ಬೆಳಗಾವಿ: ಸಂಸತ್ ಭವನದ ಮೇಲೆ ನಡೆದಿರುವ ದಾಳಿ (Security Breach in Lok Sabha) ತೀವ್ರ ಕಳವಳಕಾರಿ ಸಂಗತಿಯಾಗಿದೆ. ಅತ್ಯಂತ ಬಿಗಿಭದ್ರತೆಯ ಹೊರತಾಗಿಯೂ ಇಂತಹದ್ದೊಂದು ಘಟನೆ ನಡೆದಿರುವುದು ಆಘಾತಕಾರಿ ಬೆಳವಣಿಗೆ. ಇದರಿಂದ ದೇಶದ ಸುರಕ್ಷತೆಯ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸಿವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ (CM Siddaramaiah) ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯಲ್ಲಿ ಭದ್ರತಾ ಲೋಪದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಸಂಸತ್ ಭವನದ ಮೇಲೆ ನಡೆದಿರುವ ದಾಳಿ ಖಂಡನೀಯವಾದುದು ಮಾತ್ರವಲ್ಲ ಅತ್ಯಂತ ಆಘಾತಕಾರಿಯಾದುದು. ಸಂಸದರೆಲ್ಲರೂ ಸುರಕ್ಷಿತವಾಗಿದ್ದಾರೆ ಎನ್ನುವುದು ಸಮಾಧಾನದ ಸಂಗತಿ. ಅತ್ಯಂತ ಬಿಗಿಭದ್ರತೆಯ ಹೊರತಾಗಿಯೂ ಇಂತಹದ್ದೊಂದು ಘಟನೆ ನಡೆದಿರುವುದು ಆಘಾತಕಾರಿ ಬೆಳವಣಿಗೆ. ಇದು ಸಂಪೂರ್ಣವಾಗಿ ಭದ್ರತಾ ವ್ಯವಸ್ಥೆಯ ಲೋಪ ಎನ್ನುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Security Breach in Lok Sabha: ಮೈಸೂರು ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದಿದ್ದ ದುಷ್ಕರ್ಮಿಗಳು!
ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಘಟನೆಯ ಹಿಂದಿನ ಸಂಪೂರ್ಣ ಸತ್ಯವನ್ನು ದೇಶದ ಮುಂದಿಡುವುದು ಕೇಂದ್ರ ಸರ್ಕಾರ, ಬಹಳ ಪ್ರಮುಖವಾಗಿ ದೇಶದ ಗೃಹ ಸಚಿವರ ಕರ್ತವ್ಯವಾಗಿದೆ. ಇಪ್ಪತ್ತೆರಡು ವರ್ಷಗಳ ಹಿಂದೆ (13-12-2001) ಸಂಸತ್ ಮೇಲೆ ಭಯೋತ್ಪಾದಕರು ನಡೆಸಿದ್ದ ದಾಳಿಯ ದಿನವನ್ನೇ ಆರಿಸಿಕೊಂಡು ಈ ದಾಳಿ ನಡೆದಿರುವುದನ್ನು ಗಮನಿಸಿದರೆ ಇದರ ಹಿಂದೆ ಬೇರೆ ಹುನ್ನಾರಗಳಿರಬಹುದೆಂಬ ಸಂಶಯವೂ ಮೂಡುತ್ತಿದೆ. 2001ರ ದಾಳಿಯ ಸಮಯದಲ್ಲಿಯೂ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರವೇ ಇತ್ತು ಎನ್ನುವುದನ್ನು ಗಮನಿಸಬೇಕಾಗುತ್ತದೆ. ಇದು ದೇಶದ ಸುರಕ್ಷತೆಯ ಬಗ್ಗೆ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಸಂಸತ್ ಭವನದ ಮೇಲೆ ದಾಳಿ ನಡೆಸಿದ ಯುವಕರಿಗೆ ಮೈಸೂರಿನ ಲೋಕಸಭಾ ಸದಸ್ಯ ಪ್ರತಾಪ ಸಿಂಹ ಅವರೇ ಪಾಸ್ ನೀಡಿರುವ ವರದಿಗಳು ಬರುತ್ತಿವೆ. ಈ ಸುದ್ದಿ ನಿಜವಾಗಿದ್ದಲ್ಲಿ ಈ ಸಂಸದರನ್ನು ಕೂಡಾ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ. ಪಾಸ್ ನೀಡಿರಬೇಕಾಗಿದ್ದರೆ ಯುವಕರು ಸಂಸದರ ಪರಿಚಯಸ್ಥರಾಗಿರಬಹುದು. ಪರಿಚಯಸ್ಥರಲ್ಲದೆ ಇದ್ದರೆ ಅಪರಿಚಿತರಿಗೆ ಪಾಸುಗಳನ್ನು ಹೇಗೆ ನೀಡಲಾಯಿತು ಎನ್ನುವ ಪ್ರಶ್ನೆ ಕೂಡಾ ಹುಟ್ಟುತ್ತದೆ. ಕಾನೂನಿನಲ್ಲಿ ಬೇಜವಾಬ್ದಾರಿಯಿಂದ ನಡೆಯುವ ಅನಾಹುತ ಕೂಡಾ ಶಿಕ್ಷಾರ್ಹ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Security Breach In Parliament: ಲೋಕಸಭೆ ಸದನದೊಳಗೆ ನುಗ್ಗಿ ಕಲರ್ ಬಾಂಬ್ ಸಿಡಿಸಿದ ದುಷ್ಕರ್ಮಿಗಳು!
