Site icon Vistara News

Yaragol Dam: ಬಂಗಾರಪೇಟೆಯಲ್ಲಿ ಯರಗೋಳ್ ಡ್ಯಾಂ ಲೋಕಾರ್ಪಣೆ ಮಾಡಿದ ಸಿಎಂ

Yaragol dam in bangarapet

ಬಂಗಾರಪೇಟೆ: ಕೋಲಾರ, ಬಂಗಾರಪೇಟೆ, ಮಾಲೂರು ಪಟ್ಟಣ ಹಾಗೂ 45 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯರಗೋಳ್ ಅಣೆಕಟ್ಟನ್ನು (Yaragol Dam) ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಒಟ್ಟು 2197.72 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು.

ಕುಡಿಯುವ ನೀರಿಗೆ ಮೀಸಲಾದ ಕೋಲಾರ ಜಿಲ್ಲೆಯ ಏಕೈಕ ಯೋಜನೆ ಯರಗೋಳ್ ಅಣೆಕಟ್ಟು ಆಗಿದೆ. ಸುಮಾರು 308.46 ಕೋಟಿ ರೂ. ವೆಚ್ಚದಲ್ಲಿ ಯರಗೋಳ್ ಡ್ಯಾಂ ನಿರ್ಮಿಸಲಾಗಿದೆ. ಮಾರ್ಕಂಡೇಯ ಜಲಾಶಯದಿಂದ ವ್ಯರ್ಥವಾಗಿ ತಮಿಳುನಾಡಿಗೆ ಹರಿಯತ್ತಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು, ಬಂಗಾರಪೇಟೆ ತಾಲೂಕಿನ ಯರಗೋಳ್‌ ಗ್ರಾಮದ ಬಳಿ ಈ ಡ್ಯಾಂ ಅನ್ನು ನಿರ್ಮಿಸಲಾಗಿದೆ.

2006ರಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಈ ಯೋಜನೆಗೆ ಅನುಮೋದನೆ ಸಿಕ್ಕಿತ್ತು, 2007ರಲ್ಲಿ ಶಂಕುಸ್ಥಾಪನೆ ನೆರವೇರಿತು. ಆದರೆ, ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ 2013ರಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿತು. ನಂತರ ನಿರ್ಮಾಣ ಕಾಮಗಾರಿ ಆರಂಭವಾಗಿ 2020ಕ್ಕೆ ಮುಕ್ತಾಯವಾಯಿತು. ಅರ್ಧ ಟಿಎಂಸಿಯಷ್ಟು ನೀರು ಶೇಖರಣೆ ಸಾಮರ್ಥ್ಯ ಹೊಂದಿರುವ ಯರಗೋಳ್​ ಡ್ಯಾಂ ಯೋಜನೆ ಆರಂಭವಾದ 17 ವರ್ಷಗಳ ನಂತರ ಲೋಕಾರ್ಪಣೆಯಾಗಿದೆ.

ಇದನ್ನೂ ಓದಿ |BJP-JDS Coalition : ಜೆಡಿಎಸ್‌ ವಿರೋಧ ಪಕ್ಷದ ನಾಯಕನ ಸ್ಥಾನ ಕೇಳಿಲ್ಲ ಎಂದ ಜಿ.ಟಿ ದೇವೇಗೌಡ

ಜಿಲ್ಲಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಚಿವರಾದ ಡಾ. ಎಚ್.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಶಾಸಕರು ಹಾಗೂ ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಸಂಸದ ಎಸ್‌.ಮುನಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ | Namma Metro: ನಮ್ಮ ಮೆಟ್ರೋದಿಂದ ಕ್ಯೂಆರ್‌ ಗ್ರೂಪ್‌ ಟಿಕೆಟ್‌ ಪರಿಚಯ; ಎಷ್ಟು ಮಂದಿ ಪ್ರಯಾಣಿಸಬಹುದು?

