ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಅದ್ಧೂರಿಯಾಗಿ ಚಾಲನೆ ನೀಡಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೀಗ ವಿನೂತನ ಉಪಾಯವೊಂದನ್ನು ಆಯ್ಕೆ ಮಾಡಿಕೊಂಡಿದೆ. ಸಾರಿಗೆ ಇಲಾಖೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಕಲ್ಪಿಸುವ ಶಕ್ತಿ ಯೋಜನೆಗೆ ಚಾಲನೆ ನೀಡಲು ಸ್ವತಃ ಸಿಎಂ ಸಿದ್ದರಾಮಯ್ಯ ಕಂಡಕ್ಟರ್ ಆಗಲಿದ್ದಾರೆ.
ಜೂನ್ 11ರಂದು ರಾಜ್ಯಾದ್ಯಂತ ಶಕ್ತಿ ಯೋಜನೆಗೆ ಚಾಲನೆ ಸಿಗಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಯೋಜನೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ವಿಧಾನಸೌಧದ ಬಳಿ ಯೋಜನೆಗೆ ಚಾಲನೆ ನೀಡಿ ಸಿದ್ದರಾಮಯ್ಯ ಮಾತನಾಡಲಿದ್ದಾರೆ.
ಆದರೆ ಅದಕ್ಕೂ ಮುನ್ನ ಕೆಂಪೇಗೌಡ ಬಸ್ ನಿಲ್ದಾಣದಿಂದ(ಮೆಜೆಸ್ಟಿಕ್) ವಿಧಾನಸೌಧದವರೆಗೆ ಮಾರ್ಗ ಸಂಖ್ಯೆ 43ರಲ್ಲಿ ಸಿದ್ದರಾಮಯ್ಯ ಬಸ್‌ನಲ್ಲೇ ಚಲಿಸಲಿದ್ದಾರೆ. ಈ ವೇಳೆ ಉಚಿತ ಟಿಕೆಟ್‌ಗಳನ್ನು ಮಹಿಳೆಯರಿಗೆ ಸಿದ್ದರಾಮಯ್ಯ ನೀಡಲಿದ್ದಾರೆ. ಈ ರೀತಿ ವಿಧಾನಸೌಧದವರೆಗೂ ಕಂಡಕ್ಟರ್ ಆಗಿ ಕೆಲಸ ಮಾಡಲಿದ್ದಾರೆ.
ಡಿ.ಕೆ. ಶಿವಕುಮಾರ್ ಸಮಯ ಬದಲು
ಚುನಾವಣೆಗೂ ಮುನ್ನ ಕಾಂಗ್ರೆಸ್‌ನಿಂದ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅದನ್ನು ಪ್ರಚಾರ ಮಾಡಿದ್ದರಿಂದ ಪಕ್ಷ ಅಧಿಕಾರಕ್ಕೆ ಬಂದಿತ್ತು. ಕೆಪಿಸಿಸಿ ಅಧ್ಯಕ್ಷರಾಗಿ ಪ್ರಚಾರದ ನೇತೃತ್ವ ವಹಿಸಿದ್ದ, ಇದೀಗ ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಶಕ್ತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎನ್ನಲಾಗಿತ್ತು.
ಜೂನ್ 10 ಹಾಗೂ 11ರಂದು ಕುಟುಂಬ ಸಮೇತರಾಗಿ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದರ್ಶನಕ್ಕೆ ಡಿ.ಕೆ. ಶಿವಕುಮಾರ್ ತೆರಳಲಿದ್ದಾರೆ. ಸರ್ಕಾರದ ಮಹತ್ವದ ಯೋಜನೆಗೆ ಚಾಲನೆ ನೀಡುವ ವೇಳೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಈ ಮೂಲಕ ಗೈರು ಹಾಜರಾಗುವ ಸಾಧ್ಯತೆಯಿತ್ತು. ಆದರೆ ಸಂಜೆ ವಾಪಸಾಗುವ ಯೋಜನೆ ಇದ್ದ ಡಿ.ಕೆ. ಶಿವಕುಮಾರ್ ಇದೀಗ ಬೆಳಗ್ಗೆಯೇ ಬೆಂಗಳೂರಿಗೆ ಆಗಮಿಸುವುದಾಗಿ ಪ್ರವಾಸ ಯೋಜನೆ ಬದಲಾಯಿಸಿದ್ದಾರೆ. ಈ ಮೂಲಕ ಶಕ್ತಿ ಯೋಜನೆಯ ಚಾಲನೆಯಲ್ಲಿ ಶಿವಕುಮಾರ್ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: Congress Guarantee: ʼಗೃಹಲಕ್ಷ್ಮಿʼಗೂ ಮಗನ ಐಟಿಗೂ ಸಂಬಂಧ ಇಲ್ಲ; ಉಲ್ಟಾ ಹೊಡೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್