ಡಾ. ಮೇತ್ರಿ, ಲೀಲಾ ಸಂಪಿಗೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Shadow CM : ಸಿಎಂ ಸಿದ್ದರಾಮಯ್ಯಗೆ ಯತೀಂದ್ರ ಶ್ಯಾಡೊ ಸಿಎಂ; ಸಿಕ್ಕಿತು ದಾಖಲೆ!

Exit mobile version