Site icon Vistara News

CM Siddaramaiah: ಕುವೆಂಪು ಏನು ಹೇಳಿದ್ದಾರೆ ಗೊತ್ತಾ? ಕಾರ್ಯದರ್ಶಿಗೆ ʼಭಾಷಾಂತರʼ ಪಾಠ ಮಾಡಿದ ಸಿಎಂ!

ಬೆಂಗಳೂರು: ಚಾಮರಾಜಪೇಟೆ ಮೊರಾರ್ಜಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಕನ್ನಡ ವ್ಯಾಕರಣ ಪಾಠ ಮಾಡಿದ ಬೆನ್ನಲ್ಲೇ ಅಲ್ಪಸಂಖ್ಯಾತ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಭಾಷಾಂತರ ಪಾಠ ಹೇಳಿದ ಪ್ರಸಂಗ ಮಂಗಳವಾರ ನಡೆಯಿತು. ಅಲ್ಪಸಂಖ್ಯಾತ ಇಲಾಖೆ ಪ್ರಗತಿ ಪರಿಶೀಲನೆ ಸಭೆ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, ಯಾವುದಾದರೂ ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ ಸೂಕ್ತ ಪದ ಇಲ್ಲದಿದ್ದರೆ ಅದನ್ನು ಇಂಗ್ಲಿಷ್‌ನಲ್ಲೇ ಬಳಸಬೇಕು. ಕುವೆಂಪು ಏನು ಹೇಳಿದ್ದಾರೆ ಗೊತ್ತಾ ಎಂದು ಪ್ರಸ್ತಾಪಿಸಿದ್ದಾರೆ.

ಅಲ್ಪಸಂಖ್ಯಾತ ಇಲಾಖೆ ಚರ್ಚೆ ನಡೆಯುವ ಸಂದರ್ಭದಲ್ಲಿ ಕಾರ್ಯದರ್ಶಿ ಮನೋಜ್ ಜೈನ್ ಅವರು ʼಇಂಡೀಕರಣʼ ಪದ ಬಳಸಿದರು. ಈ ವೇಳೆ ಮುಖ್ಯಮಂತ್ರಿಗಳು ಕುವೆಂಪು ಅವರ ಮಾತನ್ನು ಪ್ರಸ್ತಾಪಿಸಿ, ಇಂಡೀಕರಣ ಎಂದರೆ ಹೆಚ್ಚಿನವರಿಗೆ ಅರ್ಥ ಆಗುವುದಿಲ್ಲ. ಹೀಗಾಗಿ Mutation (ಮ್ಯುಟೇಶನ್) ಪದವನ್ನೇ ಬಳಸಿ ಎನ್ನುತ್ತಾ, “ಯಾವುದಾದರೂ ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ ಸೂಕ್ತ ಪದ ಇಲ್ಲದಿದ್ದರೆ ಅದನ್ನು ಇಂಗ್ಲಿಷ್‌ನಲ್ಲೇ ಬಳಸಬೇಕು. ಕುವೆಂಪು ಏನು ಹೇಳಿದ್ದರು ಗೊತ್ತಾ ಎಂದು ಅಧಿಕಾರಿಗೆ ಕಿರು ಪಾಠ ಮಾಡಿದ್ದಾರೆ. ಸಭೆಯಲ್ಲಿದ್ದವರು ಕುವೆಂಪು ಪಾಠವನ್ನು ಸಂಭ್ರಮಿಸಿದರು.

ಇದನ್ನೂ ಓದಿ | Govt Employees: ಬೇಡಿಕೆ ಈಡೇರದಿದ್ದರೆ ಜುಲೈ ಕೊನೆ ವಾರದಿಂದ ರಾಜ್ಯ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಷಡಾಕ್ಷರಿ ಎಚ್ಚರಿಕೆ

ವಕ್ಫ್‌ ಆಸ್ತಿ ಒತ್ತುವರಿ ತೆರವುಗೊಳಿಸಿ

ವಕ್ಫ್‌ ಆಸ್ತಿ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಧಿಕಾರಿಗಳು ಚುರುಕುಗೊಳಿಸಬೇಕು. ರಾಜ್ಯದಲ್ಲಿ 217 ವಕ್ಫ್‌ ಆಸ್ತಿಗಳ ಒತ್ತುವರಿ ತೆರವು ಕಾರ್ಯ ಬಾಕಿಯಿದೆ. 22581 ವಕ್ಫ್‌ ಖಾತೆ ಮ್ಯುಟೇಶನ್‌ ಬಾಕಿಯಿದ್ದು, ಇದನ್ನು ತ್ವರಿತಗೊಳಿಸಬೇಕು. ನ್ಯಾಯಾಲಯಗಳಲ್ಲಿ ತಡೆ ಇರುವ ಪ್ರಕರಣಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮವನ್ನು ಸಮರ್ಪಕವಾಗಿ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ ಇಲಾಖೆಗೆ ಸಂಬಂಧಿಸಿದಂತೆ ಎಸಿ ನೇತೃತ್ವದಲ್ಲಿ ದೌರ್ಜನ್ಯ ತಡೆ ಸಮಿತಿ ಸಭೆಗಳನ್ನು ನಿಯಮಿತವಾಗಿ ನಡೆಸದಿರುವುದಕ್ಕೆ ಗರಂ ಸಿಎಂ, ಮೂರು ತಿಂಗಳಿಗೊಮ್ಮೆ ಸಭೆ ನಡೆಸುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು ಎಂದು ಸಭೆಯನ್ನೇ ನಡೆಸದ 13 ಉಪ ವಿಭಾಗಗಳ ಬಗ್ಗೆ ಡಿಸಿಗಳನ್ನು ಖಾರವಾಗಿ ಪ್ರಶ್ನಿಸಿದರು.

