Site icon Vistara News

ಕ್ರಿಕೆಟ್‌ ದೇವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ; ಸಚಿನ್‌ ಜತೆ ಅಂಥಾದ್ದೇನು ಚರ್ಚೆ?

Siddaramaiah With Sachin Tendulkar

CM Siddaramaiah Meets Sachin Tendulkar In Delhi; See In Pics

ನವದೆಹಲಿ: ಕ್ರಿಕೆಟ್‌ ಸೇರಿ ಯಾವುದೇ ಕ್ರೀಡಾಪಟುಗಳು ಹಾಗೂ ರಾಜಕಾರಣಿಗಳ ಮಧ್ಯೆ ನಂಟಿದೆ. ಹಾಗಾಗಿಯೇ, ಕ್ರೀಡಾಪಟುಗಳು ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುತ್ತಾರೆ. ಶಾಸಕ, ಸಂಸದ, ಸಚಿವರಾಗಿ ಕಾರ್ಯನಿರ್ವಹಿಸುತ್ತಾರೆ. ಹೀಗೆ, ಕ್ರೀಡೆ ಹಾಗೂ ರಾಜಕಾರಣಿಗಳ ಮಧ್ಯೆ ಉತ್ತಮ ನಂಟಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಕ್ರಿಕೆಟ್‌ ದೇವರು ಎಂದೇ ಖ್ಯಾತರಾದ ಸಚಿನ್‌ ತೆಂಡೂಲ್ಕರ್‌ (Sachin Tendulkar) ಅವರು ಭೇಟಿಯಾಗಿದ್ದಾರೆ.

ಈ ಕುರಿತು ಸಿದ್ದರಾಮಯ್ಯ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳನ್ನು ಶೇರ್‌ ಮಾಡಿದ್ದಾರೆ. ಹಾಗೆಯೇ, ಸಚಿನ್‌ ತೆಂಡೂಲ್ಕರ್‌ ಜತೆಗಿನ ಭೇಟಿಯ ಕ್ಷಣಗಳ ಕುರಿತು ಒಕ್ಕಣೆ ಬರೆದಿದ್ದಾರೆ. “ಜಾಗತಿಕ ಕ್ರಿಕೆಟ್‌ನ ದಂತಕಥೆ, ಲಿಟ್ಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಇಂದು ದೆಹಲಿಯ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಎದುರಾದ ವೇಳೆ ಕುಶಲೋಪರಿ ವಿಚಾರಿಸಿ, ಪ್ರೀತಿಯಿಂದ ಬೀಳ್ಕೊಟ್ಟೆ. ಸಚಿನ್ ತೆಂಡೂಲ್ಕರ್ ನನ್ನ ಅಚ್ಚುಮೆಚ್ಚಿನ ಆಟಗಾರ, ದಶಕಗಳ ಕಾಲ ತೆಂಡೂಲ್ಕರ್ ಅವರ ಆಟವನ್ನು ಆಸ್ವಾದಿಸಿದ್ದೇನೆ” ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಇದಕ್ಕಾಗಿ ಕಾಂಗ್ರೆಸ್‌ ರಣತಂತ್ರ ರೂಪಿಸಿದೆ. ಇದಕ್ಕಾಗಿಯೇ ದೆಹಲಿಯಲ್ಲಿ ಎಐಸಿಸಿ ಸಭೆ ನಡೆದಿದ್ದು, ಸಭೆಯಲ್ಲಿ ಪಾಲ್ಗೊಳ್ಳುವ ದೃಷ್ಟಿಯಿಂದ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಚುನಾವಣೆ ಪ್ರಣಾಳಿಕೆ ಸಮಿತಿ ಸಭೆಯಲ್ಲೂ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದಾರೆ. ದೆಹಲಿಗೆ ತೆರಳಿದ್ದ ವೇಳೆ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಅವರು ಸಚಿನ್‌ ತೆಂಡೂಲ್ಕರ್‌ ಅವರನ್ನು ಭೇಟಿಯಾಗಿದ್ದಾರೆ.

ಇದನ್ನೂ ಓದಿ: Siddheshwar Swamiji: ಸಿದ್ದೇಶ್ವರ ಸ್ವಾಮೀಜಿ ಬದುಕೇ ನಮಗೆ ಆದರ್ಶ: ಸಿದ್ದರಾಮಯ್ಯ

ಕ್ರಿಕೆಟ್‌ ಅಂದರೆ ಸಿದ್ದರಾಮಯ್ಯಗೆ ಅಚ್ಚುಮೆಚ್ಚು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ರಿಕೆಟ್‌ ಹಾಗೂ ಸಿನಿಮಾ ಎಂದರೆ ಅಚ್ಚುಮೆಚ್ಚು. ಅದರಲ್ಲೂ, ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಐಪಿಎಲ್‌ ಇರಲಿ, ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಇರಲಿ, ಕ್ರೀಡಾಂಗಣಕ್ಕೆ ತೆರಳಿ ವೀಕ್ಷಿಸುತ್ತಾರೆ. ಐಪಿಎಲ್‌ ವೇಳೆ ಆರ್‌ಸಿಬಿ ಪಂದ್ಯ ವೀಕ್ಷಿಸಿದ್ದ ಅವರು “ಈ ಸಲ ಕಪ್‌ ನಮ್ದೆ” ಎಂದು ಪೋಸ್ಟ್‌ ಮಾಡಿದ್ದರು. ಕಳೆದ ಏಕದಿನ ವಿಶ್ವಕಪ್‌ ಟೂರ್ನಿಯ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದ ಅವರು ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಿನ ಪಂದ್ಯವನ್ನು ವೀಕ್ಷಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version