ಬೆಂಗಳೂರು: ಕಾಂಗ್ರೆಸ್ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೂ ಪಕ್ಷದೊಳಗೆ ಒಳಬೇಗುದಿ (Congress Politics) ಮಾತ್ರ ಕಡಿಮೆಯಾಗಿಲ್ಲ. ಸಚಿವ ಸಂಪುಟವನ್ನು ಭರ್ತಿ ಮಾಡಿಕೊಂಡು ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಸ್ವಪಕ್ಷೀಯ ಶಾಸಕರಿಂದಲೇ ಅಡೆತಡೆಗಳು ಎದುರಾಗಿವೆ. ಸಚಿವರ ವರ್ತನೆ ಮೇಲೆ ಮೊದಲು ಶಾಸಕರು ದೂರು ನೀಡಿದ್ದರು. ಅಲ್ಲದೆ, ಪಕ್ಷದ ಹಿರಿಯ ನಾಯಕ, ಕಾರ್ಯಕಾರಿ ಸಮಿತಿ ಸದಸ್ಯ, ವಿಧಾನ ಪರಿಷತ್ ಸದಸ್ಯ, ಬಿ.ಕೆ. ಹರಿಪ್ರಸಾದ್ (Member of Legislative Council BK Hariprasad) ಆಗಾಗ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯುತ್ತಲೇ ಬರುತ್ತಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ನುಂಗಲಾರದ ತುತ್ತಾಗಿದೆ. ಈ ಸಂಬಂಧ ಈಗ ಸಿದ್ದರಾಮಯ್ಯ ಟೀಂ (Siddaramaiah team) ಕಾಂಗ್ರೆಸ್ ಹೈಕಮಾಂಡ್ಗೆ (Congress High Command) ದೂರು ನೀಡಿದೆ. ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC president Mallikarjun Kharge) ಅವರೇ ಕರೆ ಮಾಡಿ ಸಮಾಧಾನ ಮಾಡಲು ಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ನೇತೃತ್ವದ ವಿರುದ್ಧ ಆಗಾಗ ಕೆಂಡಕಾರುತ್ತಿದ್ದ ಬಿ.ಕೆ. ಹರಿಪ್ರಸಾದ್ ಅವರು ಸಮಾರಂಭವೊಂದರಲ್ಲಿ ತಮಗೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದೂ ಗೊತ್ತು, ಅಧಿಕಾರದಿಂದ ಕೆಳಗೆ ಇಳಿಸುವುದೂ ಗೊತ್ತು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಅದಾದ ಬಳಿಕ ಸಿದ್ದರಾಮಯ್ಯ ಅವರು ಕುರುಬ ಜಾತಿಗಷ್ಟೇ ಸೀಮಿತರಾಗಿದ್ದು, ಉಳಿದ ಹಿಂದುಳಿದ ಜಾತಿಗಳ ಪರವಾಗಿಲ್ಲ ಎಂದು ಕುಟುಕಿದ್ದರು. ಈಗ ಅಹಿಂದ ಸಂಘಟನೆಗೆ ಮುಂದಾಗಿದ್ದಾರೆ. ಈ ಎಲ್ಲ ಬೆಳವಣಿಗೆಯು ಸಿಎಂ ಸಿದ್ದರಾಮಯ್ಯ ಅವರನ್ನು ಗರಂ ಆಗುವಂತೆ ಮಾಡಿದೆ. ಹಾಗಾಗಿ ಅವರ ಹಿಂಬಾಲಕರು ಈಗ ಹೈಕಮಾಂಡ್ ಮೊರೆ ಹೋಗಿದ್ದಾರೆ. ಸಿಎಂ ಮೇಲೆ ಹರಿಹಾಯುತ್ತಿರುವ ಬಿ.ಕೆ. ಹರಿಪ್ರಸಾದ್ ಅವರಿಗೆ ಕಡಿವಾಣ ಹಾಕಿ ಎಂದು ಕೇಳಿಕೊಂಡಿದ್ದರು.
