Site icon Vistara News

Yuvaraja College: ಪಿಯುಸಿ ಸೆಕೆಂಡ್ ಕ್ಲಾಸು, ಅದ್ಕೇ ಮೆಡಿಕಲ್‌‌ ಸೀಟ್ ಸಿಗಲಿಲ್ಲ ಎಂದ ಸಿದ್ದರಾಮಯ್ಯ

CM Siddaramaiah

ಮೈಸೂರು: ನಾನು ಡಾಕ್ಟರ್‌ ಆಗಬೇಕು ಎಂಬುವುದು ನಮ್ಮ ತಂದೆ ಆಸೆಯಾಗಿತ್ತು. ಆದರೆ, ಪಿಯುಸಿ ಸೆಕೆಂಡ್‌ ಕ್ಲಾಸು ಆಗಿದ್ದರಿಂದ ನನಗೆ ಮೆಡಿಕಲ್ ಸೀಟ್ ಸಿಗಲಿಲ್ಲ. ಯುವರಾಜ ಕಾಲೇಜಿನಲ್ಲಿ (Yuvaraja College) ಬಿಎಸ್ಸಿ ಮಾಡಿದೆ, ನಂತರ ಕಾನೂನು ಪದವಿ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಯುವರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಂಘದ 20ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಸಭೆ ಉದ್ಘಾಟಿಸಿ ಅವರು ಮಾತನಾಡಿ, ನಾನು ಎಸ್‌ಎಸ್‌ಎಲ್‌ಸಿ ಫಸ್ಟ್ ಕ್ಲಾಸು, ಪಿಯುಸಿ ಸೆಕೆಂಡ್ ಕ್ಲಾಸು. ನಮ್ಮೂರಿನ ಹೊಂಬಯ್ಯನ ಮಗ ನಾರಾಯಣಗೌಡಗೆ ಮೆಡಿಕಲ್‌ ಸೀಟ್ ಸಿಕ್ಕಿಬಿಟ್ಟಿತ್ತು. ಹೀಗಾಗಿ ನಮ್ಮಪ್ಪನಿಗೆ ನನ್ನನ್ನು ಡಾಕ್ಟರ್ ಮಾಡಬೇಕು ಅಂತ ಆಸೆ ಇತ್ತು. ಯುವರಾಜ ಕಾಲೇಜಿನಲ್ಲಿ ಪಿಯುಸಿ ಓದಿದೆ. ಸೆಕೆಂಡ್ ಕ್ಲಾಸ್ ಪಾಸ್ ಆಗಿದ್ದರಿಂದ ನನಗೆ ಮೆಡಿಕಲ್ ಸೀಟ್ ಸಿಗಲಿಲ್ಲ. ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಸಸ್ಯಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ ಪದವಿ ಮಾಡಿದೆ ಎಂದು ತಿಳಿಸಿದರು.

ಬಾಟನಿ ಮಾಸ್ಟರ್ ಡಿಗ್ರಿ ಮಾಡಬೇಕು ಎಂದುಕೊಂಡಿದ್ದೆ. ಬಾಟನಿ ಸೀಟ್ ಸಿಕ್ಕಿರಲಿಲ್ಲ. ಬೆಂಗಳೂರಿಗೆ ಹೋಗಿ ಎಚ್‌ಒಡಿ ಭೇಟಿ ಮಾಡಿ ಸೀಟ್ ಕೊಡಿ ಅಂತ ಗೋಗರೆದಿದ್ದೆ. 1200 ರೂ. ಒಳಗಿನ ಆದಾಯ ಪ್ರಮಾಣ ಪತ್ರ ತೆಗೆದುಕೊಂಡು ಬಾ ಅಂತ ಹೇಳಿದ್ದರು. ಆದ್ರೆ ಒಬ್ಬ 4500 ರೂ. ಅಂತ ಬರೆದುಕೊಟ್ಟ. ಇನ್ನೆಲ್ಲಿ ಸೀಟ್ ಸಿಗುತ್ತದೆ. ನಾನು ಐದು ವರ್ಷ ಯುವರಾಜ ಕಾಲೇಜಿನ ವಿದ್ಯಾರ್ಥಿ ಆಗಿದ್ದೆ. ನಂಜುಂಡಯ್ಯ ನನ್ನ ಕ್ಲಾಸ್‌ಮೆಟ್ ಆಗಿದ್ದ. ನನ್ನ ಸಹಪಾಠಿಗಳು ಅನೇಕರು ಇಲ್ಲಿಗೆ ಬಂದಿದ್ದೀರಿ ಎಂದು ತಿಳಿಸಿದರು.

