ರಾಜ್ಯ ಸರ್ಕಾರ ಹೊಸ ಆದೇಶವೊಂದನ್ನು ಹೊರಡಿಸಿದೆ. “ಇನ್ನು ಮುಂದೆ ಯಾವುದೇ ಇಲಾಖೆಯಲ್ಲಿ ವರ್ಗಾವಣೆಗೆ ಆಗಬೇಕು ಎಂದಾದರೆ ಅದಕ್ಕೆ ಸಿಎಂ ಅನುಮತಿ ಕಡ್ಡಾಯ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸಿಎಂ ಅನುಮತಿ ಪಡೆದುಕೊಂಡೇ ಇಲಾಖಾವಾರು ವರ್ಗಾವಣೆ ಮಾಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ವರ್ಗಾವಣೆ ವಿಚಾರದಲ್ಲಿ ಸಾಕಷ್ಟು ಆರೋಪಗಳು ಬರುತ್ತಿರುವುದರ ನಡುವೆ ಈ ಆದೇಶ ಹೊರಬಿದ್ದಿದೆ. ಸಾರ್ವತ್ರಿಕ ವರ್ಗಾವಣೆ ಅವಧಿಯೂ ಸಹ ಮುಗಿದಿರುವುದರಿಂದ, ಇನ್ನು ಮುಂದೆ ನಡೆಯುವ ಪ್ರತಿ ವರ್ಗಾವಣೆಗೆ ಸಿಎಂ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದೊಂದು ಕುತೂಹಲಕಾರಿ ಉಪಕ್ರಮ. ಇದರಿಂದ ಪಾರದರ್ಶಕತೆ ನಿರ್ವಹಣೆ ಸಾಧ್ಯವೇ, ಇದು ಹೇಗೆ, ಎಷ್ಟು ಉಪಯೋಗವಾಗಲಿದೆ ಎಂಬುದನ್ನು ವಿವೇಚಿಸಬೇಕಿದೆ.
ಮುಖ್ಯವಾಗಿ, ವರ್ಗಾವಣೆ ದಂಧೆಯ ಬಗ್ಗೆ ಕೇಳಿಬರುತ್ತಿರುವ ಆರೋಪಗಳು, ಅಪಸ್ವರಗಳು ಇಂದು ನಿನ್ನೆಯದಲ್ಲ. ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ಕೂಡ ವರ್ಗಾವಣೆ ವಿಚಾರ ಸಾಕಷ್ಟು ಗದ್ದಲ, ಬಿರುಗಾಳಿ ಎಬ್ಬಿಸಿತ್ತು. ಈ ವಿಷಯವಾಗಿ ಸಚಿವರ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರೇ ಅಸಮಾಧಾನವನ್ನು ಹೊರಹಾಕಿದ್ದರು. ಇದು ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರವನ್ನು ತಂದೊಡ್ಡಿತ್ತು. ಇದೀಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಪರ ಕಾರ್ಯದರ್ಶಿಯವರು ಹೊರಡಿಸಿರುವ ಸುತ್ತೋಲೆ ಪ್ರಕಾರ ಸಿಎಂ ಪೂರ್ವಾನುಮತಿ ಪಡೆಯದೇ ವರ್ಗಾವಣೆ ಮಾಡಿದಲ್ಲಿ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ. ಅನುಮತಿ ಪಡೆಯದಿದ್ದರೆ ಸರ್ಕಾರದ ಅಪರ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಇಲಾಖೆ ಮುಖ್ಯಸ್ಥರೇ ಜವಾಬ್ದಾರರಾಗಿರುತ್ತಾರೆ. ವರ್ಗಾವಣೆ ಮಾಡಿ ನಂತರ ಸಿಎಂ ಅನುಮತಿ ಪಡೆಯುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಎಲ್ಲ ಇಲಾಖೆಗಳ ಎ, ಬಿ, ಸಿ, ಡಿ ದರ್ಜೆಗಳ ನೌಕರರ ವರ್ಗಾವಣೆಗೆ ಈ ಆದೇಶ ಅನ್ವಯವಾಗಲಿದೆ. ಇದು ಒಂದು ಮಟ್ಟಿನ ಉತ್ತರದಾಯಿತ್ವವನ್ನು ಈ ವರ್ಗಾವಣೆ ವ್ಯವಹಾರದಲ್ಲಿ ತರಬಹುದು ಎಂದು ತರ್ಕಿಸಬಹುದು.