ಕೆಜಿಎಫ್‌ನಲ್ಲಿ ಕೈಗಾರಿಕಾ ಟೌನ್‌ಶಿಪ್: ಸಿಎಂ ಸಿದ್ದರಾಮಯ್ಯ

ಕೋಲಾರ: ಬಾರಿಯ ಬಜೆಟ್‌ನಲ್ಲಿ ಕೆಜಿಎಫ್‌ನಲ್ಲಿರುವ 965 ಎಕರೆ ಕೈಗಾರಿಕಾ ಪ್ರದೇಶವನ್ನು ಬಿಇಎಂಎಲ್‌ನಿಂದ ಹಿಂಪಡೆದು ಅಲ್ಲಿ ಹೊಸ ಕೈಗಾರಿಕಾ ಟೌನ್‌ಶಿಪ್ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕೋಲಾರ, ಬಂಗಾರಪೇಟೆ ಹಾಗೂ ಮಾಲೂರು ತಾಲೂಕುಗಳಿಗೆ ಕುಡಿಯುವ ನೀರನ್ನು ಒದಗಿಸುವ ಯರಗೋಳ್ ಯೋಜನೆ ಹಾಗೂ ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪ್ರತ್ಯೇಕವಾಗಿದ್ದ ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಮತ್ತೆ ಒಂದು ಮಾಡಲಾಗಿತ್ತು. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪ್ರತ್ಯೇಕ ಡೈರಿ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದ್ದು, ಪ್ರತಿ ತಿಂಗಳು 2 ತಿಂಗಳು ವಿದ್ಯುತ್ ಬಿಲ್ಲು ಕಟ್ಟಲಾಗುತ್ತಿತ್ತು. ಅದನ್ನು ತಪ್ಪಿಸಲು 50 ಎಕರೆ ಜಾಗದಲ್ಲಿ ಸ್ವಂತ ವಿದ್ಯುತ್ ಉತ್ಪಾದಿಸಲು ಸೋಲಾರ್ ಘಟಕ ಸ್ಥಾಪನೆಗೆ ಪರವಾನಗಿ ನೀಡಲಾಗಿದೆ. ಕೋಲಾರ ಹಾಲು ಒಕ್ಕೂಟದಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.

ಬರಗಾರವಿದ್ದರೂ 2263 ಕೋಟಿ ರೂ.ಗಳನ್ನು ಜಿಲ್ಲೆಯ ಅಭಿವೃದ್ಧಿಗಾಗಿ ನೀಡಿದ್ದೇವೆ. ಕೆ. ಎಚ್.ಮುನಿಯಪ್ಪ ಅವರು ಸಚಿವರಾಗಿದ್ದಾಗ 83 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿರುವುದಕ್ಕಾಗಿ ಹಾಗೂ ಯೋಜನೆಗೆ ಸಹಕರಿಸಿದ ಎಲ್ಲರಿಗೂ ಮುಖ್ಯಮಂತ್ರಿಗಳು ಧನ್ಯವಾದಗಳನ್ನು ಅರ್ಪಿಸಿದರು.

