ಉಡುಪಿ: ಪ್ರಗತಿಯ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ (Udupi District) ಶಿಕ್ಷಣ ಮತ್ತು ಆರೋಗ್ಯ (Education and Health Index) ಕ್ಷೇತ್ರದ ಬೆಳವಣಿಗೆ ಕಳೆದ ಕೆಲವು ವರ್ಷಗಳಲ್ಲಿ ಕುಂಠಿತಗೊಂಡಿದೆ. ಇದರ ಸುಧಾರಣೆಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು (education news) ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಹೇಳಿದ್ದಾರೆ. ಅವರು ಮಂಗಳವಾರ ಉಡುಪಿಯಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ (District development observation meeting) ನಡೆಸಿ ನಂತರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಮೊದಲನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ 2023ರಲ್ಲಿ 13ನೇ ಸ್ಥಾನಕ್ಕೆ ಇಳಿದಿದೆ. 2015ರಲ್ಲಿ ಆರೋಗ್ಯ ಸೂಚ್ಯಂಕದಲ್ಲಿ ಒಂದನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಈಗ 19ನೇ ಸ್ಥಾನಕ್ಕಿಳಿದಿದೆ. 2015-16ರಲ್ಲಿ ತಾಯಂದಿರ ಮರಣ 1000 ಮಂದಿಗೆ 14 ಮಂದಿ ಇತ್ತು. 2021-22ರಲ್ಲಿ ಮರಣ ಪ್ರಮಾಣ 126ಕ್ಕೆ ಏರಿಕೆಯಾಗಿದ್ದು, 2023ರಲ್ಲಿ 53 ಮರಣ ಸಂಭವಿಸಿದೆ. 2015-16ರಲ್ಲಿ ಮಕ್ಕಳ ಸಾವಿನ ಪ್ರಮಾಣ 51 ಇದ್ದು, 2022-23ರಲ್ಲಿ 166 ಮಕ್ಕಳು ಮರಣ ಹೊಂದಿದ್ದಾರೆ. ಇದು ನಮ್ಮ ಸರ್ಕಾರ ಮತ್ತು ಬಿಜೆಪಿ ಸರ್ಕಾರದ ವ್ಯತ್ಯಾಸವನ್ನು ಬಿಂಬಿಸುತ್ತದೆ ಎಂದು ವಿವರಿಸಿದರು.
ಕಡಲಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ
ಉಡುಪಿ, ದಕ್ಷಿಣ ಕನ್ನಡ , ಉತ್ತರ ಕನ್ನಡ ಜಿಲ್ಲೆಗಗಳಲ್ಲಿ ಕಡಲ್ಕೊರೆತದ ಸಮಸ್ಯೆ ಇದೆ. ಉಡುಪಿ ಜಿಲ್ಲೆಯಲ್ಲಿ 98 ಕಿಮೀ.ಗಳ ಕಡತ ತೀರವಿದೆ. 3 ಜಿಲ್ಲೆಗಳಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಯೋಜನೆ ರೂಪಿಸಲು ಲೋಕೋಪಯೋಗಿ ಇಲಾಖೆಗೆ ಡಿಪಿಆರ್ ಮಾಡಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಆಡಳಿತವನ್ನು ಚುರುಕುಗೊಳಿಸಲು ಸೂಚನೆ
