ಹೊಸ ದಿಲ್ಲಿ: ಅನ್ನಭಾಗ್ಯ ಅಕ್ಕಿಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಜಟಾಪಟಿ ಮುಂದುವರಿಸಿವೆ. ನಿನ್ನೆ ಹೊಸ ದಿಲ್ಲಿಯುಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭರವಸೆಯಷ್ಟೇ ಸಿಕ್ಕಿದೆ. ಆದರೆ ಕೇಂದ್ರ ಆಹಾರ ಸಚಿವರ ಭೇಟಿಗೆ ದೊರೆತಿಲ್ಲ.
ಈ ನಡುವೆ ಅನ್ನಭಾಗ್ಯ ಫಲಾನುಭವಿಗಳು ಅತಂತ್ರರಾಗಿದ್ದು, ಹೆಚ್ಚುವರಿ ಅಕ್ಕಿ ವಿತರಣೆ ಇನ್ನೂ ತಡವಾಗಲಿದೆ. ನಿನ್ನೆ ಅಕ್ಕಿಗಾಗಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಆಹಾರ ಸಚಿವ ಕೆ.ಎಚ್ ಮುನಿಯಪ್ಪ, ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿದ್ದರು. ಕೇಂದ್ರದ ನೀತಿಯಿಂದ ಬಡವರ ಆಹಾರಕ್ಕೆ ಸಮಸ್ಯೆ ಆಗಿರುವ ಸಂಗತಿಯನ್ನು ಚರ್ಚಿಸಿದ್ದರು.
ಸೌಹಾರ್ದ ಭೇಟಿಯ ವೇಳೆ, “ಕೇಂದ್ರದ ಇತ್ತೀಚಿನ ನೀತಿ ಆಹಾರ ಭದ್ರತಾ ಕಾಯ್ದೆಗೆ ವಿರುದ್ಧವಾಗಿದೆ. ಇದು ನೇರವಾಗಿ ಬಡವರ ಎರಡು ಹೊತ್ತಿನ ಊಟಕ್ಕೂ ತೊಂದರೆ ಕೊಡುತ್ತದೆ. ಆದ್ದರಿಂದ ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಕೊಡದಿರುವ ಧೋರಣೆ ಬದಲಾದರೆ ಒಳ್ಳೆಯದುʼʼ ಎನ್ನುವ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ. ಈ ಕುರಿತು ಗುರುವಾರ ಬೆಳಗ್ಗೆ ಕೇಂದ್ರ ಆಹಾರ ಸಚಿವ ಪಿಯೂಶ್ ಗೋಯಲ್ ಅವರ ಜತೆ ಚರ್ಚಿಸುವುದಾಗಿ ಅಮಿತ್ ಶಾ ಅವರು ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ. ಆದರೆ ಆಹಾರ ಸಚಿವ ಪಿಯೂಷ್ ಗೋಯಲ್ ಭೇಟಿಗೆ ಅವಕಾಶ ನೀಡಿಲ್ಲ.
ʼʼರಾಜ್ಯಕ್ಕೆ ಅಕ್ಕಿ ನೀಡುವ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತಾಡಿದ್ದೇನೆ. ರಾಜ್ಯದಲ್ಲಿ ಆಗಿರುವ ಸಮಸ್ಯೆಯ ಬಗ್ಗೆ ಅವರ ಗಮನಕ್ಕೆ ತಂದಿದ್ದೇನೆ. FCIನವ್ರು ಮೊದಲು ಅಕ್ಕಿ ಕೊಡುತ್ತೇವೆ ಎಂದಿದ್ದರು. ಆಮೇಲೆ ಅವರು ಹೇಳಿದಂತೆ ಅಕ್ಕಿ ಕೊಟ್ಟಿಲ್ಲ. ಕೊಡಲು ಆಗುವುದಿಲ್ಲ ಎಂದರು. ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡಿದ್ದಾರೆ ಅನ್ನಿಸುತ್ತದೆ. ದ್ವೇಷದ ರಾಜಕೀಯ ಮಾಡುವುದು ಬೇಡ ಎಂದು ಹೇಳಿದ್ದೇನೆ. ಅವರು ಈ ಬಗ್ಗೆ ಮಾತಾಡುತ್ತೇನೆ ಎಂದಿದ್ದಾರೆʼʼ ಎಂದು ಬೆಂಗಳೂರಿಗೆ ಮರಳಿರುವ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಆಡಳಿತಾತ್ಮಕ ಪ್ರಯತ್ನ, ಒತ್ತಡ ತಂತ್ರವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಪ್ರಯೋಗಿಸಿದೆ. ಮತ್ತೊಂದೆಡೆ ಅನ್ಯ ರಾಜ್ಯಗಳಿಂದ ಅಕ್ಕಿ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದರೂ, ಹೆಚ್ಚುವರಿ ಅಕ್ಕಿ ವಿತರಣೆ ತಡವಾಗಲಿದೆ. ಕೇಂದ್ರ ಸರ್ಕಾರದ ಏಜೆನ್ಸಿಗಳಾದ ನಾಫೆಡ್, ಎನ್‌ಸಿಸಿಎಫ್ ಭಂಡಾರದಿಂದ ಕೊಟೇಷನ್ ಬರಬೇಕು. ಕೊಟೇಷನ್‌ಗೆ ಸರ್ಕಾರದ ಒಪ್ಪಿಗೆ ಬೇಕು. ಇದಾದ ಮೇಲೆ ಟೆಂಡರ್ ಪ್ರಕ್ರಿಯೆ ಆಗಬೇಕು. ಎಲ್ಲಾ ಪ್ರಕ್ರಿಯೆ ಮುಗಿದು ಹೆಚ್ಚುವರಿ ಅಕ್ಕಿ ಫಲಾನುಭವಿಗಳ ಕೈ ಸೇರಬೇಕು. ಆದ್ದರಿಂದ ಹೆಚ್ಚುವರಿ ಅಕ್ಕಿ ಸಿಗುವುದು 2-3 ತಿಂಗಳು ತಡವಾಗಲಿದೆ.
ಕಾಯಿದೆ ರದ್ದತಿಗೂ ಬೇಕು ಕೇಂದ್ರದ ಒಪ್ಪಿಗೆ
ಗೋಹತ್ಯೆ ನಿಷೇಧ ಕಾಯಿದೆ, ಎಪಿಎಂಸಿ ಕಾಯಿದೆ, ಮತಾಂತರ ನಿಷೇಧ ಕಾಯಿದೆಗಳನ್ನು ಕರ್ನಾಟಕ ಸರ್ಕಾರ ಹಿಂದೆ ಪಡೆದಿದೆ. ರದ್ದುಪಡಿಸಿದ ಕಾನೂನುಗಳ ಬಗ್ಗೆ ಗೃಹ ಸಚಿವರಿಗೆ ಸಿಎಂ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ ಹಿಂಪಡೆದ ಕಾನೂನುಗಳು ಅನೂರ್ಜಿತಗೊಳ್ಳಲು ಕೂಡ ರಾಷ್ಟ್ರಪತಿಗಳ ಒಪ್ಪಿಗೆ ಅಗತ್ಯವಾಗಿದೆ.
ಇದನ್ನೂ ಓದಿ: CM Siddaramaiah: ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ, ‘ಅನ್ನಭಾಗ್ಯ’ ಅಕ್ಕಿ ಪ್ರಸ್ತಾಪ!