ಕೊಡುಗೆ ಸ್ಮರಿಸಬೇಕು

ಒಂದು ಕಾಲದಲ್ಲಿ ಕೋಲಾರ, ಬಂಗಾರಪೇಟೆಯಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ನೀಡುವ ಪರಿಸ್ಥಿತಿ ಇತ್ತು. ಕುಡಿಯುವ ನೀರು ಸಿಗುತ್ತಿರಲಿಲ್ಲ. ಅದಕ್ಕೆ ಯೋಚಿಸಿ ಮಾರ್ಕಂಡೇಯ ನದಿಗೆ ಯರಗೊಳ್ ಗ್ರಾಮದ ಬಳಿ ಅಣೆಕಟ್ಟು ನಿರ್ಮಿಸಿ ನೀರು ಶೇಖರಿಸಿ ಮೂರೂ ಪಟ್ಟಣಗಳಿಗೆ ಕುಡಿಯುವ ನೀರು ಕೊಡುವ ಯೋಜನೆ ರೂಪಿಸಲಾಯಿತು. ಇದು ಇಂದು ಕಾರ್ಯಗತವಾಗುತ್ತಿರುವ ಹಿಂದೆ ಮಾಜಿ ಸಚಿವ ಶ್ರೀನಿವಾಸಗೌಡ ಅವರ ಕೊಡುಗೆಯನ್ನು ಸ್ಮರಿಸಬೇಕು. ಹಾಗೆಯೇ ಟೀಚರ್ ಚಂದ್ರಪ್ಪ, ನಾರಾಯಣಸ್ವಾಮಿ ಅವರನ್ನು ಸ್ಮರಿಸಬೇಕು. ಯರಗೋಳ್ ಯೋಜನೆ 2006 ರಲ್ಲಿ ಪ್ರಾರಂಭವಾದರೂ, ಕಾರ್ಯಗತವಾಗಲಿಲ್ಲ. ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿಯವರು ಒತ್ತಾಯ ಮಾಡಿ ಚಾಲನೆ ನೀಡಿದರು. ಹಾಗಾಗಿ ಇದಕ್ಕೆ ಚಾಲನೆ ದೊರಕುತ್ತಿದೆ. 38.1 ಗಜ ಆಳದಲ್ಲಿ ನೀರು ನಿಲ್ಲಲಿದೆ. ಈ ಮೂರು ಪಟ್ಟಣ ಗಳಿಗೆ ನೀರು ಸಾಕಾಗುತ್ತದೆ ಎನ್ನುವುದು ನನ್ನ ಭಾವನೆ. ಕೆಜಿಎಫ್ ಶಾಸಕಿ ರೂಪ ಅವರೂ ಕೂಡ ಕೆಜಿಎಫ್‌ಗೆ ಯರಗೋಳ್ ಯೋಜನೆಯಿಂದ ನೀರು ಒದಗಿಸಲು ಕೋರಿದ್ದು, ಈ ಬಗ್ಗೆ ಚರ್ಚೆ ಮಾಡಿ ನೀರು ಸಿಕ್ಕರೆ ಎಷ್ಟೇ ಖರ್ಚಾದರೂ ನೀರು ಕೊಡುತ್ತೇವೆ ಎಂದು ಭರವಸೆ ನೀಡಿದರು.

ರಮೇಶ್ ಕುಮಾರ್, ನಂಜೇಗೌಡ, ನಾರಾಯಣಸ್ವಾಮಿ, ಕೆ.ಹೆಚ್.ಮುನಿಯಪ್ಪ, ಕೃಷ್ಣ ಬೈರೇಗೌಡ, ಇವರೆಲ್ಲರೂ ಕೆ.ಸಿ.ವ್ಯಾಲಿಯಾಗಬೇಕು, ಕೆರೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸುತ್ತಿದ್ದರು ಎಂದು ತಿಳಿಸಿದ ಅವರು, ಒಂದು ಕ್ಷೇತ್ರದಲ್ಲಿ 2223 ಕೋಟಿ ರೂ.ಗಳ ಬೃಹತ್ ಮೊತ್ತದ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿದೆ ಎಂದರು.

