Site icon Vistara News

R Ashok:‌ ದುಡ್ಡಿಗಾಗಿ ಕಾರ್ಪೊರೇಷನ್‌, ಯುಟಿಲಿಟಿ ಬಿಲ್ಡಿಂಗ್‌ ಅಡ ಇಡಲು ಸಿದ್ದರಾಮಯ್ಯ ಪ್ಲಾನ್; ಅಶೋಕ್‌ ಆರೋಪ

R Ashok

CM Siddaramaiah Has A Plan To Pledge Corporation, Utility Building: Says R Ashok

ಬೆಂಗಳೂರು: ರಾಜ್ಯದಲ್ಲಿ ಒಂದು ಲೀಟರ್‌ ಪೆಟ್ರೋಲ್‌ಗೆ 3 ರೂ. ಹಾಗೂ ಡೀಸೆಲ್‌ಗೆ 3.5 ರೂ. ಏರಿಕೆ (Petrol Diesel Price Hike) ಮಾಡಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ (Karnataka Government) ವಿರುದ್ಧ ಬಿಜೆಪಿಯು ಬೆಲೆಯೇರಿಕೆ ಅಸ್ತ್ರ ಪ್ರಯೋಗಿಸುತ್ತಿದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಹೆಚ್ಚಿಸಿದ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ (ಜೂನ್‌ 17) ಬೆಂಗಳೂರು ಸೇರಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಮಾಡಲು ಮುಂದಾಗಿದೆ. ಪ್ರತಿಭಟನೆ ಕುರಿತು ಸುದ್ದಿಗೋಷ್ಠಿ ನಡೆಸಿದ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ (R Ashok), ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ರಾಜ್ಯ ಸರ್ಕಾರವು ದಿವಾಳಿಯಾಗಿದ್ದು, ಸಿದ್ದರಾಮಯ್ಯ ಅವರು ವಿಫಲರಾಗಿದ್ದಾರೆ. ಪೆಟ್ರೋಲ್‌ ಬೆಲೆಯೇರಿಕೆ ಮಾಡಿರುವ ರಾಜ್ಯ ಸರ್ಕಾರವು, ಹಣಕ್ಕಾಗಿ ಕಾರ್ಪೊರೇಷನ್‌ ಹಾಗೂ ಯುಟಿಲಿಟಿ ಬಿಲ್ಡಿಂಗ್‌ಅನ್ನು ಅಡಮಾನ ಇಡಲು ಸಜ್ಜಾಗಿದೆ” ಎಂದು ಆರೋಪಿಸಿದರು.

“ಸಿದ್ದರಾಮಯ್ಯ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎಂದು ರಾಜ್ಯದ ಜನರ ಮೇಲೆ ದ್ವೇಷ ಕಾರುತ್ತಿದ್ದಾರೆ. ಇದೇ ಕಾರಣಕ್ಕಾಗಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ನಾವು ತೆರಿಗೆ ಕಡಿಮೆ ಮಾಡಿದ್ದೆವು. ನಮ್ಮ ತೆರಿಗೆ, ನಮ್ಮ ಹಕ್ಕು ಎಂದೆಲ್ಲ ಹಾರಾಡಿದ ಕಾಂಗ್ರೆಸ್‌ ಈಗ ಬೆಲೆಯೇರಿಕೆ ಮಾಡಿದೆ. ಕರ್ನಾಟಕದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಹೋಗಿರುವ ಕಾರಣ ಸಿದ್ದರಾಮಯ್ಯ ಅವರು ಜನರಿಗೆ ಬೆಲೆಯೇರಿಕೆಯ ಬರೆ ಎಳೆಯಲು ಮುಂದಾಗಿದ್ದಾರೆ” ಎಂಬುದಾಗಿ ಆರ್.‌ ಅಶೋಕ್‌ ಅಸಮಾಧಾನ ವ್ಯಕ್ತಪಡಿಸಿದರು.

ಸಂಬಳ ಕೊಡಲೂ ದುಡ್ಡಿಲ್ಲ

“ಮುಂದಿನ ತಿಂಗಳು ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಸರ್ಕಾರದ ಬಳಿ ದುಡ್ಡಿಲ್ಲ ಎಂಬ ಕಾರಣಕ್ಕಾಗಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಲಾಗಿದೆ. ಆದಾಯ ಬರುವಂತಾಗಲಿ ಎಂದು ಬಿಡಿಎ ಕಮರ್ಷಿಯಲ್‌ ಕಾಂಪ್ಲೆಕ್ಸ್‌ ಕಟ್ಟಿಸಲಾಯಿತು. ಆದರೆ, ಸಿದ್ದರಾಮಯ್ಯ ಅವರು ಅದನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಕಾಂಗ್ರೆಸ್‌ನವರಿಗೆ ಕಮಿಷನ್‌ ಹೊಡೆಯಲು ಆಗುತ್ತಿಲ್ಲ. ಬಿಬಿಎಂಪಿಗೆ 4 ಸಾವಿರ ಕೋಟಿ ರೂ. ಸಾಲ ಮಾಡಿದ್ದಾರೆ. ಕಾರ್ಪೊರೇಷನ್‌ ಬಿಲ್ಡಿಂಗ್‌, ಯುಟಿಲಿಟಿ ಬಿಲ್ಡಿಂಗ್‌, ವಾರ್ಡ್‌ ಆಫೀಸ್‌ಗಳನ್ನು ಕೂಡ ಅಡ ಇಡಲು ಇವರು ನೀಲಿನಕ್ಷೆ ತಯಾರಿಸಿದ್ದಾರೆ. ವಿಶ್ವಬ್ಯಾಂಕ್‌ ಅಥವಾ ನ್ಯಾಷನಲ್‌ ಬ್ಯಾಂಕ್‌ಗೆ ಅಡ ಇಡಲು ಯೋಜನೆ ರೂಪಿಸುತ್ತಿದ್ದಾರೆ” ಎಂದು ಪ್ರತಿಪಕ್ಷ ನಾಯಕ ಆರೋಪಿಸಿದರು.

ನಾಳೆ ಸರ್ಕಾರದ ವಿರುದ್ಧ ಪ್ರತಿಭಟನೆ

“ಬೆಲೆಯೇರಿಕೆ ಮೂಲಕ ರಾಜ್ಯದ ಜನರ ದುಡಿಮೆಯ ಹಣವನ್ನು ಕೊಳ್ಳೆ ಹೊಡೆಯಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ (ಜೂನ್‌ 17) ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗತ್ತದೆ. ನನ್ನ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಬೆಳಗ್ಗೆ 11.30ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತೇವೆ” ಎಂದು ತಿಳಿಸಿದರು.

ಇದನ್ನೂ ಓದಿ: Petrol Diesel Price: ಪೆಟ್ರೋಲ್ ದರ ಹೆಚ್ಚಳ ಆದೇಶ‌ ವಾಪಸ್ ಪಡೆಯದಿದ್ದರೆ ಉಗ್ರ ಪ್ರತಿಭಟನೆ: ವಿಜಯೇಂದ್ರ ಎಚ್ಚರಿಕೆ

Exit mobile version