Site icon Vistara News

CM Siddaramaiah: ಕಾಂಗ್ರೆಸ್‌ ಕಾರ್ಯಕರ್ತರ ಸಮಸ್ಯೆ ಆಲಿಸಿದ ಸಿಎಂ; ಕೆಲಸ ಮಾಡಿಕೊಡದ ಅಧಿಕಾರಿಗಳಿಗೆ ತರಾಟೆ!

CM Siddaramaiah

ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಹವಾಲುಗಳನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಶನಿವಾರ ಸ್ವೀಕರಿಸಿದರು. ಕಾಂಗ್ರೆಸ್‌ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಲು ಆಯೋಜಿಸಿದ್ದ ʼಕಾರ್ಯಕರ್ತರ ಸ್ಪಂದನʼ ಕಾರ್ಯಕ್ರಮಕ್ಕೆ ರಾಜ್ಯ ವಿವಿಧೆಡೆಯಿಂದ ಕೈ ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ಕಾರ್ಯಕರ್ತರ ಕೆಲಸ ಮಾಡಿಕೊಡದ ಅಧಿಕಾರಿಗಳನ್ನು ಸಿಎಂ ಫೋನ್‌ನಲ್ಲಿ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರು.

ಎರಡನೇ ಬಾರಿ ಮುಖ್ಯಮಂತ್ರಿಗಳಾದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಅವರ ಮೊದಲ ಕಾರ್ಯಕರ್ತರ ಅಹವಾಲು ಸ್ವೀಕಾರ ಅಭಿಯಾನ ಆರಂಭವಾಗಿದೆ. ವಿಶೇಷಚೇತನರ ಬಳಿಗೇ ಹೋಗಿ ಅಹವಾಲುಗಳನ್ನು ಸ್ವೀಕರಿಸುವ ಮೂಲಕ ಮುಖ್ಯಮಂತ್ರಿಗಳು ಅಹವಾಲು ಸ್ವೀಕಾರ ಅಭಿಯಾನಕ್ಕೆ ಚಾಲನೆ ನೀಡಿದರು.

CM Siddaramaiah

ತ್ರಿಚಕ್ರ ವಾಹನ, ಸರ್ಕಾರಿ ಉದ್ಯೋಗ,ನಿಗಮ ಮಂಡಳಿಯಲ್ಲಿ ಅವಕಾಶ, ಗುತ್ತಿಗೆ ನೌಕರಿ, ಸ್ವಂತ ಉದ್ಯೋಗಕ್ಕೆ ಅನುದಾನ, ಸಾಲದ ಸವಲತ್ತು ಸೇರಿ ನಾನಾ ಬೇಡಿಕೆಗಳನ್ನು ವಿಕಲಚೇತನ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿಗಳ ಮುಂದಿಟ್ಟರು.

ಪ್ರತಿಯೊಬ್ಬ ಕಾರ್ಯಕರ್ತರ ಅಹವಾಲು ಮತ್ತು ಪಕ್ಷ ಸಂಘಟನೆಯಲ್ಲಿ ಅವರು ತೊಡಗಿಸಿಕೊಂಡಿರುವ ಬಗ್ಗೆ ವಿವರವಾಗಿ ಕೇಳಿ ತಿಳಿದ ಮುಖ್ಯಮಂತ್ರಿಗಳು. ಬಳಿಕ ತಮ್ಮ ಸಿಬ್ಬಂದಿಗೆ , ಅಹವಾಲುಗಳನ್ನು ಪಟ್ಟಿ ಮಾಡಿಕೊಂಡು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಬೇಡಿಕೆ ಈಡೇರಿಸಬೇಕು ಎನ್ನುವ ಸ್ಪಷ್ಟ ಸೂಚನೆ ನೀಡಿದರು. ತಕ್ಷಣ ಬಗೆಹರಿಸಬಹುದಾದ ಬೇಡಿಕೆಗಳನ್ನು ಕೂಡಲೇ ಬಗೆಹರಿಸಲು ತಮ್ಮ ಅಧಿಕಾರಿ ಮತ್ತು ಸಿಬ್ಬಂದಿಗೆ ಸ್ಥಳದಲ್ಲೇ ಸಿಎಂ ಸೂಚನೆ ನೀಡುತ್ತಿದ್ದಾರೆ ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ನೆರೆದಿದ್ದಾರೆ.

