ಬೆಂಗಳೂರು: ಈ ಹಿಂದೆ ಒಮ್ಮೆ ರಾಜ್ಯದಲ್ಲಿ ವಿವಾದಕ್ಕೀಡಾಗಿ ತಣ್ಣಗಾಗಿದ್ದ ವಿಚಾರವನ್ನು ಮತ್ತೆ ಕೈಗೆತ್ತಿಕೊಳ್ಳಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ತಮ್ಮ ಮೊದಲ ಅವಧಿಯಲ್ಲಿ ನಡೆಸಲಾದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು (ಜಾತಿ ಗಣತಿ) ಸ್ವೀಕರಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ವರದಿಗೆ ರಾಜ್ಯದ ಎರಡು ಪ್ರಬಲ ಜಾತಿಗಳಾದ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ಈ ಹಿಂದೆಯೇ ವಿರೋಧ ವ್ಯಕ್ತಪಡಿಸಿದ್ದವು.
ಕರ್ನಾಟಕ ಶೋಷಿತ ವರ್ಗಗಳ ಮಹಾಒಕ್ಕೂಟದ ನಿಯೋಗವನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ನಂತರ ಮಾತನಾಡಿದರು. ಹಿಂದಿನ ಬಾರಿ ತಮ್ಮ ಸರ್ಕಾರದ ಅವಧಿಯಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಹಮ್ಮಿಕೊಳ್ಳಲಾದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸ್ವೀಕರಿಸಿ, ಅದರ ದತ್ತಾಂಶದ ಆಧಾರದಲ್ಲಿ ವಿವಿಧ ಸಮುದಾಯಗಳಿಗೆ ಅನುಕೂಲ ಕಲ್ಪಿಸಲಾಗುವುದು.
ಜಾತಿವಾರು ಸಮೀಕ್ಷೆಯಿಂದ ಜನರಿಗೆ ಒದಗಿಸಬೇಕಾದ ಸೌಲಭ್ಯಗಳು, (preferential treatment) ಮೊದಲಾದ ಅಂಶಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಅಗತ್ಯವಿರುವ ದತ್ತಾಂಶ ಲಭ್ಯವಾಗುವುದು. ಮೀಸಲಾತಿ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ವೈಜ್ಞಾನಿಕ ಹಾಗೂ ನಿಖರ ಮಾಹಿತಿ ಅತಿ ಅಗತ್ಯ. ಈ ಉದ್ದೇಶದಿಂದ ಜಾತಿವಾರು ಸಮೀಕ್ಷೆಯನ್ನು ನಡೆಸಲಾಗಿತ್ತು. ಇದೀಗ ವರದಿಯನ್ನು ಸ್ವೀಕರಿಸಿ, ಅದರಲ್ಲಿನ ದತ್ತಾಂಶಗಳ ಆಧಾರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಿಜೆಪಿ ಸರ್ಕಾರವು ಮೀಸಲಾತಿಯಲ್ಲಿ ಸೃಷ್ಟಿಸಿದ ಗೊಂದಲ ನಿವಾರಣೆ ಮಾಡಲಾಗುವುದು. ಇಲ್ಲವಾದರೆ ಯಾರಿಗೂ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗದು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಿಯೋಗದಲ್ಲಿ ಒಕ್ಕೂಟದ ಮುಖಂಡರಾದ ಕೆ.ಎಂ.ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಮಾವಳ್ಳಿ ಶಂಕರ್, ಪ್ರೊ.ರವಿ ವರ್ಮಕುಮಾರ್, ಅನಂತ್ ನಾಯಕ್, ಡಾ.ನರಸಿಂಹಯ್ಯ, ಪ್ರೊ.ಜಾಫೆಟ್, ಬಿ.ಟಿ.ಲಲಿತಾನಾಯಕ್, ಜಿ.ಎಸ್.ಪಾಟೀಲ್ ಸೇರಿ 150 ಕ್ಕೂ ಹೆಚ್ಚು ಮಂದಿ ನಾನಾ ಜಾತಿಗಳ ಪ್ರತಿನಿಧಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.