ದೇಶದ ಹೃದಯದಂತಿರುವ ಸಂಸತ್ ಭವನಕ್ಕೆ ಬೇರೆ ಯಾವುದೇ ಪ್ರದೇಶ ಇಲ್ಲವೆ ಕಟ್ಟಡವನ್ನು ಮೀರಿದ ಬಿಗಿ ಭದ್ರತೆಯನ್ನು ನೀಡಲಾಗಿದೆ. ಹೀಗಿದ್ದರೂ ಈ ಯುವಕರು ಸ್ಮೋಕ್ ಬಾಂಬು ಹಿಡಿದುಕೊಂಡು ಸಂಸತ್ ಒಳಗೆ ಹೇಗೆ ಪ್ರವೇಶಿಸಿದರು? ಈ ಕೃತ್ಯದಲ್ಲಿ ಒಳಗಿನವರೇ ಯಾರಾದರೂ ಭಾಗಿಯಾಗಿದ್ದಾರೆಯೇ? ಈ ಯುವಕರ ಕೃತ್ಯದ ಹಿಂದೆ ಬೇರೆ ಯಾವುದಾದರೂ ಬಾಹ್ಯ ಶಕ್ತಿಗಳ ಕೈವಾಡ ಇದೆಯೇ? ಎಂಬೀತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ದೇಶದ ಸಂಸತ್ ಭವನವೇ ಸುರಕ್ಷಿತವಾಗಿಲ್ಲದಿರುವಾಗ ದೇಶದ ಗಡಿ ಸುರಕ್ಷಿತವಾಗಿರುತ್ತಾ ಎಂಬೀತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಈ ಪ್ರಶ್ನೆಗಳಿಗೆಲ್ಲ ಉತ್ತರಿಸಬೇಕಾಗಿರುವ ಹೊಣೆ ದೇಶದ ಪ್ರಧಾನಿ ನರೇಂದ್ರ ಮೋದಿಯವರದ್ದಾಗಿದೆ ಎಂದು ತಾಕೀತು ಮಾಡಿದ್ದಾರೆ.
ಲೋಕಸಭೆ ಭದ್ರತೆ ಲೋಪ; ನಾಲ್ವರ ಸೆರೆ, ಯಾರಿವರು, ಏನು ಉದ್ದೇಶ?
ಹೊಸದಿಲ್ಲಿ: ಲೋಕಸಭೆಯಲ್ಲಿ ಬುಧವಾರ ನಡೆದ ಗಂಭೀರ ಭದ್ರತಾ ಲೋಪ (Security Breach in Lok Sabha) ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿದೆ. ಇವರು ಯಾವುದೇ ಸಂಘಟನೆಗೆ ಸೇರಿದವರಲ್ಲ, ಸರ್ಕಾರದ ವಿರುದ್ಧ ಪ್ರತಿಭಟನೆಯೇ ಇವರ ಉದ್ದೇಶ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಇಬ್ಬರನ್ನು ಸದನದ ಒಳಗೂ, ಇಬ್ಬರನ್ನು ಪಾರ್ಲಿಮೆಂಟ್‌ನ ಹೊರಗೂ ಬಂಧಿಸಲಾಗಿದೆ. ಇಬ್ಬರು ಶೂಗಳ ಒಳಗೆ ಗ್ಯಾಸ್ ಕ್ಯಾನಿಸ್ಟರ್‌ಗಳನ್ನು ಇಟ್ಟುಕೊಂಡು ಒಳಗೆ ಕೊಂಡೊಯ್ದಿದ್ದು ಹಳದಿ ಅನಿಲವನ್ನು ಸ್ಪ್ರೇ ಮಾಡಿದ್ದಾರೆ. ಜೊತೆಗೆ ʼತಾನಾಶಾಹಿ ನಹೀ ಚಲೇಗೀʼ (ಸರ್ವಾಧಿಕಾರವನ್ನು ಸಹಿಸುವುದಿಲ್ಲ) ಎಂಬ ಸ್ಲೋಗನ್ ಕೂಗಿದ್ದಾರೆ. ಇವರಲ್ಲಿ ಒಬ್ಬಾತ ಡಿ.ಮನೋರಂಜನ್ ಎಂದು ಗುರುತಿಸಲಾಗಿದೆ. ಮನೋರಂಜನ್ ಮೈಸೂರಿನವನು ಹಾಗೂ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಎಂದು ಗೊತ್ತಾಗಿದೆ. ಇನ್ನೊಬ್ಬಾತ ಸಾಗರ್ ಶರ್ಮಾ ಎಂಬ ಹೆಸರಿನವನು.
