ಹುಬ್ಬಳ್ಳಿ: ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ನೀಡುವ ಯೋಜನೆಯನ್ನು 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಣೆ ಮಾಡಿದ್ದಕ್ಕೆ ಸಿಎಂಗೆ ಪತ್ರ ಬರೆದು ಧಾರವಾಡದ ವಿದ್ಯಾರ್ಥಿನಿ ಧನ್ಯವಾದ ತಿಳಿಸಿದ್ದಳು. ಇದರಿಂದ ಸಂತಸಗೊಂಡ ಸಿಎಂ ಸಿದ್ದರಾಮಯ್ಯ (Cm Siddaramaiah) ಆಕೆಯನ್ನು ಭೇಟಿಯಾಗುವ ಅಭಿಮತವನ್ನು ವ್ಯಕ್ತಪಡಿಸಿದ್ದರು. ಶನಿವಾರ ಕೃಷಿ ಮೇಳ ಉದ್ಘಾಟನೆಗೆ ಧಾರವಾಡಕ್ಕೆ ತೆರಳಿದ್ದ ವೇಳೆ ಪತ್ರ ಬರೆದ ವಿದ್ಯಾರ್ಥಿನಿಯನ್ನು ಭೇಟಿ ಮಾಡಿ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ. ಇದಕ್ಕೂ ಮೊದಲು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ, ಆಶಾಗೆ ಶೇಕ್ ಹ್ಯಾಂಡ್ ನೀಡಿ ಭಾವುಕರಾಗಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಳಲಿ ಪ್ರೌಢಶಾಲೆಯ 9ನೇ ತರಗತಿ ಆಶಾ ನೆಹರು ಪಾಟೀಲ್, ವಿದ್ಯಾರ್ಥಿಸ್ನೇಹಿ ಸಿಎಂ ಎಂದು ಸಿದ್ದರಾಮಯ್ಯಗೆ ಪತ್ರವನ್ನು ಬರೆದಿದ್ದಳು. ವಿದ್ಯಾರ್ಥಿನಿ ಬರೆದ ಪತ್ರವನ್ನು ಸಿದ್ದರಾಮಯ್ಯ ಶುಕ್ರವಾರ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು.
ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದೂ ಸೇರಿದಂತೆ ಸರ್ಕಾರದ ಕಾರ್ಯಕ್ರಮಗಳನ್ನು ವಿದ್ಯಾರ್ಥಿನಿ ಆಶಾ ಶ್ಲಾಘಿಸಿದ್ದಳು. ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳು, ವಿದ್ಯಾರ್ಥಿಸ್ನೇಹಿ ಕಾರ್ಯಕ್ರಮಗಳ ಮೂಲಕ ನಾಡಿನ ಜನತೆಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಸ್ವಾವಲಂಬಿ ಬದುಕಿನ ಕನಸಿಗೆ ಬೆಂಬಲವಾಗಿ ನಿಂತಿದೆ. ಈ ಯೋಜನೆಗಳ ಫಲಾನುಭವಿಯಾದ ಪುಟ್ಟ ಹುಡುಗಿಯೊಬ್ಬಳು ನನ್ನೊಂದಿಗೆ ಪತ್ರದ ಮೂಲಕ ತನ್ನ ಸಂತಸ ಹಂಚಿಕೊಂಡು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಳು. ಪತ್ರ ಓದಿದಾಗಿಂದ ಆ ಮಗುವನ್ನು ಒಮ್ಮೆ ಭೇಟಿಯಾಗಬೇಕೆಂದು ಬಯಸಿದ್ದೆ, ಅದು ಇಂದು ಸಾಧ್ಯವಾಯಿತು ಎಂದು ಎಕ್ಸ್‌ನಲ್ಲಿ ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದಾರೆ.
ಮುಗ್ದ ಮಕ್ಕಳ ಭವಿಷ್ಯದ ಕನಸುಗಳು ಸುರಕ್ಷಿತ
ಇಂತಹ ಮುಗ್ಧ ಮಕ್ಕಳ ಭವಿಷ್ಯದ ಕನಸುಗಳು ನಮ್ಮ ಸರ್ಕಾರದ ಕೈಗಳಲ್ಲಿ ಸುರಕ್ಷಿತವಾಗಿದೆ. ಈ ಮಕ್ಕಳ ಕನಸನ್ನು ನನಸು ಮಾಡುವುದು ನಮ್ಮ ಕರ್ತವ್ಯವೆಂದು ಭಾವಿಸಿ, ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇವೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಪ್ರತಿ ವಿದ್ಯಾರ್ಥಿಗೂ ಪೌಷ್ಟಿಕ ಆಹಾರ ದೊರಕಬೇಕು, ಯಾರೊಬ್ಬರೂ ಈ ಅವಕಾಶದಿಂದ ವಂಚಿತರಾಗಬಾರದು ಎಂಬ ಆಶಯದೊಂದಿಗೆ ಯೋಜನೆ ಶುರು ಮಾಡಲಾಗಿತ್ತು. ಈ ಮೊದಲು 1 ರಿಂದ 8ನೇ ತರಗತಿಯ ಮಕ್ಕಳಿಗೆ ವಿತರಿಸಲಾಗುತ್ತಿದ್ದ ಮೊಟ್ಟೆಯನ್ನು ಕಾಂಗ್ರೆಸ್ ಸರ್ಕಾರವು 9 ಮತ್ತು 10ನೇ ತರಗತಿಗೂ ವಿಸ್ತರಿಸಿದೆ.
ಈ ವಿದ್ಯಾರ್ಥಿಸ್ನೇಹಿ ನಿರ್ಧಾರದ ಬಗ್ಗೆ ಆಶಾ ನೆಹರು ಪಾಟೀಲ್ ಎಂಬ ಬಾಲಕಿಯೊಬ್ಬಳು ನನಗೆ ಪತ್ರ ಬರೆದು ತನ್ನ ಸಂತಸ ಹಂಚಿಕೊಂಡಿದ್ದಾಳೆ. ಮಾತ್ರವಲ್ಲ, ಇಂತಹ ಕಾರ್ಯಕ್ರಮಗಳನ್ನು ನೀಡುತ್ತಿರುವ ನನಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಅಕ್ಕರೆಯಿಂದ ಸಲಹೆ ನೀಡಿದ್ದಾಳೆ. ಬಾಲಕಿಯ ಪತ್ರವು ಈ ಯೋಜನೆಯನ್ನು ರೂಪಿಸಿ ಜಾರಿಗೊಳಿಸಿದ ನನ್ನ ಉದ್ದೇಶವನ್ನು ಸಾರ್ಥಕವಾಗಿಸಿದೆ. ಇಂಥ ಮುಗ್ಧ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವುದು ನಮ್ಮ ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