ನಿಗಮ-ಮಂಡಳಿಗಳಲ್ಲಿ ಕಾರ್ಯಕರಿಗೆ ಆದ್ಯತೆ

ನಿಗಮ ಮಂಡಳಿಗಳಲ್ಲಿ ಅವಕಾಶ ಕೊಡಬೇಕು ಎಂದು ಹಲವು ಕಾರ್ಯಕರ್ತರು ಮನವಿ ಮಾಡಿದರು. ಇದಕ್ಕೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ ಅವರು, ನಿಗಮ-ಮಂಡಳಿ ಅಧ್ಯಕ್ಷರನ್ನು ನೇಮಕ ಮಾಡಿದ್ದೇವೆ. ಬಹುತೇಕ ಎಲ್ಲಾ ಸ್ಥಾನ ಭರ್ತಿಯಾಗಿವೆ. ಇನ್ನೊಂದು ‌10-12 ಬಾಕಿ ಇರಬಹುದು ಅಷ್ಟೇ. ನಾನು ಹಾಗೂ ಅಧ್ಯಕ್ಷರು ಕುಳಿತು ಚರ್ಚೆ ಮಾಡುತ್ತೇವೆ. ಅವುಗಳಿಗೆ ಕಾರ್ಯಕರ್ತರನ್ನು ಆಯ್ಕೆ ಮಾಡುತ್ತೇವೆ, ಆದರೆ ಎಲ್ಲರಿಗೂ ಅವಕಾಶ ಸಿಗಲ್ಲ ಎಂದರು.

ಇದನ್ನೂ ಓದಿ | Uniform Civil Code: ಏಕರೂಪ ನಾಗರಿಕ ಸಂಹಿತೆ ಜಾರಿ; ರಾಜ್ಯಗಳಿಗೆ ಜವಾಬ್ದಾರಿ ನೀಡಲು ಕೇಂದ್ರದ ಚಿಂತನೆ?

ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡಿದ್ದೇವೆ‌. ಕೆಲ‌ ನಿಗಮ-ಮಂಡಳಿಗೆ ನಿರ್ದೇಶಕರನ್ನ ಆಯ್ಕೆ ಮಾಡುವುದಿದೆ. ಆ ಸ್ಥಾನಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಿಸುತ್ತೇವೆ. ಇದಕ್ಕಾಗಿ ಡಾ‌.ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಎಲ್ಲರಿಗೂ ಅವಕಾಶ ಸಿಗುವುದು ಕಷ್ಟ ಆಗಲಿದೆ. ಅದಕ್ಕಾಗಿ ಎರಡು ಅವಧಿಗೆ ಮಾಡುತ್ತೇವೆ ಈಗ ನೇಮಕ ಆಗಿರುವ ನಿಗಮ ಮಂಡಳಿ ಅಧ್ಯಕ್ಷರ, ಸದಸ್ಯರ ಅವಧಿ ಎರಡೂವರೆ ವರ್ಷ ಮಾತ್ರ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಕೆಲಸ ಮಾಡಿಕೊಡದ ಅಧಿಕಾರಿಗಳಿಗೆ ತರಾಟೆ

ಕಾರ್ಯಕರ್ತರ ಅಹವಾಲು ಸ್ವೀಕಾರದ ವೇಳೆ ಹಾಸನ ಡಿಸಿಗೆ ಸಿಎಂ ಕರೆ ಮಾಡಿ, ಪಹಣಿ ಮಾಡಿಕೊಡುವ ವಿಚಾರದಲ್ಲಿ ತರಾಟೆ ತೆಗೆದುಕೊಂಡರು. ಯಾಕಪ್ಪ ಇಷ್ಟೊಂದು ಲೇಟ್ ಮಾಡ್ತೀರಾ? ಇಂತದಕ್ಕೆಲ್ಲ ವಿಳಂಬ ಮಾಡಬೇಡಿ. ನಮ್ಮ ಕಾರ್ಯಕರ್ತರು ಬರುತ್ತಾರೆ, ಕೂಡಲೇ ಕೆಲಸ ಮಾಡಿಕೊಡಿ ಎಂದು ಸಿಎಂ ಸೂಚನೆ ನೀಡಿದರು. ಚನ್ನರಾಯಪಟ್ಟಣ ತಾಲೂಕಿನ ಬಾಗೂರು‌ ಹೋಬಳಿ ಮಾದಿಹಳ್ಳಿ ಗ್ರಾಮದ ಪಹಣಿ ಮಾಡಿಕೊಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದರಿಂದ ಹಾಸನ ಡಿಸಿಗೆ ಸಿಎಂ ತರಾಟೆ ತೆಗೆದುಕೊಂಡರು.

