ಬೆಂಗಳೂರು: ಸರಳ ಬಹುಮತದೊಂದಿಗೆ ಗದ್ದುಗೆ ಏರಿರುವ, ಕಾಂಗ್ರೆಸ್ ಸರ್ಕಾರದ ಚುಕ್ಕಾಣಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ, ಪೂರ್ಣ ಸಂಪುಟವನ್ನು ಭರ್ತಿ ಮಾಡುವ ಮೂಲಕ ಹೊಸ ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ. ಇದೀಗ 24 ಸಚಿವರ ಪ್ರಮಾಣದೊಂದಿಗೆ 34 ಸ್ಥಾನ ಭರ್ತಿಯಾಗಿದೆ. 2003ರಲ್ಲಿ ನಡೆದ ಸಂವಿಧಾನ ತಿದ್ದುಪಡಿ ನಂತರದಲ್ಲಿ ಕರ್ನಾಟಕಕ್ಕೆ 34 ಸಚಿವರನ್ನಷ್ಟೆ ನೇಮಿಸುವ ಅಧಿಕಾರವಿದೆ.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜತೆಗೆ 8 ಸಚಿವರು ಈ ಮೊದಲು ಪ್ರಮಾಣವಚನ ಸ್ವೀಕರಿಸಿದ್ದರು. ಹೊಸ ಸಚಿವರ ಸೇರ್ಪಡೆ ಬೆನ್ನಲ್ಲೇ, ಸ್ಥಾನ ಸಿಗದವರ ಅಸಮಾಧಾನ ಹೊಗೆಯಾಡಲು ಆರಂಭಿಸಿದೆ.
ರಾಜಭವನದ ಗಾಜಿನಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೊದಲಿಗೆ ಎಚ್.ಕೆ. ಪಾಟೀಲ್, ಕೃಷ್ಣ ಬೈರೇಗೌಡ, ಎನ್. ಚೆಲುವರಾಯಸ್ವಾಮಿ, ಕೆ. ವೆಂಕಟೇಶ್ ಹಾಗೂ ಡಾ. ಎಚ್.ಸಿ. ಮಹದೇವಪ್ಪ ಅವರನ್ನು ಒಂದು ಗುಂಪಿನಲ್ಲಿ ಪ್ರಮಾಣವಚನಕ್ಕೆ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಆಹ್ವಾನಿಸಿದರು.
ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ಗುಂಪಿನಲ್ಲಿ ಪ್ರಮಾಣವಚನ ಬೇಡ ಎಂದು ತಿಳಿಸಿದರು. ಎದುರಿಗೆ ಹಾಕಿದ್ದ ಐದು ಮೈಕ್‌ಗಳಲ್ಲಿ ನಾಲ್ಕನ್ನು ತೆರವುಗೊಳಿಸಿ, ಒಂದನ್ನು ಮಾತ್ರ ಉಳಿಸಿದರು. ಎಚ್.ಕೆ. ಪಾಟೀಲ್ ಹೊರತುಪಡಿಸಿ ಉಳಿದೆಲ್ಲರೂ ವಾಪಸಾದರು. ಎಚ್.ಕೆ. ಪಾಟೀಲರಿಂದ ಆರಂಭಿಸಿ ಎಲ್ಲರೂ ಒಬ್ಬೊಬ್ಬರಾಗಿ ಪ್ರಮಾಣವಚನ ಸ್ವೀಕರಿಸಿದರು.