ಇದನ್ನೂ ಓದಿ: Power Point with HPK : ಉದಯನಿಧಿ ಹುಚ್ಚ, ಅಯೋಗ್ಯ; ಸನಾತನದ ಬಗ್ಗೆ ಮಾತಾಡೋಕೆ ಅವನು ಯಾವನು?: ಈಶ್ವರಪ್ಪ
ಕರೆ ಮಾಡಿದ ಹೈಕಮಾಂಡ್; ಡೋಂಟ್ ಕೇರ್ ಅಂದ್ರು ಹರಿಪ್ರಸಾದ್
ಇತ್ತ ಸಿಎಂ ತಂಡದಿಂದ ದೂರು ಬರುತ್ತಿದ್ದಂತೆ ಸಮಸ್ಯೆಯ ತೀವ್ರತೆಯನ್ನು ಅರಿತ ಕಾಂಗ್ರೆಸ್ ಹೈಕಮಾಂಡ್ ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಗಿದೆ. ಈ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿಗಳಾದ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಕೆ.ಸಿ. ವೇಣುಗೋಪಾಲ್ (Karnataka Congress incharges Randeep Singh Surjewala and KC Venugopal) ಅವರು ಕರೆ ಮಾಡಿ ಮಾತನಾಡಿದ್ದರು. ಆದರೆ, ಬಿ.ಕೆ. ಹರಿಪ್ರಸಾದ್ ಅವರು ಇಬ್ಬರ ಕರೆಗೂ ಸ್ಪಂದಿಸಿರಲಿಲ್ಲ.
ಸ್ವತಃ ಕರೆ ಮಾಡಿದ ಮಲ್ಲಿಕಾರ್ಜುನ ಖರ್ಗೆ
ಬಿ.ಕೆ. ಹರಿಪ್ರಸಾದ್ ಯಾವಾಗ ರಣದೀಪ್ ಸಿಂಗ್ ಹಾಗೂ ವೇಣುಗೋಪಾಲ್ ಕರೆಗೆ ಸ್ಪಂದನೆ ನೀಡಲಿಲ್ಲವೋ ಆಗ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಅರಿತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ವತಃ ಹರಿಪ್ರಸಾದ್ಗೆ ಕರೆ ಮಾಡಿ ಮಾತನಾಡಿದ್ದಾರೆ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಸ್ವಲ್ಪ ತಾಳ್ಮೆ ತೆಗೆದುಕೊಳ್ಳಿ ಎಂದು ಸಮಾಧಾನ ಪಡಿಸಲು ಮುಂದಾಗಿದ್ದಾರೆ. ನಿಮ್ಮ ಬೇಡಿಕೆಗಳನ್ನು ಸಮಯ ಬಂದಾಗ ಈಡೇರಿಸುತ್ತೇವೆ. ಅಲ್ಲಿಯವರೆಗೆ ನೀವು ಶಾಂತವಾಗಿರಿ. ನೀವು ಹಿರಿಯ ನಾಯಕರಿದ್ದು, ಪಕ್ಷದ ಹಿತದೃಷ್ಟಿಯನ್ನು ಕಾಪಾಡಬೇಕಿದೆ. ಎಲ್ಲದಕ್ಕೂ ಸಮಯ ಎಂಬುದು ಬರುತ್ತದೆ. ಹಾಗಾಗಿ ಅಲ್ಲಿಯವರೆಗೆ ತಾಳ್ಮೆಯಿಂದ ಇರಿ ಎಂದು ಕಿವಿಮಾತನ್ನು ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಸಿಎಂ ಸಿದ್ದರಾಮಯ್ಯ ಮತ್ತವರ ತಂಡದ ಮೇಲೆ ಮುನಿಸು ಹೊಂದಿರುವ ಹರಿಪ್ರಸಾದ್ ಮತ್ತೆ ತಮ್ಮ ಆಕ್ರೋಶವನ್ನು ಖರ್ಗೆ ಬಳಿ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Weather Report : ಬೆಂಗಳೂರಲ್ಲಿ ಚಾಲಕರ ಪ್ರತಿಭಟನೆಗೆ ಮಳೆ ಅಡ್ಡಿ; ಕರಾವಳಿಯಲ್ಲಿ ವರುಣಾರ್ಭಟ
ಒಟ್ಟಾರೆಯಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಸಲಹೆಯನ್ನು ಬಿ.ಕೆ. ಹರಿಪ್ರಸಾದ್ ಸ್ವೀಕರಿಸುತ್ತಾರೋ? ಅಥವಾ ಸಿಎಂ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.