ಉಡುಪಿ ಜಿಲ್ಲೆಯಲ್ಲಿ ಸೈಬರ್ ಕ್ರೈಂ, ರಸ್ತೆ ಅಪಘಾತಗಳು, ಸಾವಿನ ಪ್ರಮಾಣ ಹೆಚ್ಚಿದ್ದು, ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುವುದರ ಜೊತೆಗೆ ಲೋಕೋಪಯೋಗಿ ಇಲಾಖೆಯವರು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಜಿಲ್ಲಾಮಟ್ಟದ ಆಡಳಿತವನ್ನು ಚುರುಕುಗೊಳಿಸಲು ನಿರ್ಲಕ್ಷ್ಯತನ, ಉದಾಸೀನತೆ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಶೇ. 79 ಬಿತ್ತನೆ ಕಾರ್ಯ ಪೂರ್ಣ
ಉಡುಪಿ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ವಾಡಿಕೆ ಮಳೆಗಿಂತ 53 % ಕಡಿಮೆ ಮಳೆಯಾಗಿದ್ದು, ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ. 25 ರಷ್ಟು ಹೆಚ್ಚು ಮಳೆಯಾಗಿದೆ. ಸುಮಾರು ಶೇ. 79 ಬಿತ್ತನೆ ಕಾರ್ಯ ಮುಗಿದಿದೆ. ಬೀಜ , ಗೊಬ್ಬರ ರಾಸಾಯನಿಕಗಳಿಗೆ ಇಲ್ಲಿಯವರೆಗೆ ಕೊರತೆಯಾಗಿಲ್ಲ. ಬೆಳೆಹಾನಿಯಾಗಿದ್ದರೆ ಮರು ಬಿತ್ತನೆ ಅಥವಾ ಪರ್ಯಾಯ ಬೆಳೆ ಬೆಳೆಯಲು ಬೀಜ, ಗೊಬ್ಬರ ರಾಸಾಯನಿಕಗಳನ್ನು ಸರಬರಾಜು ಮಾಡಲು ಜಿಲ್ಲಾಧಿಕಾರಿಗಳು ಮತ್ತು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಳೆದ ವರ್ಷ ಜುಲೈ ತಿಂಗಳ ವೇಳೆಗೆ ಶೇ. 75 ರಷ್ಟು ಬಿತ್ತನೆಯಾಗಿದ್ದು, ಈ ವರ್ಷ ಶೇ. 79ರಷ್ಟು ಬಿತ್ತನೆಯಾಗಿದೆ. ಸುಮಾರು 10 ಜನರ ಪ್ರಾಣಿ ಹಾನಿಯಾಗಿದ್ದು, ಅವರಿಗೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ಕಾಲುಸಂಕಗಳ ನಿರ್ಮಾಣಕ್ಕೆ ಕ್ರಮ
ಕಾಲುಸಂಕಗಳು ಸಮರ್ಪಕವಾಗಿಲ್ಲದಿರುವ ಕಾರಣ ಜನರ ಓಡಾಟಕ್ಕೆ ತೊಂದರೆಯಾಗಿದೆ. ಆದ್ದರಿಂದ ನರೇಗಾ ಮತ್ತು ಲೋಕೋಪಯೋಗಿ ಇಲಾಖೆಯವರು ಜಂಟಿಯಾಗಿ ಕಾಲು ಸಂಕಗಳ ನಿರ್ಮಾಣಕ್ಕಾಗಿ ಯೋಜನೆ ರೂಪಿಸಿ, ನಿರ್ಮಾಣ ಕಾರ್ಯ ಕೈಗೊಳ್ಳಲು ಸೂಚಿಸಲಾಗಿದೆ. ಒಂದು ಕಾಲಸಂಕ ನಿರ್ಮಿಸಲು ಸುಮಾರು 5 ರಿಂದ 10 ಲಕ್ಷ ರೂ.ಗಳು ವೆಚ್ಚವಾಗಲಿದೆ ಎಂದರು.
ಸಭೆಗೂ ಮುನ್ನ ಸಿಎಂ ಜನತಾದರ್ಶನ ನಡೆಸಿದರು. ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಉಪಸ್ಥಿತರಿದ್ದರು.
ಇದನ್ನೂ ಓದಿ : CM Siddaramaiah : ಗೃಹಲಕ್ಷ್ಮಿ ದುಡ್ಡು ನಿಂಗೆ ಸಿಗಲ್ಲ, ಅಮ್ಮಂಗೆ ಕೊಡ್ತೀವಿ ಆಯ್ತಾ; ಹಾಸ್ಟೆಲ್ ಮಕ್ಕಳ ಜತೆ ಸಿದ್ದರಾಮಯ್ಯ ಆತ್ಮೀಯ ಮಾತು