ಬೀದಿ ಬದಿ ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ

ಬೀದಿ ಬದಿ ವ್ಯಾಪಾರಿಗಳಿಗೆ ಅನಗತ್ಯ ತೊಂದರೆ ಕೊಡುತ್ತಿದ್ದಾರೆ. ಎತ್ತಂಗಡಿ ಮಾಡಿಸುತ್ತಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಬೀದಿ ವ್ಯಾಪಾರಿಗಳ ಕಾಂಗ್ರೆಸ್ ಘಟಕದ ಇಸ್ಮಾಯಿಲ್ ಸಿಎಂಗೆ ಮನವಿ ಮಾಡಿದರು. ಇದಕ್ಕೆ ಗರಂ ಆದ ಸಿಎಂ, ಹು-ಧಾರವಾಡ ಪಾಲಿಕೆ ಆಯುಕ್ತರಿಗೆ ಕರೆ ಮಾಡಿ, ಬೀದಿ ಬದಿ ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಅಂಗಡಿಗಳನ್ನು ತೆರವು ಮಾಡಬೇಡಿ, ವ್ಯಾಪಾರಿಗಳ ಜತೆ ಮಾನವೀಯತೆಯಿಂದ ವರ್ತಿಸಬೇಕು ಎಂದು ಸೂಚನೆ ನೀಡಿದರು.

ಕೆಎಂಎಫ್‌ನಲ್ಲಿ ಜನಸ್ನೇಹಿ ಕನ್ನಡ ತಂತ್ರಾಂಶ ಅಳವಡಿಸಲು ಸೂಚನೆ

ಸದ್ಯ ಕೆಎಂಎಫ್‌ನಲ್ಲಿರುವ ಸಾಫ್ಟ್‌ವೇರ್ ಹಾಲು ಉತ್ಪಾದಕರಿಗೆ ಅನುಕೂಲವಾಗಿಲ್ಲ. ಹೀಗಾಗಿ ಕನ್ನಡ ತಂತ್ರಾಂಶ ಅಳವಡಿಸುವಂತೆ ಮೈಸೂರಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಹಾಮಂಡಳದ ಎಸ್.ಶಿವನಾಗಪ್ಪ ಎಂಬುವರಿಂದ ಮನವಿ ಮಾಡಿದರು. ಈ ವೇಳೆ ಸ್ಥಳದಲ್ಲೇ ಕೆಎಂಎಫ್‌ ಎಂಡಿಗೆ ಫೋನ್ ಮಾಡಿದ ಸಂಪರ್ಕಿಸಿದ ಸಿಎಂ, ಹಾಲು ಉತ್ಪಾದಕರ ಸ್ನೇಹಿಯಾಗಿರುವ ಸಾಫ್ಟ್ ವೇರ್ ಅನ್ನು ಅಳವಡಿಸುವಂತೆ ಸೂಚನೆ ನೀಡಿದರು.

