ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಗುರುವಾರ (ಜುಲೈ 3) ಭೇಟಿ ಮಾಡಿ ರಾಜ್ಯದ ಬಗ್ಗೆ ಮಹತ್ವದ ಚರ್ಚೆ ನಡೆಸಿದರು.
76ನೇ ವಸಂತಕ್ಕೆ ಕಾಲಿಟ್ಟಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹುಟ್ಟುಹಬ್ಬದ ದಿನವೇ ಪ್ರಧಾನಿಯನ್ನು ಭೇಟಿಯಾಗಿರುವುದು ವಿಶೇಷವಾಗಿತ್ತು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಮೋದಿಯನ್ನು ಅವರು ಭೇಟಿಯಾಗಿದ್ದಾರೆ.
ಮೋದಿಗೆ ದಸರಾ ಅಂಬಾರಿ ಉಡುಗೊರೆ
ದೆಹಲಿಯ ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ. ಈ ವೇಳೆ ಪ್ರಧಾನಿಗೆ ಮೈಸೂರ್ ಪೇಟ, ಶಾಲು ಹಾಗೂ ಮೈಸೂರು ದಸರಾ ಅಂಬಾರಿಯ ಸ್ಮರಣಿಕೆ ನೀಡಿ ಗೌರವ ಸಲ್ಲಿಸಿದರು. ಪ್ರಧಾನಿ ಮೋದಿ ಜತೆ ರಾಜ್ಯದ ಅಭಿವೃದ್ಧಿ, ಹಿತಾಸಕ್ತಿ ಬಗ್ಗೆ ಸುಮಾರು 5 ನಿಮಿಷ ಚರ್ಚೆ ನಡೆಸಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಹಾರ್ದಿಕ ಶುಭಾಶಯಗಳನ್ನು ಪ್ರಧಾನಿ ಮೋದಿ ಕೋರಿದ್ದಾರೆ.
ಇದನ್ನೂ ಓದಿ: CM Siddaramaiah @76: ಸಿಎಂ ಸಿದ್ದರಾಮಯ್ಯ 76ನೇ ಹುಟ್ಟುಹಬ್ಬ ಇಂದು; ಇವರ ಬಗ್ಗೆ 18 ವಿಶೇಷ ಸಂಗತಿ ಇಲ್ಲಿದೆ
ರಾಜ್ಯದ ಅಭಿವೃದ್ಧಿಗೆ ಅನುದಾನ ವಿಚಾರವಾಗಿ ಪಿಎಂ ಮೋದಿ ಜತೆ ಚರ್ಚೆ ನಡೆಸಿರುವ ಸಿಎಂ ಕರ್ನಾಟಕದ ಸ್ಥಿತಿಗತಿಗಳ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ. ಬಳಿಕ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರಾಜನಾಥ ಸಿಂಗ್, ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದಾರೆ.
ದಸರಾದಲ್ಲಿ ಏರ್ ಶೋಗಾಗಿ ಮನವಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಕ್ಷಣಾ ಸಚಿವರಾದ ರಾಜನಾಥಸಿಂಗ್ ಅವರನ್ನು ಭೇಟಿ ಮಾಡಿ ಹಲವು ಸಂಗತಿಗಳ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಏರ್ ಶೋ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ಮನವಿಯಲ್ಲೇನಿದೆ?
“ಕರ್ನಾಟಕದ ವೈಭವವನ್ನು ಪ್ರದರ್ಶಿಸುವ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಅದರದ್ದೇ ಆದ ಮಹತ್ವವಿದೆ. ಈ ಆಚರಣೆಗಳ ಮೂಲಕ ದೇಶ ಸೇರಿದಂತೆ ವಿಶ್ವವು ರಾಜ್ಯದ ವೈಭವಯುತ ಇತಿಹಾಸ ಮತ್ತು ಸಂಪ್ರದಾಯವನ್ನು ಹೊಂದಿದೆ. ಈ ವರ್ಷ ಅಕ್ಟೋಬರ್ 15ರಿಂದ 24 ರವರೆಗೆ ಮೈಸೂರು ದಸರಾವನ್ನು ಆಚರಿಸಲು ನಿರ್ಧರಿಸಲಾಗಿದೆ.
ಮೈಸೂರು ದಸರಾ ಆಚರಣೆಯ ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ 2023ರ ದಸರಾ ಮಹೋತ್ಸವದ ವೇಳೆ ಏರ್ ಶೋ ನಡೆಸಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. 2017 ಮತ್ತು 2019ರಲ್ಲಿ ಮೈಸೂರಿನ ಟಾರ್ಚ್ ಲೈಟ್ ಪರೇಡ್ ಮೈದಾನದಲ್ಲಿ ಭಾರತೀಯ ವಾಯುಪಡೆಯು ಪ್ರದರ್ಶಿಸಿದ ವಿಶೇಷ ಏರ್ ಶೋ ಎಲ್ಲರ ಗಮನ ಸೆಳೆದಿತ್ತು. ಅಲ್ಲದೆ, ಇದು ದಸರಾ ಉತ್ಸವಕ್ಕೆ ಹತ್ತಾರು ಪ್ರವಾಸಿಗರು ಮತ್ತು ಕನ್ನಡಿಗರ ಗಮನವನ್ನು ಸೆಳೆಯಿತು.
ಇದನ್ನೂ ಓದಿ: Adani Group: ಸಂಘಿ ಸಿಮೆಂಟ್ ಕಂಪನಿ ಈಗ ಅದಾನಿ ಗ್ರೂಪ್ ಪಾಲು; ಇದು ಎಷ್ಟು ಸಾವಿರ ಕೋಟಿ ರೂ. ಡೀಲ್?
ಹೀಗಾಗಿ, ಈ ಹಿಂದೆ ಮೈಸೂರಿನಲ್ಲಿ ನಾಡಹಬ್ಬ ದಸರಾ 2023ರ ಸಂದರ್ಭದಲ್ಲಿ ಇದೇ ರೀತಿಯ ‘ಏರ್‌ಶೋ’ ಅನ್ನು ಯೋಜಿಸಲು ಸಂಬಂಧಪಟ್ಟವರಿಗೆ ನಿರ್ದೇಶಿಸುವಂತೆ ಈ ಮೂಲಕ ಮನವಿ ಮಾಡುತ್ತಿದ್ದೇನೆ” ಎಂದು ಮನವಿ ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.