ಮೈಸೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Former CM Jagadish Shettar) ಅವರು ಯಾವ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಮರಳಿ ಬಿಜೆಪಿಗೆ ಹೋಗುವುದಿಲ್ಲ (Shettar will not go to BJP) ಎಂಬ ಮಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪುನರುಚ್ಚರಿಸಿದ್ದಾರೆ. ಅವರು ಬಿಜೆಪಿಗೆ ಹೋಗುವ ವದಂತಿ ಸುಳ್ಳು ಎಂದು ಮೈಸೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಸಿದ್ದರಾಮಯ್ಯ ಹೇಳಿದರು. ಬುಧವಾರವೂ ಅವರು ಇದೇ ಮಾತನ್ನು ಆಡಿದ್ದರು. ಈ ನಡುವೆ, ಜಗದೀಶ್ ಶೆಟ್ಟರ್ ಅವರು ದೆಹಲಿಯಲ್ಲಿ ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.
ಜಗದೀಶ್ ಶೆಟ್ಟರ್ ಅವರನ್ನು ಮರಳಿ ಕರೆಸಿಕೊಳ್ಳುವ ವಿಚಾರದಲ್ಲಿ ಬಿಜೆಪಿ ತೀವ್ರ ಪ್ರಯತ್ನ ನಡೆಸುತ್ತಿದೆ. ಹೈಕಮಾಂಡ್ ಕೂಡಾ ಉತ್ಸುಕತೆ ತೋರಿಸಿದೆ. ಜಗದೀಶ್ ಶೆಟ್ಟರ್ ಅವರು ಸದ್ಯವೇ ದಿಲ್ಲಿಗೆ ತೆರಳಿ ಅಮಿತ್ ಶಾ ಅವರ ಜತೆಗೆ ಮಾತುಕತೆ ನಡೆಸಲಿದ್ದಾರೆ. ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಲಿದೆ ಎಂಬ ಸುದ್ದಿಗಳಿಗೆ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದರು.
ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಎಂಬ ವಿಚಾರ ಸುಳ್ಳು. ನನಗೆ ಅವಮಾನವಾಗಿರುವ ಪಕ್ಷಕ್ಕೆ ಹೋಗಲ್ಲ ಎಂದು ಸ್ವತಃ ಈಗಾಗಲೇ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಬಿಜೆಪಿಯ ಎಲ್ಲ ಹೇಳಿಕೆಗೆ ಅಲ್ಲೇ ಉತ್ತರ ಇದೆ ಅಲ್ವ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರು, ಯಾರು ಎಷ್ಟೇ ಪ್ರಯತ್ನ ಮಾಡಿದರೂ ಜಗದೀಶ್ ಶೆಟ್ಟರ್ ಬಿಜೆಪಿಗೆ ಹೋಗಲ್ಲ ಎಂದರು.
ಲಾಭ ಪಡೆಯಲೆಂದೇ ರಾಮ ಮಂದಿರ ತರಾತುರಿಯ ಉದ್ಘಾಟನೆ
ʻʻರಾಮ ಮಂದಿರ ಉದ್ಘಾಟನೆಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಲಾಭ ಆಗಲಿದೆ ಎಂಬ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯವಾಗಿ ಅನುಕೂಲ ಆಗುತ್ತೆ ಅಂತಲೇ ಆತುರವಾಗಿ ರಾಮ ಮಂದಿರ ಉದ್ಘಾಟನೆ ಮಾಡಿದ್ದಾರೆ. ಮಂದಿರ ಪೂರ್ಣವಾಗಿ ನಿರ್ಮಾಣವಾಗಿಲ್ಲ. ಆದರೆ, ರಾಮ ಮಂದಿರದಿಂದ ರಾಜಕೀಯ ಲಾಭ ಆಗುತ್ತೆ ಅಂತ ಹೇಳುವುದು ಸಾಧ್ಯವಿಲ್ಲ. ನಮ್ಮ ದೇಶದ ಜನ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದಾರೆ. ಅದೇ ಮುಖ್ಯವಾಗುತ್ತದೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆʼʼ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಜಾತಿ ಗಣತಿ ವರದಿ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ವರದಿ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಜಾತಿಗಣತಿ ವರದಿ ನನಗೆ ಗೊತ್ತಿಲ್ಲ. ವರದಿ ಸಲ್ಲಿಸಲು ಅವರು ಸಮಯಕ್ಕೆ ಕೇಳಿಲ್ಲ. ಕೇಳಿದ್ರೆ ಸಮಯ ಕೊಡುತ್ತೇವೆ. ನಂತರ ವರದಿ ಪಡೆಯುತ್ತೇವೆʼʼ ಎಂದರು. ಯಾರೂ ಆ ವರದಿಯನ್ನು ನೋಡಿಲ್ಲ. ಹೀಗಾಗಿ ಅದರ ಬಗ್ಗೆ ಏನು ಮಾತನಾಡಲಿಕ್ಕೆ ಸಾಧ್ಯವಾಗಿಲ್ಲ. ವರದಿ ಕೊಟ್ಟ ನಂತರ ಪರಿಶೀಲನೆ ಕೂಡ ಇರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಒಂದು ದೇಶ ಒಂದು ಚುನಾವಣೆ ಸಾಧ್ಯವಿಲ್ಲ ಎಂದ ಸಿಎಂ
ರಾಷ್ಟ್ರಾದ್ಯಂತ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಒನ್ ನೇಷನ್, ಒನ್ ಎಲೆಕ್ಷನ್ ವಿಚಾರ ಕಾರ್ಯಸಾಧುವಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ʻʻಅದು ಪ್ರಾಕ್ಟಿಕಲ್ ಆಗಿ ಸಾಧ್ಯವೇ ಅನ್ನೋದನ್ನು ಮನಗಾಣಬೇಕು. ಅದು ಸಂವಿಧಾನದ ಪರವಾಗಿರುತ್ತದೆಯೇ ಎಂದು ಗಮನಿಸಬೇಕು. ಸಂವಿಧಾನ ರಕ್ಷಣೆ ಮಾಡುವ ಕೆಲಸ ಮಾಡಬೇಕು. ಅದರ ಬದಲು ಸಂವಿಧಾನಕ್ಕೆ ಧಕ್ಕೆ ತರುವಂಥ ಕೆಲಸ ಆಗುತ್ತಿದೆ. ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುತ್ತಿದ್ದಾರೆ. ಇದನ್ನೆಲ್ಲಾ ಯುವಕರು ಗಮನಿಸಬೇಕಾಗುತ್ತದೆ.”ʼ ಎಂದು ಸಿದ್ದರಾಮಯ್ಯ ನುಡಿದರು.