ವಿವಿಧೆ ಬೇಡಿಕೆ ಇಟ್ಟ ವಿಶೇಷಚೇತನ ಕಾರ್ಯಕರ್ತರು

ಮೊದಲಿಗೆ ವಿಶೇಷಚೇತನ ಕಾಂಗ್ರೆಸ್ ಕಾರ್ಯಕರ್ತರ ಅಹವಾಲುಗಳನ್ನು ಸಿಎಂ ಸ್ವೀಕರಿಸಿದರು. ವರ್ಗಾವಣೆ ಅರ್ಜಿ ಕೊಡಬಹುದು, ಆದರೆ ವರ್ಗಾವಣೆ ಶಿಫಾರಸು ತರಬೇಡಿ ಎಂದು ಸಿಎಂ ಹೇಳಿದರು. ಈ ವೇಳೆ ಕಣ್ಣು ಕಾಣದ ಆಶಾ ಪವಾರ್ ಎಂಬುವರು, ಸರ್ ನಾನು ಎಂ‌ಎ ಪೊಲಿಟಿಕಲ್ ಸೈನ್ಸ್ ಓದಿದ್ದೇನೆ‌. ಉದ್ಯೋಗ ಕೊಡಿಸಿ ಎಂದು ಮನವಿ ಮಾಡಿದರು. ಈ ವೇಳೆ ನೀನು ಪಾಠ ಮಾಡುತ್ತೀಯಾ ಏನಮ್ಮ ಎಂದು ಸಿಎಂ ಕೇಳಿದ್ದಕ್ಕೆ, ಹೌದು ಎಂದು ಆಶಾ‌ ಪ್ರತಿಕ್ರಿಯಿಸಿದರು, ಮಾಡುವುದಿದ್ದರೆ ಅವಕಾಶ ಕೊಡಿಸುವ ಭರವಸೆಯನ್ನು ಸಿಎಂ ನೀಡಿದರು. ಬಳಿಕ ಆಶಾ ಅವರ ವಿವರಗಳನ್ನು ಸಿಎಂ ವಿಶೇಷ ಅಧಿಕಾರಿ ಪಡೆದರು.

ಈ ವೇಳೆ ಮತ್ತೊಬ್ಬ ಕಾರ್ಯಕರ್ತ ನಾನು ಹಾಸನದಿಂದ ಬಂದಿದ್ದೇನೆ. ಜೀವನಕ್ಕೆ ಅನುಕೂಲ ಮಾಡಿಕೊಡುವಂತೆ ಬೇಡಿಕೆ ಇಟ್ಟರು. ಮತ್ತೊಬ್ಬ ಕಾರ್ಯಕರ್ತ ನಿಗಮ ಮಂಡಳಿ ಸದಸ್ಯ ಸ್ಥಾನ ನೀಡುವಂತೆ ಮನವಿ ಮಾಡಿದರು. ಇನ್ನೊಬ್ಬ ಸದಸ್ಯನಿಂದಲೂ ಅದೇ ರೀತಿಯ ಬೇಡಿಕೆ ಬಂತು. ಮಕ್ಕಳ ಸ್ಕೂಲ್ ಫೀಜ್ ಬಗ್ಗೆ ಬಸವನಗುಡಿ ಕ್ಷೇತ್ರದ ಕಾರ್ಯಕರ್ತ ಅಳಲು ತೋಡಿಕೊಂಡರು. ಅದೇ ರೀತಿ ಮೂರು ಚಕ್ರದ ವಾಹನ ನೀಡುವಂತೆ ಮನವಿ ಮಾಡಿದರು. ಮತ್ತೊಬ್ಬರು ನಾಲ್ಕು ಚಕ್ರದ ವಾಹನಕ್ಕೆ ಬೇಡಿಕೆ ಇಟ್ಟರೆ, ಮಹಿಳೆಯೊಬ್ಬರು ಆರ್ಥಿಕ ಸಹಾಯಕ್ಕೆ ಮನವಿ ಮಾಡಿದರು. ಹೀಗಾಗಿ ನಿಗಮದಿಂದ ಸಹಾಯ ಮಾಡುವುದಾಗಿ ಸಿಎಂ ಭರವಸೆ ನೀಡಿದರು.

ಬೀದಿಬದಿ ವ್ಯಾಪಾರಿಗಳ ಘಟಕದ ಅಧ್ಯಕ್ಷರು ನಿವೇಶನಕ್ಕೆ ಬೇಡಿಕೆ ಇಟ್ಟರು. ಇದಕ್ಕೆ ಸಿಎಂ ಪ್ರತಿಕ್ರಯಿಸಿ, ಅರ್ಜಿ ಪರಿಶೀಲಿಸುವುದಾಗಿ ಭರವಸೆ ನೀಡಿದರು. ಮತ್ತೊಬ್ಬರಿಂದ ಸೈಬರ್ ಸೆಂಟರ್‌ಗೆ ಮನವಿ ಬಂದಿತು.