ಇದನ್ನೂ ಓದಿ | Commission politics: ಕಾಂಗ್ರೆಸ್‌ಗೆ ಕಮಿಷನ್‌ ತಿರುಗುಬಾಣ; ಸಿದ್ದರಾಮಯ್ಯ ಕಲೆಕ್ಷನ್‌ ಮಾಸ್ಟರ್‌ ಎಂದ ಬಿಜೆಪಿ

ವಿಜ್ಞಾನ ಬೋಧಿಸುತ್ತೇವೆ ಅಂತ ಕಂದಾಚಾರ ಹೇಳಿ ಕೊಡಬಾರದು

ವಿದ್ಯಾವಂತರಾಗಿ ಜಾತಿ ಭೇದ ಮಾಡುವುದಾದರೆ ಅಂತಹವರು ಅವಿದ್ಯಾವಂತರಿಗಿಂತ ಕಡೆ. ನನ್ನ ಮೇಲೆ ಸುಖಾ ಸುಮ್ಮನೆ ಆರೋಪ ಮಾಡುತ್ತಾರೆ. ನಾನು ಆ ಜಾತಿ ವಿರೋಧಿ, ಈ ಜಾತಿ ವಿರೋಧಿ ಅಂತ ಸುಮ್ಮನೆ ಹೇಳುತ್ತಾರೆ. ನಾನು ಮನುಷ್ಯ ಜಾತಿ,. ಸಾಮಾಜಿಕ ನ್ಯಾಯದ ಪರ. ವಿಜ್ಞಾನ ಬೋಧಿಸುತ್ತೇವೆ ಅಂತ ಕಂದಾಚಾರ ಹೇಳಿ ಕೊಡಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಾನೇನೂ ಕುರುಬ ಜಾತಿಯಲ್ಲಿ ಹುಟ್ಟು ಬೇಕು ಅಂತ ಅರ್ಜಿ ಹಾಕಿಕೊಂಡು ಹುಟ್ಟಿದ್ದೇನಾ? ನಮ್ಮ ಅಪ್ಪ – ಅಮ್ಮ ಕುರುಬರು, ಅದಕ್ಕೆ ನಾನು ಕುರುಬ ಜಾತಿ ಅಷ್ಟೆ. ನಾನು ಅವಕಾಶ ವಂಚಿತರ ಪರ. ಹಾಗಂತ ನಾನು ಮುಂದುವರಿದವರ ವಿರೋಧಿ ಅಲ್ಲ ಎಂದು ತಿಳಿಸಿದರು.

ಹಣೆ ಮೇಲೆ ಯಾರಯ್ಯ ಬರೆಯೋರು? ಆಪರೇಷನ್ ಮಾಡಿ ಏನ್ ಬರೆದಿದ್ದಾರೆ ಅಂತ ತೋರಿಸಪ್ಪ ?

ನಾನು ವಿಜ್ಞಾನ ಓದು, ಕೃಷಿ ಬಿಟ್ಟು ವಕೀಲಿಕೆ ಓದಿದ್ದನ್ನು ಏನೆಂದು ಹೇಳಬೇಕೆಂದು ಗೊತ್ತಿಲ್ಲ ಎಂದು ಸಿಎಂ ಹೇಳಿದಾಗ, ಸಿಎಂ ಆಪ್ತ ಕಾರ್ಯದರ್ಶಿ ಗೋವಿಂದರಾಜು ಅವರು ಹಣೆಬರಹ ಎಂದರು. ಇದರಿಂದ ಸಿಟ್ಟಾದ ಸಿದ್ದರಾಮಯ್ಯ ಅವರು, ವಿಜ್ಞಾನ ಓದಿ ವೈಜ್ಞಾನಿಕವಾಗಿ ಯೋಚನೆ ಮಾಡದಿರುವುದೇ ದುರಂತ. ಹಣೆ ಮೇಲೆ ಯಾರಯ್ಯ ಬರೆಯೋರು? ಆಪರೇಷನ್ ಮಾಡಿ ಏನ್ ಬರೆದಿದ್ದಾರೆ ಅಂತ ತೋರಿಸಪ್ಪ? ದೇವರು ಬಂದು ಹಣೆ ಬರಹ ಬರೆದಿದ್ದನಾ ಎಂದು ಪ್ರಶ್ನಿಸಿದ ಅವರು, ಯಾರು ಬಂದ ಅವಕಾಶಗಳನ್ನು ಬಳಸಿಕೊಳ್ಳುತ್ತಾರೋ ಅವರು ಮುಂದೆ ಬರುತ್ತಾರೆ ಎಂದು ಹೇಳಿದರು.

ನಮ್ಮ ಅಪ್ಪನಿಗೆ 6 ಜನ ಮಕ್ಕಳು. ನಾನು ಒಬ್ಬನೇ ಓದಿದವನು. ನನ್ನೊಬ್ಬನಿಗೆ ಓದು, ಉಳಿದವರನ್ನು ಉಳುಮೆ ಮಾಡು ಅಂತ ಬರೆದಿದ್ದನಾ? ಎಲ್ಲಿ ತೋರಿಸಪ್ಪ ಎಂದ ಸಿಎಂ, ಹಣೆ ಬರಹ ಎನ್ನುವುದನ್ನು ಯಾರೋ ಹೇಳಿಕೊಟ್ಟಿರುವುದು, ಅದನ್ನ ನಾವು ಸುಮ್ಮನೆ ಬ್ಲೈಂಡ್ ಆಗಿ ಫಾಲೋ ಮಾಡುತ್ತಿದ್ದೇವೆ ಅಷ್ಟೇ ಎಂದರು.