ಯರಗೋಳ್‌ ಯೋಜನೆಗೆ 23 ಸಾವಿರ ಕೋಟಿ ರೂ. ವೆಚ್ಚ

ಕೋಲಾರ, ಚಿತ್ರದುರ್ಗ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಗಳು. ರಾಜಸ್ಥಾನ ಬಿಟ್ಟರೆ ಅತಿ ಹೆಚ್ಚು ಬರಗಾಲಕ್ಕೆ ತುತ್ತಾಗಿರುವ ರಾಜ್ಯ ಕರ್ನಾಟಕ. ಎಚ್.ಎನ್.ವ್ಯಾಲಿ, ಕೆ.ಸಿ. ವ್ಯಾಲಿ, ಪುಷ್ಪಾವತಿ ವ್ಯಾಲಿ ಜಾರಿ ಮಾಡಿದ ನಾವು ಎತ್ತಿನಹೊಳೆ ಯೋಜನೆಯನ್ನು ಜಾರಿ ಮಾಡಲೇಬೇಕೆಂದು ಒತ್ತಾಯ ಮಾಡಿದ್ದೆವು. ಯೋಜನೆ ಕಾರ್ಯಸಾಧುವಾಗಿದ್ದರೆ ಎಷ್ಟೇ ಖರ್ಚಾದರೂ ಯೋಜನೆ ಜಾರಿ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಯರಗೋಳ್‌ ಯೋಜನೆಗೆ 23 ಸಾವಿರ ಕೋಟಿ ರೂ ವೆಚ್ಚವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕೆ.ಸಿ.ವ್ಯಾಲಿಗೆ 1800 ಕೋಟಿ ರೂ. ಹಾಗೂ ಎಚ್.ಎನ್.ವ್ಯಾಲಿಗೆ 800 ಕೋಟಿ ರೂ.ವೆಚ್ಚವಾಗಿದ್ದು, ಇದು ಅಭಿವೃದ್ಧಿ ಅಲ್ಲವೇ ಎಂದು ಪ್ರಶ್ನಿಸಿದ ಅವರು, ಕೋಲಾರದಲ್ಲಿ ಹಣ್ಣು ತರಕಾರಿ, ರೇಷ್ಮೆ ಬೆಳೆಯುತ್ತಿದ್ದರೆ ಕೆರೆಗಳು ತುಂಬಿರುವುದರಿಂದ . 1200 ಅಡಿಗಳವರೆಗೆ ಕೊರೆದರೂ ನೀರು ಸಿಗದ ಕಾಲವೊಂದಿತ್ತು. ಆದ್ದರಿಂದ ನೀರು ತುಂಬಿ ಅಂತರ್ಜಲ ಮಟ್ಟ ಹೆಚ್ಚಾಗಬೇಕು ಎಂದು ಒತ್ತಾಯಿಸಿದ್ದರು. ಇಲ್ಲಿ ಯಾವುದೇ ಪ್ರಮುಖ ನದಿ ಇಲ್ಲದಿರುವುದರಿಂದ ಕೆರೆಗಳು ತುಂಬುವುದು ಅವಶ್ಯ. ಕುಡಿಯುವ ನೀರು ನೀಡುವುದು ಅತ್ಯಂತ ಅಗತ್ಯ ಎಂದು ಮನಗಂಡು ಮಂಜೂರು ಮಾಡಲಾಯಿತು ಎಂದು ಸಿಎಂ ತಿಳಿಸಿದರು.

ಕೋಲಾರ ಮಲೆನಾಡು ಆಗುವ ದಿನಗಳು ದೂರವಿಲ್ಲ

ಕೆ.ಸಿ.ವ್ಯಾಲಿ ನೀರನ್ನು ಪರೀಕ್ಷೆ ಮಾಡಿಸಿದ್ದು ಹಾನಿಕಾರಕ ಪದಾರ್ಥ ಇಲ್ಲ ಎಂದು ವಿಶ್ವಸಂಸ್ಥೆಯವರು ಭೇಟಿ ನೀಡಿ ಮೆಚ್ಚುಗೆ ನೀಡಿದ್ದಾರೆ. ಕುಮಾರಸ್ವಾಮಿಯವರು ಇದನ್ನು ಅರ್ಥಮಾಡಿಕೊಳ್ಳಬೇಕು. ಕೇರಳದ ಸಮಾಲೋಚಕರೂ ಕೂಡ ಇದನ್ನು ಇತರೆ ರಾಜ್ಯಗಳಲ್ಲಿ ಅನುಕರಿಸಬೇಕು ಎಂದಿದ್ದಾರೆ. ಕೇವಲ ರಾಜಕೀಯಕ್ಕಾಗಿ ಟೀಕೆ ಮಾಡಬಾರದು ಎಂದರು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರೇ ಮಾಲೀಕರು. ಜನರ ಸಮಸ್ಯೆಗಳಿಗೆ, ಜನರ ವಿರುದ್ಧವಾಗಿ, ದಾರಿತಪ್ಪಿಸುವ ಕೆಲಸವನ್ನು ಮಾಡಬಾರದು. ಕೋಲಾರ ಮಲೆನಾಡು ಆಗುವ ದಿನಗಳು ದೂರವಿಲ್ಲ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳು ಕಾರಣ ಎಂದರು.