ಇಬ್ಬರಲ್ಲಿ ಒಬ್ಬನ ಬಳಿ ಲಖನೌ ಮೂಲದ ಆಧಾರ್ ಕಾರ್ಡ್ ದೊರೆತಿದೆ. ವಿಚಾರಣೆಯ ವೇಳೆ “ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಿದ್ದೇವೆ. ನಾವು ವಿದ್ಯಾರ್ಥಿಗಳು. ನಾವು ಯಾವುದೇ ಸಂಘಟನೆಗೆ ಸೇರಿಲ್ಲ. ನಮ್ಮ ಹಕ್ಕುಗಳನ್ನು ದಮನಿಸಲಾಗುತ್ತಿದೆ. ಸರ್ವಾಧಿಕಾರದ ವಿರುದ್ಧ ನಮ್ಮ ಹೋರಾಟʼʼ ಎಂದು ಹೇಳಿದ್ದಾರೆ ಎಂದು ಗೊತ್ತಾಗಿದೆ.
#WATCH | An unidentified man jumps from the visitor's gallery of Lok Sabha after which there was a slight commotion and the House was adjourned. pic.twitter.com/Fas1LQyaO4
— ANI (@ANI) December 13, 2023
ಹೊರಗೆ ಇಬ್ಬರ ಬಂಧನ
ಇದು ಲೋಕಸಭೆಯ ಒಳಗೆ ನಡೆದರೆ, ಸಂಸತ್ತಿನ ಹೊರಗೆ ಇಬ್ಬರು ಪ್ರತಿಭಟನಾಕಾರರನ್ನು ಸ್ಥಳೀಯ ಪೊಲೀಸರು ಬಂಧಿಸಿದರು. ಇವರಿಬ್ಬರೂ ಸಂಸತ್ತಿನ ಒಳಗಿದ್ದ ದುಷ್ಕರ್ಮಿಗಳಂತೆಯೇ ಬಣ್ಣದ ಹೊಗೆ ಸಿಡಿಸಿ ಪ್ರತಿಭಟನೆ ನಡೆಸುತ್ತಿದ್ದರು. ಇವರಲ್ಲಿ ಒಬ್ಬಾತ ಅಮೋಲ್ ಶಿಂಧೆ (24) ಹಾಗೂ ಇನ್ನೊಬ್ಬಾಕೆ ನೀಲಂ (42) ಎಂಬ ಮಹಿಳೆ ಎಂದು ಗುರುತು ಹಿಡಿಯಲಾಗಿದೆ. ನೀಲಂ ಹರ್ಯಾಣದ ಹಿಸಾರ್‌ನವಳು.
ಸುಮಾರು ಹತ್ತಡಿ ಎತ್ತರವಿದ್ದ ವೀಕ್ಷಕರ ಗ್ಯಾಲರಿಯಿಂದ ಮೊದಲ ವ್ಯಕ್ತಿ ಕೆಳಗೆ ಜಿಗಿದಿದ್ದಾನೆ. ಆತ ಕೆಳಗೆ ಬಿದ್ದಿರಬಹುದು ಎಂದು ಎಲ್ಲರೂ ಮೊದಲು ಭಾವಿಸಿದ್ದರು. ಜಿಗಿದ ಸಾಗರ್ ಶರ್ಮಾ ಹಳದಿ ಅನಿಲ ಸ್ಪ್ರೇ ಮಾಡತೊಡಗಿದಾಗ ಭದ್ರತಾ ಸಿಬ್ಬಂದಿ ಮತ್ತು ಸಂಸದರು ಎಚ್ಚೆತ್ತುಕೊಂಡರು. ಮನೋರಂಜನ್ ವೀಕ್ಷಕರ ಗ್ಯಾಲರಿಯಲ್ಲಿದ್ದು ಕಲರ್ ಗ್ಯಾಸ್ ಸ್ಪ್ರೇ ಮಾಡಿದ್ದ.
ಇದನ್ನೂ ಓದಿ | Security Breach in Lok Sabha: ಲೋಕಸಭೆಯಲ್ಲಿ ಭದ್ರತೆ ಲೋಪ ಆಗಿದ್ದು ಹೇಗೆ?
ಘಟನೆ ನಡೆದಾಗ ಬಿಜೆಪಿ ಸಂಸದ ರಾಜೇಂದ್ರ ಅಗರ್‌ವಾಲ್ ಅವರು ಸ್ಪೀಕರ್ ಪೀಠದಲ್ಲಿದ್ದರು. ಭದ್ರತಾ ಸಿಬ್ಬಂದಿ ಹಾಗೂ ಸಂಸದರು ತಮ್ಮ ಸ್ಥಾನಗಳಿಂದ ಎದ್ದು ದುಷ್ಕರ್ಮಿಗಳನ್ನು ಹಿಡಿಯಲು ಮುಂದಾದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ತಕ್ಷಣವೇ ಸ್ಥಳಕ್ಕೆ ಧಾವಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