ನಿಗಮ ಮಂಡಳಿಯಲ್ಲಿ ಅವಕಾಶ ಕೊಡಿಸಿ

ಕಾಂಗ್ರೆಸ್ ಕಾರ್ಯಕರ್ತರೊಬ್ಬರು ನಾನು 50 ವರ್ಷದಿಂದ ಪಕ್ಷಕ್ಕೆ ಕೆಲಸ ಮಾಡುತ್ತಿದ್ದೇನೆ. ನನಗೆ ನಿಗಮ ಮಂಡಳಿಯಲ್ಲಿ ಅವಕಾಶ ಕೊಡಿಸಿ ಎಂದು ಮನವಿ ಮಾಡಿದರು. ಮಹಿಳೆಯೊಬ್ಬರು ಫಾತಿಮಾ ಫೌಂಡೇಷನ್‌ಗೆ ಆ್ಯಂಬುಲೆನ್ಸ್ ಕೊಡಿಸುವಂತೆ ಬೇಡಿಕೆ ಇಟ್ಟರು. ಮತ್ತೊಬ್ಬ ಕಾರ್ಯಕರ್ತೆಯಿಂದ ಸಿಎಂ ಅವರನ್ನು ಹೊಗಳಿ, ನಿಮ್ಮನ್ನ ನೋಡಿದ್ರೆ ದೇವರು ನೋಡಿದಂತಾಗಿದೆ. ನನಗೆ ಪಕ್ಷದಲ್ಲಿ ಸ್ಥಾನಮಾನ ಕೊಡಿಸಿ. ನಾನು ಪಾರ್ಟಿಯನ್ನು ಕಟ್ಟುತ್ತೇನೆಂದರು.

ಇನ್ನು ನೆಲಮಂಗಲದ ಮಾರುತಿ ಎಂಬುವರು, ನನಗೆ ಗುತ್ತಿಗೆ ನೌಕರಿ ಕೊಡಿಸುವಂತೆ ಬೇಡಿಕೆ ಇಟ್ಟರು. ಅವರಿಗೆ ಕೆಲಸ ಕೊಡಿಸುವ ಭರವಸೆಯನ್ನು ಸಿಎಂ ನೀಡಿದರು. ಬ್ರೈನ್ ಸ್ಟ್ರೋಕ್‌ಗೊಳಗಾದ ಕಾರ್ಯಕರ್ತ, ನನಗೆ ಕೆಲಸ ಕೊಡಿ ಎಂದು ಮನವಿ ಮಾಡಿದರು. ಈ ವೇಳೆ ನಿನಗೆ ಮಕ್ಕಳಿದ್ದಾರಾ, ಏನು ಓದುತ್ತಿದ್ದಾರೆ. ನಿಮ್ಮ ಹೆಂಡತಿಗೆ ಗೃಹ ಲಕ್ಷ್ಮಿ ಹಣ ಬರುತ್ತಿದ್ಯಾ? ನಿನ್ನ ಸಮಸ್ಯೆ ಸರಿಪಡಿಸುವುದಾಗಿ ಸಿಎಂ ಭರವಸೆ ನೀಡಿದರು.

ಇದನ್ನೂ ಓದಿ | ED Raid: ಇಡಿ ಇಕ್ಕಳಕ್ಕೆ ಬೆದರಿ ಕುಟುಂಬ ಸಮೇತ ಕಣ್ಮರೆಯಾದ ಶಾಸಕ ಬಸವನಗೌಡ ದದ್ದಲ್‌!

ನಾವು ಕೂಲಿ ಕೆಲಸ ಮಾಡುತ್ತಿದ್ದೇವೆ. ಜೀವನ ಕಷ್ಟವಾಗಿದೆ, ಏನಾದರೂ ಕೆಲಸ ಕೊಡಿಸಿ ಎಂದು ಸಿಎಂಗೆ ಅಂಧ ಕಾರ್ಯಕರ್ತ ಮನವಿ ಮಾಡಿದರು. ಅರ್ಜಿ‌ ಪರಿಶೀಲಿಸುವುದಾಗಿ ಸಿಎಂ ಹೇಳಿದರು.

Exit mobile version