ವರ್ಗಾವಣೆ ಎಂಬುದು ಭ್ರಷ್ಟಾಚಾರಕ್ಕೆ ಬಹಳ ಹುಲುಸಾದ ಕ್ಷೇತ್ರ. ಪ್ರತಿವರ್ಷ ಇದರಲ್ಲಿ ಎಷ್ಟು ಕೋಟಿ ಮೊತ್ತದ ವ್ಯವಹಾರ ನಡೆಯುತ್ತದೋ ಗೊತ್ತೇ ಆಗುವುದಿಲ್ಲ. ಲಂಚ ರುಷುವತ್ತುಗಳಿಗೆ ಸಾಕಷ್ಟು ಅವಕಾಶ ಇರುವ ಫಲವತ್ತಾದ ಇಲಾಖೆಗಳಲ್ಲಿ ಈ ವರ್ಗಾವಣೆಯ ಕಮಿಷನ್ ಊಹಿಸಲಾಗದ ಮೊತ್ತ ತಲುಪಿದೆ ಎಂದು ಇದರ ಸಂತ್ರಸ್ತರು ಗೋಳಿಡುತ್ತಾರೆ. ಇದರಲ್ಲಿ ಫಲಾನುಭವಿಗಳು, ವರ್ಗ ಮಾಡಿಸಿಕೊಡುವವರು, ಸಹಿ ಹಾಕುವವರು, ನಾನಾ ಹಂತದಲ್ಲಿ ಕಮಿಷನ್ ಪಡೆಯುವವರು ಎಲ್ಲರೂ ಸರ್ಕಾರದ ಶಾಸಕಾಂಗ ಹಾಗೂ ಕಾರ್ಯಾಂಗದ ಆಯಕಟ್ಟಿನ ಹುದ್ದೆಗಳಲ್ಲಿಯೇ ಇರುವುದರಿಂದ, ಜನಸಾಮಾನ್ಯನಿಗೆ ಇದು ಯಾವ ಗಮನಕ್ಕೂ ಬರದಂತೆ ನಡೆಯುತ್ತದೆ. ಭ್ರಷ್ಟಾಚಾರ ನಿಯಂತ್ರಣದ ಹೊಣೆ ಹೊತ್ತ ಲೋಕಾಯುಕ್ತಕ್ಕೆ ಕೂಡ ಇದರ ಸಮಗ್ರ ಚಿತ್ರಣ ಸಿಗದಂತೆ ನಡೆದುಕೊಂಡು ಹೋಗುತ್ತದೆ. ವರ್ಗ ಮಾಡಿಸುವ ಅಥವಾ ತಡೆಹಿಡಿಯುವ ಬಲಿಷ್ಠರು ಎಲ್ಲ ಇಲಾಖೆಗಳಲ್ಲೂ ಗಟ್ಟಿಯಾಗಿ ಬೇರೂರಿದ್ದಾರೆ. ಇದನ್ನೆಲ್ಲ ನಿಲ್ಲಿಸುವುದು ಭಗೀರಥ ಪ್ರಯತ್ನವೇ ಸರಿ. ಆದರೆ ಆಗಲೇಬೇಕಾದ ಕೆಲಸ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಆದಿತ್ಯನತ್ತ ಇಸ್ರೋ ದಾಪುಗಾಲು
ಹಾಗಿದ್ದರೆ, ಸಿಎಂ ಕೈಗೆ ಅಧಿಕಾರ ಬಂದಕೂಡಲೇ ಈ ದಂಧೆ ನಿಂತುಹೋಗುತ್ತದೆಯೇ? ನಾವೆಲ್ಲಾ ಗಮನಿಸಿದಂತೆ, ಪ್ರತಿ ಸರ್ಕಾರ ಬಂದಾಗಲೂ ಈ ದಂಧೆಯ ಆರೋಪವನ್ನು ಪ್ರತಿಪಕ್ಷದವರು ಮಾಡುತ್ತಿರುತ್ತಾರೆ. ಅಂದರೆ ಪ್ರತಿಯೊಂದು ಪಕ್ಷವೂ ಅಧಿಕಾರ ಬಂದಾಗ ಇದರ ಫಲಾನುಭವಿ ಎನ್ನಬಹುದೇ? ಮಂತ್ರಿಗಳು ತಮ್ಮ ಕ್ಷೇತ್ರಗಳಲ್ಲಿ ಸುಲಲಿತವಾಗಿ ಕೆಲಸ ಮಾಡಿಸಿಕೊಳ್ಳಲು ದಕ್ಷರನ್ನು ಕರೆಸಿಕೊಳ್ಳುವುದು ಬೇರೆ. ಇಲಾಖಾ ಹುದ್ದರಿಗಳು, ಪುಢಾರಿಗಳು ಕಮಿಷನ್ ಪಡೆದು ಮಾಡಿಸಿಕೊಡುವ ವರ್ಗಾವಣೆ ಬೇರೆ. ಎರಡನೆಯದು ನಿಲ್ಲಬೇಕಿದೆ. ಇದನ್ನು ಮಾಡುವವರು ಯಾರು ಎಂಬುದು ಸರ್ಕಾರಿ ವಲಯದಲ್ಲಿ ಓಡಾಡುವವರಿಗೆ ಗೊತ್ತೇ ಇರುತ್ತದೆ. ಹೊಸ ಆದೇಶದಿಂದ ಸಿಎಂ ಮೇಲೆ ಹೊಸ ಹೊಣೆಗಾರಿಕೆ ಬಂದ ಬಂದಂತಾಗಿದೆ. ಸಿಎಂ ಕೈಯಲ್ಲಿಯೇ ಎಲ್ಲ ಅಧಿಕಾರವೂ ನಿಕ್ಷೇಪವಾಗುತ್ತಿದೆ ಎಂಬ ಆಕ್ಷೇಪಕ್ಕೂ ಕಾರಣವಾಗಬಹುದು. ಆದರೆ ಭ್ರಷ್ಟಾಚಾರ ಅಳಿಯಲು ಇಂಥ ಉಪಕ್ರಮಗಳು ಅಗತ್ಯ. ಮುಖ್ಯಮಂತ್ರಿಯ ಹೊಸ ನಿರ್ಧಾರ ವರ್ಗಾವಣೆ ದಂಧೆಯನ್ನು ತಡೆಯಲು ಯಶಸ್ವಿಯಾಗಲಿ.