ಸಿಂಧುತ್ವ ಪ್ರಮಾಣಪತ್ರ ವಿಚಾರದಲ್ಲಿ ಅಸಡ್ಡೆ ಬೇಡ. ಅರ್ಹರಾಗಿದ್ದರೆ ತಕ್ಷಣ ಕೊಡಿ, ಅರ್ಹತೆ ಇಲ್ಲದಿದ್ದರೆ ಸ್ಪಷ್ಟವಾಗಿ‌ ತಿಳಿಸಬೇಕು. ದೌರ್ಜನ್ಯ ತಡೆ ಅಧಿನಿಯಮದಡಿಯಲ್ಲಿ ಕೊಲೆ ಪ್ರಕರಣಗಳಲ್ಲಿ ತಡ ಮಾಡದೆ ಅನುಕಂಪದ ಸರ್ಕಾರಿ ನೌಕರಿ ನೀಡಬೇಕು ಎಂದು ಸೂಚಿಸಿದರು.

ದೌರ್ಜನ್ಯ ತಡೆ ಅಧಿನಿಯಮದ ಅಡಿ ದಾಖಲಾಗಿರುವ ಒಟ್ಟು 26 ಕೊಲೆ ಪ್ರಕರಣಗಳಲ್ಲಿ ಕುಟುಂಬದ ಅವಲಂಬಿತರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಬೇಕಾಗಿದ್ದು, ಆದಷ್ಟು ಬೇಗನೆ ನೌಕರಿ ಒದಗಿಸಬೇಕು. ಜಿಲ್ಲೆಯಲ್ಲಿ ಉಪ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನು ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ನಡೆಸಬೇಕು.

ಸಿಂಧುತ್ವ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ ಸಲ್ಲ

ಸಿಂಧುತ್ವ ಪ್ರಮಾಣ ಪತ್ರವನ್ನು ಒಂದು ತಿಂಗಳ ಒಳಗಾಗಿ ನೀಡಬೇಕು. ಪ್ರಸ್ತುತ 2684 ಅರ್ಜಿಗಳು ಬಾಕಿಯಿದ್ದು, ಅರ್ಹತೆ ಇದ್ದವರಿಗೆ ತಕ್ಷಣ ಪ್ರಮಾಣ ಪತ್ರ ನೀಡಬೇಕು. ವಿನಾಕಾರಣ ಸಿಂಧುತ್ವ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದರೆ ಜಿಲ್ಲಾಧಿಕಾರಿ ಅವರನ್ನೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಂಬೇಡ್ಕರ್‌ ಭವನ ನಿರ್ಮಾಣ ಕಾಮಮಗಾರಿ ಹಲವು ಕಡೆ ಅರ್ಧದಲ್ಲಿ ನಿಂತಿದ್ದು, ಕಾಮಗಾರಿ ಪೂರ್ಣಗೊಳಿಸುವ ಕುರಿತು ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಗಂಗಾ ಕಲ್ಯಾಣ ಯೋಜನೆ ಅರ್ಜಿಗಳ ಶೀಘ್ರ ವಿಲೇವಾರಿ ಮಾಡಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ವಿದ್ಯುದೀಕರಣಕ್ಕೆ ನೋಂದಾಯಿಸಿದ ಹಾಗೂ ಬಾಕಿ ಇರುವ ಅರ್ಜಿಗಳ ಶೀಘ್ರ ವಿಲೇವಾರಿ ಮಾಡಲು ಸಿಎಂ ಸೂಚನೆ ನೀಡಿದರು.

Tourism Policy: ಹೊಸ ಪ್ರವಾಸೋದ್ಯಮ ನೀತಿ; ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ಯಾನ್‌ ರೂಪಿಸಲು ಸಿಎಂ ಸೂಚನೆ

ಗಂಗಾಕಲ್ಯಾಣ ಯೋಜನೆಯಡಿ ಒಟ್ಟು 9616 ಬೋರ್‌ವೆಲ್‌ ಕೊರೆಯಲಾಗಿದ್ದು, 4413 ಬೋರ್‌ವೆಲ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ 5203 ಬೋರ್‌ವೆಲ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕಾಗಿದೆ.
ಜಿಲ್ಲಾ ಮಟ್ಟದಲ್ಲಿ ಕಾಲೇಜುಗಳು ಹೆಚ್ಚಿರುವ ಕಾರಣ ಜಿಲ್ಲಾ ಮಟ್ಟದಲ್ಲಿ ಹೊಸ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದರು.

Exit mobile version