ಬಿಎಸ್ಸಿ ಆದ ನಂತರ ಒಂದು ವರ್ಷ ನಾನು ಮನೆಯಲ್ಲಿದ್ದೆ. ಎಂಎಸ್ಸಿ ಸೀಟ್ ಸಿಗಲಿಲ್ಲ ಅಂತ ಓದಿನ ಸಹವಾಸವೇ ಬೇಡ ಅಂತ ವ್ಯವಸಾಯ ಮಾಡಲು ಹೋಗಿದ್ದೆ. ಅಲ್ಲಿ ನಾನು ಸ್ವತಃ ವ್ಯವಸಾಯ ಮಾಡ್ತಿದ್ದೆ. ಕಡೆಗೆ ಪಕ್ಕದ ಜಮೀನಿನವರ ಜತೆ ಒಡೆದಾಡಿಕೊಂಡು ವ್ಯವಸಾಯದ ಸಹವಾಸ ಬಿಟ್ಟು ಬಂದೆ. ಕೊನೆಗೆ ಕಾನೂನು ಪದವಿ ಸೇರಲು ತೀರ್ಮಾನ ಮಾಡಿದೆ. ಅದಕ್ಕೆ ನಮ್ಮಪ್ಪ ಒಪ್ಪದಿದ್ದಾಗ ನನ್ನ ಪಾಲು ಕೊಟ್ಟು ಬಿಡು ಅಂತ ಜಗಳ ಮಾಡಿದ್ದೆ. ಶಾರದಾ ವಿಲಾಸ ಕಾಲೇಜಿನಲ್ಲಿ ಓದುವಾಗ ಪ್ರೊ.ನಂಜುಂಡಸ್ವಾಮಿ ಪರಿಚಯ ಆಯಿತು. ಅವರ ಮೂಲಕ ರಾಜಕೀಯ ಚರ್ಚೆಗಳು ಶುರುವಾದವು. ಅವರು ಸಿಗದಿದ್ದರೆ ನಾನು ರಾಜಕೀಯಕ್ಕೂ ಬರುತ್ತಿರಲಿಲ್ಲ. ಸಿಎಂ ಕೂಡ ಆಗುತ್ತಿರಲಿಲ್ಲ.
ಹೀಗೆ ನಾವು ಬದುಕಲ್ಲಿ ಬಂದ ಅವಕಾಶ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯುವರಾಜ ಕಾಲೇಜು ಐದು ವರ್ಷದಲ್ಲಿ ಶತಮಾನೋತ್ಸವ ಆಚರಿಸಲಿದೆ.‌ ನಾನು ಶತಮಾನೋತ್ಸವಕ್ಕೂ ಬರುತ್ತೇನೆ. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಶತಮಾನೋತ್ಸವ ಆಗಿದೆ. ಮಹಾರಾಜ ಕಾಲೇಜು, ಯುವರಾಜ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣ. ಅವರು ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು. ನಾವೆಲ್ಲ ಅವರನ್ನು ನೆನಪಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮಿರ್ಜಾ ಇಸ್ಮಾಯಿಲ್, ಸರ್. ಎಂ.ವಿಶ್ವೇಶ್ವರಯ್ಯ ಪ್ರಗತಿಪರ ದಿವಾನರಾಗಿದ್ದರು. ಕೆ‌ಆರ್‌ಎಸ್ ಕಟ್ಟಲು ಸರ್ ಎಂ. ವಿಶ್ವೇಶ್ವರಯ್ಯ, ಕೃಷ್ಣರಾಜ ಒಡೆಯರ್ ಕಾರಣ.‌ ನಾವೆಲ್ಲ ಸಾಮಾಜಿಕ, ಆರ್ಥಿಕ, ರಾಜಕೀಯ ವ್ಯವಸ್ಥೆ ತಿಳಿದುಕೊಂಡಿರಬೇಕು ಎಂದು ಹೇಳಿದರು.

ಇದನ್ನೂ ಓದಿ | DK Shivakumar : ನಕಲಿ ಸ್ವಾಮಿ, ಲೂಟಿ ರವಿ, ಮಾಜಿ ಸಿಎಂ, ಬ್ಲಾಕ್ ಮೇಲರ್ ಎಲ್ಲರಿಗೂ ಉತ್ತರ ಕೊಡ್ತೇನೆ ಎಂದ ಡಿಕೆಶಿ

ಕಾರ್ಯಕ್ರಮದಲ್ಲಿ ಶಾಸಕರಾದ ಕೆ. ಹರೀಶ್ ಗೌಡ, ಡಿ. ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಮರಿತೀಬ್ಬೆಗೌಡ, ವಿಶ್ವವಿದ್ಯಾಲಯ ಕುಲಪತಿ ಪ್ರೊ.ಲೋಕನಾಥ್ ಸೇರಿ ಯುವರಾಜ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Exit mobile version