ಬೆಂಗಳೂರು: ಕೆಇಆರ್‌ಸಿಯು ಕೈಗೊಂಡಿರುವ ನಿರ್ಧಾರವನ್ನು ಹಿಂಪಡೆಯಲು ಸರ್ಕಾರದಿಂದ ಸಾಧ್ಯವಿಲ್ಲ ಎಂದಿರುವ ಸಿಎಂ ಸಿದ್ದರಾಮಯ್ಯ, ವಿದ್ಯುತ್ ದರ ಹೆಚ್ಚಳದ ವಿರುದ್ಧ ಹೈಕೋರ್ಟ್‌ನಲ್ಲಿ ಅಪೀಲ್ ಸಲ್ಲಿಸಿದರೆ ಸರ್ಕಾರ ನಿಮ್ಮ ಜತೆಗೆ ನಿಲ್ಲುತ್ತದೆ ಎಂದು ಕೈಗಾರಿಕಾ ಒಕ್ಕೂಟಗಳಿಗೆ ಭರವಸೆ ನೀಡಿದ್ದಾರೆ.
ಎಫ್‌ಕೆಸಿಸಿಐ ಹಾಗೂ ಕಾಸಿಯಾ ನಿಯೋಗವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ವಿದ್ಯುತ್ ದರ ಇಳಿಸುವಂತೆ ಮನವಿ ಮಾಡಿತು. ವಿದ್ಯುತ್ ದರ ಹೆಚ್ಚಳಕ್ಕೆ ಕೈಗಾರಿಕೆ ಮತ್ತು ವಾಣಿಜ್ಯ ವಲಯ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ನಿಯೋಗವು ಮನವಿ ಮಾಡಿದೆ. ಸಿಎಂ ಭೇಟಿ ಬಳಿಕ ಎಫ್‌ಕೆಸಿಸಿಐ ಅದ್ಯಕ್ಷ ಬಿ. ವಿ. ಗೋಪಾಲರೆಡ್ಡಿ ಮಾತನಾಡಿ, ನಾವು ವಿದ್ಯುತ್ ದರ ಹೆಚ್ಚಳ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇವೆ. ಸೋಮವಾರ ಮತ್ತೊಂದು ಸಭೆ ಕರೆಯೋದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಭೆ ಕರೆದಿದ್ದಾರೆ.
ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳಿಗೆ ಹೊರೆ ಆಗ್ತಿದೆ. ವಿದ್ಯುತ್ ದರ ಏರಿಕೆಯಿಂದ ಡಬಲ್ ಬಿಲ್ ಬಂದಿದೆ. ಕೈಗಾರಿಕೆಗಳಿಗೆ ಬಹಳ ಹೊಡೆತ ಬಿದ್ದಿದೆ. ವಿದ್ಯುತ್ ಟ್ಯಾಕ್ಸ್ 3%ನಿಂದ 9% ಆಗಿದೆ. ಕೆಲವೊಂದು ನಿಯಮಗಳನ್ನು ಸಡಿಲ ಮಾಡಿಕೊಡಿ, ಪರಿಶೀಲನೆಗೆ ಬಂದು ಕಿರುಕುಳ ಕೊಡ್ತಾರೆ ಎಂದಿದ್ದೇವೆ. ಸೋಮವಾರ ಇಂಧನ ಸಚಿವರು ಸಭೆ ಕರೆದಿದ್ದಾರೆ. ಕೆಇಆರ್‌ಸಿ ಬಗ್ಗೆ ಕಾಮೆಂಟ್ ಮಾಡಕ್ಕಾಗಲ್ಲ. ಮೇ ನಲ್ಲಿ ಬಂದ ಆರ್ಡರ್ ಇಂಪ್ಲಿಮೆಂಟ್ ಮಾಡಿದ್ದಾರೆ. ಹಂತಹಂತವಾಗಿ ಬಿಲ್ ಕಲೆಕ್ಟ್ ಮಾಡಿ ಅಂತಾ ಹೇಳಿದ್ದೇವೆ. ಎರಡು ತಿಂಗಳು ಒಟ್ಟಿಗೆ ಬಿಲ್ ಕೊಟ್ಟಿದ್ದಾರೆ, ಅದು ಹೊರೆ ಆಗಿದೆ.