ವಿರೋಧಿಗಳೇ ಕಣ್ತೆರೆದು ನೋಡಿ

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಗಳ ನಂತರ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ ಎಂದು ಟೀಕಿಸುವ ವಿರೋಧಿಗಳಿಗೆ ಕಣ್ತೆರೆದು ನೋಡುವಂತೆ ತಿಳಿಸಿದ ಮುಖ್ಯಮಂತ್ರಿಗಳು, ಕಣ್ಣು ಮುಚ್ಚಿಕೊಂಡು, ರಾಜಕೀಯ ಕಾರಣಗಳಿಗಾಗಿ ಮಾತನಾಡಬೇಡಿ ಎಂದರು. ಇದು ಸಣ್ಣ ಅನುದಾನವಲ್ಲ. ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ, ತುಮಕೂರು,ಬೆಂಗಳೂರು ಗ್ರಾಮಾಂತರ, ಹಾಸನ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯನ್ನು ಯಾರು ಜಾರಿಗೆ ಮಾಡಿದ್ದು? ವಿರೋಧಿಸುವವರು ಮಾಡಿಕೊಟ್ಟರೆ ಎಂದು ಪ್ರಶ್ನಿಸಿದರು. ಎತ್ತಿನಹೊಳೆ ಯೋಜನೆ ಜಾರಿಯಾಗುವುದಿಲ್ಲ ಎನ್ನುವವರಿಗೆ ಇಂದು ಉತ್ತರ ಸಿಕ್ಕಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಟೀಕಿಸುವವರಿಗೆ ಹೊಟ್ಟೆ ಉರಿಯುವಂತೆ ಕೆಲಸ

ಕಳೆದ ವರ್ಷವೇ ಈ ಯೋಜನೆ ಜಾರಿಯಾಗಿದ್ದರೆ ಎಲ್ಲರಿಗೂ ನೀರು ದೊರಕುತ್ತಿತ್ತು. ನಮ್ಮ ಅವಧಿಯಲ್ಲಿ ಎತ್ತಿನಹೊಳೆ ಸಂಪೂರ್ಣ ಯೋಜನೆ ಮುಗಿಸಿ ಈ ಭಾಗದ ಜನರಿಗೆ ಕುಡಿಯುವ ನೀರನ್ನು ಕೊಟ್ಟೇಕೊಡುತ್ತೇವೆ. ನಮ್ಮನ್ನು ಟೀಕಿಸುವವರಿಗೆ ಹೊಟ್ಟೆಉರಿಯುವಂತೆ ಕೆಲಸವನ್ನು ಮಾಡುತ್ತೇವೆ ಎಂದರು.

ಕೋಲಾರ ಜಿಲ್ಲೆ ಹಸಿರಾಗಿದ್ದರೆ ಕೆರೆಗಳು ತುಂಬಿರುವುದರಿಂದ ಕೆ.ಸಿ ವ್ಯಾಲಿ, ಹೆಚ್.ಎನ್ ವ್ಯಾಲಿ, ಪುಷ್ಪಾವತಿ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ನಮ್ಮ ಕಾಲದಲ್ಲಿ ಮಂಜೂರು ಮಾಡಿದ್ದು ಎಂದು ಹೇಳಿದರು.

ಇದನ್ನೂ ಓದಿ | BS Yediyurappa : ಜನರ ಸಮಸ್ಯೆ ಆಲಿಸಲು ನನ್ನ ಜತೆ ಬನ್ನಿ; ಡಿಕೆಶಿಗೆ ಬಿಎಸ್‌ವೈ ಸವಾಲು

ಕುಮಾರಸ್ವಾಮಿಗೆ ಹೇಳಿ

ಕೆ.ಸಿ.ವ್ಯಾಲಿ ಯೋಜನೆ ಜಾರಿ ಮಾಡಬಾರದು. ಅದರ ಮೂಲಕ ಜನರಿಗೆ ವಿಷ ನೀಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳುತ್ತಾರೆ. ಯೋಜನೆಯಿಂದ ಕೆರೆಗಳು ತುಂಬಿವೆ. ದನಕರುಗಳಿಗೆ ಮೇವಾಗಿದೆ. ಈವರೆಗೆ ಜನ, ದನಕರುಗಳು ಸತ್ತ ಉದಾಹರಣೆ ಇದೆಯೇ? ಎಂದು ಮುಖ್ಯಮಂತ್ರಿಗಳು ಜನರನ್ನು ಕೇಳಿದಾಗ, ಇಲ್ಲ ಎಂದು ಜೋರಾಗಿ ಕೂಗಿದರು. ಇದನ್ನು ಕುಮಾರಸ್ವಾಮಿಗೆ ಹೇಳಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version