ಸಮುದಾಯಗಳ ವಿರೋಧ:
ಜಾತಿ ಗಣತಿ ಎಂದೇ ಪ್ರಸಿದ್ಧವಾದ ವರದಿಯನ್ನು ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲೇ ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ಧಪಡಿಸಲಾಗಿತ್ತು. ವರದಿ ಸಿದ್ಧವಾಗಿದ್ದರೂ ಸರ್ಕಾರ ಅದನ್ನು ಸ್ವೀಕರಿಸಿಲ್ಲ ಹಾಗೂ ಸದನದಲ್ಲಿ ಮಂಡಿಸಿಲ್ಲ. ಹಾಗಾಗಿ ಗಣತಿಯ ಯಾವುದೇ ಅಂಶಗಳು ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೆ ಅನೇಕ ಸಂದರ್ಭದಲ್ಲಿ ಈ ಬಗ್ಗೆ ವಿವಿಧ ಮಾಹಿತಿಗಳು ʼಸೋರಿಕೆ ಆಗಿವೆʼ ಎನ್ನಲಾಗುತ್ತಿದೆ. ಅದರ ಪ್ರಕಾರ ರಾಜ್ಯದಲ್ಲಿ ಒಕ್ಕಲಿಗ ಹಾಗೂ ವೀರಶೈವ ಲಿಂಗಾಯತ ಸಮುದಾಯಗಳ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂಬ ಆತಂಕ ಸಮುದಾಯಗಳ ಸಂಘಟನೆಗಳಲ್ಲಿದೆ. ವೀರಶೈವ ಲಿಂಗಾಯತರು ಹಾಗೂ ಒಕ್ಕಲಿಗರು 1.5 ಕೋಟಿಗೂ ಹೆಚ್ಚಿದ್ದಾರೆ. ಆದರೆ ಜಾತಿ ಗಣತಿಯಲ್ಲಿ ಎರಡೂ ಸಮುದಾಯಗಳನ್ನು ಒಂದು ತಲಾ ಒಂದು ಕೋಟಿಗಿಂತ ಕಡಿಮೆ ತೋರಿಸಲಾಗಿದೆ. ಈ ವರದಿಯನ್ನು ಸರ್ಕಾರ ಸ್ವೀಕರಿಸಬಾರದು ಎಂದು ವೀರಶೈವ ಲಿಂಗಾಯತ ಮಹಾಸಭಾ ಸಹ ಆಗ್ರಹಿಸಿತ್ತು.
ಎರಡು ವರ್ಷದ ಹಿಂದೆಯೂ ಈ ಕುರಿತು ಚರ್ಚೆ ನಡೆದಾಗ, ವರದಿ ಸ್ವೀಕರಿಸಲು ಸಿದ್ದರಾಮಯ್ಯ ಒಲವು ತೋರಿದ್ದರು. ಆದರೆ ಡಿ.ಕೆ. ಶಿವಕುಮಾರ್ ಭಿನ್ನ ನಿಲುವು ವ್ಯಕ್ತಪಡಿಸಿದ್ದರು. ಈ ಬಗ್ಗೆ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿಕೊಳ್ಳಲು ವೀರಪ್ಪ ಮೊಯ್ಲಿ ಅವರ ಸಮಿತಿ ರಚಿಸಲಾಗಿತ್ತು. ವಿಧಾನಸಭೆ ಚುನಾವಣೆಗೆ ಘೋಷಣೆ ಮಾಡಿದ್ದ ಪ್ರಣಾಳಿಕೆಯಲ್ಲಿ, ಜಾತಿ ಗಣತಿ ವರದಿಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಕಾಂಗ್ರೆಸ್ ಪಕ್ಷ ತಿಳಿಸಿತ್ತು. ಆದರೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಕುರಿತೇ ಹೆಚ್ಚು ಚರ್ಚೆ ಆಗಿದ್ದರಿಂದ ಜಾತಿ ಗಣತಿ ವರದಿ ಕುರಿತು ಚರ್ಚೆಗಳು ನಡೆದಿರಲಿಲ್ಲ. ಕಾಂಗ್ರೆಸ್ ಪಕ್ಷದೊಳಗೆ ಈ ಕುರಿತು ಯಾವ ಅಭಿಪ್ರಾಯಗಳಿವೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇದೀಗ ವರದಿ ಸ್ವೀಕರಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿರುವುದರಿಂದ ಮುಂದೆ ಯಾವ ರೀತಿ ಚರ್ಚೆಗಳು ನಡೆಯುತ್ತವೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ: Bihar Caste Survey: ಬಿಹಾರದಲ್ಲಿ ಜಾತಿ ಸಮೀಕ್ಷೆಗೆ ನೀಡಿದ ತಡೆಯಾಜ್ಞೆ ತೆರವಿಗೆ ಸುಪ್ರೀಂ ನಕಾರ; ನಿತೀಶ್‌ಗೆ ಹಿನ್ನಡೆ