ಎಚ್.ಕೆ. ಪಾಟೀಲ್, ಕೃಷ್ಣ ಬೈರೇಗೌಡ, ಎನ್. ಚೆಲುವರಾಯಸ್ವಾಮಿ, ಕೆ. ವೆಂಕಟೇಶ್, ಡಾ. ಎಚ್.ಸಿ. ಮಹದೇವಪ್ಪ, ಈಶ್ವರ ಖಂಡ್ರೆ, ಕೆ.ಎನ್. ರಾಜಣ್ಣ, ದಿನೇಶ್ ಗುಂಡೂರಾವ್, ಶರಣಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ್, ಆರ್.ಬಿ. ತಿಮ್ಮಾಪುರ, ಎಸ್.ಎಸ್. ಮಲ್ಲಿಕಾರ್ಜುನ, ಶಿವರಾಜ ತಂಗಡಗಿ, ಡಾ. ಶರಣಪ್ರಕಾಶ ಪಾಟೀಲ್, ಮಾಂಕಾಳು ವೈದ್ಯ, ಲಕ್ಷ್ಮೀ ಹೆಬ್ಬಾಳ್ಕರ್, ರಹೀಂ ಖಾನ್, ಡಿ. ಸುಧಾಕರ್, ಸಂತೋಷ್ ಲಾಡ್, ಎನ್. ಎಸ್. ಬೋಸರಾಜ್, ಬೈರತಿ ಸುರೇಶ್, ಮಧು ಬಂಗಾರಪ್ಪ, ಡಾ. ಎಂ. ಸಿ. ಸುಧಾಕರ್, ಬಿ. ನಾಗೇಂದ್ರ ಅವರು ಒಂದು ಗುಂಪಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಚುನಾವಣೆ ಸಮಯದಲ್ಲಿ ಪಕ್ಷ ಸಂಘಟನೆ ಜತೆಗೇ ಇದ್ದ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷನಾಯಕರೂ ಆಗಿದ್ದ ಬಿ.ಕೆ. ಹರಿಪ್ರಸಾದ್ ಅವರನ್ನು ಪಟ್ಟಿಯಲ್ಲಿ ಸೇರಿಸಿಲ್ಲ. ವಿಧಾನ ಪರಿಷತ್ ಸದಸ್ಯರೇ ಅಲ್ಲದ ಬೋಸರಾಜು ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಇದು ಈಗಾಗಲೆ ಅಸಮಾಧಾನಕ್ಕೆ ಕಾರಣವಾಗಿದೆ. ಈ ರೀತಿ ಅಸಮಾಧಾನಗೊಂಡವರನ್ನು ಸಮಾಧಾನ ಪಡಿಸಲು ಒಂದೆರಡು ಸಚಿವ ಸ್ಥಾನವನ್ನು ಖಾಲಿ ಉಳಿಸಿಕೊಳ್ಳುವುದು ವಾಡಿಕೆ. ಎರಡು ಸ್ಥಾನ ಉಳಿಸಿಕೊಂಡು ಏಳೆಂಟು ಸಚಿವಾಕಾಂಕ್ಷಿಗಳ ಮೂಗಿಗೆ ತುಪ್ಪ ಸವರುತ್ತಾ ಸರ್ಕಾರಕ್ಕೆ ಧಕ್ಕೆಯಾಗದಂತೆ ನಡೆಸಲಾಗುತ್ತದೆ.
ಇದೀಗ ಎಲ್ಲ ಸ್ಥಾನವೂ ಭರ್ತಿ ಆಗಿರುವುದರಿಂದ ಕನಿಷ್ಠ ಆರೇಳು ತಿಂಗಳು ಹೊಸ ಸಚಿವರಾಗಲು ಅವಕಾಶ ಸಿಗುವುದಿಲ್ಲ. ಇದೀಗ ನೇಮಕವಾಗಿರುವ ಸಚಿವರುಗಳಲ್ಲಿ ಸಿದ್ದರಾಮಯ್ಯ ಅವರ ಕೈ ಮೇಲಾಗಿದೆ ಎನ್ನಲಾಗುತ್ತಿದೆ. ಹಾಗಾಗಿ ಅಸಮಾಧಾನಗೊಂಡವರನ್ನು ಸಮಾಧಾನಪಡಿಸುವ ಹೊಣೆಗಾರಿಕೆಯೂ ಅವರ ಮೇಲೆಯೇ ಬೀಳಲಿದೆ. ಮುಂದಿನ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: Karnataka Cabinet expansion: ಸಂಪುಟದಲ್ಲಿನ್ನು ಸೀಟಿಲ್ಲ; ನಾಯಕರ, ಬೆಂಬಲಿಗರ ಆಕ್ರೋಶಕ್ಕೆ ಬೆಲೆ ಇಲ್ಲ