Site icon Vistara News

CM Siddaramaiah : ಆ. 3ರಂದು ಮೋದಿ ಭೇಟಿಯಾಗಲಿರುವ ಸಿದ್ದರಾಮಯ್ಯ; ಕಾಂಗ್ರೆಸ್‌ ಸಭೆ ಜತೆಗೆ ಪ್ರಧಾನಿ ಮೀಟಿಂಗ್‌

Modi siddaramaiah visit

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಆಗಸ್ಟ್‌ 3ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ದಿಲ್ಲಿಯಲ್ಲಿ ಭೇಟಿಯಾಗಲಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ (Siddaramaiah to visit Narendra Modi) ಮಾಡುತ್ತಿದ್ದಾರೆ. ಹೀಗಾಗಿ ಭೇಟಿಗೆ ಭಾರಿ ಮಹತ್ವ ಬಂದಿದೆ.

ರಾಜ್ಯದಲ್ಲಿ ಮೇ 13ರಂದು ವಿಧಾನಸಭಾ ಚುನಾವಣೆ ನಡೆದು ಮೇ 20ರಂದು ಸಿದ್ದರಾಮಯ್ಯ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅದಾಗಿ ಸಂಪುಟ ರಚನೆ, ಕಾಂಗ್ರೆಸ್‌ನ ಗ್ಯಾರಂಟಿಗಳ ಈಡೇರಿಕೆಗೆ ಪ್ಲ್ಯಾನ್‌ಗಳು, ಬಜೆಟ್‌ ಮಂಡನೆ, ಅಧಿವೇಶನದಲ್ಲೇ ಬ್ಯುಸಿಯಾಗಿದ್ದ ಸಿದ್ದರಾಮಯ್ಯ ಅವರು ಈಗಷ್ಟೇ ಜಿಲ್ಲಾ ಪ್ರವಾಸ ಶುರು ಮಾಡಿದ್ದಾರೆ. ಇದರ ನಡುವೆ ಆಗಸ್ಟ್‌ 2ರಂದು ದಿಲ್ಲಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಮತ್ತು ರಾಜ್ಯದ ಕೈ ನಾಯಕರ ಮಹತ್ವದ ಸಭೆ ನಡೆಯಲಿದೆ. ಈ ಕಾರಣಕ್ಕಾಗಿ ದಿಲ್ಲಿಗೆ ತೆರಳುತ್ತಿರುವ ಸಿದ್ದರಾಮಯ್ಯ ಅವರು ಅದೇ ಹೊತ್ತಿನಲ್ಲಿ ಪ್ರಧಾನಿ ಮೋದಿ ಅವರ ಭೇಟಿಯ ಕಾರ್ಯಕ್ರಮವನ್ನೂ ನಿಗದಿಪಡಿಸಿಕೊಂಡಿದ್ದಾರೆ. ಆಗಸ್ಟ್ 3 ರಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಮತ್ತು ಸಿದ್ದರಾಮಯ್ಯ ಅವರ ನಡುವಿನ ಮಹತ್ವದ ಭೇಟಿ ನಡೆಯಲಿದೆ.

2015ರಲ್ಲಿ ಸರ್ವ ಪಕ್ಷಗಳ ನಿಯೋಗದ ನಾಯಕರಾಗಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕ್ಷಣ

ದಿಲ್ಲಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಜತೆಗಿನ ಸಭೆಗಾಗಿ ಆಗಸ್ಟ್‌ 2ರಂದು ಬೆಳಗ್ಗೆ ದಿಲ್ಲಿಗೆ ತೆರಳುತ್ತಿದ್ದಾರೆ. ಮಧ್ಯಾಹ್ನದ ನಂತರ ಹೈಕಮಾಂಡ್‌ ಸಭೆ ನಡೆಯಲಿದೆ. ಅದನ್ನು ಮುಗಿಸಿ ಮೂರರಂದು ಅವರು ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.

ಆಗಸ್ಟ್‌ 3ರಂದು ಬೆಳಗ್ಗೆ ಮೋದಿ ಅವರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಭೇಟಿಯ ವೇಳೆ ಸಿದ್ದರಾಮಯ್ಯ ಅವರು ಕರ್ನಾಟಕದ ಯೋಜನೆಗಳಿಗೆ ಕೇಂದ್ರದ ಸರಕಾರವೂ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆ ಇದೆ. ಇದರ ಜತೆಗೆ ಕೇಂದ್ರದಿಂದ ಬರಬೇಕಾಗಿರುವ ಜಿಎಸ್‌ಟಿ ಪಾಲು, ಅನುದಾನ ಹಂಚಿಕೆಯಲ್ಲಿರುವ ತಾರತಮ್ಯಗಳ ಬಗ್ಗೆ ಕೂಡಾ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ.

ಇತರ ಸಚಿವರ ಜತೆಗೂ ಮಾತುಕತೆ

ಅದೇ ದಿನ ಸಿಎಂ ಸಿದ್ದರಾಮಯ್ಯ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಹಾಗೂ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಲಿದ್ದಾರೆ. ಮೈಸೂರು ದಸರಾದ ಸಂದರ್ಭದಲ್ಲಿ ಏರ್‌ ಶೋ ಆಯೋಜಿಸುವ ಬಗ್ಗೆ ಸಿದ್ದರಾಮಯ್ಯ ಅವರು ಚಿಂತನೆ ನಡೆಸಿದ್ದಾರೆ. ಇದರ ಬಗ್ಗೆ ಅವರು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಜತೆ ಚರ್ಚಿಸಲಿದ್ದಾರೆ.

ರಾಜ್ಯದ ಹೆದ್ದಾರಿ ಯೋಜನೆಗಳ ಬಗ್ಗೆ ನಿತಿನ್‌ ಗಡ್ಕರಿ ಅವರ ಜತೆ ಮಾತುಕತೆ ನಡೆಸುವ ಸಿದ್ದರಾಮಯ್ಯ ಅವರು ನಿರ್ಮಲಾ ಸೀತಾರಾಮನ್‌ ಅವರ ಜತೆ ಅನುದಾನ ಹಂಚಿಕೆಯ ವಿಚಾರ, ಜಿಎಸ್‌ಟಿ ಹಂಚಿಕೆಯ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ : Udupi Toilet Case : ಉಡುಪಿ ವಿಡಿಯೊ ಪ್ರಕರಣ SIT ತನಿಖೆ‌ ಅಗತ್ಯ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ

Exit mobile version