ಸರ್ಕಾರ ಹೈಕ್ ಮಾಡಿದಿದ್ರೆ, ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬಹುದಿತ್ತು. ಕೆಇಆರ್‌ಸಿ ಸ್ವತಂತ್ರ ಸಂಸ್ಥೆ, ನಾವೇನು ಮಾಡಕ್ಕಾಗಲ್ಲ. ಟ್ಯಾಕ್ಸ್ ಇಳಿಸಿದ್ರೆ 45 ಪೈಸೆ ಕಡಿಮೆ ಆಗುತ್ತೆ. ಎಫ್‌ಕೆಸಿಸಿಐ, ಕಾಸಿಯಾ ಎಲ್ಲರನ್ನೂ ಸೋಮವಾರ ಮೀಟಿಂಗ್ ಗೆ ಕರೆದಿದ್ದಾರೆ ಎಂದರು.
ಕಾಸಿಯಾ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಸಿಎಂ ಚರ್ಚೆಗೆ ಕರೆದಿದ್ದರು. ವಿದ್ಯುತ್ ದರ ಹೆಚ್ಚಳದ ಬಗ್ಗೆ ಮಾತನಾಡಿದ್ದೇವೆ. ಕೆಇಆರ್‌ಸಿ ಅಟಾನಾಮಸ್ ಬಾಡಿ, ನಾವೇನು ಮಾಡೋಕೆ ಆಗಲ್ಲ ಎಂದು ಸಿಎಂ ತಿಳಿಸಿದ್ದಾರೆ. ದರ ಹೆಚ್ಚಳವಾಗಿರೋದನ್ನ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದು ಸಿಎಂ ತಿಳಿಸಿದ್ದಾರೆ. ಹೈಕೋರ್ಟ್‌ಗೆ ಅಪಿಲ್ ಹೋದ್ರೆ ನಾವು ನಿಮ್ಮ ಜೊತೆ ನಿಲ್ಲುತ್ತೇವೆ ಎಂದಿದ್ದಾರೆ. 9% ರಿಂದ 1 % ತೆರಿಗೆ ಇಳಿಸಲು ಮನವಿ ಮಾಡಿದ್ದೇವೆ. ದಕ್ಷಿಣ ಕರ್ನಾಟಕದಲ್ಲಿ ಪ್ರತಿಭಟನೆ ಮಾಡಿಲ್ಲ. ಬಳ್ಳಾರಿ,ಕಲ್ಬುರ್ಗಿ ವಲಯದವರು ಪ್ರತಿಭಟನೆ ಮಾಡಿದ್ದಾರೆ. ತೆರಿಗೆ ಇಳಿಸುವ ಬಗ್ಗೆ ಪರಿಶೀಲನೆ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ ಎಂದರು.
ಇದನ್ನೂ ಓದಿ: Congress Guarantee: ಗೃಹಜ್ಯೋತಿಯಲ್ಲ ಇದು ಸುಡುಜ್ಯೋತಿ: ವಿದ್ಯುತ್ ದರ ಅರ್ಧ ಕಡಿಮೆ ಮಾಡಿ ಎಂದ ಎಚ್.ಡಿ. ಕುಮಾರಸ್ವಾಮಿ
ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಗೃಹಜ್ಯೋತಿ ಯೋಜನೆಗೂ ವಿದ್ಯುತ್ ದರ ಏರಿಕೆಗೂ ಸಂಬಂಧವಿಲ್ಲ. ಗೃಹ ಜ್ಯೋತಿ ಹೊರೆಯನ್ನು ಕೈಗಾರಿಕೆಗಳ ಮೇಲೆ ಹಾಕಲಾಗಿದೆ ಎನ್ನುವುದು ಪರಮ ಸುಳ್ಳು. ಇದೊಂದು ತಪ್ಪು ಅಭಿಪ್ರಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೈಗಾರಿಕೋದ್ಯಮಿಗಳಿಗೆ ಮನವರಿಕೆ ಮಾಡಿಸಿದರು.
ನಮ್ಮ ಸರ್ಕಾರ ವಿದ್ಯುತ್ ಶುಲ್ಕವನ್ನು ಏರಿಸುವ ನಿರ್ಧಾರ ಮಾಡಿಲ್ಲ. ಕೆಇಆರ್‌ಸಿಯು ಬೆಲೆ ಹೆಚ್ಚಳದ ನಿರ್ಧಾರವನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಕೈಗೊಂಡಿತ್ತು ಎಂದರು.